Thursday, 15 August 2019

ಸಾಧಾರಣ ಕಾಲದ ಒಂಭತ್ತನೆಯ ಭಾನುವಾರ

ಪ್ರವೇಶ ಶ್ಲೋಕ                                       ಕೀರ್ತ 24 : 16, 18
ದೇವಾ, ಒಬ್ಬಂಟಿಗನಾದೆ, ಸಿಕ್ಕಿಕೊಂಡೆ ಸಂಕಟಕೆ, ಕಟಾಕ್ಷಿಸೋ ಪ್ರಭು, ಕರುಣೆತೋರೋ ತಬ್ಬಲಿಗೆ. ನೋಡೆನ್ನ ಬಾಧೆ ಬವಣೆಗಳನು, ತೊಡೆದುಹಾಕೆನ್ನ ಪಾಪಗಳನು.

ಸಭಾ ಪ್ರಾರ್ಥನೆ
ಪ್ರಭು ದೇವರೇ,
ನಿಮ್ಮ ಪರಿಪಾಲನೆಯು ಎಂದಿಗೂ
ನಮ್ಮನ್ನು ಕೈ ಬಿಡುವುದಿಲ್ಲ.
ನಮಗೆ ಹಾನಿ ತರುವುದೆಲ್ಲವನ್ನೂ ನಮ್ಮಿಂದ ತೊಲಗಿಸಿ 
ನಮಗೆ ಒಳಿತು ಮಾಡುವುದನ್ನೇ ನಮಗೆ ಅನುಗ್ರಹಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ದೇವರೇ, ನಿಮ್ಮ ದಯೆಯನ್ನೇ ನಂಬಿ
ನಮ್ಮ ಕಾಣಿಕೆಗಳೊಡನೆ
ನಿಮ್ಮ ದಿವ್ಯ ಪೀಠದ ಸುತ್ತಲೂ ಸೇರಿದ್ದೇವೆ.
ನಾವು ನಿಮಗೆ ಸೇವೆ ಸಲ್ಲಿಸಲು ಬಳಸುವ ರಹಸ್ಯಗಳಿಂದಲೂ
ಪರಿಶುದ್ಧಗೊಳಿಸುವ ನಿಮ್ಮ ಕೃಪೆಯ ಮೂಲಕವೂ
ನಾವು ಪಾವನರಾಗುವಂತೆ ಕರುಣಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                     ಕೀರ್ತ 16 : 6
ಸದುತ್ತರ ಪಾಲಿಪೆ ಎಂದು ನಂಬಿ ಬೇಡುವೆನಯ್ಯಾ, ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ.

ಅಥವಾ                                              ಮತ್ತಾ 11 : 23-24
ನೀವು ಪ್ರಾರ್ಥನೆಯಲ್ಲಿ ಏನೆಂದು ಬೇಡಿಕೊಳ್ಳುತ್ತೀರೋ ಅದು ಲಭಿಸುವುದು ನಿಶ್ಚಯವೆಂದು ನಿಮಗೆ ಹೇಳುತ್ತೇನೆ, ಎನ್ನುತ್ತಾರೆ ಪ್ರಭು.              

ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ದಿವ್ಯ ಕುಮಾರರ ಶರೀರ ಮತ್ತು ರಕ್ತದಿಂದ
ಪೋಷಿತರಾದ ನಮ್ಮನ್ನು ನಿಮ್ಮ ಪವಿತ್ರಾತ್ಮರ ಮುಖಾಂತರ ಪರಿಪಾಲಿಸಿರಿ.
ಕೇವಲ ಮಾತುಗಳಿಂದಲ್ಲ, ನಡೆಯಲ್ಲೂ ಸತ್ಯ ನುಡಿಯಲ್ಲೂ
ನಿಮ್ಮನ್ನು ನಿವೇದಿಸುತ್ತಾ ನಿಮ್ಮ ಸ್ವರ್ಗೀಯ ಸದನವನ್ನು
ನಾವು ಸೇರುವಂತೆ ಅನುಗ್ರಹಿಸಿರಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment