Sunday, 22 September 2019

ಸಾಧಾರಣ ಕಾಲದ ಇಪ್ಪತ್ತೈದನೇ ವಾರ ಶುಕ್ರವಾರ

ಸಾಧಾರಣ ಕಾಲದ ಇಪ್ಪತ್ತೈದನೇ ವಾರ ಶುಕ್ರವಾರ

27/ಬಿಳಿ/ಶುಕ್ರ/ಸಂತ ವಿನ್ಸೆಂಟ್ ಡಿ ಪಾಲ್(ಯಾ)(ಸ್ಮರಣೆ)
1ನೇ  ವಾಚನ - ಹಗ್ಗಾ 2: 1-9
ಕೀರ್ತನೆ - 43: 1-4
ಶುಭಸಂದೇಶ - ಲೂಕ 9: 18-22


1ನೇ  ವಾಚನ - ಹಗ್ಗಾ 2: 1-9
ಡೇರಿಯಸ್ ಚಕ್ರವರ್ತಿಯ ಆಳ್ವಿಕೆಯ ಎರಡನೇ ವರ್ಷದ ಆರನೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ತಮ್ಮ ದೇವರಾದ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಆಲಯದ ನಿರ್ಮಾಣಕ್ಕೆ ಕೈ ಹಾಕಿದರು. ಅದೇ ವರ್ಷದ ಏಳನೇ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಪ್ರವಾದಿ ಹಗ್ಗಾಯನ ಮೂಲಕ ಸರ್ವೇಶ್ವರ ಈ ಸಂದೇಶವನ್ನು ದಯಪಾಲಿಸಿದರು: ಶೆಯಲ್ತೀಯೇಲನ ಮಗನೂ ಜುದೇಯ ನಾಡಿನ ಅಧಿಪತಿಯೂ ಆದ ಜೆರುಬ್ಬಾಬೆಲನಿಗೆ ಮತ್ತು ಮಹಾಯಾಜಕ ಯೆಹೋಶುವನಿಗೆ ಮತ್ತು ಅಳಿದುಳಿದ ಜನರೆಲ್ಲರಿಗೆ ಹೀಗೆ ತಿಳಿದು – “ಈ ದೇವಾಲಯದ ಪೂರ್ವ ವೈಭವವನ್ನು ನೋಡಿದವರು ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ? ಇದರ ಈಗಿನ ಸ್ಥಿತಿ ನಿಮಗೆ ಹೇಗೆ ತೋರುತ್ತದೆ? ನಿಮ್ಮ ದೃಷ್ಟಿಗೆ ಏನೂ ಇಲ್ಲದಂತೆ ಕಾಣಿಸುತ್ತದಲ್ಲವೇ? ಸರ್ವೇಶ್ವರ ಆದ ನಾನು ಹೇಳುವುದನ್ನು ಕೇಳಿ:  ಜೆರುಬ್ಬಾಬೆಲನೇ, ಈಗ ಧೈರ್ಯದಿಂದಿರು. ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನೇ, ಎದೆಗುಂದಬೇಡ. ನಾಡಿನ ಜನರೇ, ನೀವೆಲ್ಲರು ಧೈರ್ಯದಿಂದ ಕೆಲಸಮಾಡಿ. ಇದು ಸೇನಾಧೀಶ್ವರ ಸರ್ವೇಶ್ವರ ಆದ ನನ್ನ ನುಡಿ. ನಾನು ನಿಮ್ಮೊಡನೆ ಇದ್ದೇನೆ. ನೀವು ಈಜಿಪ್ಟ್ ದೇಶದಿಂದ ಹೊರಟುಬಂದಾಗ ನಾನು ನಿಮಗೆ ಪ್ರಮಾಣವಾಗಿ ಕೊಟ್ಟ ಮಾತನ್ನು ನೆರವೇರಿಸುವೆನು. ನನ್ನ ಆತ್ಮವು ನಿಮ್ಮಲ್ಲಿ ನೆಲೆಗೊಂಡಿದೆ; ಭಯಪಡದಿರಿ. “ಸ್ವಲ್ಪಕಾಲದಲ್ಲೇ ಮತ್ತೊಮ್ಮೆ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಮರುಭೂಮಿಯನ್ನೂ ಅದರಿಸುವೆನು. ಸಕಲ ಜನಾಂಗಗಳನ್ನು ನಡುಗಿಸುವೆನು. ಆಗ ಎಲ್ಲ ರಾಷ್ಟ್ರಗಳ ಸಿರಿಸಂಪತ್ತು ಇಲ್ಲಿಗೆ ಬರುವುದು. ಈ ಆಲಯವನ್ನು ವೈಭವದಿಂದ ತುಂಬಿಸುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ.  ಬೆಳ್ಳಿ ನನ್ನದು, ಬಂಗಾರವೆಲ್ಲ ನನ್ನದು. ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ಶ್ರೇಷ್ಠವಾಗಿರುವುದು. ಈ ಸ್ಥಳದಲ್ಲಿ ಶಾಂತಿ ಸಮೃದ್ಧಿಯನ್ನು ಅನುಗ್ರಹಿಸುವೆನು” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.
ಕೀರ್ತನೆ - 43: 1-4
1 : ನಿರ್ಣಯಿಸು ನನ್ನ ನ್ಯಾಯವನು ಓ ದೇವಾ / ವಾದಿಸು ಆ ಭಕ್ತಿಹೀನ ಜನತೆಯ ವಿರುದ್ಧ / ಬಿಡಿಸೆನ್ನನು ವಂಚಕರಿಂದ, ಅಧರ್ಮಿಗಳಿಂದ // 
2 : ನನಗೆ ಕೋಟೆ ನೀನಲ್ಲವೇ? ನನ್ನ ಕೈ ಬಿಟ್ಟಿರುವೆ ಏಕೆ?/ ಶತ್ರು ಬಾಧೆಯಿಂದ ಭಿಕಾರಿಯಂತೆ ನಾನಲೆಯಬೇಕೆ?// 
3 : ಕಳುಹಿಸು ನಿನ್ನ ಜ್ಯೋತಿಯನು, ನಿನ್ನ ಸತ್ಯವನ್ನು ನನ್ನ ನಡೆಸಲಿಕೆ / ಸೇರಿಸಲೆನ್ನನು ನಿನ್ನ ಪವಿತ್ರ ಪರ್ವತಕೆ, ನಿನ್ನಯ ನಿವಾಸಕೆ // 
4 : ಬರುವೆನಾಗ ನಿನ್ನ ಬಲಿಪೀಠದ ಬಳಿಗೆ / ನನ್ನಾನಂದ ನಿಧಿಯಾದ ನಿನ್ನ ಸನ್ನಿಧಿಗೆ / ವೀಣೆ ನುಡಿಸಿ ದೇವಾ, ನಿನ್ನ ಸ್ತುತಿಸಲಿಕೆ //

ಶುಭಸಂದೇಶ - ಲೂಕ 9: 18-22
ಒಮ್ಮೆ ಯೇಸುಸ್ವಾಮಿ ಏಕಾಂಗಿಯಾಗಿ ಪ್ರಾರ್ಥನೆಮಾಡುತ್ತಿದ್ದಾಗ ಶಿಷ್ಯರು ಸಮೀಪದಲ್ಲೇ ಇದ್ದರು. “ಜನಸಾಮಾನ್ಯರು ನನ್ನನ್ನು ಯಾರೆನ್ನುತ್ತಾರೆ?” ಎಂದು ಯೇಸು ಅವರನ್ನು ಪ್ರಶ್ನಿಸಿದರು. ಅದಕ್ಕೆ ಅವರು, “ಹಲವರು ತಮ್ಮನ್ನು ‘ಸ್ನಾನಿಕ ಯೊವಾನ್ನ’ ಎನ್ನುತ್ತಾರೆ; ಕೆಲವರು ‘ಎಲೀಯನು’ ಎನ್ನುತ್ತಾರೆ; ಮತ್ತೆ ಕೆಲವರು ‘ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ’ ಎನ್ನುತ್ತಾರೆ,” ಎಂದು ಉತ್ತರವಿತ್ತರು. ಆಗ ಯೇಸು, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಪುನಃ ಪ್ರಶ್ನಿಸಿದರು. ಅದಕ್ಕೆ ಪೇತ್ರನು, “ದೇವರಿಂದ ಅಭಿಷಿಕ್ತರಾದ ಲೋಕೋದ್ಧಾರಕ ತಾವೇ” ಎಂದು ಉತ್ತರಕೊಟ್ಟನು. ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಯೇಸು ಶಿಷ್ಯರನ್ನು ಆಜ್ಞಾಪೂರ್ವಕವಾಗಿ ಎಚ್ಚರಿಸಿದರು. ಇದಲ್ಲದೆ, “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಮುಖ್ಯಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕøತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು,” ಎಂದು ಅವರಿಗೆ ತಿಳಿಸಿದರು.

ಚಿಂತನೆ


ಸ್ಮರಣೆ
ಸಂತ ವಿನ್ಸೆಂಟ್ ಡಿ ಪಾಲ್ (ಯಾಜಕ)

ಯೇಸುಕ್ರಿಸ್ತರು ಅದ್ಭುತ ಕಾರ್ಯಗಳನ್ನು ಮಾಡುವುದನ್ನು ನೋಡಿದ್ದ ಜನರು ಅನೇಕ ಅಭಿಪ್ರಾಯಗಳನ್ನು ಹೊಂದಿದ್ದರು. ಆಗ ಕ್ರಿಸ್ತರು ಶಿಷ್ಯರನ್ನು ನೋಡಿ ಜನರು ನನ್ನನ್ನು ಯಾರೆನ್ನುತ್ತಾರೆ? ಎಂದು ಪ್ರಶ್ನಿಸುತ್ತಾರೆ. ಆಗ ಶಿಷ್ಯರು “ಕೆಲವರು ನಿಮ್ಮನ್ನು ಎಲಿಯ ಇನ್ನೂ ಕೆಲವರು ಯೆರೆಮಿಯಾ, ಮತ್ತೆ ಕೆಲವರು ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬರು ಮರಳಿ ಜೀವಂತನಾಗಿದ್ದಾನೆ ಎಂದು ಹೇಳುತ್ತಾರೆ.” ಎಂದರು. ಆಗ ಯೇಸು ಪುನಃ ಎರಡನೇಯ ಪ್ರಶ್ನೆಯನ್ನು ಕೇಳುತ್ತಾರೆ. ನೀವು ನನ್ನನ್ನು ಯಾರೆನ್ನುತ್ತೀರಿ? ಇದು ವೈಯಕ್ತಿಕವಾದ ಪ್ರಶ್ನೆ ಆಗ ಪೇತ್ರ ದೇವರಿಂದ ಬಂದ ಅಭಿಷಕ್ತರಾದ ಲೋಕೊದ್ಧಾರಕ ತಾವೇ ಎಂದು ಹೇಳುತ್ತಾರೆ.
ಕ್ರಿಸ್ತರು ನಮಗೆ ಯಾರಾಗಿದ್ದಾರೆ? ದೇವರು? ಗುರು? ತಾಯಿ? ಸಹೋದರ? ಸಹೋದರಿ? ಗೆಳೆಯ? ಕ್ರಿಸ್ತರ ಮತ್ತು ನಮ್ಮ ನಡುವೆ ಯಾವರೀತಿಯ ಸಂಬಂಧವಿದೆ?

No comments:

Post a Comment