ಸಾಧಾರಣ ಕಾಲದ ಇಪ್ಪತ್ತೆಂಟನೇ ವಾರ ಬುಧವಾರ
16/ಹಸಿರು/ಬುಧ/ಐಚ್ಛಿಕ ಸ್ಮರಣೆ - ಸಂತ ಹೆಡ್ವಿಗ್ (ಧಾ) ಮತ್ತು ಸಂತ ಮಾರ್ಗೆರೆಟ್ ಮೇರಿ (ಕನ್ಯೆ)
1ನೇ ವಾಚನ - ರೋಮ 2: 1-11
ಕೀರ್ತನೆ - 62: 1-2, 5-6, 8
ಶುಭಸಂದೇಶ - ಲೂಕ 11: 42-46
1ನೇ ವಾಚನ - ರೋಮ 2: 1-11
ಇತರರು ದೋಷಿಗಳೆಂದು ತೀರ್ಪುನೀಡುವ ಮಾನವನೇ, ನೀನು ಯಾರೇ ಆಗಿರು, ನೀನು ಮಾತ್ರ ನಿರ್ದೋಷಿಯೆಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇತರರಿಗೆ ತೀರ್ಪು ನೀಡುವ ನೀನು ಅವರು ಮಾಡುವ ತಪ್ಪುಗಳನ್ನು ನೀನೂ ಮಾಡಿದೆಯಾದರೆ, ನಿನ್ನನ್ನು ನೀನೇ ದೋಷಿಯೆಂದು ತೀರ್ಪು ಮಾಡಿಕೊಂಡ ಹಾಗಾಯಿತು. ಇಂಥ ಅಪರಾಧಗಳನ್ನು ಮಾಡುವವರ ಬಗ್ಗೆ ದೇವರು ನೀಡುವ ತೀರ್ಪು ನ್ಯಾಯಬದ್ಧವಾದುದು ಎಂಬುದನ್ನು ನಾವು ಬಲ್ಲೆವು. ಹೀಗಿರುವಾಗ, ಇತರರಿಗೆ ಯಾವ ಅಪರಾಧಕ್ಕಾಗಿ ತೀರ್ಪುನೀಡಿದೆಯೋ ಅಂಥ ಅಪರಾಧವನ್ನೇ ನೀನೂ ಮಾಡುತ್ತಿರುವೆಯಲ್ಲಾ! ದೇವರು ಕೊಡುವ ನ್ಯಾಯತೀರ್ಪಿನಿಂದ ನೀನು ಮಾತ್ರ ತಪ್ಪಿಸಿಕೊಳ್ಳುವಿಯೆಂದು ನೆನೆಸುತ್ತೀಯೋ? ಅಥವಾ ದೇವರ ಅಪಾರ ದಯೆಯನ್ನೂ ಶಾಂತಿಸಹನೆಯನ್ನೂ ಉಪೇಕ್ಷಿಸುತ್ತೀಯೋ? ನೀನು ದೇವರಿಗೆ ಅಭಿಮುಖನಾಗಬೇಕೆಂಬ ಉದ್ದೇಶದಿಂದಲೇ ಅವರು ನಿನ್ನ ಮೇಲೆ ಅಷ್ಟು ದಯೆದಾಕ್ಷಿಣ್ಯದಿಂದ ಇದ್ದಾರೆ ಎಂಬುದು ನಿನಗೆ ತಿಳಿಯದೋ? ಆದರೆ ನಿನ್ನದು ಕಠಿಣ ಹೃದಯ, ಮೊಂಡುಸ್ವಭಾವ. ಆದ್ದರಿಂದ ದೇವರ ಕೋಪ ಹಾಗು ನ್ಯಾಯವಾದ ತೀರ್ಪು ವ್ಯಕ್ತವಾಗುವ ದಿನದಂದು ನಿನಗೆ ವಿಧಿಸಲಾಗುವ ಶಿಕ್ಷೆಯನ್ನು ನೀನಾಗಿಯೇ ಸಂಗ್ರಹಿಸಿಕೊಳ್ಳುತ್ತಿದ್ದೀಯೆ. ಪ್ರತಿಯೊಬ್ಬನಿಗೂ ದೇವರು ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುತ್ತಾರೆ. ಸತ್ಕಾರ್ಯಗಳಲ್ಲಿ ನಿರತರಾಗಿದ್ದು, ಮಹಿಮೆಯನ್ನು, ಗೌರವವನ್ನು, ಅಮರತ್ವವನ್ನು ಅರಸುತ್ತಾ ಬಾಳುವವರಿಗೆ ದೇವರು ನಿತ್ಯಜೀವವನ್ನು ದಯಪಾಲಿಸುತ್ತಾರೆ. ಸ್ವಾರ್ಥಸಾಧಕರಾಗಿದ್ದು, ಸತ್ಯಕ್ಕೆ ಮಣಿಯದೆ, ದುರ್ಮಾರ್ಗವನ್ನೇ ಅವಲಂಬಿಸಿ ನಡೆಯುವವರ ಮೇಲೆ ದೇವರ ಕೋಪವೂ ಆಕ್ರೋಶವೂ ಎರಗುತ್ತವೆ. ಯೆಹೂದ್ಯರನ್ನು ಮೊದಲ್ಗೊಂಡು, ಇತರರಿಗೂ ಪಾಪಕೃತ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಕಷ್ಟಸಂಕಟಗಳು ಕಾದಿರುತ್ತವೆ. ಅಂತೆಯೇ, ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ ಸತ್ಕಾರ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಮಹಿಮೆ, ಗೌರವ, ಶಾಂತಿ ಲಭಿಸುತ್ತವೆ. ದೇವರು ಪಕ್ಷಪಾತಿ ಅಲ್ಲ.
ಕೀರ್ತನೆ - 62: 1-2, 5-6, 8
1 : ಎನ್ನ ಮನಕ್ಕೆ ಶಾಂತಿ ದೇವನಿಂದಲೆ / ನನ್ನ ಜೀವೋದ್ಧಾರ ಆತನಿಂದಲೆ //
2 : ಆತನೆನಗೆ ದುರ್ಗ, ರಕ್ಷಕ, ಶರಣು / ನಾನೆಂದಿಗೂ ಕದಲಿ ಬೀಳೆನು //
3 : ಎನಿತುಕಾಲ ದಾಳಿ ಮಾಡುವಿರಿ ಒಬ್ಬನ ಮೇಲೆ ನೀವೆಲ್ಲಾ?/ ಕೆಡವಲು ಯತ್ನಿಸುವಿರಾ ಬಾಗಿದಾ ಗೋಡೆಯ, ಕುಸಿದಾ ಪೌಳಿಯ?//
4 : ದಬ್ಬುವ ದುರಾಲೋಚನೆ ಅವರದು ಗಾದಿಯಿಂದ / ಅಬದ್ಧವಾಡುವುದೆಂದರೊ ಹಬ್ಬದಾನಂದ / ಹರಸುವರು ಅಧರದಿಂದ, ಶಪಿಸುವರು ಉದರದಿಂದ //
5 : ಎನ್ನ ಮನಕೆ ಶಾಂತಿ ದೇವನಿಂದಲೆ / ನನಗೆ ನಂಬಿಕೆ ನಿರೀಕ್ಷೆ ಆತನಿಂದಲೆ //
6 : ಆತನೆನಗೆ ದುರ್ಗ, ರಕ್ಷಕ, ಶರಣು / ನಾನೆಂದಿಗೂ ಕದಲಿ ಬೀಳೆನು //
7 : ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ / ಭದ್ರವಾದ ಬಂಡೆ, ನನಗಾಶ್ರಯ ಆತನೆ //
8 : ಜನರೇ, ಸದಾ ಭರವಸೆ ಇಡಿ ದೇವನಲಿ / ತೋಡಿಕೊಳ್ಳಿ ನಿಮ್ಮ ಅಳಲನು ಆತನಲಿ //
9 : ನರಮಾನವರೆಲ್ಲರು ಬರೇ ಉಸಿರು / ನರಾಧಿಪತಿಗಳು ತೀರಾ ಹುಸಿಯು / ತ್ರಾಸಿನಲಿ ತೂಗಲು ಅವರೆಲ್ಲರು / ಉಸಿರಿಗಿಂತಲೂ ಅತ್ಯಂತ ಹಗುರು //
ಶುಭಸಂದೇಶ - ಲೂಕ 11: 42-46
“ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತ್ತು. “ಫರಿಸಾಯರೇ, ನಿಮಗೆ ಧಿಕ್ಕಾರ! ಪ್ರಾರ್ಥನಾ ಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ. ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” ಎಂದರು. ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ಞನು, “ಬೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು,” ಎಂದನು. ಅದಕ್ಕೆ ಯೇಸು, “ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರು ಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ.
-------
ಚಿಂತನೆ
ಯಾಜಕಕಾಂಡ 27:30, ಧ.ಕಾಂಡ 14:22, ಜಕರೀಯ 7:9, ಮೀಕ 6:8ರ ಪ್ರಕಾರ ಆದಾಯದಲ್ಲಿ ಸ್ವಲ್ಪ ಪಾಲನ್ನು ದೇವಾಲಯಕ್ಕೆ ನೀಡಬೇಕೆಂದು ಆಜ್ಞೆಯಿದೆ. ಈ ಆದಾಯದ ಸ್ವಲ್ಪ ಪಾಲನ್ನು ತೆರೆಗೆ ರೂಪದಲ್ಲಿ ಭೂಮಿಯ ಮೇಲೆ ಧಾನ್ಯ, ಎಣ್ಣೆ, ನವ ದ್ರಾಕ್ಷರಸ ಮತ್ತು ಹಣ್ಣುಗಳು ಹಾಗೂ ದನಕರುಗಳ ಮೇಲೆ ಹೇರಲಾಗಿತ್ತು. ಯಾ.ಕಾಂಡ 18:20, ಧ.ಕಾಂಡ 14:28, 26:12ರ ಪ್ರಕಾರ ಯಾಜಕರ ಮತ್ತು ಬಡವರ ಪೋಷಣೆಗಾಗಿ ಆದಾಯದ ಸ್ವಲ್ಪ ಪಾಲನ್ನು ನೀಡಬೇಕೆಂದು ಸೂಚಿಸುತ್ತದೆ. ಯೇಸು ಈ ಪದ್ಧತಿಗಳನ್ನು ಖಂಡಿಸುತ್ತಿಲ್ಲ. ಜನರಿಂದ ನಿರ್ದಾಕ್ಷಿಣ್ಯದಿಂದ ದಶಾಂಶವನ್ನು ವಸೂಲಿ ಮಾಡುವುದನ್ನು ಖಂಡಿಸುತ್ತಾರೆ. ಅತ್ಯಲ್ಪ, ಚಿಕ್ಕ ವಿಷಯ, ಕಾನೂನು, ಕಟ್ಟಳೆಗಳಿಗಿಂತ ದಯೆ, ಕನಿಕರ, ಪ್ರಾಮಾಣಿಕತೆಗೆ ಆಧ್ಯತೆ ನೀಡಬೇಕೆಂದು ಯೇಸು ಬಯಸುತ್ತಾರೆ.
No comments:
Post a Comment