Sunday, 1 September 2019

ಸಾಧರಾಣ ಕಾಲದ ಇಪ್ಪತ್ತೆರಡನೇ ವಾರ ಸೋಮವಾರ

ಸಾಧರಾಣ ಕಾಲದ ಇಪ್ಪತ್ತೆರಡನೇ ವಾರ ಸೋಮವಾರ

2/ಹಸಿರು/ಸೋಮ 
1ನೇ ವಾಚನ - 1 ಥೆಸ 4: 13-18 
ಕೀರ್ತನೆ - 96: 1, 3-5, 11-13 
ಶುಭಸಂದೇಶ - ಲೂಕ 4: 16-3೦

1ನೇ ವಾಚನ - 1 ಥೆಸ 4: 13-18
ಸಹೋದರರೇ, ಮೃತರ ಮುಂದಿನ ಸ್ಥಿತಿಗತಿಯ ವಿಷಯವಾಗಿ ನೀವು ತಿಳಿದಿರಬೇಕು ಎಂಬುದೇ ನಮ್ಮ ಬಯಕೆ. ಏಕೆಂದರೆ, ನಂಬಿಕೆ ನಿರೀಕ್ಷೆಯಿಲ್ಲದ ಇತರರಂತೆ ಮೃತರಿಗಾಗಿ ನೀವು ದುಃಖಿಸಬಾರದು. ಯೇಸು ಸತ್ತು ಪುನರುತ್ಥಾನ ಹೊಂದಿದರೆಂದು ನಾವು ವಿಶ್ವಾಸಿಸುತ್ತೇವೆ ಅಲ್ಲವೇ? ಹಾಗೆಯೇ, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟು ಮರಣಹೊಂದಿದವರನ್ನು ದೇವರು ಯೇಸುಕ್ರಿಸ್ತರೊಡನೆ ಮರಳಿ ಕರೆದುಕೊಳ್ಳುತ್ತಾರೆ. ಪ್ರಭುವಿನ ವಾಕ್ಯದ ಆಧಾರದ ಮೇಲೆ ನಾವು ನಿಮಗೆ ಹೇಳುತ್ತೇವೆ: ಪ್ರಭು ಪುನರಾಗಮಿಸುವಾಗ, ಇನ್ನೂ ಬದುಕಿರುವ ನಾವು ಮೃತರಾಗಿರುವ ಇತರರಿಗಿಂತಲೂ ಮುಂದಿನವರಾಗುವುದಿಲ್ಲ. ಆಜ್ಞಾಘೋಷವಾದಾಗ, ಪ್ರಧಾನ ದೂತನ ಧ್ವನಿಯು ಕೇಳಿಬಂದಾಗ, ದೇವರ ತುತೂರಿ ನಾದಗೈದಾಗ, ಪ್ರಭುವೇ ಸ್ವರ್ಗದಿಂದ ಇಳಿದು ಬರುತ್ತಾರೆ. ಆಗ, ಕ್ರಿಸ್ತಸ್ಥರಾಗಿ ಮೃತರಾದವರು ಮೊದಲು ಎದ್ದು ಬರುತ್ತಾರೆ. ಆಮೇಲೆ, ಇನ್ನೂ ಬದುಕಿರುವ ನಾವು ಎದ್ದುಬಂದವರೊಡನೆ ಆಕಾಶಮಂಡಲದಲ್ಲಿ ಪ್ರಭುವನ್ನು ಎದುರುಗೊಳ್ಳಲು ಮೇಘಾರೂಢರಾಗಿ ಮೇಲಕ್ಕೆ ಒಯ್ಯಲ್ಪಡುತ್ತೇವೆ. ಹೀಗೆ ಸರ್ವದಾ ನಾವು ಪ್ರಭುವಿನೊಂದಿಗೆ ಇರುತ್ತೇವೆ. ಆದ್ದರಿಂದ, ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿ.

ಕೀರ್ತನೆ - 96: 1, 3-5, 11-13
1 : ಹೊಸಗೀತೆಯನು ಹಾಡಿರಿ ಪ್ರಭುವಿಗೆ / ವಿಶ್ವವೆಲ್ಲವು ಹಾಡಲಿ ಆತನಿಗೆ //
3 : ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ | ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ ||
4 : ಏಕೆನೆ ಮಹಾತ್ಮನು ಪ್ರಭು, ಬಲು ಸ್ತುತ್ಯರ್ಹನು | ಸಕಲ ದೇವರುಗಳಿಗಿಂತಲೂ ಘನ ಗಂಭೀರನು ||
5 : ಶೂನ್ಯ ಪ್ರತಿಮೆಗಳು ಅನ್ಯರಾಷ್ಟ್ರಗಳ ದೇವರುಗಳೆಲ್ಲ | ಪ್ರಭುವಿನಿಂದಲೇ ಉಂಟಾಯಿತು ಆಕಾಶ ಮಂಡಲವೆಲ್ಲ ||
11 : ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು | ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು ||
12 : ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು | ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು ||
13 : ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವನು ಖರೆಯಾಗಿ | ಜಗಕು, ಜನತೆಗು ತೀರ್ಪಿಸುವನು ನೀತಿನಿಯಮಾನುಸಾರವಾಗಿ ||

ಶುಭಸಂದೇಶ - ಲೂಕ 4: 16-3೦
ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್‍ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು: “ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ.” ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, “ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು,” ಎಂದು ವಿವರಿಸಲಾರಂಭಿಸಿದರು. ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. “ಇವನು ಜೋಸೆಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು. ಅನಂತರ ಯೇಸು ಅವರಿಗೆ, “ ‘ವೈದ್ಯನೇ, ಮೊದಲು ನಿನ್ನನ್ನು ನೀನು ಗುಣಪಡಿಸಿಕೊ’, ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಅನ್ವಯಿಸುವಿರಿ; ಅಲ್ಲದೆ, ‘ಕಫೆರ್ನವುಮಿನಲ್ಲಿ ನೀನು ಎಂಥೆಂಥ ಮಹತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆ; ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲೂ ಮಾಡು,’ ಎಂದೂ ಹೇಳುವಿರಿ. ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲ. ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳಿಸಿದರು. ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ,” ಎಂದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು. ಯೇಸುವನ್ನು ಆ ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು. ಯೇಸುವಾದರೋ, ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.

ಚಿಂತನೆ
ಹೆಚ್ಚಳ ಪಡುವವನು ಯೇಸುವಿನಲ್ಲಿ ಹೆಚ್ಚಳ ಪಡಲಿ
ದೇವರಾತ್ಮ ನನ್ನ ಮೇಲಿದೆ, ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು (ಲೂಕ ೪:೧೮) ಎಂಬ ಈ ವಾಕ್ಯವನ್ನು ಹತ್ತು ಹಲವಾರು ವರುಷಗಳಿಂದ ಕೇಳುತ್ತಾ ಬಂದಿದ್ದೇವೆ. ಅಂತೆಯೇ ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆಂದು ಸಾರಲು ಅವರು ನನ್ನನ್ನು ಕಳುಹಿಸಿದ್ದಾರೆ ಎನ್ನುವುದು ಜ್ಞಾನಸ್ನಾನವನ್ನು ಪಡೆದ ಪ್ರತಿಯೊಬ್ಬ ಕ್ರೈಸ್ತನಿಗೂ ಅನ್ವಯಿಸುವಂತದ್ದಾಗಿದೆ. ಅಂದು ಯೇಸು ಮೂರು ವರುಷಗಳ ತನಕ ಮಾಡಿದ ಕಾರ್‍ಯಗಳನ್ನು ಮುಂದುವರೆಸಲು ಜ್ಞಾನಸ್ನಾನದಿಂದ ನಾವೆಲ್ಲರೂ ಕರೆಯನ್ನು ಹೊಂದಿದ್ದೇವೆ. ಎರಡು ಸಾವಿರ ವರುಷಗಳಿಂದಲೂ ಈ ವಾಕ್ಯಗಳನ್ನು ಓದುತ್ತಾ, ಅವುಗಳನ್ನು ವಿಶ್ವಾಸಿಸುತ್ತಾ ದೇವರ ಸಾಮ್ರಾಜ್ಯ ಅಥವಾ ಜನತೆಯನ್ನು ಉದ್ಧರಿಸುವ ಕಾಲ ಬಂದಿದೆಯೆಂದೂ ನಾವೆಲ್ಲರೂ ಹೇಳುತ್ತಿದ್ದೇವೆ. ಆದರೆ ನಮ್ಮ ದೃಷ್ಟಿಯನ್ನು ನಮ್ಮ ಸಮಾಜದ ಸುತ್ತಮುತ್ತಲಲ್ಲಿ ಹಾಯಿಸಿದಾಗ ನಾವು ಕಾಣುವುದಾದರೂ ಏನನ್ನು? ಎಲ್ಲಿ ನೋಡಿದರೂ ಕಲಹ, ಕೊಲೆ, ಅಶಾಂತಿ, ಅಕ್ರಮ, ರೋಗ-ರುಜಿನ, ಬಡತನ, ಕಷ್ಟ-ಕೋಟಲೆ, ಮತ್ತಿತರ ದೋಷಗಳು. ಹಾಗಾದರೆ ಇಂದು ಶುಭಸಂದೇಶದಲ್ಲಿ ಯೇಸು ನುಡಿದ ವಾಕ್ಯಗಳಿಗೆ ಅರ್ಥವಿದೆಯೇ? ಯೇಸು ನುಡಿದ ಮಾತುಗಳು ನೈಜವಾದವುಗಳು ಎಂದು ತಿಳಿಯುವುದಾದರೂ ಹೇಗೆ? ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಅಶಾಂತಿ-ಅಸಮಾಧಾನ ತುಂಬಿರುವಾಗ ಇಂದು ದೇವರ ಸಾಮ್ರಾಜ್ಯ ಬಂದಿದೆ, ಜನತೆಯ ಉದ್ಧಾರದ ಉಗಮವಾಗಿದೆ ಎಂದು ಹೇಳುವುದರ ಅರ್ಥವೇನು? ಇದಕ್ಕೆ ಉತ್ತರ ನೀಡುತ್ತಿದೆ ಇಂದಿನ ಆರಾಧನಾವಿಧಿ.

ಇಂದಿನ ಮೊದಲನೆಯ ವಾಚನದಲ್ಲಿ ಸಂತ ಪೌಲರು ಶುಭಸಂದೇಶ ಸಾರುವವರು ತಮ್ಮ ವಾಕ್ಚಾತುರ್ಯವನ್ನು ಪ್ರದರ್ಶಿಸಿದರೆ ಅದರಿಂದ ಉಂಟಾಗುವ ಪರಿಣಾಮ ಶೂನ್ಯ ಎನ್ನುತ್ತಾರೆ. ಏಕೆಂದರೆ ಅವರು ಇದನ್ನು ತಮ್ಮ ಜೀವನದಲ್ಲಿ ಅನುಭವಿಸಿದ್ದರು. ಸಂತ ಪೌಲರು ಅಥೆನ್ಸಿನಲ್ಲಿ ತಮ್ಮ  ವಾಕ್ಚಾತುರ್ಯದಿಂದ, ತತ್ವಗಳ ಬಲದಿಂದ ಅಲ್ಲಿಯ ಜನರಿಗೆ ಶುಭಸಂದೇಶವನ್ನು ಸಾರಲು ಪ್ರಯತ್ನಿಸಿದರು. ಈ ಕಾರ್‍ಯದಲ್ಲಿ ಪವಿತ್ರಾತ್ಮರ ಪ್ರೇರಣೆಗೆ ಹಾಗೂ ದೇವರ ಸಹಾಯದ ಅವಶ್ಯಕತೆಯನ್ನು ಬದಿಗೊತ್ತಿದ್ದರು. ತಮ್ಮ ಸ್ವಂತ ವಾಕ್ಚಾತುರ್ಯ ಪ್ರದರ್ಶಿಸಲು ಹೋದ ಸಂತ ಪೌಲರಿಗೆ ಅಥೆನ್ಸ್‌ನ ಜನರಿಂದ ತಿರಸ್ಕಾರ ಲಭಿಸಿತು. ನಂತರ ಅವರು ಪವಿತ್ರಾತ್ಮರ ಪ್ರಭಾವದಿಂದ ಮತ್ತು ದೇವರ ಸಹಾಯದೊಂದಿಗೆ ಅಥೆನ್ಸ್ ಮತ್ತು ಇವರ ನಾಡುಗಳಲ್ಲಿ ಶುಭಸಂದೇಶವನ್ನು ಸಾರಿದಾಗ ಜನರು ಅದನ್ನು ಪುರಸ್ಕರಿಸಿದರು. ಆದ್ದರಿಂದ ಅವರು ನಮಗೆ ತಿಳಿಸುವುದೇನೆಂದರೆ ನಾವು ಶುಭಸಂದೇಶವನ್ನು ಇತರರಿಗೆ ತಿಳಿಸುವಾಗ ನಮ್ಮ ಸ್ವಂತ ಶಕ್ತಿಯನ್ನು ಅವಲಂಬಿಸದೆ ದೇವರ ಸಹಾಯದಲ್ಲಿ ಭರವಸೆಯಿಟ್ಟು ಶುಭಸಂದೇಶವನ್ನು ಸಾರಿದಾಗ, ಆ ಸಂದೇಶವೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಅಂತೆಯೇ ಶುಭಸಂದೇಶವನ್ನು ಸ್ವೀಕರಿಸುವವರು ಸಹ ವಿಶ್ವಾಸದ ಬುನಾದಿಯ ಮೇಲೆ ನಿಲ್ಲಬೇಕು. ವಿಶ್ವಾಸವಿಲ್ಲದೆ ಯಾವುದೂ ಸಾಧ್ಯವಿಲ್ಲ. ಸ್ವತಃ ಯೇಸುವೇ ತಮ್ಮ ಜೀವಿತದಲ್ಲಿ ವಿಶ್ವಾಸದ ಮಹತ್ವವನ್ನು ತಿಳಿಸಿದ್ದಾರೆ. ವಿಶ್ವಾಸವಿಲ್ಲದ ಸ್ಥಳಗಳಲ್ಲಿ ಯಾವುದೇ ಅದ್ಭುತಗಳನ್ನು ಅವರು ನಡೆಸಲಿಲ್ಲ.

ಆದುದರಿಂದ ಉದ್ಧಾರದ ಉತ್ಥಾನವಾಗಿದೆ: ಆದರೆ ನಾವು ನಮ್ಮ ವಿಶ್ವಾಸದಲ್ಲಿ ದೃಢವಾಗಬೇಕು. ದೇವರ ಸಾಮ್ರಾಜ್ಯ ನಮ್ಮಲ್ಲಿದೆ. ಆದರೆ ಅದನ್ನು ನಮ್ಮ ಮಧ್ಯೆ ನಾವು ಕಾಣಬೇಕು. ಪ್ರತಿಯೊಬ್ಬರಿಗೂ ಪುಣ್ಯವನ್ನು ಗಳಿಸಬೇಕು, ಸಂತರಾಗಬೇಕು ಎಂಬ ಹಂಬಲವಿದೆ. ಆದರೆ ಪಾಪವನ್ನು ತ್ಯಜಿಸದೇ ಇದು ಅಸಾಧ್ಯ. ಜ್ಞಾನಸ್ನಾನವನ್ನು ಪಡೆದಿರುವೆ ಪ್ರತಿಯೊಬ್ಬನೂ ಯೇಸುವು ಪ್ರಾರಂಭಿಸುವ ಉದ್ಧಾರದ ಕಾರ್‍ಯವನ್ನು ಮುಂದುವರೆಸಬೇಕು. ಈ ಕಾರ್‍ಯದಲ್ಲಿ ಪ್ರತಿಯೊಬ್ಬರ ವಿಶ್ವಾಸ ಮತ್ತು ಧೈರ್‍ಯ ತಮ್ಮ ವಾಕ್ಚಾತುರ್ಯದಲ್ಲಿ ಮತ್ತು ಶಕ್ತಿಯಲ್ಲಿರದೆ, ಪ್ರಭುಕ್ರಿಸ್ತರಲ್ಲಿ ಮತ್ತು ಪವಿತ್ರಾತ್ಮರ ಪ್ರೇರಣೆಯಲ್ಲಿ ಹಾಸುಹೊಕ್ಕಿರಬೇಕು. ಅಂತೆಯೇ ಎಲ್ಲಾ ವ್ಯಾಧಿಗಳಿಂದ ಮುಕ್ತರಾಗಲು ಇಚ್ಛಿಸುವವರು, ತಾವು ದೇವರಲ್ಲಿ ಇಟ್ಟಿರುವ ವಿಶ್ವಾಸವನ್ನು ಅವಲಂಭಿಸಬೇಕೇ ಹೊರತು ಅವಿಶ್ವಾಸವನ್ನಲ್ಲ. ನಾವು ಮಾಡುವ ಶುಭುಕಾರ್‍ಯ, ಶುಭಸಂದೇಶದ ಪ್ರಚಾರ ದೇವರ ಶಕ್ತಿಯಲ್ಲಿ ಅವಲಂಭಿತವಾಗಿದ್ದರೆ, ನಮ್ಮ ಸಮಾಜದ ರೋಗ-ರುಜಿನಗಳು, ಲೋಪ-ದೋಷಗಳು ದೂರವಾಗಿ, ನಾವೆಲ್ಲರೂ ಉದ್ಧರಿಸಲ್ಪಟ್ಟಿದ್ದೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಯೇಸುಕ್ರಿಸ್ತರ ಮೇಲೆ ಅವಲಂಭಿಸಿರದ ಸಂದೇಶ ಎಂದಿಗೂ ಯಶಸ್ವಿಯಾಗದು

No comments:

Post a Comment