ಸಾಧಾರಣ ಕಾಲದ ಇಪ್ಪತ್ತೇಳನೇ ವಾರ ಮಂಗಳವಾರ
8/ಹಸಿರು/ಮಂಗಳ
1ನೇ ವಾಚನ - ಯೋನ 3: 1-1೦
ಕೀರ್ತನೆ - 13೦: 1-2, 3-4, 7-8
ಶುಭಸಂದೇಶ - ಲೂಕ 1೦: 38-42
8/ಹಸಿರು/ಮಂಗಳ
1ನೇ ವಾಚನ - ಯೋನ 3: 1-1೦
ಕೀರ್ತನೆ - 13೦: 1-2, 3-4, 7-8
ಶುಭಸಂದೇಶ - ಲೂಕ 1೦: 38-42
1ನೇ ವಾಚನ - ಯೋನ 3: 1-1೦
ಯೋನನಿಗೆ ಆ ಸ್ವಾಮಿಯ ವಾಣಿ ಪುನಃ ಕೇಳಿಸಿತು: “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು,” ಎಂದಿತು. ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, “ಜನರೇ ಕೇಳಿ: ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು,” ಎಂದನು. ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ – ಎಲ್ಲರೂ ಮನಃಪರಿವರ್ತನೆಯ ಚಿಹ್ನೆಯಾಗಿ ಗೋಣಿತಟ್ಟನ್ನು ಉಟ್ಟುಕೊಂಡರು. ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು. ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: “ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ ಆದರೆ, ದೇವರು ಒಂದುವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು.” ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು.
ಕೀರ್ತನೆ - 13೦: 1-2, 3-4, 7-8
1 : ಅಂತರಾಳದಿಂದ ಪ್ರಭು, ಮೊರೆಯಿಡುತ್ತಿರುವೆ ನಿನಗೆ
2 : ಆಲಿಸು, ಕಿವಿಗೊಡು ಪ್ರಭೂ, ನನ್ನಾರ್ತ ವಿಜ್ಞಾಪನೆಗೆ
3 : ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭು / ನಿನ್ನ ಮುಂದೆ ಯಾರುತಾನೆ ನಿಲ್ಲಬಲ್ಲರು ವಿಭು?
4 : ಪಾಪವನು ಕ್ಷಮಿಸುವವನು ನೀನು / ಎಂತಲೆ ಭಯಭಕ್ತಿಗೆ ಪಾತ್ರನು
7 : ಇಸ್ರಯೇಲೇ, ನಂಬಿಕೊಂಡಿರು ಪ್ರಭುವನೆ / ಆತನಲ್ಲಿದೆ ಕರುಣೆ, ಪೂರ್ಣವಿಮೋಚನೆ
8 : ಇಸ್ರಯೇಲನು ಉದ್ಧರಿಸುವನಾತ / ಅದು ಗೈದ ಸಕಲ ದೋಷಗಳಿಂದ //
ಶುಭಸಂದೇಶ - ಲೂಕ 1೦: 38-42
ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು. ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪಾದತಳದಲ್ಲಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, “ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ,” ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ, “ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು,” ಎಂದರು.
ಚಿಂತನೆ
ಸಿಮೆಯೇನ್
ಮೊದಲನೆಯ ವಾಚನ
ಪ್ರವಾದಿ ಯೋನನ ಗ್ರಂಥದಿಂದ ಆರಿಸಲಾಗಿದೆ. ಹೀಬ್ರೂ ಭಾಷೆಯಲ್ಲಿ ಯೋನ ಎಂದರೆ `ಪಾರಿವಾಳ’ ಎಂದರ್ಥ.
ದೇವರ ಸನ್ನಿಧಿಯಿಂದ ದೇವರ ಆಜ್ಞೆಯಿಂದ ತಪ್ಪಿಸಿಕೊಳ್ಳಲು ಯೋನನಿಗೆ ಅಸಾಧ್ಯವಾಯಿತು. ದೇವರ ಚಿತ್ತಕ್ಕೆ
ಮಣಿದು ಅರೆಮನಸ್ಸಿನಿಂದ ಯೋನ ನಿನೆವೆಗೆ ಹೋಗುತ್ತಾನೆ. ನಿನೆವೆ ನಗರವು ಅಸ್ಸೀರಿಯದ ರಾಜಧಾನಿ. ಅಲ್ಲಿನ
ಜನರು ತುಂಬಾ ಕ್ರೂರಿಗಳಾಗಿದ್ದರು. ಸದಾ ದುರ್ಮಾರ್ಗದಲ್ಲಿ ಪಾಪಕೃತ್ಯಗಳಲ್ಲಿ ಜೀವಿಸುತ್ತಿದ್ದರು. ಅವರನ್ನು ಎಚ್ಚರಿಸಲು, ವಿನಾಶದ ಬಗ್ಗೆ ಮುಂಚಿತವಾಗಿ ತಿಳಿಸಲು
ದೇವರು ಯೋನನನ್ನು ಕಳುಹಿಸುತ್ತಾರೆ. ಯೋನನ ಪ್ರವಾಧನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ನಿನೆವೆ
ಜನರು ಮನಪರಿವರ್ತನೆ ಹೊಂದುತ್ತಾರೆ. ಅನ್ಯ ದೇವರನ್ನು ಪೂಜಿಸುತ್ತಿದ್ದ ನಿನೆವೆ ಜನರು ಯೋನನ ಮಾತನ್ನು
ಗಂಭೀರವಾಗಿ ಸ್ವೀಕರಿಸುತ್ತಾರೆ, ವಿನಾಶದಿಂದ ರಕ್ಷಿಸಲ್ಪಡುತ್ತಾರೆ.
No comments:
Post a Comment