14/ಹಸಿರು/ಗುರು
1ನೇ ವಾಚನ - ಸುಜ್ಞಾನ 7: 22-8:1
ಕೀರ್ತನೆ - 119: 89-91, 13೦, 135, 175
ಶುಭಸಂದೇಶ - ಲೂಕ 17: 2೦-25
1ನೇ ವಾಚನ - ಸುಜ್ಞಾನ 7: 22-8:1
ಸುಜ್ಞಾನದಲ್ಲಿ ಚುರುಕಾಗಿ ಅರಿಯುವ ಹಾಗೂ ಪವಿತ್ರವಾದ ಚೈತನ್ಯವಿರುವುದು; ಅದು ಅದ್ವಿತೀಯ, ನಾನಾವಿಧ, ಅತಿಸೂಕ್ಷ್ಮ ಹಾಗು ಚಲಿಸುವಂಥದ್ದು; ಅದು ಸ್ಪಷ್ಟೋಕ್ತಿಯುಳ್ಳದು, ನಿಷ್ಕಳಂಕವಾದುದು, ಸುರಕ್ಷಿತವಾದುದು, ನಿಚ್ಚಳವಾದುದು, ಸತ್ಪರವಾದುದು, ಹದವಾದುದು; ನಿರಾತಂಕವಾದುದು, ಕರುಣಾಮಯಿ, ಮಾನವಪ್ರಿಯವಾದುದು; ಸುಸ್ಥಿರ, ನಿಶ್ಚಿತ, ನಿಶ್ಚಿಂತೆಯುಳ್ಳದ್ದು, ಸರ್ವಶಕ್ತಿಯುಳ್ಳದ್ದು, ಚುರುಕು, ನಿರ್ಮಲ, ಸೂಕ್ಷ್ಮ, ಎಲ್ಲ ಜೀವಾತ್ಮಗಳಲ್ಲಿ ಸೇರಿಕೊಳ್ಳುವಂಥದ್ದು. ಸುಜ್ಞಾನ ಎಲ್ಲಾ ಚಲನೆಗಿಂತಲು ಚುರುಕು ಇಡೀ ವಿಶ್ವದಲ್ಲಿ ವ್ಯಾಪಿಸಿಕೊಳ್ಳುವಷ್ಟು ಸ್ವಚ್ಛವಾದುದು. ಆಕೆ ದೇವರ ಶಕ್ತಿಯ ಉಸಿರು, ಸರ್ವಶಕ್ತನ ನಿರ್ಮಲ ಪ್ರವಾಹ. ಎಂದೇ ಆಕೆಯಲ್ಲಿ ಅಶುದ್ಧವಾದುದು ಯಾವುದೂ ಪ್ರವೇಶಿಸುವಂತಿಲ್ಲ. ಸುಜ್ಞಾನವು ಅನಾದಿ, ಪರಂಜ್ಯೋತಿಯ ಪ್ರಕಾಶ ದೈವಪ್ರವೃತ್ತಿಯ ನಿಷ್ಕಳಂಕ ದರ್ಪಣ ದೇವರ ಶ್ರೇಷ್ಟತೆಯ ಪ್ರತಿರೂಪ. ಒಂಟಿಯಾಗಿದ್ದುಕೊಂಡು ಎಲ್ಲವನ್ನು ಆಕೆ ಮಾಡಬಲ್ಲಳು ತನ್ನತನವನ್ನು ಕಳೆದುಕೊಳ್ಳದೆ ಎಲ್ಲವನ್ನು ಹೊಸದಾಗಿಸುವಳು. ಪ್ರತಿಯೊಂದು ಪೀಳಿಗೆಯಲ್ಲೂ ಸಂಚರಿಸಿ, ಸಂತಾತ್ಮಗಳನ್ನು ಹೊಕ್ಕು, ಮಾನವರನ್ನು ದೇವರ ಗೆಳೆಯರನ್ನಾಗಿ, ಪ್ರವಾದಿಗಳನ್ನಾಗಿ ಮಾಡುವಳು. ಸುಜ್ಞಾನಿಯೊಂದಿಗಿರುವಾತನನ್ನೇ ಹೊರತು ಇನ್ನಾರನ್ನೂ ಪ್ರೀತಿಸುವುದಿಲ್ಲ ದೇವರು. ಸುಜ್ಞಾನ ಸೂರ್ಯನಿಗಿಂತ ಸುಂದರಳು ಯಾವ ತಾರಾಮಂಡಲಕ್ಕೂ ಮಿಗಿಲಾದವಳು ಬೆಳಕಿಗೆ ಹೋಲಿಸಿದರೆ ಅದನ್ನೂ ಮೀರುವಳು. ಹಗಲು ಹೋಗಿ ಇರುಳಾಗುವುದು ಸುಜ್ಞಾನಿಯ ಮುಂದೆ ಕೆಡುಕು ನಿಲ್ಲದು. ಸುಜ್ಞಾನವೆಂಬಾಕೆ ಸಂಪೂರ್ಣ ಶಕ್ತಿಯಿಂದ ಸರಿಯುವಳು ಜಗದ ಒಂದು ಕಡೆಯಿಂದ ಇನ್ನೊಂದು ಕಡೆಯವರೆಗು, ಅನುಕೂಲಕರವಾಗಿಯೆ ನಡೆಸುವಳು ಎಲ್ಲವನು.
ಕೀರ್ತನೆ - 119: 89-91, 13೦, 135, 175
89 : ಹೇ ಪ್ರಭು, ನಿನ್ನ ವಾಕ್ಯ ಶಾಶ್ವತ / ಪರಲೋಕದಲಿ ಅದು ಚಿರ ಶಾಶ್ವತ
90 : ಇರುವುದು ತಲತಲಾಂತರಕು ನಿನ್ನ ಸತ್ಯತೆ / ನೀ ಸ್ಥಾಪಿಸಿದ ಭೂಮಂಡಲಕ್ಕಿದೆ ಸ್ಥಿರತೆ
91 : ನಿನ್ನ ವಿಧಿಗನುಸಾರ ಅವು ಇಂದಿಗೂ ಉಳಿದಿವೆ / ಏಕೆನೆ, ಸರ್ವವೂ ಮಾಡುತಿವೆ ನಿನಗೆ ಸೇವೆ
130 : ತರುವುದು ನಿನ್ನ ವಾಕ್ಯೋಪದೇಶ / ಸರಳ ಜನರಿಗೆ ಜ್ಞಾನ ಪ್ರಕಾಶ
135 : ತೋರು ನಿನ್ನ ಮುಖದರ್ಶನ ಈ ದಾಸನಿಗೆ / ನೀ ಕಲಿಸು ನಿನ್ನ ನಿಬಂಧನೆಗಳನು ಎನಗೆ
175 : ಉಳಿಸೆನ್ನ ಪ್ರಾಣವನು, ಭಜಿಪೆ ನಿನ್ನನು / ನೀಡಲಿ ಎನಗೆ ನಿನ್ನ ವಿಧಿಗಳು ನೆರವನು
ಶುಭಸಂದೇಶ - ಲೂಕ 17: 2೦-25
ದೇವರ ಸಾಮ್ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಕೇಳಿದಾಗ ಯೇಸುಸ್ವಾಮಿ ಪ್ರತ್ತುತ್ತರವಾಗಿ, “ದೇವರ ಸಾಮ್ರಾಜ್ಯವು ಕಣ್ಣುಗಳಿಗೆ ಕಾಣಿಸುವಂತೆ ಬರುವುದಿಲ್ಲ. ‘ಇಗೋ, ಅದು ಇಲ್ಲಿದೆ ಅಥವಾ ಅಲ್ಲಿದೆ,’ ಎಂದು ಹೇಳುವಂತಿಲ್ಲ. ಏಕೆಂದರೆ, ದೇವರ ಸಾಮ್ರಾಜ್ಯವು ನಿಮ್ಮೊಳಗೇ ಇದೆ,” ಎಂದರು. ಅನಂತರ ಶಿಷ್ಯರನ್ನು ಉದ್ದೇಶಿಸಿ, “ಕಾಲ ಒಂದು ಬರುವುದು, ಆಗ ನರಪುತ್ರನೊಂದಿಗೆ ಒಂದು ದಿನವನ್ನಾದರೂ ಕಳೆಯಲು ಹಂಬಲಿಸುವಿರಿ. ಆದರೆ ನಿಮಗದು ಲಭಿಸದು. ‘ಇಗೋ, ಇಲ್ಲಿದ್ದಾನೆ; ಅಗೋ ಅಲ್ಲಿದ್ದಾನೆ,’ ಎಂದು ಜನರು ಸುದ್ದಿ ಎಬ್ಬಿಸುವರು. ಅದನ್ನು ನೀವು ನೋಡಲು ಹೋಗಬೇಡಿ; ಅಂಥವರನ್ನು ಹಿಂಬಾಲಿಸಲೂ ಬೇಡಿ. ಆಕಾಶದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನವರೆಗೆ ಮಿನುಗಿ ಹೊಳೆಯುವ ಮಿಂಚಿನಂತೆ ನರಪುತ್ರನು ತಾನು ಬರುವ ಕಾಲದಲ್ಲಿ ಕಾಣಿಸಿಕೊಳ್ಳುವನು. ಆದರೆ ಅದಕ್ಕೆ ಮೊದಲು ಆತನು ತೀವ್ರ ಯಾತನೆಯನ್ನು ಅನುಭವಿಸಿ ಈ ಪೀಳಿಗೆಯಿಂದ ತಿರಸ್ಕೃತನಾಗಬೇಕು.
ಚಿಂತನೆ
ದೇವರ ಸಾಮ್ರಾಜ್ಯ ಎಲ್ಲಿದೆ? ಅಥವಾ ಸ್ವರ್ಗ ಎಲ್ಲಿದೆ ಎಂದು ಜನರು ಮಾತನಾಡುತ್ತಾರೆ. ಸ್ವರ್ಗದಲ್ಲಿ ಮಾತ್ರ ನಾವು ಸುಖದಿಂದ ಇರಬಹುದೆಂದು ಅನೇಕರು ತಿಳಿದಕೊಂಡಿದ್ದಾರೆ. ಆ ಸ್ವರ್ಗ ಎನ್ನುವುದು ಆಕಾಶದಲ್ಲಿಯೂ ಇಲ್ಲ, ಹಿಮಾಲಯದಲ್ಲೂ ಇಲ್ಲ. ಅದು ಇಲ್ಲಿಯೇ ಈ ಭೂಮಿಯ ಮೇಲೆಯೇ, ನಾವಿರುವಡೆಯಲ್ಲಿಯೇ ಇದೆ, ಭೂಮಿಯ ಮೇಲೆ ನರಕವನ್ನು ನಿವಾರಣೆ ಮಾಡಿಕೊಂಡರೆ ಸ್ವರ್ಗ ಸುಖವನ್ನು ನಾವು ಇಲ್ಲಿಯೇ ಕಾಣಬಹುದು. ಸುಖ ಎನ್ನುವುದು ತನ್ನಲ್ಲಿ ಬಿಟ್ಟು ಬೇರೆ ಇನ್ನೆಲ್ಲಿಯೋ ಇದೆಯೆಂದು ತಿಳಿದುಕೊಂಡು, ಶೋಧ ಮಾಡುತ್ತಾ ಹೋದರೆ ಮನುಷ್ಯನು ದುಃಖ ಪಡುತ್ತಾನೆಯೇ ಹೊರತು ಸುಖಪಡುವುದಿಲ್ಲ. ಅದು ತನ್ನಲ್ಲಿಯೇ ಇದೆಯೆಂದು ತಿಳಿದುಕೊಂಡವನು ಬಹು ಬೇಗನೆ, ತನ್ನ ದುಃಖವನ್ನು ಕಳೆದುಕೊಂಡು ಸುಖವನ್ನು ಕಂಡುಕೊಳ್ಳುತ್ತಾನೆ.
No comments:
Post a Comment