Sunday, 6 October 2019

ಸಾಧಾರಣ ಕಾಲದ ಇಪ್ಪತ್ತೇಳನೇ ವಾರ ಶನಿವಾರ

ಸಾಧಾರಣ ಕಾಲದ ಇಪ್ಪತ್ತೇಳನೇ ವಾರ ಶನಿವಾರ

12/ಹಸಿರು/ಶನಿ
1ನೇ  ವಾಚನ - ಯೊವೇ 4:12-21
ಕೀರ್ತನೆ - 97: 1-2, 5-6, 11-12
ಶುಭಸಂದೇಶ - ಲೂಕ 11:27-28

1ನೇ  ವಾಚನ - ಯೊವೇ 3:12-21
“ರಾಷ್ಟ್ರಗಳು ಎಚ್ಚೆತ್ತು ಸರ್ವೇಶ್ವರ ಸ್ವಾಮಿಯ ನ್ಯಾಯತೀರ್ಪಿನ ಕಣಿವೆಗೆ ಇಳಿಯಲಿ. ಸುತ್ತಮುತ್ತ ನೆರೆದಿರುವ ರಾಷ್ಟ್ರಗಳಿಗೆ ನ್ಯಾಯ ತೀರಿಸಲು ಅಲ್ಲಿ ನಾನು ಅಸೀನನಾಗಿರುವೆನು. ಸ್ವಾಮಿಯ ಶೂರರೇ, ಕುಡುಗೋಲನ್ನು ಹಾಕಿರಿ; ಫಲ ಪಕ್ವವಾಗಿದೆ. ಬನ್ನಿ, ದ್ರಾಕ್ಷಿಯನ್ನು ತುಳಿಯಿರಿ; ಅಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿತುಳುಕುತ್ತಿವೆ; ರಾಷ್ಟ್ರಗಳ ದುಷ್ಟತನವು ಮಿತಿಮೀರಿದೆ. “ಇಗೋ, ನ್ಯಾಯತೀರ್ಪಿನ ಕಣಿವೆಯಲ್ಲಿ ತಂಡೋಪತಂಡವಾದ ಜನಸ್ತೋಮ! ತೀರ್ಪಿನ ಕಣಿವೆಯಲ್ಲಿರುವವರಿಗೆ ಸರ್ವೇಶ್ವರನ ದಿನ ಸನ್ನಿಹಿತ! ಸೂರ್ಯಚಂದ್ರಗಳು ಮಂಕಾಗುತ್ತವೆ. ನಕ್ಷತ್ರಗಳು ಕಾಂತಿಗುಂದುತ್ತವೆ. ಸ್ವಾಮಿ ಸಿಯೋನಿನಿಂದ ಗರ್ಜಿಸುತ್ತಾರೆ, ಜೆರುಸಲೇಮಿನಿಂದ ಅವರ ಧ್ವನಿ ಮೊಳಗುತ್ತದೆ. ಭೂಮ್ಯಾಕಾಶಗಳು ನಡುಗುತ್ತವೆ. ಆದರೂ ಸರ್ವೇಶ್ವರ ತಮ್ಮ ಜನರಿಗೆ ಆಶ್ರಯ; ಇಸ್ರಯೇಲರಿಗೆ ರಕ್ಷಣಾ ದುರ್ಗ. “ಇಸ್ರಯೇಲರೇ, ಕೇಳಿ, ಪವಿತ್ರ ಪರ್ವತವಾದ ಸಿಯೋನಿನಲ್ಲಿ ನೆಲೆಯಾಗಿರುವ ನಿಮ್ಮ ಸರ್ವೇಶ್ವರಸ್ವಾಮಿ ದೇವರು ನಾನೇ ಎಂದು ಆಗ ನಿಮಗೆ ಮನದಟ್ಟಾಗುವುದು. ಜೆರುಸಲೇಮ್ ಪುಣ್ಯಕ್ಷೇತ್ರವೆನಿಸಿಕೊಳ್ಳುವುದು. ಪರಕೀಯರು ಅದನ್ನೆಂದಿಗೂ ಆಕ್ರಮಿಸರು. ಆ ದಿನಗಳಲ್ಲಿ ಬೆಟ್ಟಗುಟ್ಟಗಳಿಂದ ದ್ರಾಕ್ಷಾರಸ ಮತ್ತು ಹಾಲು ತುಪ್ಪ ಹರಿಯುವುದು. ಜುದೇಯ ನಾಡಿನ ಹಳ್ಳಕೊಳ್ಳಗಳು ನೀರಿನಿಂದ ತುಂಬಿರುವುವು. ದೇವಾಲಯದಿಂದ ನೀರು ಚಿಮ್ಮಿ ಬಂದು ಆಕಾಚಿಯದ ಹಳ್ಳವನ್ನು ತಂಪಾಗಿಸುವುದು.  “ಈಜಿಪ್ಟ್ ಪಾಳುಬೀಳುವುದು, ಎದೋಮ್ ಬೆಂಗಾಡಾಗುವುದು. ಕಾರಣ, ಈ ಎರಡು ಪಟ್ಟಣದವರು ಜುದೇಯ ನಾಡಿನ ಮೇಲೆ ಧಾಳಿಮಾಡಿದ್ದಾರೆ. ನಿರ್ದೋಷಿಗಳ ರಕ್ತವನ್ನು ಸುರಿಸಿದ್ದಾರೆ. ಹತರಾದವರು ನಿರ್ದೋಷಿಗಳೆಂದು ನಿರ್ಣಯಿಸುವೆನು. ಕೊಲೆಪಾತಕರನ್ನು ದಂಡಿಸಿಯೇ ತೀರುವೆನು. ಆದರೆ ಜುದೇಯ ನಾಡು, ಜೆರುಸಲೇಮ್ ನಗರ ಜನಭರಿತವಾಗಿ ಇರುವುದು. ಸರ್ವೇಶ್ವರ ಸ್ವಾಮಿಯಾದ ನಾನು ಸಿಯೋನ್ ಪರ್ವತದಲ್ಲಿ ನೆಲೆಯಾಗಿರುವೆನು.”

ಕೀರ್ತನೆ - 97: 1-2, 5-6, 11-12
1 : ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ / ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ / ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ // 
2 : ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು / ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು // 
3 : ಚಲಿಸುತ್ತಿದೆ ಬೆಂಕಿ ಆತನ ಮುಂದುಗಡೆ / ಸುಡುತ್ತದೆ ಆತನ ವೈರಿಗಳನು ಎಲ್ಲೆಡೆ // 
4 : ಇಳೆಯನು ಬೆಳಗಿಸುತ್ತದೆ ಆತನ ಮಿಂಚು | ನಡುಗುತ್ತದೆ ಭೂಮಿ ಅದಕೆ ಬೆಚ್ಚುಬಿದ್ದು || 
5 : ಸಾರ್ವಭೌಮನಾದ ಪ್ರಭುವಿನ ಮುಂದೆ / ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ // 
6 : ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು / ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು // 
11 : ಉದಯವಾಗುವುದು ಜ್ಯೋತಿ ಸಜ್ಜನರಿಗೆ / ಆನಂದವಿದೆ ಯಥಾರ್ಥ ಹೃದಯಿಗಳಿಗೆ // 
12 : ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ / ಆತನ ಶ್ರೀನಾಮವನು ಕೊಂಡಾಡಿರಿ //

ಶುಭಸಂದೇಶ - ಲೂಕ 11:27-28
ಯೇಸುಸ್ವಾಮಿ ಹೀಗೆ ಮಾತನಾಡುತ್ತಿದ್ದಾಗ ಜನಸಮೂಹದಿಂದ ಮಹಿಳೆಯೊಬ್ಬಳು, “ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು!” ಎಂದು ಕೂಗಿ ಹೇಳಿದಳು. ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!” ಎಂದರು.


ಚಿಂತನೆ

ಯೋರ್ಕ್‍ನ ಸಂತ ವಿಲ್ಫ್ರಿಡ್

“ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯುಡಿಸಿದ ತಾಯಿ ಭಾಗ್ಯವಂತಳು” ಎಂದು ಮಹಿಳೆಯೊಬ್ಬಳು ಯೇಸುವಿನ ಬುದ್ಧಿವಂತಿಕೆಯನ್ನು, ಬೋಧನೆಯನ್ನು, ಅದ್ಭುತಗಳನ್ನು ಕಂಡು ಹೊಗಳುತ್ತಾಳೆ. ಮಕ್ಕಳು ತಂದೆ ತಾಯಿಗಳಿಗೆ ತಂದು ಕೊಡಬಹುದಾದ ಗೌರವವಿದು. ಉತ್ತಮ ಮರ ಉತ್ತಮ ಹಣ್ಣನ್ನು ನೀಡುವಂತೆ ಮಕ್ಕಳ ಬದುಕನ್ನು ನೋಡಿ ತಂದೆ-ತಾಯಿಯರನ್ನು ಸತ್ಕರಿಸುತ್ತದೆ ಸಮಾಜ.
ಯೇಸುವಿಗೆ ಜನ್ಮ ನೀಡುವುದರ ಮೂಲಕ ಮರಿಯಳು ಭಾಗ್ಯವಂತಳಾದಳು. ದೇವರ ವಾಕ್ಯವನ್ನು ಆಲಿಸಿ ಅದರಂತೆ ಜೀವಿಸುವವರು ಕೂಡ ಭಾಗ್ಯವಂತರೆನ್ನುತ್ತಾರೆ ಯೇಸು. ಮರಿಯಳು `ದೇವರ ತಾಯಿ’ ಆಗುವ ಮುನ್ನ ದೇವರ ವಾಕ್ಯಕ್ಕೆ ಶಿರಬಾಗಿದರು. ದೇವರ ವಾಕ್ಯದ ಪ್ರಕಾರ ಜೀವಿಸಿದಳು. ದೇವರ ವಾಕ್ಯವು ತನ್ನ ಗರ್ಭದಲ್ಲಿ ಜೀವತಳೆಯಲು ಸಮ್ಮತಿ ನೀಡಿದಳು. ಮಾತೆ ಮರಿಯಳಂತೆ ನಾವು ಕೂಡ ದೇವರ ವಾಕ್ಯವನ್ನು ಗೌರವಿಸಿದ್ದಲ್ಲಿ ನಾವು ಭಾಗ್ಯವಂತರಾಗುವುದರಲ್ಲಿ ಯಾವ ಸಂದೇಹವಿಲ್ಲ.

No comments:

Post a Comment