Thursday, 15 August 2019

ಸಾಧಾರಣ ಕಾಲದ ಇಪ್ಪತ್ತಮೂರನೆಯ ಭಾನುವಾರ

ಪ್ರವೇಶ ಶ್ಲೋಕ                                    ಕೀರ್ತ 118 : 137, 124
ಹೇ ಪ್ರಭೂ, ನೀನು ಸತ್ಯವಂತ. ನಿನ್ನ ವಿಧಿಯು ನ್ಯಾಯಸಮ್ಮತ. ಕೃಪೆಯಿಂದ ನಡೆಸು ನಿನ್ನ ದಾಸನನು.

ಸಭಾ ಪ್ರಾರ್ಥನೆ
ನಮ್ಮನ್ನು ರಕ್ಷಿಸಿ, ನಮ್ಮನ್ನು ದತ್ತು ತೆಗೆದುಕೊಂಡ ದೇವರೇ,
ನಿಮ್ಮ ಮುದ್ದು ಪುತ್ರ ಪುತ್ರಿಯರ ಮೇಲೆ
ವಾತ್ಸಲ್ಯದ ದೃಷ್ಟಿ ಹರಿಸಿರಿ.
ಕ್ರಿಸ್ತ ಪ್ರಭುವನ್ನೇ ವಿಶ್ವಾಸಿಸುವ ನಮಗೆ ನಿಜ ಸ್ವಾತಂತ್ರ್ಯವನ್ನಿತ್ತು
ಅಳಿಯದ ನಿಮ್ಮ ಪಿತ್ರಾರ್ಜಿತವನ್ನು ನೀಡಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಾಮಾಣಿಕ ಭಕ್ತಿ ಹಾಗೂ ಶಾಂತಿಯ ಉಗಮವಾದ ದೇವರೇ,
ಕಾಣಿಕೆಗಳ ಮೂಲಕ ನಿಮ್ಮ ದಿವ್ಯ ವೈಭವಕ್ಕೆ 
ನಾವು ಹೃದಯಾಂತರಾಳದ ಸನ್ಮಾನವಿತ್ತು
ನಿಮ್ಮ ಪವಿತ್ರ ರಹಸ್ಯದಲ್ಲಿ ಭಾಗಿಯಾಗಿ
ಹೃನ್ಮನಗಳಲ್ಲಿ ಯಥಾರ್ಥವಾಗಿ ಒಂದಾಗಿರುವಂತೆ ಅನುಗ್ರಹಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                   ಕೀರ್ತ 41 : 2-3
ಬಾಯಾರಿದ ಜಿಂಕೆ ಹಾತೊರೆಯುವಂತೆ ತೊರೆಗಾಗಿ ದಣಿದೆನ್ನ ಮನ ದೇವಾ ಹಂಬಲಿಸುತಿದೆ ನಿನಗಾಗಿ. ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ.

ಅಥವಾ                                                 ಯೊವಾ 8 :12

ಪ್ರಭು ಇಂತೆನ್ನುತ್ತಾರೆ : ನಾನೇ ಜಗಜ್ಯೋತಿ. ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಸ್ವರ್ಗೀಯ ವಾಕ್ಯದ ಆಹಾರ ಮತ್ತು
ಸಂಸ್ಕಾರದಿಂದ ನೀವು ನಿಮ್ಮ ವಿಶ್ವಾಸಿಗಳನ್ನು ಪೋಷಿಸಿ ಚೈತನ್ಯಗೊಳಿಸುತ್ತೀರಿ.
ಇವರು ನಿಮ್ಮ ಪ್ರಿಯ ಪುತ್ರನ
ಮಹಾ ವರದಾನಗಳಿಂದ ತುಂಬಿ ತುಳುಕಿ
ಅನಂತ ಕಾಲಕ್ಕೂ ಅವರ ಜೀವನದಲ್ಲಿ
ಪಾಲುಗಾರರಾಗಲು ಯೋಗ್ಯರಾಗುವಂತೆ ಕರುಣಿಸಿರಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment