Tuesday, 14 January 2020

15 ಜನವರಿ 2020

ಬುಧವಾರ/ ಹಸಿರು/ಸಾಧಾರಣ ಕಾಲದ ಮೊದಲನೆಯ ವಾರ 
1ನೇ ವಾಚನ - 1 ಸಮುವೇಲ 3:1-10, 19-20
ಕೀರ್ತನೆ : 40 : 2, 5, 7-8, 8-9, 10
ಶುಭಸಂದೇಶ - ಮಾರ್ಕ 1: 29 - 39
------------------------
1ನೇ ವಾಚನ - 1 ಸಮುವೇಲ 3:1-10, 19-20
1 : ಬಾಲಕ ಸಮುವೇಲನು ಏಲಿಯ ನೇತೃತ್ವದಲ್ಲಿ ಸರ್ವೇಶ್ವರನ ಸೇವೆಮಾಡುತ್ತಾ ಬಂದನು. ಆ ಕಾಲದಲ್ಲಿ ದೇವೋಕ್ತಿಗಳು ವಿರಳ ಆಗಿದ್ದವು; ದೇವದರ್ಶನಗಳು ಅಪರೂಪವಾಗಿ ಬಿಟ್ಟಿದ್ದವು.
2 : ಏಲಿಯ ಕಣ್ಣುಗಳು ದಿನದಿನಕ್ಕೂ ಮೊಬ್ಬಾಗುತ್ತಾ ಬಂದು ಕುರುಡನಂಥಾಗಿ ಬಿಟ್ಟಿದ್ದನು. ಒಂದು ರಾತ್ರಿ ಅವನು ತನ್ನ ಕೋಣೆಯಲ್ಲಿ ಮಲಗಿದ್ದನು.
3 : ಸಮುವೇಲನು ಸರ್ವೇಶ್ವರನ ಮಂದಿರದಲ್ಲಿ, ದೇವರ ಮಂಜೂಷವಿದ್ದ ಸ್ಥಳದಲ್ಲಿ ಮಲಗಿದ್ದನು. ದೇವರ ದೀಪ ಇನ್ನೂ ಉರಿಯುತ್ತಿತ್ತು.
4 : ಆಗ ಸರ್ವೇಶ್ವರಸ್ವಾಮಿ ಸಮುವೇಲನನ್ನು ಕರೆದರು. ಸಮುವೇಲನು “ಇಗೋ ಬಂದೆ” ಎಂದು ಉತ್ತರಕೊಟ್ಟು,
5 : ಒಡನೆ ಏಲಿಯ ಬಳಿಗೆ ಹೋಗಿ, “ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ?” ಎಂದನು. ಏಲಿ, “ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ” ಎಂದನು. ಸಮುವೇಲನು ಹೋಗಿ ಮಲಗಿದನು.
6 : ಸರ್ವೇಶ್ವರ ಪುನಃ “ಸಮುವೇಲನೇ,” ಎಂದು ಕರೆದರು. ಸಮುವೇಲನು ಕೂಡಲೆ ಎದ್ದು ಏಲಿಯ ಬಳಿಗೆ ಹೋಗಿ, “ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ?” ಎಂದನು. ಅವನು, “ಮಗನೇ, ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ,” ಎಂದನು.
7 : ಈವರೆಗೂ ಸಮುವೇಲನಿಗೆ ಸರ್ವೇಶ್ವರನ ನೇರ ಅನುಭವ ಆಗಿರಲಿಲ್ಲ. ದೇವರ ವಾಣಿ ಅವನಿಗೆ ಕೇಳಿಸಿರಲಿಲ್ಲ.
8 : ಸರ್ವೇಶ್ವರ ಸಮುವೇಲನನ್ನು ಮೂರನೆಯ ಸಾರಿ ಕರೆದರು. ಅವನು ತಟ್ಟನೆ ಏಲಿಯ ಹತ್ತಿರ ಓಡಿ, “ಇಗೋ, ಬಂದಿದ್ದೇನೆ, ನನ್ನನ್ನು ಕರೆದಿರಲ್ಲಾ,” ಎಂದನು. ಹುಡುಗನನ್ನು ಕರೆದವರು ಸರ್ವೇಶ್ವರನೇ ಎಂದು ಏಲಿಗೆ ತಿಳಿಯಿತು.
9 : ಅವನು ಸಮುವೇಲನಿಗೆ, “ಹೋಗಿ ಮಲಗಿಕೋ; ಮತ್ತೆ ಅವರು ನಿನ್ನನ್ನು ಕರೆದರೆ, ‘ಸರ್ವೇಶ್ವರಾ, ಅಪ್ಪಣೆಯಾಗಲಿ; ತಮ್ಮ ದಾಸ ಕಾದಿದ್ದಾನೆ,’ ಎಂದು ಹೇಳು,” ಎಂದನು. ಸಮುವೇಲನು ಹಿಂದಿರುಗಿ ಹೋಗಿ ತನ್ನ ಸ್ಥಳದಲ್ಲೇ ಮಲಗಿಕೊಂಡನು.
10 : ಸರ್ವೇಶ್ವರ ಪ್ರತ್ಯಕ್ಷರಾಗಿ ಹಿಂದಿನಂತೆಯೇ “ಸಮುವೇಲನೇ, ಸಮುವೇಲನೇ,” ಎಂದರು. ಸಮುವೇಲನು, “ಅಪ್ಪಣೆಯಾಗಲಿ, ತಮ್ಮ ದಾಸನಾದ ನಾನು ಕಾದಿದ್ದೇನೆ,” ಎಂದನು.
19 : ಸಮುವೇಲನು ದೊಡ್ಡವನಾಗುತ್ತಾ ಬಂದನು. ಸರ್ವೇಶ್ವರ ಅವನೊಡನೆ ಇದ್ದರು. ಆದುದರಿಂದಲೆ ಅವನು ಪ್ರವಾದನೆ ಮಾಡಿದವುಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ.
20 : ಸರ್ವೇಶ್ವರ ಅವನನ್ನು ತಮ್ಮ ಪ್ರವಾದಿಯನ್ನಾಗಿ ನೇಮಿಸಿಕೊಂಡರು. ಈ ಸಂಗತಿ ದಾನ್ ಊರಿನಿಂದ ಬೇರ್ಷೆಬದವರೆಗಿದ್ದ ಎಲ್ಲ ಇಸ್ರಯೇಲರಿಗೆ ತಿಳಿಯಿತು.
--------------------------------
ಕೀರ್ತನೆ : 40 : 2, 5, 7-8, 8-9, 10
 ಪ್ರಭೂ, ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ
2 : ಮೇಲೆತ್ತಿದನು ವಿನಾಶದ ಕೆಸರಿಂದ, ಕರಾಳ ಕೂಪದಿಂದ | ಗೋರ್ಕಲ್ಲ ಮೇಲಿರಿಸಿ ಹೆಜ್ಜೆಯಿಡಿಸಿದನು ಅತಿ ಧೈರ್ಯದಿಂದ ||
3 : ಬರಿಸಿದನು ನವಗೀತೆಯನು, ದೇವಸ್ತುತಿಯನು ನನ್ನ ಬಾಯಲಿ | ಇದ ಕಂಡವರು ಭಯಪಡುವರು, ಇಡುವರು ಭರವಸೆ ಪ್ರಭುವಿನಲಿ ||
4 : ಪ್ರಭುವಿನಲ್ಲೆ ಭರವಸೆ ಇಟ್ಟು ನಡೆವಾತನು ಧನ್ಯನು | ಗರ್ವಿಗಳನು, ಸುಳ್ಳುದೇವರನು, ಹಿಂಬಾಲಿಸನವನು ||
5 : ಪ್ರಭು, ಎನ್ನ ದೇವ, ನಿನಗೆ ಸಮಾನತೆ ಎಲ್ಲಿಯದು | ನೀನೆಸಗಿದ ಪವಾಡ ಪ್ರಯೋಜನಗಳೆನಿತು | ಅಗಣಿತವಾದವುಗಳ ವಿವರ ಅಸದಳವಾದುದು ||
6 : ಬೇಡವಾದವು ನಿನಗೆ ಯಜ್ಞಾರ್ಪಣೆ, ಬಲಿಕಾಣಿಕೆ | ಬಯಸಿಲ್ಲ ನೀ ಹೋಮವನೆ, ಪರಿಹಾರಕ ಬಲಿಯನೆ | ಶ್ರವಣಶಕ್ತಿಯನು ಅನುಗ್ರಹಿಸಿದೆ ನೀನು ನನಗೆ ||
7 : ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ | ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? ||
8 : ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ | ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ”||
9 : ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ || ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ ||
10 : ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು | ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು | ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು ||
--------------------------
ಶುಭಸಂದೇಶ - ಮಾರ್ಕ 1: 29 - 39
29 : ಯೇಸುಸ್ವಾಮಿ ಪ್ರಾರ್ಥನಾ ಮಂದಿರದಿಂದ ಹೊರಟು ಯಕೋಬ ಮತ್ತು ಯೊವಾನ್ನನ ಸಂಗಡ ಸಿಮೋನ ಹಾಗೂ ಅಂದ್ರೆಯನ ಮನೆಗೆ ಹೋದರು.
30 : ಸಿಮೋನನ ಅತ್ತೆ ಜ್ವರದಿಂದ ಮಲಗಿದ್ದಳು. ಇದನ್ನು ಯೇಸುವಿಗೆ ತಿಳಿಸಿದರು. ಯೇಸು ಆಕೆಯ ಬಳಿಗೆ ಹೋಗಿ ಕೈಹಿಡಿದು ಎಬ್ಬಿಸಿದರು. ಜ್ವರ ಬಿಟ್ಟುಹೋಯಿತು.
31 : ಆಕೆ ಅವರೆಲ್ಲರನ್ನು ಸತ್ಕರಿಸಿದಳು.
32 : ಸಂಜೆ ಸೂರ್ಯ ಮುಳುಗಿದ ಮೇಲೆ ಜನರು ರೋಗಿಗಳನ್ನೂ ದೆವ್ವಹಿಡಿದವರನ್ನೂ ಯೇಸುವಿನ ಬಳಿಗೆ ಕರೆತಂದರು.
33 : ಊರಿಗೆ ಊರೇ ಆ ಮನೆಯ ಬಾಗಿಲಲ್ಲಿ ನೆರೆಯಿತು.
34 : ನಾನಾ ರೋಗಗಳಿಂದ ನರಳುತ್ತಿದ್ದವರನ್ನು ಯೇಸು ಗುಣಪಡಿಸಿದರು. ದೆವ್ವ ಹಿಡಿದವರಿಂದ ದೆವ್ವ ಬಿಡಿಸಿದರು. ತಾವು ಯಾರೆಂಬುದನ್ನು ದೆವ್ವಗಳು ಅರಿತಿದ್ದುದರಿಂದ ಯೇಸು ಅವುಗಳಿಗೆ ಮಾತನಾಡಲು ಅವಕಾಶಕೊಡಲಿಲ್ಲ. 
35 : ಮುಂಜಾನೆ ಬೆಳಕು ಹರಿಯುವ ಮುನ್ನ ಯೇಸುಸ್ವಾಮಿ ಎದ್ದು ಏಕಾಂತ ಪ್ರದೇಶಕ್ಕೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದರು.
36 : ಇತ್ತ, ಸಿಮೋನನೂ ಅವನ ಜೊತೆಗಾರರೂ ಯೇಸುವನ್ನು ಹುಡುಕಿಕೊಂಡು ಹೋದರು. ಅವರನ್ನು ಕಂಡಕೂಡಲೇ, “ಎಲ್ಲರು ತಮ್ಮನ್ನೇ ಹುಡುಕುತ್ತಿದ್ದಾರೆ,” ಎಂದು ತಿಳಿಸಿದರು.
37 : ಅದಕ್ಕೆ ಯೇಸು, “ಅಕ್ಕಪಕ್ಕದ ಊರುಗಳಿಗೆ ಹೋಗೋಣ.
38 : ಅಲ್ಲೂ ನಾನು ಶುಭಸಂದೇಶವನ್ನು ಸಾರಬೇಕು. ನಾನು ಬಂದಿರುವುದು ಈ ಉದ್ದೇಶಕ್ಕಾಗಿಯೇ,” ಎಂದರು.
39 : ಅನಂತರ ಯೇಸು ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಪ್ರಬೋಧಿಸುತ್ತಾ ದೆವ್ವಗಳನ್ನು ಬಿಡಿಸುತ್ತಾ ಬಂದರು
----------------------
ಚಿಂತನೆ
ಮಾರ್ಕನ ಶುಭಸಂದೇಶ ಮೊದಲು ಬರೆಯಲ್ಪಟ್ಟ ಶುಭಸಂದೇಶ. ಎಲ್ಲೂ ಉತ್ಪ್ರೇಕ್ಷೆಯಿಲ್ಲದೆ ಇದ್ದುದನ್ನು ಇದ್ದಂತೆ ನಿರೂಪಿಸುವುದು ಮಾರ್ಕನ ಶೈಲಿ. ಈ ಶುಭಸಂದೇಶ ಪ್ರಾರಂಭ ಕೂಡ ಇದೇ ಧಾಟಿಯಲ್ಲಿದೆ. ಯೇಸು ದೀಕ್ಷಾಸ್ನಾನ ಪಡೆದು ಸೈತಾನನಿಂದ ಪರಿಶೋಧಿತರಾಗಿ, ಗಲಿಲೇಯದಲ್ಲಿ ಪ್ರಬೋಧನೆ ಪ್ರಾರಂಭಿಸಿ, ಪ್ರಥಮ ಶಿಷ್ಯರನ್ನು ಆಯ್ಕೆಮಾಡಿ, ದೆವ್ವಗಳ ಬಾಯಿಂದ ತನ್ನ ಬಗ್ಗೆ ಕೇಳಿಸಿಕೊಂಡು ಈಗ ರೋಗಿಗಳನ್ನು ಗುಣಪಡಿಸಲು ಪ್ರಾರಂಭಿಸುತ್ತಾರೆ.  ಮೊತ್ತಮೊದಲು ಅವರು ಗುಣಪಡಿಸುವುದು ಪೇತ್ರನ ಅತ್ತೆಯನ್ನು. ಯೆಹೂದ್ಯರಲ್ಲಿ ಹೆಣ್ಣು ಮತ್ತು ಕಾಯಿಲೆ ಎರಡೂ ಅಶುದ್ಧವಾದುವು. ದೇವರ ಶಾಪದಿಂದ ಬಂದವು ಎಂಬ ನಂಬಿಕೆ ಇತ್ತು. ಹೆಣ್ಣಿನ ಸ್ಥಾನಮಾನ ಕೂಡ ತೀರಾ ಕೆಳಮಟ್ಟದಲ್ಲಿತ್ತು. ಹಾಗೆ ಯೇಸು ಮೊದಲು ಸ್ತ್ರಿಯೊಬ್ಬಳನ್ನು ಸ್ಪರ್ಶಿಸಿ ಗುಣಪಡಿಸುತ್ತರೆ. ದೈವಾನುಗ್ರಹಕ್ಕೆ ಅವಳನ್ನು ಭಾಗಿಯಾಗಿಸುತ್ತಾರೆ. ಈ ಶುಭಸಂದೇಶ ಕೇಳಿಸಿಕೊಳ್ಳುವ ನಾವು ಹೆಣ್ಣನ್ನು ಎಷ್ಟು ಸಮಾನವಾಗಿ ಪರಿಗಣಿಸಿದ್ದೇವೆ, ನಮ್ಮೊಳಗಿಂದ ಎಷ್ಟು ಮಂದಿಗೆ ದೈವಾನುಗ್ರಹ ಹರಿದುಹೋಗಿದೆ? ನಾವು ಒಂದು ದಿನದಲ್ಲಿ ಒಬ್ಬರಿಗಾದರೂ ಸಾಂತ್ವನ ಕೋರುತ್ತೇವೆಯೇ ಎಂದು ಯೋಚಿಸಬೇಕಾಗಿದೆ.
-------------------------
"ಮಾತಾಡು ಪ್ರಭುವೇ, ನಿನ್ನ ಸೇವಕನು ಕೇಳುತ್ತಿದ್ದಾನೆ"

ದೇವರು ನಮ್ಮ ಕನಸು, ಕಲ್ಪನೆ, ಚಿಂತನೆ, ಭಾವನೆ, ಮನಸ್ಸಾಕ್ಷಿ, ಮೌಲ್ಯಗಳು, ಪ್ರಾರ್ಥನೆ, ಕಾಯಕ, ಘಟನೆಗಳು, ಸಂಬಂಧಗಳು-ಒಟ್ಟಾಗಿ ನಮ್ಮ ಅನುಭವಗಳ ಮುಖೇನ ನಮ್ಮೊಡನೆ ಸಂಭಾಷಿಸುತ್ತಾರೆ ಎಂಬುದು ಸಾಂಪ್ರದಾಯಿಕ ಗ್ರಹಿಕೆ. ಊಹಿಸಲಾಗದ, ಅನಂತ ಅಪಾರ ವಿಶ್ವದ ಸೃಷ್ಟಿಕರ್ತನು ಅತ್ಯಲ್ಪನಾ/ಳಾದ ನನ್ನೊಡನೆ ಮಾತನಾಡಲು ಇಚ್ಛಿಸುವರೇ ಎಂದು ಸಂಶಯಿಸಬಹುದು. ಇಂದಿನ ವಾಚನಗಳನ್ನು ಆಲಿಸಿದಾಗ ದೇವರು ನಮ್ಮ ಗೆಳೆತನವನ್ನು ಆಶಿಸುತ್ತಾರೆ ಎಂಬುದು ಖಚಿತವಾಗುತ್ತದೆ. ಶುಭಸಂದೇಶದಲ್ಲಿ ಪ್ರಭುಯೇಸು ಬೆಳಕು ಹರಿಯುವ ಮುನ್ನ ಏಕಾಂತ ಪ್ರದೇಶದಲ್ಲಿ ಸರ್ವೇಶ್ವರನ ಸನ್ನಿಹಿತವನ್ನು ಬಯಸಿ ಪ್ರಾರ್ಥಿಸುತ್ತಾರೆ. ಮೊದಲನೆಯ ವಾಚನದಲ್ಲಿ ದೇವರು ಸಮುವೇಲನೊಂದಿಗೆ ನೇರವಾಗಿ ಮಾತನಾಡುತ್ತಾರೆ. ದೇವರು ನನ್ನೊಂದಿಗೆ ನಾನಾ ಸ್ವರೂಪದಲ್ಲಿ ಮಾತಾಡುವುದನ್ನು ನಾನು ಗುರುತಿಸಬಹುದೇ? ಬಾಲಕನಾದ ಸಮುವೇಲನು ಏಲಿಯ ಸಹಾಯದಿಂದ ಸರ್ವೇಶ್ವರನ ಧ್ವನಿಯನ್ನು ಗುರುತಿಸುತ್ತಾನೆ. ಏಲಿಯ ಸಲಹೆಯನ್ನು ಪಾಲಿಸಿದ ಸಮುವೇಲನೊಂದಿಗೆ ನಾವು ಕೂಡ "ಮಾತಾಡು ಕರ್ತನೇ, ನಿನ್ನ ಸೇವಕನು ಕೇಳುತ್ತಿದ್ದಾನೆ" ಎಂದು ಪ್ರಾರ್ಥಿಸೋಣ
-------------------------
`ನಮ್ಮನ್ನು ಕೈಹಿಡಿದು ಸರಿದಾರಿಯಲ್ಲಿ ನಡೆಸು ಎಂದು ಆರ್ತಭಾವದಿಂದ ಬೇಡುವುದು.’
ಕ್ರಿಸ್ತನ ದಿನಚರಿಯ ಪಕ್ಷಿನೋಟವೇ ಈ ದಿನದ ಶುಭಸಂದೇಶದ ವಾಚನ. ಕ್ರಿಸ್ತ ಸಿಮೋನನ ಅತ್ತೆಯನ್ನು ಜ್ವರದಿಂದ ಗುಣಪಡಿಸಿ, ಅವಳ ಪ್ರೀತಿಯ ಸತ್ಕಾರವನ್ನು ಪಡೆದು, ನಾನಾ ರೋಗಗಳಿಂದ ನರಳುತ್ತಿದ್ದವರನ್ನು ಗುಣಪಡಿಸಿ, ದೆವ್ವ ಹಿಡಿದವರಿಂದ ದೆವ್ವ ಬಿಡಿಸಿ ಕೊನೆಗೆ ಏಕಾಂತ ಸ್ಥಳದಲ್ಲಿ ಪ್ರಾರ್ಥಿಸಿ, ದೇವಾಲಯಗಳಲ್ಲಿ ಪ್ರಬೋಧಿಸುತ್ತಾ ದೇವಕಾರ್ಯದಲ್ಲಿ ಮುಂದುವರಿಯುವುದನ್ನು ಅದು ತಿಳಿಸುತ್ತದೆ.
ಕ್ರಿಸ್ತನು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವಂತೆ ಈ ವಾಚನದಲ್ಲಿ ಕಂಡುಬರುತ್ತಾರೆ. ಕ್ರಿಸ್ತನ ಈ ದಿನಚರಿಯಲ್ಲಿ ಕಂಡು ಬರುವ ಮೂರು ಅಂಶಗಳ ಬಗ್ಗೆ ಯೋಚಿಸೋಣ: 
1. ಗುಣಪಡಿಸುವುದು
2. ಪ್ರಾರ್ಥನೆ
3.  ಶುಭಸಂದೇಶದ ಬೋಧನೆ
ಗುಣಪಡಿಸುವುದು : ಕ್ತಿಸ್ತನ ಗುಣಪಡಿಸುವ ಕಾರ್ಯ ನಮ್ಮದಾಗಬೇಕು. ಇನ್ನೊಬ್ಬರನ್ನು ಗುಣಪಡಿಸಬೇಕಾದವರು ಮೊದಲು ತಾವು ಗುಣಮುಖರಾಗಬೇಕೆಂಬುದು ಲೋಕಾನುಭವದ ಮಾತು. ಕ್ರಿಸ್ತನಲ್ಲಿ ವಿಶ್ವಾಸವಿಟ್ಟು ಪ್ರಾರ್ಥಿಸಿದರೆ ಮಾನಸಿಕವಾಗಿಯೂ, ಶಾರೀರಿಕವಾಗಿಯೂ ನಾವು ಗುಣವಂತರಾಗುತ್ತೇವೆ. ಅದು ಸಮಾಜದ ಅಸ್ವಾಸ್ಥ್ಯವನ್ನು ಸರಿಪಡಿಸಲು ನಮಗೆ ಸಹಕಾರಿಯಾಗುತ್ತದೆ. ಜಾತಿಭೇದ, ಯುದ್ಧ ಗಲಾಟೆಗಳು ತುಂಬಿಹೋಗಿರುವ ಜಗತ್ತನ್ನು ಗುಣಪಡಿಸಬೇಕಾಗಿದೆ. ಅದಕ್ಕಿರುವುದು ಒಂದೇ ಒಂದು ಔಷಧಿ: ಪ್ರೀತಿ. ಪ್ರೀತಿಯಿಂದ ಮಾತ್ರ ನಾವು ಸರ್ವವನ್ನೂ ಗೆಲ್ಲಬಹುದು. ದೇವರ ಸಹಾಯದಿಂದ ನಮ್ಮನ್ನೇ ಗುಣಪಡಿಸಿಕೊಳ್ಳೋಣ, ಇತರರನ್ನು ಸಹ ಗುಣಪಡಿಸೋಣ. 

ಪ್ರಾರ್ಥನೆ : ಕ್ರಿಸ್ತನಿಗೆ ಜನರೊಂದಿಗೆ ಬೆರೆತು, ಉಳಿದು, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜನರೊಂದಿಗೆ ಇರುವುದು ಎಷ್ಟು ಮುಖ್ಯವಾಗಿತ್ತೋ ಪರಲೋಕದ ತನ್ನ ತಂದೆಯೊಂದಿಗಿರುವುದೂ ಅಷ್ಟೇ ಮುಖ್ಯವಾಗಿತ್ತು. ಹೌದು, ಆಧ್ಯಾತ್ಮಿಕವಾಗಿ ಸದೃಢವಾಗಲು, ನವೀಕರಣಗೊಳ್ಳಲು ಪ್ರಾರ್ಥನೆ ನಮಗೆ ಬೇಕೇ ಬೇಕು. ಪ್ರಾರ್ಥನೆ ಎಂದರೆ ಬೇಡುವುದು, ಮೊರೆಯಿಡುವುದು, ದೇವರ ಸ್ತುತಿಮಾಡುವುದು, ಆರಾಧಿಸುವುದು, ಅವರ ಕೃಪೆಯನ್ನು ಕೋರುವುದು. ಒಟ್ಟಾರೆ ಪ್ರಾರ್ಥನೆಯೆಂದರೆ ಆತ್ಮ- ಪ್ರರಮಾತ್ಮನ ನಡುವಿನ ಸಂಭಾಷಣೆ, ಮಾತುಕತೆ, ಮೌನ.
ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಪ್ರಾರ್ಥನೆ ಉಪವಾಸಗಳನ್ನು ಸಾಧನಾಮಾರ್ಗದ ಅಸ್ತ್ರಗಳನ್ನಾಗಿಸಿಕೊಂಡು, ತಮ್ಮ ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಎಂತಹುದೇ ಕಠಿಣ ಪ್ರಸಂಗ ಎದುರಾದಾಗ ಉಪವಾಸ ಮತ್ತು ಪ್ರಾರ್ಥನೆಗಳಿಂದ ಅಂತರಂಗ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುತ್ತಿದ್ದರು, ಅಂತರಾತ್ಮನ ಧ್ವನಿ ಹೇಳಿದಂತೆಯೇ ಅವರು ನಡೆದುಕೊಳ್ಳುತ್ತಿದ್ದರು. ಅವರ ಈ ಶಕ್ತಿಗೆ ಇಡೀ ಮನುಕುಲವೇ ತಲೆ ಬಾಗುವಂತೆ ಆಯಿತಲ್ಲವೇ? ಪ್ರಾರ್ಥನೆಯೆಂಬುದು ನಮ್ಮೆಲ್ಲ ಪಾಪ ಪುಣ್ಯಗಳನ್ನು ದೇವರ ಮುಂದೆ ಅರಿಕೆ ಮಾಡಿ ಶುದ್ಧರಾಗುವುದು; ನಮ್ಮನ್ನು ಕೈಹಿಡಿದು ಸರಿದಾರಿಯಲ್ಲಿ ನಡೆಸು ಎಂದು ಆರ್ತಭಾವದಿಂದ ಬೇಡುವುದು.

ಬೋಧನೆ : ಆಂಗ್ಲ ಭಾಷೆಯ apostle ಕನ್ನಡದಲ್ಲಿ ಪ್ರೇಷಿತ ಎಂದೂ ಅನುವಾದಿಸಲಾಗಿದೆ. ಪ್ರೇಷಿತ ಎಂದರೆ ಕಳುಹಿಸಲ್ಪಟ್ಟವನು ಎಂದರ್ಥ. ಶಿಷ್ಯರು ದೆವ್ವಗಳನ್ನು ಹೊರಗಟ್ಟಿ, ರೋಗಿಗಳನ್ನು ಗುಣಪಡಿಸುವುದರ ಮೂಲಕ ಶುಭಸಂದೇಶವನ್ನು ಸಾರುವುದರ ಮೂಲಕ ಯೇಸುವಿನ ಕಾರ್ಯದಲ್ಲಿ ಸಹಭಾಗಿಗಳಾಗಿ ಗುರುವಿನ ಯೋಗ್ಯ ಶಿಷ್ಯರೆನಿಸಿಕೊಳ್ಳುತ್ತಾರೆ. ಪೌಲನು ಹೇಳುವಂತೆ ಶುಭಸಂದೇಶವನ್ನು ಸಾರುವುದು ಕೊಚ್ಚಿಕೊಳ್ಳುವುದಕ್ಕಲ್ಲ. ಅದೊಂದು ಕ್ರೈಸ್ತರ ಮೂಲ ಕರ್ತವ್ಯ. ನಾವು ಕೂಡ ಶುಭಸಂದೇಶವನ್ನು ಬೋಧಿಸಲು ಕ್ರಿಸ್ತನಿಂದ ಕರೆಯಲ್ಪಟ್ಟಿದ್ದೇವೆ. ನಾವು ನುಡಿದಂತೆ ನಡೆದಾಗ ಮಾತ್ರ ನಮ್ಮ ಬೋಧನೆಯು ಜನರ ಗ್ರಹಿಕೆಗೆ ಬರುವುದು ಎಂಬ ಸತ್ಯ ನಮಗೆ ಮನದಟ್ಟಾಗಬೇಕು. ನಮ್ಮ ಬೋಧನೆ ನಮ್ಮ ನಡೆನುಡಿಗಳಲ್ಲಿ ಆಕಾರ ಪಡೆದುಕೊಳ್ಳಲಿ. ಮದರ್ ತೆರೇಸಾ ತನ್ನ ನಿಸ್ವಾರ್ಥ ಸೇವಾಕಾರ್ಯಗಳಿಂದ ಕ್ರಿಸ್ತನನ್ನು ಜಗತ್ತಿಗೆ ಬೋಧಿಸಿದ ಮಾದರಿ ನಮ್ಮದಾಗಲೆಂದು ಪ್ರಾರ್ಥಿಸೋಣ. 
-------------------

© 'ದನಿ' ಮಾಧ್ಯಮ ಮನೆ


ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment