Thursday, 15 August 2019

ಸಾಧಾರಣ ಕಾಲದ ಇಪ್ಪತ್ತೇಳನೆಯ ಭಾನುವಾರ

ಪ್ರವೇಶ ಶ್ಲೋಕ                                         ಎಸ್ತೆ 4 : 17
ದೇವರೇ, ಸೃಷ್ಟಿ ಸಮಸ್ತವೂ ನಿಮ್ಮ ಚಿತ್ತದಲ್ಲಿ ಅಡಗಿದೆ. ನಿಮ್ಮ ಚಿತ್ತವನ್ನು ಎದುರಿಸುವವನು ಯಾರು? ನೀವು ಭೂಮ್ಯಾಕಾಶಗಳನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದ್ದೀರಿ. ನೀವೇ ಸರ್ವೇಶ್ವರರು.

ಸಭಾ ಪ್ರಾರ್ಥನೆ
ಪ್ರಭು ದೇವರೇ, ನಿಮ್ಮ ಅಗಣಿತ ಅನುಕಂಪವು
ನಿಮ್ಮಲ್ಲಿ ಮೊರೆಯಿಡುವವರ ಸಕಲ ಪುಣ್ಯಗಳನ್ನೂ
ಅಭಿಲಾಷೆಗಳನ್ನೂ ಮೀರುತ್ತಿದೆ.
ನಿಮ್ಮ ವಿಶೇಷ ಕನಿಕರದಿಂದ ನಮ್ಮ ಮನಸಾಕ್ಷಿಯು ಕೇಳಲು ಅಂಜುವ ಹಾಗೂ
ಪ್ರಾರ್ಥನೆಯು ಬೇಡಲು ಹಿಂಜರಿಯುವ
ಕ್ಷಮಾದಾನವನ್ನು ನಮಗೆ ಕರುಣಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಿಮ್ಮಿಂದಲೇ ಸ್ಥಾಪನೆಯಾದ
ಬಲಿಯರ್ಪಣೆಯನ್ನು ಸ್ವೀಕರಿಸಿರಿ.
ನಮ್ಮ ಆದ್ಯ ಕರ್ತವ್ಯವೆಂದು ನಾವು ಆಚರಿಸುವ
ಪಾವನ ಸಂಸ್ಕಾರಗಳ ಮೂಲಕ
ನಮ್ಮನ್ನು ಪಾವನಗೊಳಿಸುವ
ನಿಮ್ಮ ರಕ್ಷಣಾ ಕಾರ್ಯವನ್ನು ನಮ್ಮಲ್ಲಿ ಪೂರ್ಣಗೊಳಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                    ಪ್ರಲಾ 3 : 25
ದೇವರು ತಮ್ಮನ್ನು ನಿರೀಕ್ಷಿಸುವವರಿಗೂ ಹುಡುಕುವವರಿಗೂ ಮಹೋಪಕಾರಿಯಾಗಿದ್ದಾರೆ

ಅಥವಾ                                             1 ಕೊರಿಂಥ 10 : 17

ರೊಟ್ಟಿಯು ಒಂದೇ ಆಗಿರುವುದರಿಂದ ಅನೇಕಕರಾಗಿರುವ ನಾವು ಒಂದೇ ದೇಹದಂತಿದ್ದೇವೆ; ಏಕೆಂದರೆ ನಾವೆಲ್ಲರೂ ಒಂದೇ ರೊಟ್ಟಿಯಲ್ಲಿ ಮತ್ತು ಒಂದೇ ಪಾತ್ರೆಯಲ್ಲಿ ಪಾಲುಗೊಳ್ಳುತ್ತೇವೆ.
           
ಕೃತಜ್ಞತಾ ಪ್ರಾರ್ಥನೆ
ಸರ್ವಶಕ್ತ ದೇವರೇ, ನಾವು ಸ್ವೀಕರಿಸಿದ ಸಂಸ್ಕಾರಗಳು
ನಮ್ಮನ್ನು ಸಂಪೂರ್ಣವಾಗಿ ಪೋಷಿಸಿ
ನವ ಚೈತನ್ಯದಿಂದ ತುಂಬಲಿ.
ಹೀಗೆ, ಯೇಸು ಪ್ರಭುವನ್ನು ಸ್ವೀಕರಿಸಿದ ನಾವು
ಅವರಂತೆಯೇ ಆಗಲು ನಮ್ಮನ್ನು ಪರಿವರ್ತಿಸಿರಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment