Sunday, 6 October 2019

ಸಾಧಾರಣ ಕಾಲದ ಇಪ್ಪತ್ತೇಳನೇ ವಾರ ಗುರುವಾರ

ಸಾಧಾರಣ ಕಾಲದ ಇಪ್ಪತ್ತೇಳನೇ ವಾರ ಗುರುವಾರ

1೦/ಹಸಿರು/ಗುರು
1ನೇ ವಾಚನ - ಮಲಾ 3: 13-2೦
ಕೀರ್ತನೆ - 1: 1-4, 6
ಶುಭಸಂದೇಶ - ಲೂಕ 11: 5-13


1ನೇ ವಾಚನ - ಮಲಾ 3: 13-2೦
“ನಿಮ್ಮ ಭೂಮಿಯ ಬೆಳೆ ಹುಳುಹುಪ್ಪಟೆಗಳಿಂದ ನಾಶವಾಗದಂತೆ ನೋಡಿಕೊಳ್ಳುವೆನು. ನಿಮ್ಮ ತೋಟದಲ್ಲಿ ದ್ರಾಕ್ಷಿಹಣ್ಣು ಉದುರಿಹೋಗದಂತೆ ಮಾಡುವೆನು. ಆಗ ಎಲ್ಲ ರಾಷ್ಟ್ರಗಳು ನಿಮ್ಮನ್ನು ಧನ್ಯರೆಂದು ಹೊಗಳುವರು. ನಿಮ್ಮ ನಾಡು ಚೆಲುವಿನ ನಾಡಾಗಿರುವುದು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ. “ನೀವು ನನಗೆ ಕಠಿಣವಾದ ಮಾತುಗಳನ್ನಾಡಿದ್ದೀರಿ,” ಎನ್ನುತ್ತಾರೆ ಸರ್ವೇಶ್ವರ. “ನೀವು, ‘ನಿನಗೆ ವಿರುದ್ಧವಾಗಿ ನಾವು ಮಾತನಾಡಿದ್ದೇನು?’ ಎಂದು ಕೇಳುತ್ತೀರೋ? ದೇವರಿಗೆ ಸೇವೆ ಮಾಡುವುದು ವ್ಯರ್ಥ. ಅವರು ಹೇಳಿದಂತೆ ನಾವು ನಡೆದುಕೊಳ್ಳುವುದರಿಂದ ಪ್ರಯೋಜನವೇನು? ನಮ್ಮ ಕೃತ್ಯಗಳಿಗಾಗಿ ಸೇನಾಧೀಶ್ವರ ಸರ್ವೇಶ್ವರನ ಮುಂದೆ ದುಃಖಪಡುವುದರಿಂದ ಲಾಭವೇನು? ಅಹಂಕಾರಿಗಳೇ ಭಾಗ್ಯವಂತರು; ದುಷ್ಕರ್ಮಿಗಳು ಚೆನ್ನಾಗಿ ಅಭಿವೃದ್ಧಿಯಾಗುತ್ತಿದ್ದಾರೆ, ಅಷ್ಟೇ ಅಲ್ಲ, ದೇವರನ್ನೇ ಪರೀಕ್ಷೆಗೆ ಗುರಿಪಡಿಸಿ ಸುರಕ್ಷಿತವಾಗಿದ್ದಾರೆ,” ಎಂದು ನೀವು ಹೇಳಿದ್ದೀರಿ.  ಇಂಥ ಮಾತುಗಳನ್ನು ಕೇಳಿ, ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಸರ್ವೇಶ್ವರ ಅವರಿಗೆ ಕಿವಿಗೊಟ್ಟು ಆಲಿಸಿದರು. ಭಯಭಕ್ತಿಯಿಂದ ತಮ್ಮ ನಾಮಸ್ಮರಣೆ ಮಾಡುವವರ ಹೆಸರುಗಳನ್ನು ತಮ್ಮ ಮುಂದಿದ್ದ ದಾಖಲೆ ಪುಸ್ತಕದಲ್ಲಿ ಬರೆಸಿದರು. ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ಇವರು ನನ್ನ ಜನರು; ನಾನು ಕಾರ್ಯತತ್ಪರನಾಗುವ ದಿನದಂದು ಅವರು ನನಗೆ ಸ್ವಕೀಯ ಜನರಾಗಿರುವರು. ತಂದೆಯೊಬ್ಬನು ತನಗೆ ಸೇವೆ ಮಾಡುವ ಮಗನನ್ನು ಕಾಪಾಡುವಂತೆ ನಾನು ಅವರನ್ನು ಕಾಪಾಡುವೆನು. ಆಗ ಸಜ್ಜನರಿಗೂ ದುರ್ಜನರಿಗೂ, ದೇವರಸೇವೆ ಮಾಡುವವರಿಗೂ ಮಾಡದವರಿಗೂ ಇರುವ ವ್ಯತ್ಯಾಸವನ್ನು ಮತ್ತೆ ನೀವು ಮನಗಾಣುವಿರಿ.

ಕೀರ್ತನೆ - 1: 1-4, 6
1 : ದುರ್ಜನರ ಆಲೋಚನೆಯಂತೆ ನಡೆಯದೆ / ಪಾಪಾತ್ಮರ ಪಥದಲಿ ಕಾಲೂರದೆ / ಧರ್ಮನಿಂದಕರ ಕೂಟದಲಿ ಕೂರದೆ // 
2 : ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು/ ಹಗಲಿರುಳೆನ್ನದೆ ಅದನೆ ಧ್ಯಾನಿಸು ತಿರುವವನಾರೋ - ಅವನೇ ಧನ್ಯನು // 
3 : ನದಿಯ ಬದಿಯಲೇ ಬೆಳೆದಿಹ ಮರದಂತೆ / ಸಕಾಲಕೆ ಫಲವೀವ ವೃಕ್ಷದಂತೆ / ಎಲೆಬಾಡದೆ ಪಸಿರಿರುವ ತರುವಂತೆ / ಸಿಗುವುದು ಅವನ ಕಾರ್ಯಗಳಿಗೆ ಸಫಲತೆ // 
4 : ದುರುಳರಾದರೊ ತೂರಿ ಹೋಗುವರು / ಬಿರುಗಾಳಿಗೆ ತರಗೆಲೆಯಾಗುವರು // 
6 : ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ / ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ //

ಶುಭಸಂದೇಶ - ಲೂಕ 11: 5-13
ಪುನಃ ಯೇಸುಸ್ವಾಮಿ ಶಿಷ್ಯರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, ‘ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು. ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು, ಈ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ? ಆದರೂ, ತನ್ನ ಗೆಳೆಯ ಇವನು ಎಂದು ಎದ್ದು ಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದು ಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ. ಆದುದರಿಂದ ‘ಕೇಳಿರಿ, ನಿಮಗೆ ದೊರಕುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’ “ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ? ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ? ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ.”

ಚಿಂತನೆ
ಸಂತ ಫ್ರಾನ್ಸಿಸ್ ಬೋರ್ಜಿಯಾ
ಸಂತ ಡೇನಿಯಲ್ ಕೊಂಬೋನಿ
ಹೀಬ್ರೂ ಭಾಷೆಯಲ್ಲಿ `ಮಲಾಕಿ’ ಎಂದರೆ `ನನ್ನ ಸಂದೇಶಕ’ ಎಂದರ್ಥ ಮಲಾಕಿ ಹಳೆಯ ಒಡಂಬಡಿಕೆಯ ಕಡೆಯ ಪ್ರವಾದಿ. ಇಸ್ರಯೇಲರು ಬ್ಯಾಬಿಲೋನಿಯ ಸೆರೆವಾಸ ಮುಗಿಸಿ ಪುನಃ ಜೆರುಸಲೇಮಿಗೆ ಹಿಂದಿರುಗಿದ್ದಾರೆ. ಬ್ಯಾಬಿಲೋನಿಯರ ಆಕ್ರಮಣದ ಸಂದರ್ಭದಲ್ಲಿ (ಕ್ರಿ.ಪೂ ೫೮೭) ನಾಶವಾಗಿದ್ದ ಜೆರುಸಲೇಮ್ ದೇವಾಲಯವನ್ನು ಪುನಃ ಕಟ್ಟಿದ್ದಾರೆ. ದೇವರೊಂದಿಗಿನ ಒಡಂಬಡಿಕೆಗೆ ಯಾಜಕರು ಮತ್ತು ಜನರು ಪ್ರಾಮಾಣಿಕವಾಗಿ ಬಾಳಲು ಮಲಾಕಿ ಕರೆನೀಡುತ್ತಾನೆ. ದೇವರ ದಿನವು ಅಂದರೆ ನ್ಯಾಯ ತೀರ್ಪಿನ ದಿನವು ಸನಿಹದಲ್ಲಿದೆ. ದೇವರಾದ ಸರ್ವೇಶ್ವರ ಬಂದೇ ಬರುವರು. ತಮ್ಮ ಪ್ರಜೆಗಳನ್ನು ದಂಡಿಸಿ, ಪರಿಶುದ್ಧಗೊಳಿಸುವರು. ಹಾಗಾಗಿ ದೇವರ ಒಡಂಬಡಿಕೆಗೆ ಪ್ರಾಮಾಣಿಕವಾಗಿ ಜೀವಿಸಲು ಕರೆ ನೀಡುತ್ತಾ ದೇವರು ರಕ್ಷಕನನ್ನು ಕಳುಹಿಸುವ ಮುನ್ನ ತಮ್ಮ ದೂತನ ಮೂಲಕ ಹಾದಿಯನ್ನು ಸಿದ್ದಪಡಿಸುವರು ಎನ್ನುತ್ತಾನೆ ಪ್ರವಾದಿ ಮಲಾಕಿ.


No comments:

Post a Comment