Thursday, 15 August 2019

ಸಾಧಾರಣ ಕಾಲದ ಇಪ್ಪತ್ತೊಂಬತ್ತನೆಯ ಭಾನುವಾರ



ಪ್ರವೇಶ ಶ್ಲೋಕ                                         ಕೀರ್ತ 16 : 6, 8
ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ. ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ. ನಿನ್ನ ಕನೀನಿಕೆಯಂತೆ ಎನ್ನ ಕಾಪಾಡು, ನಿನ್ನ ರೆಕ್ಕೆಗಳ ನೆರಳಲಿ ಎನ್ನ ಮರೆಸಿಡು.

ಸಭಾ ಪ್ರಾರ್ಥನೆ
ಸರ್ವಶಕ್ತ ನಿತ್ಯ ದೇವರೇ,
ನಮ್ಮ ಚಿತ್ತವು ಸದಾ ನಿಮಗೆ ವಿಧೇಯವಾಗುವಂತೆ ಮಾಡಿರಿ.
ನಿಮ್ಮ ದಿವ್ಯ ಸನ್ನಿಧಿಗೆ ನಾವು
ಪ್ರಾಮಾಣಿಕ ಹೃದಯದಿಂದ ಸೇವೆ ಸಲ್ಲಿಸುವಂತೆ ಅನುಗ್ರಹಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ, ಉದಾರಮನದಿಂದ
ನಿಮಗೆ ಸೇವೆ ಸಲ್ಲಿಸುವಂತೆ ಮಾಡಿರಿ.
ಹೀಗೆ ನಾವು ಸೇವೆ ಸಲ್ಲಿಸುವ ರಹಸ್ಯಗಳ ಮೂಲಕ
ನಿಮ್ಮ ಕೃಪಾವರದಿಂದ ನಮ್ಮನ್ನು ಪರಿಶುದ್ಧಗೊಳಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                 ಕೀರ್ತ 32 : 18-19
ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು, ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು. ತಪ್ಪಿಸುವನವನು ಪ್ರಾಣವನು ಮರಣದಿಂದ, ಉಳಿಸುವನು ಜೀವವನು ಕ್ಷಾಮಡಾಮರದಿಂದ.

ಅಥವಾ                                                ಮಾರ್ಕ 10 : 45

ನರಪುತ್ರನು ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೆ ಬಂದಿದ್ದಾನೆ.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ಇಹದಲ್ಲಿ ತಾತ್ಕಾಲಿಕವಾದುವುಗಳ
ನೆರವಿನಿಂದ ನಿತ್ಯವಾದುವುಗಳಲ್ಲಿ ಶಿಕ್ಷಣ ಪಡೆದು
ನಿಮ್ಮ ಸ್ವರ್ಗೀಯ ಭೋಜನದ ಸಹಾಯದಿಂದ
ಉನ್ನತದೆಡೆಗೆ ಮುನ್ನಡೆಯುವಂತೆ ಅನುಗ್ರಹಿಸಿರಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment