Thursday, 15 August 2019

ಸಾಧಾರಣ ಕಾಲದ ಹತ್ತೊಂಬತ್ತನೇ ವಾರ ಶುಕ್ರವಾರ

ಸಾಧಾರಣ ಕಾಲದ ಹತ್ತೊಂಬತ್ತನೇ ವಾರ ಶುಕ್ರವಾರ

16/ಹಸಿರು/ಶುಕ್ರ/ಐಚ್ಛಿಕ ಸ್ಮರಣೆ - ಹಂಗೇರಿಯ ಸಂತ ಸ್ಟೀಫನ್
1ನೇ ವಾಚನ - ಯಹೋ 24:1-13
ಕೀರ್ತನೆ - 136: 1-3,16-18,21-22,24
ಶುಭಸಂದೇಶ - ಮತ್ತಾಯ 19:3-12

1ನೇ ವಾಚನ - ಯಹೋ 24:1-13
ತರುವಾಯ ಯೆಹೋಶುವನು ಎಲ್ಲ ಇಸ್ರಯೇಲ ಕುಲದವರನ್ನು ಶೆಕೆಮಿನಲ್ಲಿ ಸಭೆ ಸೇರಿಸಿದನು. ಹಿರಿಯರು, ನಾಯಕರು, ನ್ಯಾಯಾಧಿಪತಿಗಳು, ಅಧಿಕಾರಿಗಳು ಬಂದು ದೇವರ ಸನ್ನಿಧಿಯಲ್ಲಿ ಉಪಸ್ಥಿತರಾದರು. ಯೆಹೋಶುವ ಅವರೆಲ್ಲರನ್ನು ಉದ್ದೇಶಿಸಿ, “ನಿಮ್ಮ ದೇವರಾದ ಸರ್ವೇಶ್ವರಸ್ವಾಮಿ ಹೇಳುವುದನ್ನು ಗಮನಿಸಿರಿ: ‘ಅಬ್ರಹಾಮ್, ನಾಹೊರ್ ಎಂಬವರ ತಂದೆಯಾದ ತೆರಹ ಮೊದಲಾದ ನಿಮ್ಮ ಮೂಲ ಪುರುಷರು ಪೂರ್ವದಲ್ಲಿ ಯೂಫ್ರೆಟಿಸ್ ನದಿಯ ಆಚೆ ಇದ್ದರು. ಅನ್ಯದೇವತೆಗಳನ್ನು ಪೂಜಿಸುತ್ತಿದ್ದರು. ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರೆತಂದು, ಕಾನಾನ್ ನಾಡಿನಲ್ಲೆಲ್ಲಾ ಸಂಚಾರ ಮಾಡಿಸಿದೆ. ಇಸಾಕನೆಂಬ ಮಗನನ್ನು ಕೊಟ್ಟು ಅವನ ಸಂತಾನವನ್ನು ಹೆಚ್ಚಿಸಿದೆ. ಇಸಾಕನಿಗೆ ಯಾಕೋಬ್ ಮತ್ತು ಏಸಾವ್ ಎಂಬ ಇಬ್ಬರು ಮಕ್ಕಳನ್ನು ಅನುಗ್ರಹಿಸಿದೆ. ಏಸಾವನಿಗೆ ಸೇ¬ೂರ್ ಬೆಟ್ಟವನ್ನು ಸ್ವಂತ ಸೊತ್ತಾಗಿ ದಯಪಾಲಿಸಿದೆ. ಯಕೋಬನಾದರೋ ತನ್ನ ಮಕ್ಕಳ ಸಮೇತ ಈಜಿಪ್ಟ್ ದೇಶಕ್ಕೆ ಹೋದ. ಬಳಿಕ ನಾನು ಮೋಶೆ ಹಾಗೂ ಆರೋನರನ್ನು ಕಳಿಸಿ, ಆ ಈಜಿಪ್ಟಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ನಡೆಸಿ, ಆ ಜನರನ್ನು ಬಾಧಿಸಿ, ನಿಮ್ಮನ್ನು ಹೊರಗೆ ಕರೆತಂದೆ. ನಿಮ್ಮ ಪೂರ್ವಜರು ಈಜಪ್ಟಿನಿಂದ ಬಿಡುಗಡೆಯಾಗಿ ಕೆಂಪುಸಮುದ್ರಕ್ಕೆ ಬರುತ್ತ ಇರುವಾಗ ಈಜಿಪ್ಟಿನವರ ರಥಾಶ್ವಬಲಗಳ ಸಹಿತ ಅವರನ್ನು ಆ ಸಮುದ್ರದವರೆಗೂ ಹಿಂದಟ್ಟಿ ಬಂದರು. ಆಗ ನಿಮ್ಮ ಪೂರ್ವಜರು ನನಗೆ ಮೊರೆಯಿಟ್ಟರು. ನಾನು ಅವರಿಗೂ ಈಜಿಪ್ಟಿನವರಿಗೂ ಮಧ್ಯೆ ಕಾರ್ಗತ್ತಲೆಯನ್ನು ಉಂಟುಮಾಡಿದೆ. ಇದಲ್ಲದೆ ಈಜಿಪ್ಟಿನವರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಳುಗಿಸಿಬಿಟ್ಟೆ. ನಾನು ಈಜಿಪ್ಟಿನಲ್ಲಿ ಏನೇನು ಮಾಡಿದೆನೆಂಬುದಕ್ಕೆ ನೀವೇ ಸಾಕ್ಷಿಗಳು. ‘ನೀವು ದೀರ್ಘಕಾಲ ಮರುಭೂಮಿಯಲ್ಲಿದ್ದಿರಿ. ಅನಂತರ ನಿಮ್ಮನ್ನು ಜೋರ್ಡನಿನ ಆಚೆ ಅಮೋರಿಯರ ನಾಡಿಗೆ ಕರೆತಂದೆ. ನಿಮ್ಮೊಡನೆ ಯುದ್ಧಕ್ಕೆ ಬಂದ ಅವರನ್ನು ನಿಮ್ಮ ಕೈವಶ ಮಾಡಿದೆ. ನೀವು ಅವರ ನಾಡನ್ನು ಸ್ವತಂತ್ರಿಸಿಕೊಂಡಿರಿ. ಅವರನ್ನು ನಿಮ್ಮೆದುರಿನಲ್ಲೇ ನಾಶ ಮಾಡಿದೆ. ಆಮೇಲೆ ಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು ಇಸ್ರಯೇಲರಾದ ನಿಮ್ಮ ವಿರುದ್ದ ಯುದ್ಧಮಾಡಲು ಎದ್ದ. ನಿಮ್ಮನ್ನು ಶಪಿಸಲು ಬೆಯೋರನ ಮಗ ಬಿಳಾಮನಿಗೆ ಕರೆ ಕಳುಹಿಸಿದ. ಆದರೆ ನಾನು ಆ ಬಿಳಾಮನಿಗೆ ಸಮ್ಮತಿ ಕೊಡಲಿಲ್ಲವಾದ್ದರಿಂದ ಅವನು ನಿಮ್ಮನ್ನು ಆಶೀರ್ವದಿಸುತ್ತಲೇ ಇರಬೇಕಾಯಿತು. ಹೀಗೆ ನಿಮ್ಮನ್ನು ಅವನ ಕೈಗೆ ಬೀಳದಂತೆ ತಪ್ಪಿಸಿದೆ. ನೀವು ಜೋರ್ಡನನ್ನು ದಾಟಿ ಜೆರಿಕೋವಿಗೆ ಬಂದಿರಿ. ಆಗ ಜೆರಿಕೋವಿನವರು, ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷ್ಟಿಯರು, ಹಿವ್ವಿಯರು ಹಾಗೂ ಯೆಬೂಸಿಯರು ಇವರೆಲ್ಲರೂ ನಿಮಗೆ ವಿರುದ್ಧ ಯುದ್ಧಕ್ಕೆ ಬಂದರು. ನಾನು ಅವರೆಲ್ಲರನ್ನು ನಿಮ್ಮ ಕೈವಶಮಾಡಿದೆ. ಇದಲ್ಲದೆ ಕಣಜದ ಹುಳುಗಳನ್ನು ನಿಮ್ಮ ಮುಂದಾಗಿ ಕಳುಹಿಸಿದೆ. ಅವು ಅಮೋರಿಯರ ಅರಸರಿಬ್ಬರನ್ನು ಓಡಿಸಿ ಬಿಟ್ಟವು. ಇದು ನಿಮ್ಮ ಕತ್ತಿಬಿಲ್ಲುಗಳಿಂದ ಆದುದಲ್ಲ. ನೀವು ಕೃಷಿ ಮಾಡದ, ಬೆಳೆ ತುಂಬಿದ ಭೂಮಿಯನ್ನು ನಿಮಗೆ ಕೊಟ್ಟೆ. ನೀವು ಕಟ್ಟದ ನಗರಗಳಲ್ಲಿ ವಾಸಮಾಡುತ್ತಿದ್ದೀರಿ. ನೀವು ನೆಟ್ಟು ಬೆಳೆಸದ ದ್ರಾಕ್ಷಿ ಹಾಗೂ ಎಣ್ಣೆಮರಗಳ ತೋಟಗಳನ್ನು ಅನುಭವಿಸುತ್ತಿದ್ದೀರಿ’.

ಕೀರ್ತನೆ - 136: 1-3,16-18,21-22,24
1 : ಒಳ್ಳೆಯವನಾದ ಪ್ರಭುವಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
2 : ದೇವಾದಿ ದೇವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
3 : ಮಹೋನ್ನತ ಪ್ರಭುವಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
16 : ತನ್ನ ಪ್ರಜೆಯನು ಅರಣ್ಯಮಾರ್ಗವಾಗಿ ಕರೆತಂದವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
17 : ಬಲವಂತ ರಾಜರನು ಉರುಳಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
18 : ಪ್ರಖ್ಯಾತ ರಾಜರನ್ನು ಸಂಹರಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
21 : ಅವರ ನಾಡನ್ನು ಇಸ್ರಯೇಲರಿಗೆ ಕೊಟ್ಟಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
22 : ಅದನ್ನು ದಾಸರಾದ ನಮಗೆ ಸೊತ್ತಾಗಿ ನೀಡಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
24 : ಶತ್ರುಹಗೆಗಳಿಂದ ನಮ್ಮನ್ನು ಬಿಡಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.

ಶುಭಸಂದೇಶ - ಮತ್ತಾಯ 19:3-12
ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಮಾತಿನಲ್ಲಿ ಸಿಕ್ಕಿಸುವ ಉದ್ದೇಶದಿಂದ, “ಯವುದಾದರೂ ಕಾರಣದಿಂದ ಗಂಡನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಸೃಷ್ಟಿಕರ್ತ ಆದಿಯಿಂದಲೇ ಅವರನ್ನು ಗಂಡುಹೆಣ್ಣಾಗಿ ಉಂಟುಮಾಡಿದರು ಎಂದೂ, ‘ಈ ಕಾರಣದಿಂದಲೇ ಗಂಡನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಕೂಡಿಕೊಂಡು ಅವರಿಬ್ಬರೂ ಒಂದಾಗಿ ಬಾಳುವರು’ ಎಂದೂ ಹೇಳಿದ್ದಾರೆಂಬುದಾಗಿ ನೀವು ಪವಿತ್ರ ಗ್ರಂಥದಲ್ಲಿ ಓದಿಲ್ಲವೇ? ಹೀಗಿರುವಲ್ಲಿ, ಇನ್ನು ಮುಂದೆ ಅವರು ಇಬ್ಬರಲ್ಲ, ಒಂದೇ ಶರೀರವಾಗಿರುವರು. ಈ ನಿಮಿತ್ತ ದೇವರು ಒಂದುಗೂಡಿಸಿದ್ದನ್ನು ಮನುಷ್ಯನು ಬೇರ್ಪಡಿಸದೆ ಇರಲಿ,” ಎಂದರು. “ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಹೆಂಡತಿಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ನಿಯಮಿಸಿದ್ದು ಏಕೆ?” ಎಂದು ಫರಿಸಾಯರು ಮರುಪ್ರಶ್ನೆ ಹಾಕಿದರು. “ನಿಮ್ಮ ಹೆಂಡತಿಯನ್ನು ನೀವು ಬಿಟ್ಟುಬಿಡಬಹುದೆಂದು ಮೋಶೆ ಅನುಮತಿ ಇತ್ತದ್ದು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತದಿಂದಲೇ. ಆದರೆ ಅದು ಆದಿಯಿಂದಲೇ ಹಾಗಿರಲಿಲ್ಲ. ನಾನು ನಿಮಗೆ ಹೇಳುವುದನ್ನು ಕೇಳಿ: ತನ್ನ ಹೆಂಡತಿಯನ್ನು ಅವಳ ದುರ್ನಡತೆಯ ಕಾರಣದಿಂದಲ್ಲದೆ ಬಿಟ್ಟುಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುವ ಪ್ರತಿಯೊಬ್ಬನೂ ವ್ಯಭಿಚಾರಿಯಾಗುತ್ತಾನೆ.” ಶಿಷ್ಯರು ಆಗ, “ಸತಿಪತಿಯರ ಸಂಬಂಧ ಈ ರೀತಿ ಇರುವುದಾದರೆ, ಮದುವೆ ಮಾಡಿಕೊಳ್ಳದಿರುವುದೇ ಲೇಸು,” ಎಂದರು. ಅದಕ್ಕೆ ಯೇಸು, “ಇದನ್ನು ಅಂಗೀಕರಿಸಲು ಎಲ್ಲರಿಂದಲೂ ಸಾಧ್ಯವಿಲ್ಲ; ಯಾರಿಗೆ ಅನುಗ್ರಹಿಸಲಾಗಿದೆಯೋ ಅವರಿಂದ ಮಾತ್ರ ಸಾಧ್ಯ. ತಾಯಿಯ ಉದರದಿಂದಲೇ ನಪುಂಸಕರಾಗಿ ಹುಟ್ಟಿದವರಿದ್ದಾರೆ. ಜನರಿಂದ ನಪುಂಸಕರಾದವರು ಕೂಡ ಇದ್ದಾರೆ; ಸ್ವರ್ಗಸಾಮ್ರಾಜ್ಯದ ನಿಮಿತ್ತ ಅವಿವಾಹಿತರಾಗಿ ಇರುವವರೂ ಇದ್ದಾರೆ; ಇದನ್ನು ಅಂಗೀಕರಿಸಬಲ್ಲವನು ಅಂಗೀಕರಿಸಲಿ,” ಎಂದರು.

ಚಿಂತನೆ (ಕೃಪೆ ; ಕನ್ನಡ ಬೈಬಲ್ ಡೈರಿ)
ಮದುವೆ ಎಂದರೆ ಆತ್ಮ ಮನಸ್ಸುಗಳ ಮಿಲನ. ಅಪರಿಚಿತವಾಗಿದ್ದ ಎರಡು ಕುಟುಂಬಗಳನ್ನು ಬೆಸೆಯುವ ಸೇತುವೆ. ಹೆಣ್ಣುಗಂಡಿನ  ಸಾಂಗತ್ಯಕ್ಕೆ ನಾಂದಿ ಹಾಡುವ, ಕೌಟಂಬಿಕ ಜೀವನಕ್ಕೆ ಮುದ್ರೆ ಒತ್ತುವ ವಿವಾಹಕ್ಕೆ ಜಗತ್ತಿನ ಎಲ್ಲ ಧರ್ಮ, ಜಾತಿ, ಪಂಗಡಗಳಲ್ಲೂ ಮಹತ್ತರ ಸ್ಥಾನವಿದೆ. ಆದರೆ, ಆಡಂಬರ ಪ್ರದರ್ಶನದ ಅದ್ಧೂರಿ ಮದುವೆಗಳೇ ಇಂದಿನ ಫ್ಯಾಷನ್ ಆಗಿಬಿಟ್ಟಿದೆ. ಇವುಗಳ ಮಧ್ಯೆ ಸಂಬಂಧಗಳು ಕಮರಿ ಹೋಗುತಿವೆ.  ಪರಿಸ್ಥಿತಿ ಹೀಗಿರುವಾಗ ಯೇಸು ಶುಭಸಂದೇಶದ ಮೂಲಕ ದೇವರ ಸಾಮ್ರಾಜ್ಯದ ಮೌಲ್ಯಗಳನ್ನು ವಿವರಿಸುತ್ತಾ ಮದುವೆಯ ಬಂಧನ ದೇವರು ಮಾನವನಿಗೆ ನೀಡಿರುವ ಪ್ರೀತಿಯ ಕೊಡುಗೆಯಾಗಿದೆ ಎನ್ನತ್ತಾ, ಮದುವೆಯ ಬಂಧನದಲ್ಲಿರುವ ಗಂಡು ಹೆಣ್ಣು ಸದಾಕಾಲ ಐಕ್ಯವಾಗಿರಬೇಕೆಂಬುವುದೇ ದೇವರ ಚಿತ್ತ ಎಂಬುವುದನ್ನು ಒತ್ತಿ ಹೇಳುತ್ತಿದ್ದಾರೆ. ಸ್ವಾರ್ಥಾಭಿಲಾಷೆಯಿಂದ. ದೈಹಿಕ ವ್ಯಾಮೋಹದಿಂದ  ದೈವ ನಿರ್ಮಿತ ನಿಯಮಗಳನ್ನು ಮುರಿಯಬಾರದು ಎಂದು ಯೇಸು ಬಯಸುತ್ತಾರೆ.

No comments:

Post a Comment