ಸಾಧಾರಣ ಕಾಲದ ಇಪ್ಪತ್ತೆರಡನೇ ವಾರ ಗುರುವಾರ
5/ಹಸಿರು/ಗುರು/ಶಿಕ್ಷಕರ ದಿನಾಚರಣೆ
1ನೇ ವಾಚನ - ಕೊಲೊ 1: 9-14
ಕೀರ್ತನೆ - 98: 2-6
ಶುಭಸಂದೇಶ - ಲೂಕ 5: 1-11
1ನೇ ವಾಚನ - ಕೊಲೊ 1: 9-14
ಹೀಗಿರುವುದರಿಂದ ಈ ವಿಷಯವನ್ನು ನಾವು ಕೇಳಿದ ದಿನದಿಂದಲೂ ನಿಮಗಾಗಿ ಸದಾ ಪ್ರಾರ್ಥಿಸುತ್ತಲೇ ಇದ್ದೇವೆ. ನೀವು ಪರಿಪೂರ್ಣ ವಿವೇಕದಿಂದಲೂ ಆಧ್ಯಾತ್ಮಿಕ ಜ್ಞಾನದಿಂದಲೂ ದೇವರ ಚಿತ್ತವನ್ನು ಸಂಪೂರ್ಣವಾಗಿ ಅರಿಯಬೇಕೆಂಬುದೇ ನಮ್ಮ ಕೋರಿಕೆ. ಆಗ ಎಲ್ಲ ವಿಷಯಗಳಲ್ಲಿಯೂ ಪ್ರಭುಯೇಸು ಮೆಚ್ಚುವ ರೀತಿಯಲ್ಲಿ ನೀವು ಜೀವಿಸುವಿರಿ. ನಾನಾ ತರಹದ ಸತ್ಕಾರ್ಯಗಳನ್ನು ಕೈಗೊಳ್ಳುವಿರಿ. ಸತ್ಫಲವನ್ನೀಯುವ ದೈವಜ್ಞಾನದಲ್ಲಿ ವೃದ್ಧಿಹೊಂದುವಿರಿ. ದೇವರ ಮಹಿಮಾಶಕ್ತಿಯಿಂದ ನೀವು ಬಲಗೊಂಡು ಎಲ್ಲವನ್ನೂ ತಾಳ್ಮೆಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳುವಿರಿ. ಪಿತನಿಗೆ ಹರ್ಷದಿಂದ ಕೃತಜ್ಞತಾಸ್ತುತಿ ಸಲ್ಲಿಸುವಿರಿ. ಏಕೆಂದರೆ, ಬೆಳಕಿನಲ್ಲಿರುವ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯದಲ್ಲಿ ಪಾಲುಗಾರರಾಗಲು ನಿಮ್ಮನ್ನು ಯೋಗ್ಯರನ್ನಾಗಿ ಅವರು ಮಾಡಿದ್ದಾರೆ. ದೇವರು ನಮ್ಮನ್ನು ಅಂಧಕಾರದ ಆಡಳಿತದಿಂದ ಬಿಡುಗಡೆಮಾಡಿ ತಮ್ಮ ಪುತ್ರನ ಸಾಮ್ರಾಜ್ಯಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ಈ ಪುತ್ರನಲ್ಲಿ ನಮಗೆ ಪಾಪಕ್ಷಮೆ ದೊರಕಿದೆ, ವಿಮೋಚನೆ ಲಭಿಸಿದೆ.
ಕೀರ್ತನೆ - 98: 2-6
2 : ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು / ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು //
3 : ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ / ನಮ್ಮ ದೇವ ಸಾಧಿಸಿದ ಜಯಗಳಿಕೆ // ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು / ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು //
4 : ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ / ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ //
5 : ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ / ಭಜಿಸಿರಿ ಆತನನು ವಾದ್ಯಮೇಳದೊಂದಿಗೆ //
6 : ಊದಿರಿ ಕೊಂಬನು, ತುತೂರಿಯನು / ಉದ್ಘೋಷಿಸಿರಿ ಪ್ರಭು ರಾಜನನು //
ಶುಭಸಂದೇಶ - ಲೂಕ 5: 1-11
ಒಮ್ಮೆ ಯೇಸುಸ್ವಾಮಿ ಗೆನೆಸರೇತ್ ಎಂಬ ಸರೋವರದ ತೀರದಲ್ಲಿ ನಿಂತಿದ್ದಾಗ, ಜನಸಮೂಹವು ದೇವರ ವಾಕ್ಯವನ್ನು ಕೇಳಲು ನೂಕುನುಗ್ಗಲಾಗಿ ಬಂದು ಅವರನ್ನು ಒತ್ತರಿಸುತ್ತಿತ್ತು. ಆಗ ದಡದ ಮೇಲಿದ್ದ ಎರಡು ದೋಣಿಗಳು ಯೇಸುವಿನ ಕಣ್ಣಿಗೆ ಬಿದ್ದವು. ಬೆಸ್ತರು ದೋಣಿಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಆ ದೋಣಿಗಳಲ್ಲಿ ಒಂದು ಸಿಮೋನನದು. ಯೇಸು ಅದನ್ನು ಹತ್ತಿ, ದಡದಿಂದ ಸ್ವಲ್ಪ ದೂರ ತಳ್ಳಲು ಹೇಳಿ, ಅದರಲ್ಲೇ ಕುಳಿತುಕೊಂಡು ತಮ್ಮ ಬೋಧನೆಯನ್ನು ಮುಂದುವರಿಸಿದರು. ಬೋಧನೆ ಮುಗಿದದ್ದೇ ಸಿಮೋನನಿಗೆ, “ನೀರು ಆಳವಾಗಿರುವ ಸ್ಥಳಕ್ಕೆ ದೋಣಿಯನ್ನು ಹಾಯಿಸಿ, ವಿೂನುಬೇಟೆಗೆ ನಿಮ್ಮ ಬಲೆಗಳನ್ನು ಹಾಕಿರಿ,” ಎಂದರು, ಅದಕ್ಕೆ ಸಿಮೋನನು “ಗುರುವೇ, ನಾವು ರಾತ್ರಿಯೆಲ್ಲಾ ದುಡಿದಿದ್ದೇವೆ; ಏನೂ ಸಿಗಲಿಲ್ಲ. ಆದರೂ ನಿಮ್ಮ ಮಾತಿಗೆ ಬೆಲೆ ಕೊಟ್ಟು ಬಲೆಗಳನ್ನು ಹಾಕುತ್ತೇವೆ,” ಎಂದನು. ಬಲೆಗಳನ್ನು ಹಾಕಿದ್ದೇ ವಿೂನುಗಳು ರಾಶಿ ರಾಶಿಯಾಗಿ ಸಿಕ್ಕಿಕೊಂಡವು; ಬಲೆಗಳು ಹರಿದು ಹೋಗುವುದರಲ್ಲಿದ್ದವು. ಆದುದರಿಂದ ಬೇರೆ ದೋಣಿಯಲ್ಲಿದ್ದ ತಮ್ಮ ಸಂಗಡಿಗರಿಗೆ ಸನ್ನೆ ಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಸೇರಿ ವಿೂನುಗಳನ್ನು ತುಂಬಿಕೊಳ್ಳಲು, ದೋಣಿಗಳೆರಡೂ ಮುಳುಗಲು ಆರಂಭಿಸಿದವು. ಇದನ್ನು ಕಂಡ ಸಿಮೋನ್ ಪೇತ್ರನು ಯೇಸುವಿನ ಕಾಲಿಗೆ ಬಿದ್ದು, “ಸ್ವಾವಿೂ, ನಾನು ಪಾಪಾತ್ಮ; ನನ್ನಿಂದ ದೂರವಿರಿ!” ಎಂದನು. ಹಿಡಿದ ವಿೂನಿನ ರಾಶಿಯನ್ನು ಕಂಡು ಅವನ ಸಂಗಡಿಗರೆಲ್ಲರೂ ನಿಬ್ಬೆರಗಾಗಿ ಹೋಗಿದ್ದರು. ಸಿಮೋನನ ಪಾಲುಗಾರರಾದ ಜೆಬೆದಾಯನ ಮಕ್ಕಳು - ಯಕೋಬ ಮತ್ತು ಯೊವಾನ್ನರು - ಹಾಗೆಯೇ ಬೆರಗಾಗಿದ್ದರು. ಆಗ ಯೇಸು ಸಿಮೋನನಿಗೆ, “ಹೆದರಬೇಡ, ಇಂದಿನಿಂದ ನೀನು ವಿೂನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ,” ಎಂದರು. ಆ ಬೆಸ್ತರು ದೋಣಿಗಳನ್ನು ದಡಕ್ಕೆ ಸಾಗಿಸಿದ್ದೇ ಎಲ್ಲವನ್ನೂ ತ್ಯಜಿಸಿಬಿಟ್ಟು ಯೇಸುವನ್ನು ಹಿಂಬಾಲಿಸಿದರು.
ಚಿಂತನೆ
ಕೊಲ್ಕತ್ತಾದ ಸಂತ ತೆರೇಸಾ (ಕನ್ಯೆ)
ಪ್ರಭುಯೇಸು ಎಲ್ಲಾ ಸೃಷ್ಟಿ ಸಮಸ್ತಕ್ಕೂ ಒಡೆಯರು. ಪ್ರಭುವಿನ ವಾಕ್ಯದಲ್ಲಿ ಮಾತಿನಲ್ಲಿ ವಿಶ್ವಾಸವಿಟ್ಟು ಬಾಳಿದ್ದೆಯಾದರೆ ಅದ್ಭುತಗಳನ್ನು ಕಾಣುತ್ತೇವೆ. ಇಂದಿನ ಶುಭಸಂದೇಶದಲ್ಲಿ ಹುಟ್ಟು ಬೆಸ್ತನಾಗಿದ್ದ ಪೇತ್ರ ರಾತ್ರಿ ಇಡೀ ಬಲೆ ಬೀಸಿದರೂ ಒಂದೂ ಮೀನೂ ಸಹ ಸಿಗಲಿಲ್ಲ. ಆದರೆ ಯೇಸುವಿನ ಒಂದೇ ಮಾತಿನಿಂದ ಮೀನುಗಳು ರಾಶಿ ರಾಶಿಯಾಗಿ ಸಿಗುತ್ತವೆ.
ಸಿಮೋನನಿಗೆ ಯೇಸು ಹೆದರಬೇಡ ಇಂದಿನಿಂದ ನೀನು ಮನುಷ್ಯರನ್ನೇ ಹಿಡಿಯುವವನು ಆಗುವೆ ಎಂದರು. ಹಾಗೆಯೆ ಸಂತ ಮದರ್ ತೆರೇಸಾರವರು ನಿರ್ಗತಿಕರ, ಅನಾಥರ, ವೃದ್ಧರ, ಬಡವರ, ರೋಗಿಗಳ ಸೇವೆಯನ್ನು ಮಾಡಿ ಯೇಸುವಿನ ಪ್ರೀತಿಯನ್ನು ತೋರಿದರು. ಅನೇಕರನ್ನು ದೇವರ ಮಕ್ಕಳನ್ನಾಗಿಸಿದರು. ಇಂದು ಶಿಕ್ಷಕರ ದಿನಾಚರಣೆ, ಶಿಕ್ಷಕರು ಮಕ್ಕಳ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ತಮ್ಮ ತನು, ಮನ, ಧನ ಎಲ್ಲವನ್ನು ಅರ್ಪಿಸಿ, ನಿಸ್ವಾರ್ಥತೆಯಿಂದ ದುಡಿಯುತ್ತಾರೆ. ಅತ್ಯಂತ ಶ್ರೇಷ್ಟ ಶಿಕ್ಷಕರಾದ ಯೇಸು ಪ್ರಭು ಅವರ ಶ್ರಮ-ಸೇವೆಯನ್ನು ಹರಸಿ, ಆರೋಗ್ಯ ಭಾಗ್ಯವನ್ನಿತ್ತು ಕಾಪಾಡಲಿ ಎಂದು ಎಲ್ಲಾ ಶಿಕ್ಷಕರಿಗಾಗಿ ಪ್ರಾರ್ಥಿಸೋಣ.

No comments:
Post a Comment