ಪ್ರವೇಶ ಶ್ಲೋಕ ಕೀರ್ತ 85 : 3, 5
ಪ್ರಭೂ, ಕರುಣಿಸೆನ್ನನು, ದಿನವೆಲ್ಲಾ ನಿನಗೆ ಮೊರೆಯಿಡುವೆನು. ಪ್ರಭು ನೀನು ದಯಾವಂತನು, ಕ್ಷಮಿಸುವವನು, ಮೊರೆಯಿಡುವವರಿಗೆ ನೀನು ಕೃಪಾಪೂರ್ಣನು.
ಸಭಾ ಪ್ರಾರ್ಥನೆ
ಸರ್ವಶಕ್ತ ದೇವರೇ,
ಅತ್ಯತ್ತಮವಾದವುಗಳಿಗೆಲ್ಲಾ ನೀವೇ ಮೂಲ.
ನಮ್ಮ ಹೃದಯಗಳಲ್ಲಿ ನಿಮ್ಮ ನಾಮದ ಪ್ರೀತಿಯನ್ನು ಬೇರೂರಿಸಿ
ನಿಮ್ಮ ಭಕ್ತಿಯನ್ನು ಅಧಿಕಗೊಳಿಸಿರಿ.
ಹೀಗೆ ಒಳಿತನ್ನು ನಮ್ಮಲ್ಲಿ ಬೆಳೆಸಿ
ಬೆಳೆಸಿದ್ದನ್ನು ಕಾಪಾಡಿ ಪರಿಪಾಲಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ಈ ಪಾವನ ಬಲಿಯರ್ಪಣೆಯು
ರಕ್ಷಣೆಯ ಆಶೀರ್ವಾದವನ್ನು
ನಮ್ಮ ಮೇಲೆ ಸುರಿಸಲಿ ಹಾಗೂ
ಅದು ಸಾಂಸ್ಕಾರಿಕವಾಗಿ ಸೂಚಿಸುವುದನ್ನು
ನಮ್ಮಲ್ಲಿ ಸಫಲಗೊಳಿಸಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 30 : 20
ಪ್ರಭೂ, ನಿನಗಂಜಿ ನಡೆವರಿಗೆ ನೀನು ತೋರುವ ಒಳ್ಳೆಯತನ ಅದೆಷ್ಟು ಶೇಷ್ಠ!
ಅಥವಾ ಮತ್ತಾ 5 : 9-10
ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು, ಅವರು ದೇವರ ಮಕ್ಕಳೆನಿಸಿಕೊಳ್ಳುವರು. ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು, ಸ್ವರ್ಗಸಾಮ್ರಾಜ್ಯ ಅವರದು.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಮಗೆ ನವ ಚೈತನ್ಯವಿತ್ತ
ನಿಮ್ಮ ಸ್ವರ್ಗೀಯ ಶಕ್ತಿಯೀವ ಪ್ರೇಮದ ರೊಟ್ಟಿಯು
ನಮ್ಮ ಹೃನ್ಮನಗಳಲ್ಲಿ ಪರಸ್ನೇಹವನ್ನು ಉಕ್ಕಿಸಿ
ನಮ್ಮ ಸಹೋದರ ಸಹೋದರಿಯರ ಸೇವೆಯನ್ನು
ನಾವು ಮಾಡುವಂತೆ ಪ್ರೇರೇಪಿಸಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment