Saturday, 12 October 2019

ಸಾಧಾರಣ ಕಾಲದ ಇಪ್ಪತ್ತೆಂಟನೇ ವಾರ ಮಂಗಳವಾರ

ಸಾಧಾರಣ ಕಾಲದ ಇಪ್ಪತ್ತೆಂಟನೇ ವಾರ ಮಂಗಳವಾರ


15/ಬಿಳಿ/ಮಂಗಳ/ಅವಿಲದ ಸಂತ ತೆರೇಸ, (ಕ ಮತ್ತು ಧ.ಪಂ(ಸ್ಮರಣೆ) 

1ನೇ ವಾಚನ - ರೋಮ 1: 16-25
ಕೀರ್ತನೆ - 19: 1-4
ಶುಭಸಂದೇಶ - ಲೂಕ 11: 37-41

1ನೇ ವಾಚನ - ರೋಮ 1: 16-25
ಶುಭಸಂದೇಶದ ವಿಷಯದಲ್ಲಿ ನಾನು ನಾಚಿಕೆಪಡುವವನೇ ಅಲ್ಲ. ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ ವಿಶ್ವಾಸಿಸುವ ಪ್ರತಿಯೊಬ್ಬನಿಗೂ ಈ ಶುಭಸಂದೇಶವು ಜೀವೋದ್ಧಾರವನ್ನು ತರುವ ದೇವರ ಶಕ್ತಿಯಾಗಿದೆ. ದೇವರು ಮಾನವನನ್ನು ಹೇಗೆ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಎಂಬುದನ್ನು ಶುಭಸಂದೇಶವು ಪ್ರಕಟಿಸುತ್ತದೆ. ಇಂಥ ಸಂಬಂಧವು ಆದಿಯಿಂದ ಅಂತ್ಯದವರೆಗೂ ವಿಶ್ವಾಸದಿಂದ ಮಾತ್ರ ಸಾಧ್ಯ. “ಯಾರು ದೇವರೊಡನೆ ಸತ್ಸಂಬಂಧ ಹೊಂದಿರುತ್ತಾರೋ ಅವರು ವಿಸ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ,” ಎಂದು ಪವಿತ್ರ ಗ್ರಂಥದಲ್ಲಿ ಲಿಖಿತವಾಗಿದೆ. ಮಾನವರ ಎಲ್ಲಾ ಪಾಪಾಕ್ರಮಗಳ ಮೇಲೆ ದೇವರ ಕೋಪಾಗ್ನಿ ಸ್ವರ್ಗದಿಂದ ಎರಗುವುದೆಂದು ಪ್ರಕಟವಾಗುತ್ತಿದೆ. ಏಕೆಂದರೆ, ಅವರ ಅಕ್ರಮ ನಡತೆ ಸತ್ಯವನ್ನು ಅಡಗಿಸುತ್ತಿದೆ. ದೇವರ ವಿಷಯವಾಗಿ ಮಾನವರು ಏನನ್ನು ಅರಿತುಕೊಳ್ಳಲು ಸಾಧ್ಯವೋ ಅದು ಅವರಿಗೆ ಚೆನ್ನಾಗಿ ತಿಳಿದಿದೆ. ದೇವರೇ ಅದನ್ನು ಅವರಿಗೆ ಸ್ಪಷ್ಟಪಡಿಸಿದ್ದಾರೆ. ದೇವರು ಲೋಕವನ್ನು ಸೃಷ್ಟಿಸಿದಂದಿನಿಂದ ಅವರ ಅಗೋಚರ ಗುಣಲಕ್ಷಣಗಳು, ಅವರ ಅನಂತ ಶಕ್ತಿ ಮತ್ತು ದೈವಸ್ವಭಾವ ಮನುಷ್ಯರಿಗೆ ಸೃಷ್ಟಿಗಳ ಮೂಲಕವೇ ವೇದ್ಯವಾಗುತ್ತಿವೆ. ಆದುದರಿಂದ ಮಾನವರು ತಮ್ಮ ಅಜ್ಞಾನಕ್ಕೆ ಯಾವ ನೆಪವನ್ನು ಒಡ್ಡಲೂ ಸಾಧ್ಯವಿಲ್ಲ. ದೇವರನ್ನು ಅವರು ಅರಿತಿದ್ದರೂ ದೇವರೆಂದು ಗೌರವಿಸಲಿಲ್ಲ; ದೇವರಿಗೆ ಉಪಕಾರ ಸ್ಮರಣೆಯನ್ನು ಮಾಡಲಿಲ್ಲ. ಬದಲಾಗಿ ಅವರು ವ್ಯರ್ಥ ಆಲೋಚನೆಗಳಲ್ಲಿ ಮಗ್ನರಾದರು. ಅವರ ವಿವೇಕರಹಿತ ಮನಸ್ಸು ಅಂಧಕಾರಮಯ ಆಯಿತು. ತಾವೇ ಜ್ಞಾನಿಗಳೆಂದು ಕೊಚ್ಚಿಕೊಳ್ಳುತ್ತ ಅವರು ನಿಜವಾಗಿಯೂ ಮೂರ್ಖರಾದರು. ಅಮರದೇವರನ್ನು ಆರಾಧಿಸುವುದನ್ನು ಬಿಟ್ಟು ಅಳಿದುಹೋಗುವಂಥ ನರಮಾನವರ ಪ್ರಾಣಿಪಕ್ಷಿಗಳ, ಸರ್ಪಾದಿಗಳ ವಿಗ್ರಹಗಳನ್ನು ಮಾಡಿ ಆರಾಧಿಸತೊಡಗಿದರು. ಆದುದರಿಂದ, ಮಾನವರು ಮನಸ್ಸಿನ ಆಶಾಪಾಶಗಳಿಗೆ ಬಲಿಯಾಗಿ ತಮ್ಮ ದೇಹಗಳಿಂದ ತಮ್ಮತಮ್ಮಲ್ಲೇ ಅಶ್ಲೀಲ ಕೃತ್ಯಗಳೆಸಗಲೆಂದು ದೇವರು ಅವರನ್ನು ಅಶುದ್ಧ ನಡತೆಗೆ ಬಿಟ್ಟುಬಿಟ್ಟರು. ಅವರು ದೇವರ ಸತ್ಯವನ್ನು ಬಿಟ್ಟು ಅಸತ್ಯವಾದುದನ್ನು ಅಂಗೀಕರಿಸಿದರು; ಸೃಷ್ಟಿಕರ್ತನನ್ನು ಆರಾಧಿಸದೆ, ಸೃಷ್ಟಿಯಾದ ವಸ್ತುಗಳನ್ನೇ ಆರಾಧಿಸಿ, ಸೇವೆ ಸಲ್ಲಿಸಿದರು. ಸರ್ವಕಾಲಕ್ಕೂ ಸೃಷ್ಟಿಕರ್ತರೊಬ್ಬರಿಗೇ ಸ್ತುತಿಸ್ತೋತ್ರ ಸಲ್ಲತಕ್ಕದ್ದು. ಆಮೆನ್.

ಕೀರ್ತನೆ - 19: 1-4
1 : ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು / ತಾರಾಮಂಡಲ ತೋರುತಿದೆ ದೇವರ ಕೈಕೃತಿಗಳನು // 
2 : ದಿನವು ಮರುದಿನಕೆ ಮಾಡುತಿದೆ ಈ ಪ್ರಕಟಣೆಯನು | ರಾತ್ರಿ ಮರುರಾತ್ರಿಗೆ ನೀಡುತಿದೆ ಈ ಪ್ರಚಾರವನು || 
3 : ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ / ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ // 
4 : ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ / ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ // 
5 : ನಿರ್ಮಿಸಿಹನಲ್ಲಿ ದೇವನು ಗುಡಾರವೊಂದನು ಸೂರ್ಯನಿಗೆ / ಬರುತಿಹನಾ ರವಿ ವರನಂತೆ ಧಾರಾಗೃಹದಿಂದ ಹೊರಗೆ / ಶೂರನಂತೆ, ಓಟದ ಪಥದಲ್ಲೋಡಲು ಹರುಷದೊಂದಿಗೆ //
ಶುಭಸಂದೇಶ - ಲೂಕ 11: 37-41
ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. ಊಟಕ್ಕೆ ಮುಂಚೆ ಅವರು ಕೈ ತೊಳೆಯದೆ ಹೋದುದನ್ನು ಕಂಡು ಫರಿಸಾಯನು ಚಕಿತನಾದನು. ಆಗ ಯೇಸು, “ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿ ಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ. ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಮಾಡಲಿಲ್ಲವೇ? ನಿಮ್ಮ ತಟ್ಟೆ ಲೋಟಗಳಲ್ಲಿ ಇರುವುದನ್ನು ಮೊಟ್ಟ ಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ಧಿಯಾಗಿರುವುದು.
-----
ಚಿಂತನೆ
ಎಲ್ಲಾ ಧರ್ಮಗಳೂ ಮನುಷ್ಯನ ನಡವಳಿಕೆಗೇ ಹೆಚ್ಚು ಮಹತ್ವವನ್ನು ನೀಡುತ್ತವೆ. ಪ್ರೀತಿ, ನೀತಿ, ನ್ಯಾಯದಿಂದ ನಡೆದುಕೊಳ್ಳದವನು ಧರ್ಮಿಷ್ಠನೇ ಅಲ್ಲ. ಫರಿಸಾಯರು, ಧರ್ಮಶಾಸ್ತ್ರಿಗಳು ಧರ್ಮಿಷ್ಠರಂತೆ ಮುಖವಾಡ ಧರಿಸಿದ್ದರು. ಕಾನೂನು ಮತ್ತು ಆಚಾರಗಳೇ ಅವರಿಗೆ ಪ್ರಮುಖವಾಗಿದ್ದವು. ಕಾನೂನು, ಆಚಾರಗಳ ಒಳ ಅರ್ಥವನ್ನು ಅವರು ಅರಿಯಲು ವಿಫಲರಾದರು. ಕಟ್ಟಳೆಗಳು ನಾವು ತೊಡುವ ಬಟ್ಟೆಯಂತೆ ಇರಬೇಕು ಅವು ಜನರಿಗೆ ಹೊಂದಬೇಕು. ಧರ್ಮವು ಕೆಲವು ಧಾರ್ಮಿಕ ವಿಧಿಗಳಲ್ಲಿ ಆಚಾರ-ವಿಚಾರ, ಸಂಪ್ರದಾಯಗಳ ಆಚರಣೆಯಲ್ಲಿ ಇಲ್ಲ. ಧರ್ಮವಿರುವುದು ಸದ್ಗುಣಗಳ, ಮನುಷ್ಯತ್ವದಲ್ಲಿ. ಹಾಗಾಗಿ ಕ್ರಿಸ್ತ ಯೆಹೂದ್ಯರ ಬಾಹ್ಯ ಶುದ್ದತೆಗಿಂತ ಆಂತರಿಕ ಶುದ್ಧತೆ ಮುಖ್ಯವಾದದ್ದು ಎಂದು ಪ್ರತಿಪಾದಿಸುತ್ತಾರೆ.

No comments:

Post a Comment