ಸಾಧಾರಣ ಕಾಲದ ಇಪ್ಪತ್ತೆಂಟನೇ ವಾರ ಸೋಮವಾರ
14/ಹಸಿರು/ಸೋಮ/ಐಚ್ಛಿಕ ಸ್ಮರಣೆ - (ಜಗ ಮತ್ತು ರ.ಸಾ).
1ನೇ ವಾಚನ - ರೋಮ 1: 1-7
ಕೀರ್ತನೆ; 98: 1-4
ಶುಭಸಂದೇಶ - ಲೂಕ 11: 29-32
ಚಿಂತನೆ
14/ಹಸಿರು/ಸೋಮ/ಐಚ್ಛಿಕ ಸ್ಮರಣೆ - (ಜಗ ಮತ್ತು ರ.ಸಾ).
1ನೇ ವಾಚನ - ರೋಮ 1: 1-7
ಕೀರ್ತನೆ; 98: 1-4
ಶುಭಸಂದೇಶ - ಲೂಕ 11: 29-32
1ನೇ ವಾಚನ - ರೋಮ 1: 1-7
ದೇವರಿಗೆ ಅತ್ಯಂತ ಪ್ರಿಯರು ಹಾಗು ದೇವಜನರಾಗಲು ಕರೆಹೊಂದಿದವರು ಆದ ರೋಮ್‍ನಗರ ನಿವಾಸಿಗಳೆಲ್ಲರಿಗೆ: ಕ್ರಿಸ್ತ ಯೇಸುವಿನ ದಾಸನೂ ಪ್ರೇಷಿತನಾಗಲು ಕರೆ ಹೊಂದಿದವನೂ ದೇವರ ಶುಭಸಂದೇಶವನ್ನು ಸಾರಲು ನೇಮಕಗೊಂಡವನೂ ಆದ ಪೌಲನು ಬರೆಯುವ ಪತ್ರ: ನಮ್ಮ ತಂದೆಯಾದ ದೇವರು ಹಾಗು ಪ್ರಭುವಾದ ಯೇಸುಕ್ರಿಸ್ತರು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ. ದೇವರು ತಮ್ಮ ಶುಭಸಂದೇಶವನ್ನು ನೀಡುವುದಾಗಿ ಪ್ರವಾದಿಗಳ ಮುಖಾಂತರ ಮುಂಚಿತವಾಗಿಯೇ ಪವಿತ್ರಗ್ರಂಥದಲ್ಲಿ ವಾಗ್ದಾನಮಾಡಿದ್ದರು. ಈ ಸಂದೇಶ ದೇವರ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರನ್ನು ಕುರಿತಾದುದು. ಮನುಷ್ಯತ್ವದ ಮಟ್ಟಿಗೆ ಯೇಸು ದಾವೀದನ ವಂಶಜರು; ದೈವಿಕ ಪರಿಶುದ್ಧತೆಯ ಮಟ್ಟಿಗೆ ಇವರು ದೇವರ ಶಕ್ತಿಯನ್ನು ವ್ಯಕ್ತಪಡಿಸುವ ದೇವರ ಪುತ್ರ. ಸತ್ತು ಪುನರುತ್ಥಾನ ಹೊಂದಿ ಇದನ್ನು ಖಚಿತಪಡಿಸಿದವರು. ಇವರ ನಾಮ ಮಹಿಮೆಗೋಸ್ಕರವಾಗಿಯೇ ಸರ್ವಜನಾಂಗಗಳೂ ಇವರನ್ನು ವಿಶ್ವಾಸಿಸಿ, ವಿಧೇಯರಾಗಿ ನಡೆಯುವಂತೆ ಮಾಡಲು ಪ್ರೇಷಿತನಾಗುವ ಸೌಭಾಗ್ಯ ನನ್ನದಾಯಿತು. ಆ ಯೇಸುಕ್ರಿಸ್ತರ ಮುಖಾಂತರವೇ ದೇವರು ಈ ಭಾಗ್ಯವನ್ನು ನನಗೆ ಅನುಗ್ರಹಿಸಿದರು. ಯೇಸುಕ್ರಿಸ್ತರಿಗೆ ಸ್ವಂತದವರಾಗಲು ಕರೆ ಹೊಂದಿರುವ ನೀವು ಕೂಡ ಸರ್ವ ಜನಾಂಗಗಳಲ್ಲಿ ಸೇರಿದ್ದೀರಿ. ಮೊಟ್ಟ ಮೊದಲನೆಯದಾಗಿ, ನಿಮ್ಮೆಲ್ಲರ ಪರವಾಗಿ ಯೇಸುಕ್ರಿಸ್ತರ ಮುಖಾಂತರ ನಾನು ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ಕೀರ್ತನೆ; 98: 1-4
1 : ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು / ಎಸಗಿಹನಾತನು ಪವಾಡಕಾರ್ಯಗಳನು / ಗಳಿಸಿತಾತನ ಕೈ ಪೂತಭುಜ ಗೆಲುವನು //
2 : ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು / ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು //
3 : ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ / ನಮ್ಮ ದೇವ ಸಾಧಿಸಿದ ಜಯಗಳಿಕೆ // ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು / ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು //
4 : ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ / ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ //
ಶುಭಸಂದೇಶ - ಲೂಕ 11: 29-32
ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. “ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
-----ಚಿಂತನೆ
ಯೋನ ಪ್ರವಾದಿಯು ನಿನೆವೆ ಜನರಿಗೆ ತಮ್ಮ ಪಾಪದ ಜೀವವನ್ನು ತೊರೆದು, ಮನಪರಿವರ್ತನೆಗೆ ಕರೆನೀಡಿದಾಗ ಆ ಜನರು ಸೂಚಕ ಕಾರ್ಯಗಳನ್ನು ಅಪೇಕ್ಷಿಸದೆ ಯೋನನ ಮಾತನ್ನು ಗಂಭೀರವಾಗಿ ಸ್ವೀಕರಿಸಿದರು. ಇಲ್ಲಿ ಗಮನಿಸಬೇಕಾದ್ದು ನಿನೆವೆ ಜನರು ಅನ್ಯದೇವರನ್ನು ಪೂಜಿಸುತ್ತಿದ್ದರು. ಸರ್ವೇಶ್ವರ ಸ್ವಾಮಿಯ ಪ್ರವಾದಿಯ ಮಾತಲ್ಲಿ ವಿಶ್ವಾಸವಿರಿಸಿ ತಮ್ಮ ಬದುಕನ್ನು ಮಾರ್ಪಡಿಸಿಕೊಂಡರು. ಆದರೆ ದೇವರು ಆರಿಸಿಕೊಂಡ ಜನಾಂಗ, ರಕ್ಷಕನಿಗಾಗಿ 400 ವರ್ಷಗಳಿಂದ ಕಾಯುತ್ತಿದ್ದವರು `ರಕ್ಷಕ'ನನ್ನು ತಿರಸ್ಕರಿಸಿದರು.
ದಕ್ಷಿಣ ಅರೇಬಿಯ, ಶೆಬದ ರಾಣಿ (1 ಅರಸು 10:1-13) ಸೋಲೋಮನ್ ಅರಸನ ಜ್ಞಾನೋಕ್ತಿಗಳನ್ನು ಕೇಳುವುದಕ್ಕೆ ದೂರದ ದೇಶದಿಂದ ಪ್ರಯಾಣ ಬೆಳೆಸಿದಳು. ಆದರೆ ಯಹೂದ್ಯರು ದೇವರ ಪುತ್ರನನ್ನೇ ಅರಿಯಲು ವಿಫಲರಾದರು. ಶೆಬದ ರಾಣಿ ಮತ್ತು ನಿನೆವೆ ನಗರದ ಜನರು ತೀರ್ಪಿನ ದಿನದಂದು ತನ್ನನ್ನು ತಿರಸ್ಕರಿಸಿದ ಪೀಳಿಗೆಯನ್ನು ದೂಷಿಸುವರು ಎನ್ನುತ್ತಾರೆ ಯೇಸು.
No comments:
Post a Comment