ಸಾಧಾರಣ ಕಾಲದ ಇಪ್ಪತ್ತೆಂಟನೇ ಭಾನುವಾರ
13/ಹಸಿರು/ಭಾನು
1ನೇ ವಾಚನ - 2 ಅರಸು 5:14-17
ಕೀರ್ತನೆ - 98: 1-4
2ನೇ ವಾಚನ - 2 ತಿಮೊ 2: 8-13
ಶುಭಸಂದೇಶ - ಲೂಕ 17: 11-19
13/ಹಸಿರು/ಭಾನು
1ನೇ ವಾಚನ - 2 ಅರಸು 5:14-17
ಕೀರ್ತನೆ - 98: 1-4
2ನೇ ವಾಚನ - 2 ತಿಮೊ 2: 8-13
ಶುಭಸಂದೇಶ - ಲೂಕ 17: 11-19
1ನೇ ವಾಚನ - 2 ಅರಸು 5:14-17
ಅವನು ಅಂತೆಯೇ ಜೋರ್ಡನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒಂದು ಮಗುವಿನ ದೇಹದಂತೆ ಶುದ್ಧವಾಯಿತು. ಅನಂತರ ನಾಮಾನನು ತನ್ನ ಪರಿವಾರದವರೊಡನೆ ಹಿಂದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮುಂದೆ ನಿಂತನು. “ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು ಅಂಗೀಕರಿಸಬೇಕು,” ಎಂದು ಹೇಳಿದನು. ಅದಕ್ಕೆ ಎಲೀಷನು, “ನಾನು ಸನ್ನಿಧಿ ಸೇವೆ ಮಾಡುತ್ತಿರುವ ಸರ್ವೇಶ್ವರನಾಣೆ, ನಿನ್ನಿಂದ ಏನೂ ತೆಗೆದುಕೊಳ್ಳುವುದಿಲ್ಲ,” ಎಂದನು. ನಾಮಾನನು ಎಷ್ಟು ಒತ್ತಾಯಪಡಿಸಿದರೂ ಅವನು ತೆಗೆದುಕೊಳ್ಳಲೇ ಇಲ್ಲ. ಆಗ ಅವನು ಎಲೀಷನಿಗೆ, “ತಾವು ನನ್ನಿಂದ ಏನನ್ನೂ ಸ್ವೀಕರಿಸದಿದ್ದರೆ ತಮ್ಮ ಸೇವಕನಾದ ನನಗೆ ಎರಡು ಹೇಸರಕತ್ತೆಗಳು ಹೊರುವಷ್ಟು ಮಣ್ಣನ್ನು ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ. ನಾನು ಇನ್ನು ಮುಂದೆ ಎಲ್ಲಾ ದೇವತೆಗಳನ್ನು ಬಿಟ್ಟು ಸರ್ವೇಶ್ವರಸ್ವಾಮಿ ಒಬ್ಬರಿಗೇ ದಹನಬಲಿಗಳನ್ನು ಸಮರ್ಪಿಸ ಬೇಕೆಂದಿರುತ್ತೇನೆ.
ಕೀರ್ತನೆ - 98: 1-4
1 : ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು / ಎಸಗಿಹನಾತನು ಪವಾಡಕಾರ್ಯಗಳನು / ಗಳಿಸಿತಾತನ ಕೈ ಪೂತಭುಜ ಗೆಲುವನು //
2 : ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು / ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು //
3 : ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ / ನಮ್ಮ ದೇವ ಸಾಧಿಸಿದ ಜಯಗಳಿಕೆ // ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು / ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು //
4 : ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ / ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ //
2ನೇ ವಾಚನ - 2 ತಿಮೊ 2: 8-13
ಕ್ರಿಸ್ತಯೇಸುವನ್ನು ಸ್ಮರಿಸಿಕೋ. ದಾವೀದನ ವಂಶಸ್ಥರಾದ ಅವರು ಮೃತರಾಗಿ ಪುನರುತ್ಥಾನರಾದರು. ಇದೇ ನಾನು ಸಾರುವ ಶುಭಸಂದೇಶ. ಇದನ್ನು ಸಾರಿದ್ದರಿಂದಲೇ ನಾನು ಕಷ್ಟಗಳಿಗೆ ಈಡಾಗಿದ್ದೇನೆ; ಪಾತಕಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ. ದೇವರಿಂದ ಆಯ್ಕೆಯಾದ ಪ್ರಜೆಗಳು ಪ್ರಭು ಯೇಸುವಿನಲ್ಲಿ ಲಭಿಸುವ ಜೀವೋದ್ಧಾರವನ್ನೂ ಅನಂತ ಮಹಿಮೆಯನ್ನೂ ನನ್ನೊಂದಿಗೆ ಪಡೆಯಲೆಂದು ನಾನು ಇದೆಲ್ಲವನ್ನೂ ಅವರಿಗಾಗಿ ಸಹಿಸುತ್ತಿದ್ದೇನೆ. ಈ ಮಾತು ನಂಬತಕ್ಕದ್ದಾಗಿದೆ: ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುತ್ತೇವೆ; ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ; ನಾವಾತನನು ನಿರಾಕರಿಸಿದರೆ, ನಮ್ಮನ್ನಾತನು ನಿರಾಕರಿಸುತ್ತಾನೆ. ನಾವು ವಿಶ್ವಾಸಭ್ರಷ್ಟರಾದರೂ ವಿಶ್ವಾಸಪಾತ್ರನಾತ; ಕಾರಣ, ತನ್ನ ಸ್ವಭಾವಕ್ಕೆ ವಿರುದ್ಧ ವರ್ತಿಸನಾತ.
ಶುಭಸಂದೇಶ - ಲೂಕ 17: 11-19
ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದುಹೋಗುತ್ತಿದ್ದರು. ಒಂದು ಗ್ರಾಮವನ್ನು ಸಮೀಪಿಸಿದಾಗ ಕುಷ್ಠರೋಗದಿಂದ ನರಳುತ್ತಿದ್ದ ಹತ್ತು ಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು, ‘ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ,’ ಎಂದು ಕೂಗಿ ಕೇಳಿಕೊಂಡರು. ಯೇಸು ಅವರನ್ನು ನೋಡಿ, “ನೀವು ಯಾಜಕರ ಬಳಿಗೆ ಹೋಗಿರಿ. ಅವರು ನಿಮ್ಮನ್ನು ಪರೀಕ್ಷಿಸಲಿ,” ಎಂದರು. ಅಂತೆಯೇ, ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣಹೊಂದಿದರು. ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನ್ನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು. ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು! ಆಗ ಯೇಸು, “ಹತ್ತುಮಂದಿ ಗುಣ ಹೊಂದಿದರಲ್ಲವೆ? ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನ ಹೊರತು ಬೇರಾರೂ ಬರಲಿಲ್ಲವೇ?” ಎಂದರು. ಅನಂತರ ಆ ಸಮಾರಿಯದವನಿಗೆ, “ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದು ಹೇಳಿದರು.
ಚಿಂತನೆ
ಸಂತ ಎಡ್ವರ್ಡ್
ನಿಜವಾದ ಸಂಪತ್ತು
ಆರೋಗ್ಯವೊಂದೇ ಆಗಿದೆ. ಜಗತ್ತಿನ ಎಲ್ಲಾ ಸಂಪತ್ತುಗಳಿಗಿಂತಲೂ ಮಿಗಿಲಾದುದು ಆರೋಗ್ಯ. ಆರೋಗ್ಯ ಇದ್ದರೇನೇ
ಸಂಪಾದನೆ. ಈ ಬದುಕಿನಲ್ಲಿ ಆರೋಗ್ಯದಂಥ ಭಾಗ್ಯ ಬೇರೊಂದು ಇಲ್ಲ. ಇಂದಿನ ಮೊದಲನೆಯ ವಾಚನ ಮತ್ತು ಶುಭಸಂದೇಶದಲ್ಲಿ
ಕುಷ್ಠರೋಗಿಯು ಸೌಖ್ಯ ಪಡೆಯುವುದನ್ನು ಕಾಣುತ್ತೇವೆ. ಕುಷ್ಠರೋಗವು ಆ ಕಾಲದಲ್ಲಿ ಶಾಪವಾಗಿತ್ತು. ಯೆಹೂದ್ಯರ
ನಂಬಿಕೆಯ ಪ್ರಕಾರ ಕುಷ್ಠವು ದೇವರ ಶಿಕ್ಷೆ ಮತ್ತು ಶಾಪ, ದೈವದತ್ತ ಹೊಡೆತವೆಂದು ಪರಿಗಣಿಸಿದ್ದರು.
ಕುಷ್ಠರೋಗಿಗಳು ಮನೆಯಿಂದ, ಸಮಾಜದಿಂದ ಬಹಿಷ್ಕೃತರಾಗಿದ್ದರು.
ಊರ ಹೊರಗೆ ಯಾರ ಸಂಪರ್ಕವಿಲ್ಲದೆ ಜೀವಿಸುವ ದುಃಸ್ಥಿತಿ, ತಾನು ನಡೆದಾಡುವ ಹಾದಿಯಲ್ಲಿ ಆರೋಗ್ಯಕರ ವ್ಯಕ್ತಿ
ಬಂದರೆ `ಅಶುದ್ಧ’ ಎಂದು ಗಟ್ಟಿಯಾಗಿ ಕೂಗುತ್ತಾ ದೂರ ಹೋಗಬೇಕಿತ್ತು. ಇಂತಹ ಹೀನಸ್ಥಿತಿಯಲ್ಲಿದ್ದ ಹತ್ತು
ಮಂದಿ ಕುಷ್ಠರೋಗಿಗಳನ್ನು ಯೇಸು ಗುಣಪಡಿಸುತ್ತಾರೆ. ಆ ಹತ್ತರಲ್ಲಿ ಒಬ್ಬನು ಸಮಾರಿಯಾದವನು. ಯೆಹೂದ್ಯರು
ಸಮಾರಿಯಾದವರನ್ನು ಕೀಳಾಗಿ ಕಾಣುತ್ತಿದ್ದರು ಮಾತ್ರವಲ್ಲ ಅವರೊಂದಿಗೆ ಸಂಪರ್ಕವಿರಲಿಲ್ಲ. ಯೇಸುವಿಗೆ
ಕೃತಜ್ಞತೆ ದೈವ ಗುಣವಾದರೆ, ಕೃತಘ್ನತೆ ರಾಕ್ಷಸಗುಣವಾಗಿದೆ. ನಾವು ಯಾರಿಂದಲೇ ಉಪಕಾರ ಪಡೆದಿರಲಿ, ಅವರ
ಉಪಕಾರವನ್ನು ನಾಲಿಗೆಯ ತುದಿಯಿಂದ ಅಲ್ಲ ಹೃದಯಾಂತರಾಳದಿಂದ ಸ್ಮರಿಸಬೇಕು. ನಮ್ಮಲ್ಲಿ ಕೃತಜ್ಞತೆ ಇಲ್ಲದೇ
ಹೋದರೆ, ನಮ್ಮ ಮನುಷ್ಯತ್ವದಲ್ಲಿ ಏನೋ ಒಂದು ದೊಡ್ಡ ಕೊರತೆ ಇದೆಯೆಂದು ವ್ಯಕ್ತಪಡುತ್ತದೆ. ನಾಮಾನನು
ದೇವರಿಂದ ಪಡೆದ ಸೌಖ್ಯಕ್ಕೆ ದೇವರನ್ನು ಆರಾಧಿಸಿ ವಂದಿಸಿದಂತೆ ನಾವು ಕೂಡ ದೇವರಿಗೆ ಸದಾ ಕೃತಜ್ಞತೆಯಿಂದಿರಬೇಕು.
No comments:
Post a Comment