Sunday, 1 September 2019

ಸಾಧಾರಣ ಕಾಲದ ಇಪ್ಪತ್ತೆರಡನೇ ವಾರ ಬುಧವಾರ

ಸಾಧಾರಣ ಕಾಲದ ಇಪ್ಪತ್ತೆರಡನೇ ವಾರ ಬುಧವಾರ 

4/ಹಸಿರು/ಬುಧ
1ನೇ ವಾಚನ - ಕೊಲೊ 1: 1-8
ಕೀರ್ತನೆ - 52: 8-9
ಶುಭಸಂದೇಶ - ಲೂಕ 4: 38-44

1ನೇ ವಾಚನ - ಕೊಲೊ 1: 1-8
ಕೊಲೊಸ್ಸೆಯಲ್ಲಿರುವ ದೇವಜನರಿಗೆ ಹಾಗೂ ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಸಹೋದರರಿಗೆ - ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಪ್ರೇಷಿತನಾದ ಪೌಲನು ಮತ್ತು ಸಹೋದರ ತಿಮೊಥೇಯನು ಬರೆಯುವ ಪತ್ರ. ನಮ್ಮ ತಂದೆಯಾದ ದೇವರ ಅನುಗ್ರಹವೂ ಶಾಂತಿ ಸಮಾಧಾನವೂ ನಿಮ್ಮಲ್ಲಿರಲಿ! ನೀವು ಪ್ರಭು ಯೇಸುಕ್ರಿಸ್ತರಲ್ಲಿ ಇಟ್ಟಿರುವ ವಿಶ್ವಾಸ ಹಾಗೂ ದೇವಜನರಲ್ಲಿ ನೀವು ಇರಿಸಿರುವ ಪ್ರೀತಿ ಇವುಗಳ ಬಗ್ಗೆ ನಾವು ಕೇಳಿದ್ದೇವೆ. ಇದಕ್ಕಾಗಿ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಲ್ಲಿ ಪ್ರಾರ್ಥಿಸುವಾಗಲೆಲ್ಲ ನಿಮಗಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಸತ್ಯ ವಾಕ್ಯದ, ಅಂದರೆ ಶುಭಸಂದೇಶದ ಮೂಲಕ ನೀವು ಕೇಳಿ ತಿಳಿದಂಥ ಹಾಗೂ ನಿರೀಕ್ಷಿಸುವಂಥ ಸೌಭಾಗ್ಯವನ್ನು ಸ್ವರ್ಗಲೋಕದಲ್ಲಿ ನಿಮಗಾಗಿ ಕಾದಿರಿಸಲಾಗಿದೆ. ದೇವಾನುಗ್ರಹದ ಸತ್ಯಾರ್ಥವನ್ನು ನೀವು ತಿಳಿದ ದಿನದಿಂದಲೂ ನಿಮ್ಮಲ್ಲಿ ಶುಭಸಂದೇಶವು ಹೇಗೆ ಫಲಭರಿತವಾಗುತ್ತಿದೆಯೋ ಹಾಗೆ ಈ ಶುಭಸಂದೇಶವು ಜಗತ್ತಿನ ಎಲ್ಲೆಡೆಯೂ ಹಬ್ಬಿಹರಡುತ್ತಲಿದೆ. ಈ ಶುಭಸಂದೇಶವನ್ನು ಕ್ರಿಸ್ತಯೇಸುವಿನ ನಂಬಿಕಸ್ಥ ದಾಸನೂ ನಮ್ಮ ಜೊತೆಯ ಸೇವಕನೂ ಆದ ಎಪಫ್ರನಿಂದ ಕಲಿತುಕೊಂಡಿದ್ದೀರಿ. ಪವಿತ್ರಾತ್ಮ ಅವರು ನಿಮಗೆ ಅನುಗ್ರಹಿಸಿದ ಪ್ರೀತಿಯ ಬಗ್ಗೆ ನಮಗೆ ತಿಳಿಸಿದವನು ಸಹ ಆತನೇ.

ಕೀರ್ತನೆ - 52: 8-9
ದೇವರ ಸ್ಥಿರಪ್ರೀತಿಯನು ಯುಗಾಂತರಕು ನಂಬಿಕೊಂಡಿರುವೆನು //
8 : ನಾನಾದರೋ ದೇಗುಲದಲಿ ಬೆಳೆದಿಹ ಎಣ್ಣೆ ಮರದಂತಿರುವೆನು / ದೇವರ ಸ್ಥಿರಪ್ರೀತಿಯನು ಯುಗಾಂತರಕು ನಂಬಿಕೊಂಡಿರುವೆನು //
9 : ನಿನ್ನುಪಕಾರವನು ಹೇ ದೇವಾ, ನಾ ಸದಾ ಸ್ಮರಿಸುವೆನು / ನಿನ್ನ ಶ್ರೇಷ್ಠ ನಾಮವನು ಭಕ್ತರ ಮುಂದೆ ಸ್ತುತಿಸುವೆನು //

ಶುಭಸಂದೇಶ - ಲೂಕ 4: 38-44
ಪ್ರಾರ್ಥನಾಮಂದಿರದಿಂದ ಹೊರಟ ಯೇಸುಸ್ವಾಮಿ ಸಿಮೋನನ ಮನೆಗೆ ಬಂದರು. ಆ ಸಿಮೋನನ ಅತ್ತೆ ವಿಷಮ ಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು. ಯೇಸು ಆಕೆಯ ಬಳಿ ನಿಂತು, ಬಾಗಿ, ಜ್ವರಕ್ಕೆ ಬಿಟ್ಟು ಹೋಗೆಂದು ಆಜ್ಞಾಪಿಸಿದರು; ಅದು ಬಿಟ್ಟು ಹೋಯಿತು. ಆ ಕ್ಷಣವೇ ಆಕೆ ಎದ್ದು ಅವರೆಲ್ಲರನ್ನು ಸತ್ಕರಿಸಿದಳು. ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಯಲ್ಲಿ ವಿಧವಿಧವಾದ ಕಾಯಿಲೆಯಿಂದ ನರಳುತ್ತಿದ್ದವರನ್ನೆಲ್ಲಾ ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬನ ಮೇಲೆ ತಮ್ಮ ಕೈಯಿಟ್ಟು ಗುಣಪಡಿಸಿದರು. ಅನೇಕರ ಮೈಮೇಲಿದ್ದ ದೆವ್ವಗಳು ಸಹ, “ನೀನು ದೇವರ ಪುತ್ರ”, ಎಂದು ಬೊಬ್ಬೆಹಾಕುತ್ತಾ ಬಿಟ್ಟುಹೋದುವು. ಇವರೇ ‘ಕ್ರಿಸ್ತ’ ಎಂದು ಅವುಗಳು ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ. ಬೆಳಗಾಗುತ್ತಲೇ, ಯೇಸುಸ್ವಾಮಿ ಅಲ್ಲಿಂದ ಹೊರಟು ನಿರ್ಜನ ಸ್ಥಳಕ್ಕೆ ಹೋದರು. ಜನಸಮೂಹವು ಅವರನ್ನು ಹುಡುಕಿಕೊಂಡು ಅಲ್ಲಿಗೂ ಬಂದಿತು; ತಮ್ಮನ್ನು ಬಿಟ್ಟು ಹೋಗಬಾರದೆಂದು ಜನರು ತಡೆಗಟ್ಟಲು ಯತ್ನಿಸಿದರು. ಅವರಿಗೆ ಯೇಸು, “ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ,” ಎಂದರು. ಬಳಿಕ ಜುದೇಯ ಪ್ರಾಂತ್ಯದ ಪ್ರಾರ್ಥನಾಮಂದಿರಗಳಲ್ಲಿ ಯೇಸು ಬೋಧಿಸುತ್ತಿದ್ದರು.

ಚಿಂತನೆ
ದೇವರು ನೀಡಿದ ವರದಾನಗಳನ್ನು ದುರಪಯೋಗಪಡಿಸಬೇಡಿ
ಒಮ್ಮೆ ಯೇಸುಸ್ವಾಮಿ ಒಂದು ಪಟ್ಟಣಕ್ಕೆ ಕಾಲಿಟ್ಟರು, ಅವರು ಅಲ್ಲೇ ಚರಂಡಿಯಲ್ಲಿ ಒಬ್ಬ ಯುವಕ ಮಲಗಿರುವುದನ್ನು ಕಂಡರು. ಅವನು ತುಂಬಾ ಕುಡಿದಿದ್ದನು. ಯೇಸು ಸ್ವಾಮಿ ಅವನಿಗೆ, ಯುವಕನೇ , ನೀನು ನಿನ್ನ ಸಮಯವನ್ನು ಮತ್ತು ಹಣವನ್ನು ಕುಡುಕುತನದಿಂದ ಯಾಕೆ ದುರುಪಯೋಗ ಪಡಿಸುತ್ತಿದ್ದೀ ಎಂದು ಕೇಳಿದರು. ಅದಕ್ಕೆ ಅವನು ಹೇಳಿದನು, ಸ್ವಾಮಿ ನಾನೊಬ್ಬ ಕುಷ್ಠರೋಗಿಯಾಗಿದ್ದೆ, ನೀವು ನನ್ನನ್ನು ಗುಣಪಡಿಸಿದಿರಿ. ಕುಡಿಯದಿರುವುದನ್ನು ಬಿಟ್ಟು ನಾನೇನು ಮಾಡಲಿ? ಎಂದನು. ಯೇಸುಸ್ವಾಮಿ ವ್ಯಭಿಚಾರಕ್ಕಾಗಿ ಹೋಗುವ ಯುವಕನನ್ನು ಕಂಡು ಹೀಗೆಂದರು, ಯುವಕನೇ, ನೀನು ನಿನ್ನ ಜೀವನವನ್ನು ಹೀಗೇಕೆ ಹಾಳು ಮಾಡುವೆ? ಅವನೆಂದ, ಸ್ವಾಮಿ, ನಾನು ಅಂಧನಾಗಿದ್ದೆ, ನೀವು ನನ್ನನ್ನು ಗುಣಪಡಿಸಿದಿರಿ. ಈಗ ನಾನು ನನ್ನ ಜೀವನವನ್ನು ಭೋಗಿಸುತ್ತಾ ಇದ್ದೇನೆ. ಮುಂದೆ ನಡೆದ ಯೇಸುಸ್ವಾಮಿ ಒಬ್ಬ ತಾತ ಅಳುವುದುನ್ನು ನೋಡಿ ಅವರು ನೀನೇಕೆ ಅಳುವಿ? ಎಂದು ಕೇಳಿದರು. ಅವನೆಂದ ನಾನು ಸತ್ತಿದ್ದೆ, ನೀನು ಜೀವಕ್ಕೆಬ್ಬಿಸಿದೆ. ಅಳುವುದೊಂದನ್ನು ಬಿಟ್ಟು  ನಾನೇನು ಮಾಡಲಿ?

ಈ ಕಾಲ್ಪನಿಕ ಘಟನೆ ನಮಗೆ, ನಾವು ದೇವರಿಂದ ಪಡೆದ ವರದಾನಗಳನ್ನು ದುರುಪಯೋಗಪಡಿಸಬಾರದೆಂದು ಕಲಿಸಿಕೊಡುತ್ತದೆ. ಮೇಲೆ ಹೇಳಿದ ಹಾಗೆ ಈ ಮೂವರು ವ್ಯಕ್ತಿಗಳು ಯೇಸುಸ್ವಾಮಿ ಆಶಿಸಿದ ಹಾಗೆ ಜೀವಿಸದೆ, ತಮ್ಮದೇ ಆದ ರೀತಿಯಲ್ಲಿ ಜೀವಿಸಿದರು. ನಾವು ನಮ್ಮ ಕೌಶಲ್ಯ ಅಥವಾ ಮೇಧಾಶಕ್ತಿಯನ್ನು ದೇವರ ಮತ್ತು ಮಾನವನ ಸೇವೆಯಲ್ಲಿ ತೊಡಗಿಸಬೇಕು. ಇದನ್ನೇ ಇಂದು ನಾವು ಆಲಿಸಿದ ಶುಭಸಂದೇಶದಲ್ಲಿ ಪೇತ್ರನ ಅತ್ತೆಯವರು ಮಾಡಿ ತೋರಿಸಿದರು. ಜ್ವರ ಬಿಟ್ಟುಹೋದ ತಕ್ಷಣವೇ ಅವರೆದ್ದು ಯೇಸುಸ್ವಾಮಿ ಮತ್ತು ಅವರ ಜೊತೆಯಲ್ಲಿದ್ದವರಿಗೆ ಸತ್ಕರಿಸಿ ಅವರ ಸೇವೆಗೆ ತೊಡಗಿದರು. ಯೇಸುಸ್ವಾಮಿ ಯಾರನ್ನಾದರೂ ಗುಣಪಡಿಸುವಾಗ ಕೇವಲವಾಗಿ ಗುಣಹೊಂದದೆ, ಗುಣಹೊಂದುವವನ ಇಡೀ ವ್ಯಕ್ತಿತ್ವವೇ ಅತೀ ದೊಡ್ಡ ಬದಲಾವಣೆಯಾಗಿ ಮಾರ್ಪಡುತ್ತದೆ. ಅವನ ನಡತೆ ಬದಲಾಗಿ, ಅವನೆಂದೂ ಸ್ವಾರ್ಥಿಯಾಗಲಾರ. ಆಗ ಅವನು ಇತರರ ಸೇವೆ ಮಾಡಲು ಸಿದ್ಧನಾಗಿರುತ್ತಾನೆ; ಅವನಿಗೆ ದೇವರಿಂದ ದೊರಕಿದ ಪ್ರೀತಿ ಮತ್ತು ಕರುಣೆಯನ್ನು ಇತರರಿಗೆ ಹಂಚಿಕೊಳ್ಳಲು ಆಶಿಸುತ್ತಾನೆ. ನಾವೂ ಬೇರೆಯವರನ್ನು ಪ್ರೀತಿಸಿ, ಅವರ ಸೇವೆ ಮಾಡಿದರೆ ನಾವೂ ನೆರೆಯವರನ್ನು ಯಾವುದೇ ಸ್ವಾರ್ಥತನವಿಲ್ಲದೆ ಪ್ರೀತಿಸಿದರೆ ಮತ್ತು ಅವರ ಸೇವೆ ಮಾಡಿದರೆ, ನಿಜವಾಗಿಯೂ ದೇವರು ನಮ್ಮ ಮೇಲೆ ಅವರ ಕೃಪಾಶೀರ್ವಾದಗಳನ್ನು ದಯಪಾಲಿಸುತ್ತಾರೆ.

ನಮ್ಮ ಸ್ವಾರ್ಥತನ ಹೇಗೆ ನಮ್ಮನ್ನು ನರಪ್ರಾಣಿಗಳ ಸ್ವಭಾವಕ್ಕೆ ಕರೆದೊಯ್ಯುತ್ತದೆ ಎಂಬುದನ್ನು ಮೊದಲನೇ ವಾಚನದಲ್ಲಿ ಆಲಿಸಿದೆವು. ಕೆಲವು ಭಕ್ತಾದಿಗಳು ತಾವು ಅಪೋಲ್ಲೊಸ್‌ನ ಕಡೆಯವರು, ಮತ್ತು ಕೆಲವರು ನಾವು ಪೌಲನ ಕಡೆಯವರು ಎಂದು ವಾದಕ್ಕಿಳಿಯುತ್ತಾರೆ........ ಇಂದೂ ನಮ್ಮಲ್ಲಿ ಕೂಡ ನಾನು ಆ ಭಾಷೆಯವನು, ನೀನು ಈ ಭಾಷೆಯವನು, ನಾನು ಆ ಪ್ರದೇಶವನು, ನೀನು ಈ ಪ್ರದೇಶದವನು, ನಾನು ಆ ಜಾತಿ, ನೀನು ಈ ಜಾತಿಯವನು ಎಂದು ನರಪ್ರಾಣಿಗಳಂತೆ ಒದ್ದಾಡುತ್ತಿದ್ದೇವೆ. ಎಲ್ಲದರ ಮೂಲ ದೇವರೇ, ಎಲ್ಲದರ ಬೆಳವಣಿಗೆಗೆ ಅವರೇ ಕಾರಣರು. ನಾವೆಲ್ಲರೂ ಅವರ ಕಾರ್ಮಿಕರು. ಪೂರ್ಣ ಹೃದಯದಿಂದ ಪೂರ್ಣ ಮನಸ್ಸಿನಿಂದ, ಸೇವಾ ಮನೋಭಾವನೆಯಿಂದ, ಪ್ರೀತಿ, ಶಾಂತಿ, ಕರುಣೆಯ ಹೃದಯದಿಂದ ಅವರ ಜನತೆಯ, ಅವರ-ಸೇವೆ ಮಾಡೋಣ. ಕಿತ್ತಾಡುವ ನರಪ್ರಾಣಿಗಳಾಗದೆ, ಪ್ರೀತಿಯಿಂದ ಜೀವಿಸುವ ನರಮಾನವರಾಗೋಣ. ಪಾಪದಿಂದ ಕೂಡಿದ ನಮ್ಮ ಬಾಹ್ಯ ಜೀವನವನ್ನು ಗುಣಪಡಿಸುವ ಯೇಸು, ನಮ್ಮ ಆಧ್ಯಾತ್ಮಿಕ ಜೀವನವನ್ನು ಗುಣಪಡಿಸುತ್ತಾರೆ. ಯೇಸು ಸ್ವಾಮಿ ತಮ್ಮ ಅನುಗ್ರಹ ನಮ್ಮಲ್ಲಿ ತುಂಬಲು ಮತ್ತು ನಮ್ಮನ್ನು ಗುಣಪಡಿಸಲು ಸದಾ ಕಾತುರರಾಗಿದ್ದಾರೆ. ನಾವು ಯೇಸುಸ್ವಾಮಿಗೆ ನಮ್ಮನ್ನು ಗುಣಪಡಿಸಲು ಮತ್ತು ಕೃಪಾಹಸ್ತದಿಂದ ಮುಟ್ಟಲು ಬಿಡುತ್ತೇವೆಯೇ? ಯಾವಾಗ ನಾವು ವಿಶ್ವಾಸದಿಂದ ನಮ್ಮನ್ನೇ ಒಪ್ಪಿಸಿಕೊಡುತ್ತೇವೆಯೋ ಆಗಲೇ ನಮ್ಮನ್ನು ಪ್ರೀತಿಸಿ ನಮ್ಮ ಮೇಲೆ ಕರುಣೆ ತೋರ್ಪಡಿಸುತ್ತಾರೆ.

ವಿಶ್ವಾಸ ಜ್ಞಾನದ ಬಾಗಿಲನ್ನು ತೆರೆದರೆ ಅವಿಶ್ವಾಸ ಅದನ್ನು ಮುಚ್ಚುತ್ತದೆ

No comments:

Post a Comment