Sunday, 10 November 2019

ಸಾಧಾರಣ ಕಾಲದ ಮೂವತ್ತೆರಡನೇ ವಾರ ಶುಕ್ರವಾರ


15/ಹಸಿರು/ಶುಕ್ರ/ಐಚ್ಛಿಕ ಸ್ಮರಣೆ - ಸಂತ ಮಹಾ ಆಲ್ಬರ್ಟ್
1ನೇ ವಾಚನ - ಸುಜ್ಞಾನ 13: 1-9 
ಕೀರ್ತನೆ - 19: 1-4
ಶುಭಸಂದೇಶ - ಲೂಕ 17: 26-37


1ನೇ ವಾಚನ - ಸುಜ್ಞಾನ 13: 1-9 
ದೇವರನ್ನು ಅರಿಯದ ಮನುಜರೆಲ್ಲರು ಮಂದಮತಿಗಳೆಂಬುದು ಸಹಜ. ಕಣ್ಣಿಗೆ ಕಾಣುವ ಚೆಲುವಾದವುಗಳಿಂದ, ಇರುವಾತನನು ಅವರರಿಯಲಿಲ್ಲ. ಸೃಷ್ಟಿಯಾದ ವಸ್ತುಗಳನು ಗಮನಿಸಿ ಸೃಷ್ಟಿಕರ್ತನನು ಗುರುತಿಸಲಿಲ್ಲ. ಬದಲಿಗೆ ಅಗ್ನಿ, ಆವಿ, ವೇಗವಾಯು, ತಾರಾಗಣ, ಭೋರ್ಗರೆವ ಸಾಗರ, ಗಗನದ ಜ್ಯೋತಿರ್ಮಂಡಲ ಇವುಗಳೇ ಜಗವನ್ನಾಳುವ ದೇವರೆಂದುಕೊಂಡರಲ್ಲಾ ! ಇವುಗಳಲ್ಲಿನ ಚೆಲುವಿಗೆ ಮಣಿದು ಇವುಗಳನೇ ದೇವರೆಂದುಕೊಂಡರು. ಗ್ರಹಿಸದೆ ಹೋದರು ಇವುಗಳ ಒಡೆಯ ಇನ್ನೆಷ್ಟು ಮಿಗಿಲಾಗಿರಬೇಕೆಂದು! ಸೌಂದರ್ಯಕೆ ಮೂಲವಾದ ಸರ್ವೇಶ್ವರನೇ ನಿರ್ಮಿಸಿದನು ಇವುಗಳನು. ಇವುಗಳಲ್ಲಿನ ಗುಣಶಕ್ತಿಗೆ ಅಚ್ಚರಿಗೊಂಡು ಹಾಗೆ ನುಡಿದಿದ್ದರೆ ಇವುಗಳನು ರೂಪಿಸಿದವನೆಷ್ಟು ಶಕ್ತನೆಂದು ತಿಳಿಯಲಿ ಅವುಗಳಿಂದಲೇ. ಸೃಷ್ಟಿವಸ್ತುಗಳ ಸೌಂದರ್ಯ ಮಹತ್ವಗಳಿಂದ ಅವುಗಳ ಸೃಷ್ಟಿಕರ್ತನ ಸಾದೃಶ್ಯ ಸಾಧ್ಯ. ಇಂಥವರ ಮೇಲೆ ಬರುವ ಅಪರಾಧ ಅಂಥ ದೊಡ್ಡದೇನೂ ಅಲ್ಲ ದೇವರನ್ನು ಹುಡುಕುವ ಆಶೆಯಿಂದಲೆ, ತಪ್ಪುಹಾದಿ ಹಿಡಿದಿರಬಹುದಲ್ಲಾ. ಸೃಷ್ಟಿಕಾರ್ಯಗಳ ನಡುವೆ ಬಾಳುತ್ತಾ ವಿಚಾರಿಸುತ್ತಾರೆ ಮನಃಪೂರ್ವಕವಾಗಿ ಭ್ರಮೆಗೊಳ್ಳುತ್ತಾರೆ ಅವುಗಳ ಸಹಜವಾದ ಚೆಲುವಿಗೆ ಬೆರಗಾಗಿ. ಹೀಗಿದ್ದರೂ ಇಂಥವರನೆ ದೋಷಮುಕ್ತರೆನ್ನಲಾದೀತೆ? ಪ್ರಪಂಚವನ್ನೇ ಶೋಧಿಸಿನೋಡುವ ಶಕ್ತಿ ಇವರಲ್ಲಿದ್ದ ಮೇಲೆ ಸೃಷ್ಟಿಗೇ ಒಡೆಯನಾದವನನು ಅರಿತುಕೊಳ್ಳಲು ತಡವಾದುದೇಕೆ? 

ಕೀರ್ತನೆ - 19: 1-4
1 : ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು / ತಾರಾಮಂಡಲ ತೋರುತಿದೆ ದೇವರ ಕೈಕೃತಿಗಳನು //
2 : ದಿನವು ಮರುದಿನಕೆ ಮಾಡುತಿದೆ ಈ ಪ್ರಕಟಣೆಯನು | ರಾತ್ರಿ ಮರುರಾತ್ರಿಗೆ ನೀಡುತಿದೆ ಈ ಪ್ರಚಾರವನು ||
3 : ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ / ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ //
4 : ಆದರೂ ಅವುಗಳ ಧ್ವನಿರೇಖೆ ಹರಡಿದೆ ಬುವಿಯಾದ್ಯಂತ / ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ //
5 : ನಿರ್ಮಿಸಿಹನಲ್ಲಿ ದೇವನು ಗುಡಾರವೊಂದನು ಸೂರ್ಯನಿಗೆ / ಬರುತಿಹನಾ ರವಿ ವರನಂತೆ ಧಾರಾಗೃಹದಿಂದ ಹೊರಗೆ / ಶೂರನಂತೆ, ಓಟದ ಪಥದಲ್ಲೋಡಲು ಹರುಷದೊಂದಿಗೆ //

ಶುಭಸಂದೇಶ - ಲೂಕ 17: 26-37
ನೋವನ ಕಾಲದಲ್ಲಿ ನಡೆದಂತೆಯೇ ನರಪುತ್ರನು ಬರುವ ಕಾಲದಲ್ಲೂ ನಡೆಯುವುದು. ನೋವನು ನಾವೆಯನ್ನು ಹತ್ತುವ ದಿನದ ತನಕ ಜನರು ತಿನ್ನುತ್ತಾ ಕುಡಿಯುತ್ತಾ ಇದ್ದರು; ಮದುವೆ ಮಾಡಿಕೊಳ್ಳುತ್ತಾ, ಮಾಡಿಕೊಡುತ್ತಾ ಇದ್ದರು; ಜಲಪ್ರಳಯ ಬಂದು ಎಲ್ಲರನ್ನು ನಾಶಮಾಡಿತು. ಅಂತೆಯೇ, ಲೋತನ ಕಾಲದಲ್ಲೂ ನಡೆಯಿತು. ಜನರು ಅನ್ನಪಾನೀಯಗಳಲ್ಲಿ ಆಸಕ್ತರಾಗಿದ್ದರು; ಲೇವಾದೇವಿಯಲ್ಲಿ ತೊಡಗಿದ್ದರು. ನೆಡುವುದರಲ್ಲೂ ನಿರ್ಮಿಸುವುದರಲ್ಲೂ ನಿರತರಾಗಿದ್ದರು. ಲೋತನು ಸೊದೋಮ್ ಊರನ್ನು ಬಿಟ್ಟು ತೆರಳಿದ ದಿನದಂದೇ ಆಕಾಶದಿಂದ ಅಗ್ನಿ ಮತ್ತು ಗಂಧಕದ ಮಳೆ ಸುರಿದು ಎಲ್ಲರನ್ನು ನಾಶಮಾಡಿತು. ನರಪುತ್ರನು ಪ್ರತ್ಯಕ್ಷನಾಗುವ ದಿನದಲ್ಲೂ ಹಾಗೆಯೇ ನಡೆಯುವುದು. “ಆ ದಿನದಲ್ಲಿ ಮಾಳಿಗೆಯ ಮೇಲಿರುವವನು ಮನೆಯಲ್ಲಿರುವ ಸರಕುಸಾಮಗ್ರಿಗಳನ್ನು ತೆಗೆದುಕೊಳ್ಳಲು ಕೆಳಗಿಳಿಯದಿರಲಿ. ಅಂತೆಯೇ, ಹೊಲದಲ್ಲಿರುವವನು ಮನೆಗೆ ಹಿಂದಿರುಗದಿರಲಿ. ಲೋತನ ಪತ್ನಿಗಾದ ಗತಿಯನ್ನು ನೆನಪಿಗೆ ತಂದುಕೊಳ್ಳಿರಿ! “ಯಾರು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಇಚ್ಛಿಸುತ್ತಾನೋ ಅವನು ಅದನ್ನು ಕಳೆದುಕೊಳ್ಳುತ್ತಾನೆ; ಯಾರು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೋ ಅವನು ಅದನ್ನು ರಕ್ಷಿಸಿಕೊಳ್ಳುತ್ತಾನೆ. ಆ ರಾತ್ರಿ ಒಂದೇ ಹಾಸಿಗೆಯಲ್ಲಿ ಇಬ್ಬರು ಮಲಗಿದ್ದರೆ, ಆ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು; ಒಬ್ಬನನ್ನು ಬಿಡಲಾಗುವುದು. ಒಂದೇ ಕಲ್ಲಲ್ಲಿ ಬೀಸುತ್ತಿರುವ ಇಬ್ಬರು ಮಹಿಳೆಯರಲ್ಲಿ, ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು. (ಹೊಲದಲ್ಲಿದ್ದ ಇಬ್ಬರಲ್ಲಿ, ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು)” ಎಂದರು. “ಸ್ವಾವಿೂ, ಇದು ಎಲ್ಲಿ ನಡೆಯುವುದು?” ಎಂದು ಶಿಷ್ಯರು ಕೇಳಿದಾಗ, ಯೇಸು, “ಹೆಣವಿದ್ದಲ್ಲಿ ರಣಹದ್ದುಗಳು ಬಂದು ಕೂಡುವುವು,” ಎಂದರು.

ಚಿಂತನೆ

ನೋವನ ಕಾಲದಲ್ಲಿ ಜನರು ದೇವರನ್ನು ಮರೆತು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಮೈಮರೆತ್ತಿದ್ದರು. ಲೌಕಿಕ ಸುಖ ಭೋಗಗಳಲ್ಲಿ ತಲ್ಲೀನರಾಗಿದ್ದರು. ಕುಡಿಯುವುದು, ತಿನ್ನುವುದು, ಮದುವೆಯಾಗುವುದರಲ್ಲೇ ಮೈ ಮರೆತ್ತಿದ್ದರು. ಹೀಗೆ ಲೌಕಿಕತೆಯಲ್ಲಿ ಮೈಮರೆತ್ತಿದ್ದಾಗಲೇ ಜಲಪ್ರಳಯದಿಂದ ಅವರೆಲ್ಲರೂ ನಿರ್ನಾಮವಾದರು (ಆದಿಕಾಂಡ ೬:೧೧-೧೩). ಅಂತೆಯೇ ನರಪುತ್ರನ (ಯೇಸು) ಆಗಮನದ ಕಾಲದಲ್ಲಿ ನಡೆಯುವುದಾಗಿ ಇಂದಿನ ಶುಭಸಂದೇಶ ಎಚ್ಚರಿಸುತ್ತಿದೆ. ಲೌಕಿಕ ಸುಖ ಪಡುವುದರಲ್ಲಿ ತಪ್ಪಿಲ್ಲ, ಆದರೆ ಲೌಕಿಕ ಸುಖ-ಭೋಗಗಳೇ ಜೀವನವಾಗಬಾರದು. ಆಧ್ಯಾತ್ಮಿಕ ಕಡೆಗೂ ನಾವು ಗಮನ ಹರಿಸಬೇಕು. ನೋವನು ತನ್ನ ಜನರನ್ನು ಎಚ್ಚರಿಸಿದಂತೆ ಧರ್ಮಸಭೆಯು ದೇವರನ್ನು ಸ್ವೀಕರಿಸಲು ಸದಾ ಎಚ್ಚರಿಕೆ ನೀಡುತ್ತದೆ. ಎಲ್ಲಾ ಸಮಯದಲ್ಲೂ ಕ್ರಿಸ್ತನ ಬರುವಿಕೆಗೆ ಸಿದ್ದರಿರಬೇಕಾಗಿದೆ. ಇಲ್ಲವಾದ್ದಲ್ಲಿ ಸರ್ವನಾಶ ಕಟ್ಟಿಟ್ಟ ಬುತ್ತಿ.

No comments:

Post a Comment