Saturday, 11 January 2020

14 ಜನವರಿ 2020

ಮಂಗಳವಾರ/ ಹಸಿರು/ಸಾಧಾರಣ ಕಾಲದಮೊದಲನೇ ವಾರ 
1ನೇ ವಾಚನ - 1 ಸಮುವೇಲ 1:9-20 
1 ಸಮುವೇಲ 2:1, 4-5,6-7,18-20
ಶುಭಸಂದೇಶ - ಮಾರ್ಕ 1: 21-28
--------------------------------
1ನೇ ವಾಚನ - 1 ಸಮುವೇಲ 1:9-20 
9 : ಶಿಲೋವಿನಲ್ಲಿ ಅವರು ಅನ್ನಪಾನಗಳನ್ನು ತೆಗೆದುಕೊಂಡ ಮೇಲೆ ಹನ್ನಳು ಎದ್ದು ಸರ್ವೇಶ್ವರನ ಮಂದಿರಕ್ಕೆ ಬಂದಳು. ಯಾಜಕ ಏಲಿಯನು ಆ ಮಂದಿರದ ದ್ವಾರದ ನಿಲುವು ಪಟ್ಟಿಗಳ ಬಳಿ ಒಂದು ಪೀಠದ ಮೇಲೆ ಕುಳಿತಿದ್ದನು.
10 : ಹನ್ನಳು ಬಹು ದುಃಖದಿಂದ ಕಣ್ಣೀರಿಡುತ್ತಾ ಸರ್ವೇಶ್ವರನಲ್ಲಿ ಹೀಗೆಂದು ಪ್ರಾರ್ಥಿಸಿದಳು:
11 : “ಸರ್ವಶಕ್ತರಾದ ಸರ್ವೇಶ್ವರಾ, ನಿಮ್ಮ ದಾಸಿ ಆದ ನನ್ನ ದುಃಖವನ್ನು ನೀಗಿಸಿರಿ; ನನ್ನನ್ನು ಪರಾಂಬರಿಸಿರಿ; ನನ್ನನ್ನು ತಿರಸ್ಕರಿಸದೆ ಕನಿಕರಪಟ್ಟು ನನಗೊಬ್ಬ ಮಗನನ್ನು ಅನುಗ್ರಹಿಸಿ. ಅವನನ್ನು ಅಮರಣಾಂತರ ನಿಮಗೇ ಸಮರ್ಪಿಸುವೆನು; ಅವನ ತಲೆಯ ಮೇಲೆ ಕ್ಷೌರಕತ್ತಿಯನ್ನು ಬರಗೊಡುವುದಿಲ್ಲ ಎಂದು ಹರಕೆ ಮಾಡುತ್ತೇನೆ.”
12 : ಹನ್ನಳು ಬಹಳ ಹೊತ್ತಿನವರೆಗೆ ಸರ್ವೇಶ್ವರನ ಮುಂದೆ ಪ್ರಾರ್ಥನೆ ಸಲ್ಲಿಸುತ್ತಾ ಇದ್ದಳು. ಏಲಿ ಆಕೆಯ ಬಾಯನ್ನು ಗಮನಿಸಿದನು.
13 : ಆಕೆ ಹೃದಯಾಂತರಾಳದಿಂದ ಪ್ರಾರ್ಥಿಸುತ್ತಾ ಇದ್ದಳು; ತುಟಿಗಳು ಅಲುಗಾಡುತ್ತಿದ್ದವು, ಶಬ್ದ ಮಾತ್ರ ಕೇಳಿಸುತ್ತಿರಲಿಲ್ಲ. ಆದುದರಿಂದ ಇವಳು ಕುಡಿದಿರಬೇಕೆಂದು ತಿಳಿದು,
14 : “ನಿನ್ನ ಕುಡಿತದ ಅಮಲು ಇನ್ನೂ ಇಳಿಯಲಿಲ್ಲವೆ? ದ್ರಾಕ್ಷಾರಸದ ನಿಶೆ ನಿನ್ನನ್ನು ಬಿಟ್ಟುಹೋಗಲಿ” ಎಂದನು.
15 : ಆಕೆ, “ಇಲ್ಲ ಸ್ವಾಮಿ, ನಾನು ಕುಡಿದಿಲ್ಲ, ನಾನು ಬಹಳ ದುಃಖಪೀಡಿತಳು; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಸರ್ವೇಶ್ವರನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ.
16 : ನಿಮ್ಮ ದಾಸಿಯಾದ ನನ್ನನ್ನು ಅಯೋಗ್ಯಳೆಂದು ನೆನೆಸಬೇಡಿ. ಈವರೆಗೂ ನನ್ನ ಅತಿಯಾದ ಚಿಂತೆಯನ್ನೂ ವ್ಯಥೆಯನ್ನೂ ಅರಿಕೆ ಮಾಡಿಕೊಳ್ಳುತ್ತಿದ್ದೆ,” ಎಂದು ಹೇಳಿದಳು.
17 : ಆಗ ಏಲಿ ಆಕೆಗೆ, “ಸಮಾಧಾನದಿಂದ ಹೋಗು. ಇಸ್ರಯೇಲಿನ ದೇವರು ನಿನ್ನ ಪ್ರಾರ್ಥನೆಯನ್ನು ಈಡೇರಿಸಲಿ,” ಎಂದನು.
18 : “ನಿಮ್ಮ ದಾಸಿಯಾದ ನನ್ನ ಮೇಲೆ ಕರುಣೆಯಿರಲಿ,” ಎಂದು ಹೇಳಿ ಆಕೆ ಅಲ್ಲಿಂದ ಹೊರಟುಹೋಗಿ ಊಟ ಮಾಡಿದಳು. ಬಳಿಕ ಅವಳ ದುಃಖ ದೂರವಾಯಿತು.
19 : ಮಾರನೆಯ ದಿನ ಬೆಳಿಗ್ಗೆ ಅವರೆಲ್ಲರು ಎದ್ದು ಸರ್ವೇಶ್ವರನನ್ನು ಆರಾಧಿಸಿ ರಾಮಾದಲ್ಲಿದ್ದ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಳನ್ನು ಕೂಡಲು ಆಕೆ ಸರ್ವೇಶ್ವರನ ಅನುಗ್ರಹದಿಂದ ಗರ್ಭಿಣಿ ಆದಳು.
20 : ದಿನತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು. “ನಾನು ಇವನನ್ನು ಸರ್ವೇಶ್ವರನಿಂದ ಬೇಡಿ ಪಡೆದೆ” ಎಂದು ಹೇಳಿ ಆ ಮಗುವಿಗೆ ‘ಸಮುವೇಲ’ ಎಂದು ಹೆಸರಿಟ್ಟಳು.
--------------------------------------
1 ಸಮುವೇಲ 2:1, 4-5,6-7,18-20
1 : “ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ ಉನ್ನತೋನ್ನತವಾಗಿದೆ ನನ್ನ ಶಕ್ತಿ ಆ ದೇವನಲಿ ನನಗಿದೆ ಶತ್ರುಗಳನ್ನೂ ಧಿಕ್ಕರಿಸುವ ಶಕ್ತಿ ನನಗಿತ್ತಿರುವನಾ ಸಂತಸದಾಯಕ ಮುಕ್ತಿ.
4 : ಮುರಿದು ಬಿದ್ದಿವೆ ಶೂರರ ಬಿಲ್ಲುಬಾಣಗಳು ದುರ್ಬಲರಾದರೋ ಶೌರ್ಯದ ನಡುಕಟ್ಟಿ ನಿಂತಿಹರು.
5 : ಉಂಡು ಸುಖದಿಂದಿರುವರು ಹಸಿವು ಗೊಂಡವರು ಹೊಟ್ಟೆಗಾಗಿ ಕೂಲಿಮಾಡುತ್ತಿಹರು ತೃಪ್ತರಿದ್ದವರು. ಬಂಜೆ ಹೆರುವಳು ಆರೇಳು ಮಕ್ಕಳನು ಒಬ್ಬಂಟಿಗಳಾಗಿರುವಳು ಮಕ್ಕಳಿವೆ ಎಂದವಳು.
6 : ಜೀವ ಕೊಡುವವನು, ತೆಗೆದುಕೊಳ್ಳುವವನು ಆ ಸರ್ವೇಶ್ವರನೇ ಪಾತಾಳಕ್ಕಿಳಿಸುವವನು, ಮೇಲಕ್ಕೆಳೆದುಕೊಳ್ಳುವವನು ಆತನೇ.
7 : ಬಡತನ, ಸಿರಿತನ ಕೊಡುವವನು ಆ ಸರ್ವೇಶ್ವರನೇ ತಗ್ಗಿಸುವವನು, ಹೆಚ್ಚಿಸುವವನು ಆತನೇ.
18 : ಬಾಲಕನಾದ ಸಮುವೇಲನು ‘ಏಫೋದ’ ಎಂಬ ಪ್ರತ್ಯೇಕ ಮಡಿಯಂಗಿಯನ್ನು ತೊಟ್ಟು ಕೊಂಡು ಸರ್ವೇಶ್ವರನ ಸಾನ್ನಿಧ್ಯ ಸೇವೆಯನ್ನು ಮಾಡುತ್ತಿದ್ದನು.
19 : ಅವನ ತಾಯಿ ಪ್ರತಿವರ್ಷ ಗಂಡನ ಜೊತೆಯಲ್ಲಿ ಬಲಿಯನ್ನು ಅರ್ಪಿಸುವುದಕ್ಕೆ ಬಂದಾಗ ಒಂದು ಚಿಕ್ಕ ನಿಲುವಂಗಿಯನ್ನು ಹೊಲಿದು ಅವನಿಗೆ ತಂದುಕೊಡುತ್ತಿದ್ದಳು.
20 : ಎಲ್ಕಾನನಿಗೆ ಏಲಿ, “ನೀನು ಸರ್ವೇಶ್ವರನಿಗೆ ಸಮರ್ಪಿಸಿಬಿಟ್ಟ ಈ ಮಗನಿಗೆ ಬದಲಾಗಿ ಈ ಹನ್ನಳಿಂದ ನಿನಗೆ ಬೇರೆ ಮಕ್ಕಳಾಗಲಿ!” ಎಂದು ಹೇಳಿ ಅವನನ್ನೂ ಅವನ ಹೆಂಡತಿಯನ್ನೂ ಆಶೀರ್ವದಿಸುತ್ತಿದ್ದನು. ಅನಂತರ ಅವರು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು.
------------------------------------------
ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ
21ಬಳಿಕ ಅವರೆಲ್ಲರೂ ಕಫೆರ್ನವುಮ್ ಎಂಬ ಊರನ್ನು ಸೇರಿದರು. ಸಬ್ಬತ್‌ದಿನ ಬಂದ ಕೂಡಲೇ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಬೋಧಿಸತೊಡಗಿದರು. ಅವರ ಉಪದೇಶವನ್ನು ಕೇಳಿ ಜನರು ಬೆರಗಾದರು. 22ಏಕೆಂದರೆ ಯೇಸು, ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರ ವಾಣಿಯಿಂದ ಪ್ರಬೋಧಿಸುತ್ತಿದ್ದರು. ಅಲ್ಲಿ ದೆವ್ವ ಹಿಡಿದ ಒಬ್ಬನಿದ್ದನು. 
23ಅವನು, ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? 24ನೀವು ಯಾರೆಂದು ನನಗೆ ಗೊತ್ತು. ದೇವರಿಂದ ಬಂದ ಪರಮಪೂಜ್ಯರು ನೀವು, ಎಂದು ಕಿರುಚಿದನು. ಆದರೆ ಯೇಸುಸ್ವಾಮಿ ಅವನನ್ನು ಗದರಿಸಿ, ಸುಮ್ಮನಿರು, ಇವನನ್ನು ಬಿಟ್ಟು ತೊಲಗು, ಎಂದು ಆ ದೆವ್ವಕ್ಕೆ ಆಜ್ಞಾಪಿಸಿದರು. 25ದೆವ್ವವು ಆ ಮನುಷ್ಯನನ್ನು ಒದ್ದಾಡಿಸಿ, ಗಟ್ಟಿಯಾಗಿ ಚೀರುತ್ತಾ ಅವನನ್ನು ಬಿಟ್ಟು ಹೋಯಿತು. 
26ಜನರೆಲ್ಲರೂ ಆಶ್ಚರ್ಯಚಕಿತರಾದರು. 27ಇದೇನು ಹೊಸ ಬೋಧನೆ!? ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಆಜ್ಞಾಪಿಸುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವೆಯಲ್ಲ! ಎಂದು ಪರಸ್ಪರ ಮಾತಾಡಿಕೊಂಡರು.
28ಕೂಡಲೇ ಗಲಿಲೇಯ ಪ್ರಾಂತ್ಯದ ಎಲ್ಲೆಡೆಗೂ ಯೇಸುವಿನ ಸಮಾಚಾರ ಹಬ್ಬಿ ಹರಡಿತು.  

ಚಿಂತನೆ

ದೈವತ್ವದ ಗುರುತು

ದುಷ್ಟ ಶಕ್ತಿಗಳನ್ನು ಮೆಟ್ಟಿ ನಿಲ್ಲಲು ಮನುಷ್ಯನಿಗೆ ದೈವಶಕ್ತಿಯು ಅತ್ಯಗತ್ಯ. ಮಾನವನ ದೌರ್ಬಲ್ಯ, ಅಪನಂಬಿಕೆಗಳೇ ದುಷ್ಟ ಶಕ್ತಿಗಳ ಬಂಡವಾಳ. ಕ್ರಿಸ್ತ ತಮ್ಮ ಅಧಿಕಾರವಾಣಿಯಿಂದ ದೆವ್ವಗಳ ಉಚ್ಚಾಟನೆ ಮಾಡುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದೆವ್ವಗಳು, ದುಷ್ಟ ಶಕ್ತಿಗಳು ಕ್ರಿಸ್ತನ ದೈವತ್ವವನ್ನು ಗುರುತಿಸುತ್ತವೆ. ಆದರೆ ಸುಮಾರು 400 ವರ್ಷಗಳಿಂದ ರಕ್ಷಕನ ಬರುವಿಕೆಯನ್ನು ಎದುರುನೋಡುತ್ತಿದ್ದ ಯೆಹೂದ್ಯರು ಕ್ರಿಸ್ತನನ್ನು ಗುರುತಿಸಲು ಶಕ್ತರಾಗದೆ ಅವರನ್ನು ಸ್ವೀಕರಿಸದೆ ತಿರಸ್ಕರಿಸುತ್ತಾರೆ. ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಹಾಗೂ ಕ್ರಿಸ್ತನನ್ನು ಪರರಲ್ಲಿ ಗುರುತಿಸಲು ಅಗತ್ಯವಾದ ದೈವಾನುಗ್ರಹಕ್ಕಾಗಿ ಪ್ರಾರ್ಥಿಸೋಣ.


© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment