ಪ್ರವೇಶ ಶ್ಲೋಕ ಕೀರ್ತ 129 : 3-4
ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭೂ, ನಿನ್ನ ಮುಂದೆ ಯಾರು ತಾನೇ ನಿಲ್ಲಬಲ್ಲರು ವಿಭೂ. ಇಸ್ರಯೇಲಿನ ದೇವಾ, ಪಾಪವನು ಕ್ಷಮಿಸುವವನು ನೀನು.
ಸಭಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಕೃಪಾವರವು ಸದಾಕಾಲವೂ
ನಮ್ಮ ಮುಂದೆಯೂ ನಮ್ಮ ಹಿಂದೆಯೂ
ನಮ್ಮೊಡನೆಯೂ ಇರಲಿ ಹಾಗೂ
ನಾವು ಸತ್ಕಾರ್ಯಗಳಲ್ಲಿ
ಸತತವೂ ನಿರತರಾಗುವಂತೆ ಮಾಡಲಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ತಮ್ಮ ಬಲಿಯರ್ಪಣೆಯೊಡನೆ
ನಿಮ್ಮ ವಿಶ್ವಾಸಿಗಳು ನಿಮಗರ್ಪಿಸುವ ಪ್ರಾರ್ಥನೆಗಳನ್ನು ಸ್ವೀಕರಿಸಿರಿ.
ಪ್ರಾಮಾಣಿಕ ಭಕ್ತಿಯ ಈ ಕಾರ್ಯಗಳ ಮೂಲಕ ನಾವು
ಸ್ವರ್ಗೀಯ ಮಹಿಮೆಯನ್ನು ಪಡೆಯುವಂತೆ ಮಾಡಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 33 : 11
ಸಿವಂತರಿಗೆ ಇರಬಹುದು ಹಸಿವು, ದಾಹ. ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ.
ಅಥವಾ 1 ಯೊವಾ 3 : 2
ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ ನಾವೂ ಅವರಂತೆ ಇರುತ್ತೇವೆಂದು ಬಲ್ಲೆವು, ಏಕೆಂದರೆ ಅವರನ್ನು ನಾವು ಅವರ ಯಥಾರ್ಥರೂಪದಲ್ಲೇ ಕಾಣುತ್ತೇವೆ.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ಮಹೋನ್ನತರಾದ ನಿಮ್ಮನ್ನು
ಬಹು ವಿನಯದಿಂದ ಪ್ರಾರ್ಥಿಸುತ್ತೇವೆ.
ನಿಮ್ಮ ಪುತ್ರರ ದಿವ್ಯ ಶರೀರ ಮತ್ತು ರಕ್ತದಿಂದ
ನಮ್ಮನ್ನು ಚೇತನಗೊಳಿಸಿದ ನೀವು
ಅವರ ದೈವ ಸ್ವಭಾವದಲ್ಲಿ ಪಾಲ್ಗೊಳ್ಳುವಂತೆ ಮಾಡಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment