ಪ್ರವೇಶ ಶ್ಲೋಕ
ಕೀರ್ತ 85 : 1-3
ಹೇ ಪ್ರಭೂ, ನೀಡೆನಗೆ ಸದುತ್ತರವನು. ನನ್ನ ದೇವಾ ಉದ್ಧರಿಸು ನಿನ್ನ ನಂಬಿದ ದಾಸನನು. ದಿನವೆಲ್ಲಾ ಪ್ರಭು ನಿನಗೆ ಮೊರೆಯಿಡುವೆನು, ಕರುಣಿಸೆನ್ನನು.
ಸಭಾ ಪ್ರಾರ್ಥನೆ
ದೇವರೇ, ವಿಶ್ವಾಸಿಗಳ ಮನಗಳನ್ನು
ಒಂದೇ ಗುರಿಯೆಡೆಗೆ ಸೆಳೆಯುತ್ತೀರಿ.
ನಿಮ್ಮ ಆಜ್ಞೆಗಳನ್ನು ನಿಮ್ಮ ಪ್ರಜೆಗಳು ಪ್ರೀತಿಸುವಂತೆಯೂ
ನಿಮ್ಮ ವಾಗ್ದಾನಗಳನ್ನು ಅಪೇಕ್ಷಿಸುವಂತೆಯೂ ಅನುಗ್ರಹಿಸಿರಿ.
ಹೀಗೆ ಈ ಲೋಕದ ಅಸ್ಥಿರತೆಯ ಮಧ್ಯೆ ನಾವು ಜೀವಿಸುವಾಗ
ನಿಜ ಆನಂದವಿರುವೆಡೆ ನಮ್ಮ ಹೃನ್ಮನಗಳು ನಾಟಿರಲಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ನಿಮ್ಮ ಕುಮಾರರ ಏಕೈಕ ಬಲಿಯರ್ಪಣೆಯಿಂದ
ನಮ್ಮನ್ನು ನಿಮ್ಮ ಪ್ರಜೆಯನ್ನಾಗಿ ಮಾಡಿದ ಪ್ರಭುವೇ,
ನಿಮ್ಮ ಧರ್ಮಸಭೆಯಲ್ಲಿ ನಾವು
ಐಕ್ಯತೆ ಮತ್ತು ಶಾಂತಿಯಿಂದಿರುವಂತೆ ಅನುಗ್ರಹಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 103 : 13-15
ಪ್ರಭೂ, ತೃಪ್ತಿಗೊಂಡಿದೆ ಪೃಥ್ವಿಯು ನಿನ್ನ ಕೃಪೆಗಳಿಂದ, ಒದಗಿಸುವೆ ಬೇಸಾಯದ ಆಹಾರವನು, ಹೃದಯವನು ಮುದಗೊಳಿಸುವ ದ್ರಾಕ್ಷಾರಸವನು.
ಅಥವಾ ಯೊವಾ 6 : 54
ಪ್ರಭು ಇಂತೆನ್ನುತ್ತಾರೆ : ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ. ಅಲ್ಲದೆ, ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ಸ್ವಸ್ಥತೆ ನೀಡುವ ನಿಮ್ಮ ಕರುಣೆಯ ಕಾರ್ಯವನ್ನು
ನಮ್ಮಲ್ಲಿ ಪೂರ್ಣಗೊಳಿಸಿರಿ.
ಪ್ರತಿ ವಿಧದಲ್ಲೂ ನಾವು ನಿಮ್ಮನ್ನು ಸಂತೃಪ್ತಿಪಡಿಸುವಂತೆ
ಸಂಪೂರ್ಣ ಸೌಖ್ಯ ಹಾಗೂ ಶಕ್ತಿಯನ್ನು ನಮಗೆ ಕರುಣಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment