Sunday, 10 November 2019

ಸಾಧಾರಣ ಕಾಲದ ಮೂವತ್ತೆರಡನೇ ವಾರ ಶನಿವಾರ


16/ಹಸಿರು/ಶನಿ/ಐಚ್ಛಿಕ ಸ್ಮರಣೆ - ಸ್ಕೋಟ್‌ಲೆಂಡಿನ  ಸಂತ ಮಾರ್ಗರೇಟ್ ಮತ್ತು ಸಂತ ಜೆತ್ರೂದ್(ಕನ್ಯೆ)
1ನೇ ವಾಚನ - ಸುಜ್ಞಾನ 18: 14-16; 19: 6-9
ಕೀರ್ತನೆ -1೦5: 2-3, 36-37, 42-43
ಶುಭಸಂದೇಶ - ಲೂಕ 18: 1-8


1ನೇ ವಾಚನ - ಸುಜ್ಞಾನ 18: 14-16; 19: 6-9
ಸೌಮ್ಯವಾದ ಮೌನ ಸಮಸ್ತವನು ಆವರಿಸಲು ನಟ್ಟಿರಳು ವೇಗವಾಗಿ ಚಲಿಸಿ ಬಂದಿರಲು, ನಿಮ್ಮ ಸರ್ವಶಕ್ತ ವಾಣಿ ತನ್ನ ರಾಜ ಸಿಂಹಾಸನ ಬಿಟ್ಟು ಪ್ರಬಲ ಯುದ್ಧವೀರನಂತೆ ಸ್ವರ್ಗದಿಂದ ಜಿಗಿದು ನಾಶನಕ್ಕೆ ಗುರಿಯಾದ ನಾಡಿನೊಳಕ್ಕೆ ಬಂದಿತು. ಕಟ್ಟುನಿಟ್ಟಾದ ನಿನ್ನಾಜ್ಞೆಯೆಂಬ ಹದವಾದ ಕತ್ತಿಯನು ಅದು ಹಿಡಿದುನಿಂತಿತ್ತು ಎಲ್ಲವನು ಸಾವಿನಿಂದ ತುಂಬಿಸಿ, ನೆಲದ ಮೇಲೆ ನಿಂತಿತ್ತು; ಆದರೂ ಆಗಸವನ್ನೇ ಮುಟ್ಟುತ್ತಿತ್ತು. 6 : ನಿಮ್ಮ ದಾಸರು ದೇವಾ, ಹಾನಿಗೀಡಾಗದಂತೆ ತಲೆಬಾಗಿತು ಸಮಗ್ರ ಸೃಷ್ಟಿ ನಿಮ್ಮ ಆಜ್ಞೆಗೆ ಬದಲಾಯಿಸಿಕೊಂಡಿತು ತನ್ನ ಸಹಜ ರೂಪವನೆ. ಪಾಳೆಯಕ್ಕೆ ನೆರಳು ನೀಡಲು ಮೇಘ ಕವಿಯಿತು ಜಲರಾಶಿಯಿದ್ದಲ್ಲಿ ಒಣನೆಲವು ಮೇಲೆದ್ದಿತು ಕೆಂಪು ಸಮುದ್ರದ ನಡುವೆ ಸುರಕ್ಷಿತ ಹೆದ್ದಾರಿ ಕಾಣಿಸಿತು ಮೊರೆಯುತ್ತಿದ್ದ ಅಲೆಗಳ ಮಧ್ಯೆ ಹುಲ್ಲುಗಾವಲುಂಟಾಯಿತು. ಒಂದೇ ಸಮೂಹದಂತೆ ನಿಮ್ಮ ಹಸ್ತಾಶ್ರಯ ಪಡೆದ ಜನರು ನಾನಾ ಅದ್ಭುತ ಕಾರ್ಯಗಳನು ನೋಡಿ, ಆ ಸಮುದ್ರವನೆ ದಾಟಿದರು. ತಮ್ಮನ್ನು ಬಿಡುಗಡೆ ಮಾಡಿದ ನಿಮ್ಮನು ಹೇ ಸರ್ವೇಶ್ವರಾ, ಕೊಂಡಾಡಿದರು ಕುರಿಮರಿಗಳಂತೆ ಕುಣಿದಾಡಿದರು, ಬಿಚ್ಚಿದ ಕುದುರೆಗಳಂತೆ ಓಡಾಡಿದರು.

ಕೀರ್ತನೆ -1೦5: 2-3, 36-37, 42-43
2 : ಹಾಡಿ ಪಾಡಿ ಹೊಗಳಿರಿ ಪ್ರಭುವನು / ಧ್ಯಾನಿಸಿ ನೀವು ಆತನ ಪವಾಡಗಳನು //
3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ / ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ //
36 : ಕೊಂದನು ನಾಡಿನ ಜ್ಯೇಷ್ಠರೆಲ್ಲರನು | ಗಂಡಸುತನದಾ ಪ್ರಥಮ ಫಲಗಳನು ||
37 : ಹೊರತಂದನು ಇಸ್ರಯೇಲರನು ಬೆಳ್ಳಿಬಂಗಾರ ಸಹಿತ | ಅವರಾ ಗೋತ್ರದೊಳಿರಲಿಲ್ಲ ಯಾರೊಬ್ಬನೂ ನಿಶ್ಯಕ್ತ ||
42 : ಸ್ಮರಿಸಿಕೊಂಡನು ಪ್ರಭು ತನ್ನ ವಾಗ್ದಾನವನು | ತನ್ನ ದಾಸ ಅಬ್ರಹಾಮನಿಗೆ ಕೊಟ್ಟಾ ಮಾತನು ||
43 : ಹೊರತಂದನು ತನ್ನ ಪ್ರಜೆಯನು ಉಲ್ಲಾಸದಿಂದ | ತಾನಾರಿಸಿಕೊಂಡವರನು ಹರ್ಷೋದ್ಗಾರದಿಂದ ||

ಶುಭಸಂದೇಶ - ಲೂಕ 18: 1-8
ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: “ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ. ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿ ಅನ್ಯಾಯ ಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ,’ ಎಂದು ಕೇಳಿಕೊಳ್ಳುತ್ತಿದ್ದಳು. ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, ‘ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ; ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು,’ ಎಂದುಕೊಂಡ.” ಅನಂತರ ಪ್ರಭು ಯೇಸು, “ಈ ನೀತಿಕೆಟ್ಟ ನ್ಯಾಯಾಧೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೆ? ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲು ರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ? ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸ ಇರುವುದನ್ನು ಕಾಣುವನೋ?” ಎಂದರು.

ಚಿಂತನೆ
ಇಂದಿನ ಸಾಮತಿಯಲ್ಲಿ ಬರುವ ವಿಧವೆಯ ಪಾತ್ರವನ್ನು ನಮಗೆ ಹೋಲಿಸಿಕೊಂಡರೆ ನ್ಯಾಯದೀಶನ ಪಾತ್ರವನ್ನು ದೇವರಿಗೆ ಹೋಲಿಸಬೇಕು. ಆದರೆ ಈ ನ್ಯಾಯದೀಶ ಒಬ್ಬ ದುಷ್ಟ. ಆದರೂ ಯೇಸು ದೇವರನ್ನು ಈ ದುಷ್ಟನಿಗೆ ಹೋಲಿಕೆ ಮಾಡುತ್ತಾರೆ. ಈ ನ್ಯಾಯಧೀಶನ ದುಷ್ಟತನಕ್ಕೆ ತದ್ವಿರುದ್ದವಾಗಿ ದೇವರ ಒಳ್ಳೆಯತನವನ್ನು ತೋರಿಸಲಾಗಿದೆ. 

ಈ ವಿಧವೆ ಬಡವರ ಮತ್ತು ಶೋಷಿತರ ಪ್ರತಿನಿಧಿಯಂತಿದ್ದಾಳೆ. ಸಹಜವಾಗಿ ಇಂಥವರಿಗೆ ನ್ಯಾಯ ಸಿಗುವುದು ದೂರದ ಮಾತೇ. ಆದರೆ ಈ ವಿಧವೆಯಲ್ಲಿ ಒಂದು ಅಸ್ತ್ರವಿತ್ತು, ಅದು ಅವಳ ಸಹನೆ. ಕೊನೆಗೆ ಅವಳಿಗೆ ನ್ಯಾಯ ಸಿಕ್ಕಿದ್ದು ಈ ಅಸ್ತ್ರದಿಂದಲೇ. ದೇವರು ಪ್ರೀತಿಸ್ವರೂಪಿ, ಕರುಣಾಮಯಿ, ತನ್ನ ಜನರು ಹಗಲು ರಾತ್ರಿ ಮೊರೆಯಿಡುವಾಗ ಅದನ್ನು ಹೇಗೆ ನಿರ್ಲಕ್ಷಿಸಬಲ್ಲರು? ಸಹನೆ ಮತ್ತು ವಿಶ್ವಾಸದಿಂದ ಮೊರೆಯಿಡುವವರ ಕೂಗನ್ನು ದೇವರು ಎಂದಿಗೂ ತಳ್ಳಿಬಿಡುವುದಿಲ್ಲ.

No comments:

Post a Comment