Tuesday, 14 January 2020

16 ಜನವರಿ 2020

ಗುರುವಾರ/ ಹಸಿರು/ಸಾಧಾರಣ ಕಾಲದ ಮೊದಲನೆಯ ವಾರ 
1ನೇ ವಾಚನ - 1 ಸಮುವೇಲ 4: 1-11
ಕೀರ್ತನೆ : 44:10-11, 14-15,24-25
ಶುಭಸಂದೇಶ - ಮಾರ್ಕ 1:40 - 45
---------------------
1ನೇ ವಾಚನ - 1 ಸಮುವೇಲ 4: 1-11
1 : ಇಸ್ರಯೇಲರು ಫಿಲಿಷ್ಟಿಯರಿಗೆ ವಿರುದ್ಧ ಯುದ್ಧಕ್ಕೆ ಹೊರಟು ಎಬೆನೆಜೆರಿನ ಸವಿೂಪದಲ್ಲಿ ಪಾಳೆಯ ಮಾಡಿಕೊಂಡರು. ಫಿಲಿಷ್ಟಿಯರು ಬಂದು ಅಫೇಕಿನಲ್ಲಿ ಇಳಿದುಕೊಂಡರು.
2 : ಇವರು ಇಸ್ರಯೇಲರಿಗೆ ಎದುರಾಗಿ ವ್ಯೂಹಕಟ್ಟಿ ಯುದ್ಧ ಮಾಡಿದರು. ಇಸ್ರಯೇಲರು ಸೋತರು. ರಣರಂಗದಲ್ಲಿ ಸುಮಾರು ನಾಲ್ಕು ಸಾವಿರ ಮಂದಿ ಇಸ್ರಯೇಲರನ್ನು ಫಿಲಿಷ್ಟಿಯರು ಸಂಹರಿಸಿದರು.
3 : ಇಸ್ರಯೇಲರು ತಮ್ಮ ಪಾಳೆಯಕ್ಕೆ ಹಿಂದಿರುಗಿದ ಮೇಲೆ ಅವರೊಡನೆ ಅವರ ಹಿರಿಯರು, “ಸರ್ವೇಶ್ವರ ಈ ದಿನ ನಮ್ಮನ್ನು ಫಿಲಿಷ್ಟಿಯರಿಂದ ಅಪಜಯಪಡಿಸಿದ್ದೇಕೆ? ಶಿಲೋವಿನಿಂದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ತರೋಣ; ಅವರು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಯಿಂದ ನಮ್ಮನ್ನು ರಕ್ಷಿಸಲಿ,” ಎಂದು ಸಮಾಲೋಚಿಸಿದರು.
4 : ಅಂತೆಯೇ ಜನರನ್ನು ಕಳುಹಿಸಿ ಕೆರೂಬಿಗಳ ಮಧ್ಯದಲ್ಲಿ ಆಸೀನರಾಗಿರುವ ಸೇನಾಧೀಶ್ವರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ತರಿಸಿದರು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿ, ಫೀನೆಹಾಸ್ ಎಂಬವರು ದೇವರ ಒಡಂಬಡಿಕೆಯ ಮಂಜೂಷದ ಸಂಗಡ ಇದ್ದರು.
5 : ಸರ್ವೇಶ್ವರನ ಒಡಂಬಡಿಕೆಯ ಮಂಜೂಷ ಪಾಳೆಯಕ್ಕೆ ಬಂದಾಗ ಇಸ್ರಯೇಲರೆಲ್ಲರೂ ಭೂಮಿ ಬಿರಿಯುವಷ್ಟು ಗಟ್ಟಿಯಾಗಿ ಜಯಕಾರ ಮಾಡಿದರು.
6 : ಫಿಲಿಷ್ಟಿಯರು ಇದನ್ನು ಕೇಳಿ, “ಹಿಬ್ರಿಯರ ಪಾಳೆಯದಲ್ಲಿ ಇಂಥ ಆರ್ಭಟಕ್ಕೆ ಏನು ಕಾರಣ?” ಎಂದು ವಿಚಾರಿಸಿದರು. ಸರ್ವೇಶ್ವರನ ಮಂಜೂಷವು ಪಾಳೆಯಕ್ಕೆ ಬಂದದ್ದೇ ಕಾರಣವೆಂದು ಗೊತ್ತಾಯಿತು.
7 : “ದೇವರು ಇವರ ಪಾಳೆಯಕ್ಕೆ ಬಂದಿದ್ದಾರಂತೆ!” ಎಂದುಕೊಂಡು ಫಿಲಿಷ್ಟಿಯರು ಬಹಳವಾಗಿ ಭಯಪಟ್ಟರು. “ಅಯ್ಯೋ, ಹಿಂದೆ ಹೀಗಿರಲಿಲ್ಲ.
8 : ಅಕಟಾ, ಪ್ರತಾಪವುಳ್ಳ ಈ ದೇವರುಗಳ ಕೈಯಿಂದ ನಮ್ಮನ್ನು ಬಿಡಿಸುವವರಾರು? ಈಜಿಪ್ಟರನ್ನು ಅರಣ್ಯದಲ್ಲಿ ಸಂಪೂರ್ಣವಾಗಿ ನಾಶಮಾಡಿಬಿಟ್ಟ ದೇವರುಗಳು ಇವರೇ ಅಲ್ಲವೆ?
9 : ಫಿಲಿಷ್ಟಿಯರೇ, ಧೈರ್ಯಗೊಳ್ಳಿ; ಶೂರರಾಗಿರಿ! ಇಲ್ಲವಾದರೆ ನಿಮಗೆ ಗುಲಾಮರಾಗಿದ್ದ ಹಿಬ್ರಿಯರಿಗೆ ನೀವೇ ಗುಲಾಮರಾದೀರಿ; ಆದಕಾರಣ ಶೌರ್ಯದಿಂದ ಯುದ್ಧಮಾಡಿ!” ಎಂದು ಹೇಳಿಕೊಂಡು ಯುದ್ಧಮಾಡಿದರು.
10 : ಇಸ್ರಯೇಲರು ಸೋತು ತಮ್ಮ ತಮ್ಮ ಮನೆಗಳಿಗೆ ಓಡಿಹೋದರು. ಮಹಾ ಸಂಹಾರವಾಯಿತು; ಇಸ್ರಯೇಲರಲ್ಲಿ ಮೂವತ್ತು ಸಾವಿರ ಕಾಲಾಳುಗಳು ಮಡಿದರು.
11 : ದೇವರ ಮಂಜೂಷ ಶತ್ರುವಶವಾಯಿತು. ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ ಹತರಾದರು.
---------------------------
ಕೀರ್ತನೆ : 44:10-11, 14-15,24-25
 ನಿನ್ನ ಚಲ ಪ್ರೇಮದಿಂದ ನಮ್ಮನು ಉದ್ಧರಿಸು 
10 : ಶತ್ರುಗಳಿಗೆ ಬೆಂಗೊಟ್ಟು ನಾವೋಡುವಂತೆ ಮಾಡಿರುವೆ / ಹಗೆಗಳು ಹಾಯಾಗಿ ಸೊತ್ತನು ಸೂರೆಮಾಡ ಬಿಟ್ಟಿರುವೆ //
11 : ನಮ್ಮ ನೊಪ್ಪಿಸಿರುವೆ ವಧ್ಯಸ್ಥಾನಕೊಯ್ದ ಕುರಿಗಳಂತೆ / ಚದರಿಸಿಬಿಟ್ಟಿರುವೆ ನಮ್ಮನು ಅನ್ಯಜನಾಂಗಗಳ ಮಧ್ಯೆ //
14 : ಅನ್ಯಜನ ನಮ್ಮ ನಣಕಿಸಿ ತಲೆಯಾಡಿಸುವಂತೆ ಮಾಡಿರುವೆ / ಅನ್ಯಾಯಕ್ಕೆ ಅಡ್ಡಹೆಸರಾಗುವಂತೆ ನಮ್ಮನು ಬಿಟ್ಟಿರುವೆ //
15 : ನನ್ನ ಕಣ್ಮುಂದಿದೆ ಈ ಅವಮಾನ ದಿನವೆಲ್ಲ / ಲಜ್ಜೆಯಿಂದ ನಾ ಮುಖ ಮುಚ್ಚಿಕೊಳ್ಳುವಂತಾಗಿದೆಯಲ್ಲಾ //
24 : ಮರೆಸಿಕೊಂಡಿರುವೆಯೇಕೆ ನಿನ್ನ ಮುಖವನು?/ ಮರೆತಿರುವೆಯೇಕೆ ನಮ್ಮ ಹಿಂಸೆ ಬಾಧೆಯನು?//
25 : ಮಣ್ಣುಪಾಲಾಗಿದೆ ನಮ್ಮ ಪ್ರಾಣ / ನೆಲ ಕಚ್ಚಿಕೊಂಡಿದೆ ನಮ್ಮ ದೇಹ //
26 : ಎದ್ದು ಬಂದು ಪ್ರಭು ನಿನ್ನ ನೆರವನ್ನೊದಗಿಸು / ನಿನ್ನ ಚಲ ಪ್ರೇಮದಿಂದ ನಮ್ಮನು ಉದ್ಧರಿಸು //
---------------------
ಶುಭಸಂದೇಶ - ಮಾರ್ಕ 1:40 - 45
40 : ಒಮ್ಮೆ ಕುಷ್ಠರೋಗಿಯೊಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, ಮೊಣಕಾಲೂರಿ, “ತಾವು ಮನಸ್ಸುಮಾಡಿದ್ದಲ್ಲಿ ನನ್ನನ್ನು ಗುಣ ಮಾಡಬಲ್ಲಿರಿ,” ಎಂದು ದೈನ್ಯದಿಂದ ಬೇಡಿಕೊಂಡನು. ಯೇಸುವಿನ ಮನ ಕರಗಿತು. ಅವರು ಕೈಚಾಚಿ, ಕುಷ್ಠರೋಗಿಯನ್ನು ಮುಟ್ಟಿ,
41 : “ಖಂಡಿತವಾಗಿ ನನಗೆ ಮನಸ್ಸಿದೆ, ನಿನಗೆ ಗುಣವಾಗಲಿ,” ಎಂದರು.
42 : ತಕ್ಷಣ ಅವನ ಕುಷ್ಠವು ಮಾಯವಾಯಿತು. ಅವನು ಗುಣಹೊಂದಿದನು.
43 : ಯೇಸು ಅವನಿಗೆ, “ಎಚ್ಚರಿಕೆ! ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು.
44 : ಯೇಸು ಅವನಿಗೆ, “ಎಚ್ಚರಿಕೆ! ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು.
45 : ಆದರೆ ಅವನು ಹೋಗಿ ಈ ಸಮಾಚಾರವನ್ನು ಎಲ್ಲೆಲ್ಲೂ ಸಾರಿದನು. ಈ ಕಾರಣ ಯೇಸು ಬಹಿರಂಗವಾಗಿ ಯಾವ ಪಟ್ಟಣದೊಳಕ್ಕೂ ಹೋಗಲು ಆಗಲಿಲ್ಲ. ಆದುದರಿಂದ ನಿರ್ಜನ ಪ್ರದೇಶಗಳಲ್ಲೇ ಇರತೊಡಗಿದರು. ಆದರೂ ಜನರು ನಾಲ್ದೆಸೆಗಳಿಂದ ಅವರು ಇದ್ದೆಡೆಗೆ ಬರುತ್ತಲೇ ಇದ್ದರು.
--------------------
ಚಿಂತನೆ
ನೊಂದವರಿಗೆ ಸಹಾಯಹಸ್ತವನ್ನು ನೀಡೋಣ
ಚರ್ಮದ ಕಾಯಿಲೆಯಿಂದ ವಿಕಾರವಾಗಿ ಸಮಾಜದಿಂದ ಬಹಿಷ್ಕೃತನಾಗಿದ್ದ ಕುಷ್ಠರೋಗಿಯ ದುಸ್ಥಿತಿಯನ್ನು ನೋಡಿ ಯೇಸುವಿನ ಮನ ಕರಗುತ್ತದೆ. ವ್ಯಕ್ತಿಯ ಆರ್ತ ಕೂಗು ಯೇಸುವಿನ ದಯೆಯ ಹೃದಯವನ್ನು ನಾಟುತ್ತದೆ. ತಕ್ಷಣವೆ ಯಾರೂ ಸ್ಪರ್ಶಿಸದ ಆತನನ್ನು ಕೈಚಾಚಿ ಮುಟ್ಟಿ ಯೇಸುವು ಗುಣಪಡಿಸುತ್ತಾರೆ. ಕಳೆದ ವರ್ಷ ಧನಬಾದ್ನಲ್ಲಿರುವ ಡೇಮಿಯನ್ ಸಮಾಜ ಕಲ್ಯಾಣ ಕೇಂದ್ರಕ್ಕೆ ಭೇಟಿ ನೀಡಿದ್ದಾಗ ಕುಷ್ಠರೋಗದಿಂದ ನರಳುತ್ತಿದ್ದರೂ ಪೂರ್ಣಚಂದ್ರನಂತೆ ನಗುತ್ತಿದ್ದ ಸಹವಾಸಿಗಳ ಬೆರಳುಗಳಿಲ್ಲದ ಕೈಗಳನ್ನು ಕುಲುಕಲು ನಾನು ಹಿಂಜರಿಯುತ್ತಿದ್ದೆ. ಅವರಿಗೆ ವಿದಾಯ ಹೇಳುವಾಗ ಅವರೂ ನಮ್ಮಂತೆ ಎಂದರಿತು ಗಟ್ಟಿಯಾಗಿ ಕೈಕುಲುಕಿದ ಕ್ಷಣಗಳನ್ನು ನೆನೆದಾಗ ಈಗಲೂ ಕಣ್ಣುತುಂಬಿ ಬರುತ್ತೆ. ಸಾಂಕ್ರಾಮಿಕ ರೋಗಿಗಳು ಇಳೆಯಲ್ಲಿಯೇ ನರಕಯಾತನೆಯನ್ನು ಅನುಭವಿಸುತ್ತಾರೆ. ಅವರ ಕುಟುಂಬಸ್ಥರು ಸಾಮಾಜಿಕ ಧೋರಣೆಗಳಿಗೆ ಬಲಿಯಾಗಿ ತಮ್ಮ ಮನೆಯವರನ್ನೇ ಬೀದಿಪಾಲು ಮಾಡುತ್ತಾರೆ. ಅಂತಹವರನ್ನು ಕಂಡಾಗ ಯೇಸುವಿನ ಮನ ಕರಗುತ್ತದೆ ಕ್ರೈಸ್ತರಾದ ನಾವು ಯೇಸುವಿನಂತೆ ನೊಂದ ಹೃದಯಗಳಿಗೆ ಸ್ಪಂದಿಸಬೇಕು. ಸೇವೆಗೈಯುವ ಕರಗಳು ಮಂತ್ರ ಪಠಿಸುವ ತುಟಿಗಳಿಗಿಂತ ಪವಿತ್ರವಾದವು. ಪ್ರಾರ್ಥನೆಯಲ್ಲಿ ಕಾಯಕವೆ ಪ್ರೀತಿ; ಕಾಯಕದಲ್ಲಿ ಪ್ರೀತಿಯೇ ಸೇವೆ. ನಮ್ಮ ಹೃದಯಗಳನ್ನು ತನ್ನ ಹೃದಯದಂತೆ ರೂಪಿಸಲು ಕಲಿಸೆಂದು ಕ್ರಿಸ್ತನಲ್ಲಿ ಪ್ರಾರ್ಥಿಸಿ, ನೊಂದವರಿಗೆ ಸಹಾಯಹಸ್ತವನ್ನು ನೀಡೋಣ.
-----------------
ಪರ-ಪ್ರೀತಿ, ಪರ-ಕಾಳಜಿ
ಇಂದಿನ ಶುಭಸಂದೇಶದಲ್ಲಿ ಎರಡು ಅಂಶಗಳನ್ನು ಗಮನಿಸೋಣ. 
1) ಯೇಸುವು ಕುಷ್ಠರೋಗಿಯ ಮೇಲೆ ತೋರುವ ಕನಿಕರ ಹಾಗೂ 
2) ಕುಷ್ಠರೋಗಿಯು ಯೇಸುವಿನ ಮೇಲಿಟ್ಟಿರುವ ವಿಶ್ವಾಸ. 

ಆ ಕಾಲದಲ್ಲಿ ಕುಷ್ಠವು ಒಂದು ಭಯಾನಕ ಮಾರಕ ರೋಗವಾಗಿತ್ತು. ದೇವರ ಶಾಪವೆಂದೇ ಪರಿಗಣಿಸಲಾಗಿತ್ತು. ಈ ರೋಗಕ್ಕೆ ತುತ್ತಾದವರನ್ನು ಊರಿನಿಂದ ಹೊರಗಿಡುತ್ತಿದ್ದರು. ಜನರ ಮತ್ತು ಸ್ವಂತ ಮನೆಯವರ ಸಂಪರ್ಕವೂ ಅವರಿಗೆ ಇರುತ್ತಿರಲಿಲ್ಲ. ಯಾಜಕಕಾಂಡ 13:45-46ರಲ್ಲಿ ಇರುವಂತೆ, ``ಯಾರಲ್ಲಿ ಕುಷ್ಠದ ಗುರುತು ಕಾಣುವುದೋ ಆ ವ್ಯಕ್ತಿ ತನ್ನ ಬಟ್ಟೆಗಳನ್ನು ಹರಿದುಕೊಂಡು, ತಲೆಯನ್ನು ಕೆದರಿಕೊಂಡು, ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು, `ನಾನು ಅಶುದ್ದನು, ಅಶುದ್ದನು,' ಎಂದು ಕೂಗಿಕೊಳ್ಳಬೇಕು.'' ಇಂತಹ ಹೀನಸ್ಥಿತಿಯಲ್ಲಿದ್ದ ರೋಗಿಯು ವಿಶ್ವಾಸದಿಂದ ಕ್ರಿಸ್ತನ ಬಳಿ ಬಂದಾಗ ಕ್ರಿಸ್ತ ಆತನ ಚಿಂತಾಜನಕ ಸ್ಥಿತಿಯನ್ನು ಮತ್ತು ವಿಶ್ವಾಸವನ್ನು ಕಂಡು ಗುಣಪಡಿಸುತ್ತಾರೆ. ಕ್ರಿಸ್ತನ ಪರ-ಪ್ರೀತಿ, ಪರ-ಕಾಳಜಿ ನಮ್ಮಲ್ಲೂ ಮೂಡಲಿ ಎಂದು ಪ್ರಾರ್ಥಿಸೋಣ.
---------------------------------

ಭಾರತದ ಸಂತ ಜೋಸೆಫ್ ವಾಜ್ 

ಇಂದು ಧರ್ಮಸಭೆಯು ಸಂತ ಜೋಸೆಫ್ ವಾಜ್ ಅವರ ಹಬ್ಬವನ್ನು ಆಚರಿಸುತ್ತಿದೆ. ಶ್ರೀಲಂಕಾವನ್ನು ಕ್ಯಾಲ್ವಿನಿಸ್ಟರ ಹಿಡಿತದಿಂದ ತಪ್ಪಿಸಿ ಕಥೋಲಿಕರು ನಿರಾತಂಕವಾಗಿ ಬದುಕಲು ಸಾಧ್ಯವಾಗುವಂತೆ ಮಾಡಿದ ಭಾರತದ ಸಂತ, ಸಂತ ಜೋಸೆಫ್ ವಾಜ್. ಸುಮಾರು 5೦ ವರ್ಷಗಳ ಈ ಅವಧಿಯಲ್ಲಿ ಶ್ರೀಲಂಕಾದಲ್ಲಿ ಒಬ್ಬನೇ ಒಬ್ಬ ಕಥೋಲಿಕ ಧರ್ಮಗುರು ಇರಲಿಲ್ಲ. ಇಂಥಾ ಸ್ಥಿತಿಯಲ್ಲಿ ಪವಿತ್ರಾತ್ಮರ ಪ್ರೇರಣೆಯಿಂದ ಪ್ರಾಣವನ್ನೂ ಲೆಕ್ಕಿಸದೆ ಶ್ರೀಲಂಕಾದ ಉದ್ವಿಗ್ನ ಪರಿಸ್ಥಿತಿಯಲ್ಲೂ ಕಥೋಲಿಕ ಧರ್ಮ ಉಳಿಸುವುದಕ್ಕಾಗಿ ದಿಟ್ಟ ಹೆಜ್ಜೆಯಿಟ್ಟವರು ಸಂತ ಜೋಸೆಫ್‌ ವಾಜ್. ಈ ಕಾರಣಕ್ಕಾಗಿ ಇಂದಿನ ಶ್ರೀಲಂಕಾ ಕಥೋಲಿಕ ಚರ್ಚ್ ಜೋಸೆಫ್ ವಾಜ್‌ರವರಿಗೆ ಋಣಿಯಾಗಿದೆ. 1711ರ ಜನವರಿ 16ರಂದು ಜೋಸೆಫ್ ವಾಜ್ ಕೊನೆಯುಸಿರೆಳೆಯುತ್ತಾರೆ. ಇದಾಗಿ ಸರಿಯಾಗಿ 284 ವರ್ಷಗಳ ನಂತರ ಜನವರಿ 21, 1995ರಲ್ಲಿ ಜಗದ್ಗುರು 2ನೇ ಜಾನ್ ಪಾಲರು ಅವರನ್ನು `ಪುನೀತ' ಪದವಿಗೇರಿಸಿತ್ತಾರೆ. ಜೂನ್ 14, 2೦15ರಲ್ಲಿ ಜಗದ್ಗುರು ಫ್ರಾನ್ಸಿಸ್‌ರವರು ಅವರನ್ನು ಸಂತರ ಪದವಿಗೇರಿಸುತ್ತಾರೆ.
-------------------------------

ಇಂದಿನ ಸಂತರು

ಪುನೀತ ಸಂತ ಜೋಸೆಫ್ ವಾಜ್ (1651-1711)

ಜೋಸೆಫ್ ವಾಜ್‌ರವರು, 1651ರಲ್ಲಿ ಗೋವಾದ ಬೆನೋಲಿಮ್ ಎಂಬ ಗ್ರಾಮದಲ್ಲಿ ಜನಿಸಿದರು. ಇವರು ತಮ್ಮ ತಾಯಿಗೆ ಮೂರನೇ ಮಗ. ತಂದೆ, ತಾಯಿಗಳಿಬ್ಬರೂ ನಿಷ್ಠೆಯಲ್ಲಿ ಕ್ಯಾಥೊಲಿಕ್ಕರು. ವಾಜ್‌ರವರು ಪ್ರತಿಭಾವಂತರಾಗಿದ್ದರಿಂದ ಪೋರ್ಚುಗೀಸ್ ಹಾಗೂ ಲ್ಯಾಟಿನ್ ಭಾಷೆಗಳನ್ನು ಚೆನ್ನಾಗಿ ಕಲಿತರು, ಅವರು, ಶಿಕ್ಷಣದಲ್ಲಿ ತ್ವರಿತವಾಗಿ ಪ್ರಗತಿ ಹೊಂದಿದ ಕಾರಣ, ತಂದೆಯವರು ಅವರನ್ನು ಉನ್ನತ ವಿದ್ಯಾರ್ಜನೆಗಾಗಿ ಗೋವಾ ಪಟ್ಟಣಕ್ಕೆ ಕಳುಹಿಸುತ್ತಾರೆ. ಅಲ್ಲಿ, ಭಾಷಾಲಂಕಾರ, ತತ್ವಶಾಸ್ತ್ರ, ಇತ್ಯಾದಿಗಳನ್ನೂ ಬಳಿಕ, ದೈವಶಾಸ್ತ್ರವನ್ನೂ ಅಭ್ಯಸಿಸುತ್ತಾರೆ. 

ಇವರು 1675ರಲ್ಲಿ ಗೋವಾದ ಧರ್ಮಕ್ಷೇತ್ರದ ಡೀಕನ್ ಆಗಿ, ನಂತರ ಯಾಜಕರಾಗಿ ಅಭಿಷಿಕ್ತರಾಗುತ್ತಾರೆ. ಬರಿಗಾಲಿನಲ್ಲೇ ನಡೆದು, ಬಡವರಂತೆ ಬಾಳುತ್ತಿದ್ದ ವಾಜ್‌ರವರ ಪ್ರಬೋಧನೆಗಳೂ ಪಾಪನಿವೇದನಾ ಕ್ರಮವೂ ಜನಪ್ರಿಯವಾದವು. ಮುಂದೆ ಯಾಜಕರಾಗುವವರಿಗಾಗಿ ಒಂದು ಲ್ಯಾಟಿನ್ ಶಾಲೆಯನ್ನು ಇವರು ತೆರೆಯುತ್ತಾರೆ. ತಮ್ಮನ್ನು 'ಮರಿಯಮ್ಮನವರ ಗುಲಾಮ' ಎಂದೇ ಅವರು ಕರೆದುಕೊಳ್ಳುತ್ತಿದ್ದರು. 
ಅವರಿಗೆ, ಅಂದಿನ ಸಿಲೋನಿಗೆ(ಇಂದಿನ ಶ್ರೀಲಂಕಾ) ಹೋಗಬೇಕೆಂಬ ಮನಸ್ಸಿದ್ದರೂ ಅವರನ್ನು ಕನ್ನಡ(ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ)ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿನ ತಿಕ್ಕಾಟ, ಒಳಜಗಳಗಳನ್ನು ತಮ್ಮ ಮುತ್ಸದ್ದಿತನ, ತಗ್ಗಿದ ಮನೋಭಾವಗಳಿಂದ ಸರಿಪಡಿಸಿ, ಎರಡು ಬಣಗಳ ನಡುವೆ ಒಪ್ಪಂದವನ್ನು ತರುತ್ತಾರೆ. ಜೊತೆಗೆ, ಜನರ ಧಾರ್ಮಿಕ ಸ್ವಸ್ಥತೆಗಾಗಿಯೂ ಇವರು ದುಡಿಯುತ್ತಾರೆ. ಇವರು ಕನ್ನಡ ಜಿಲ್ಲೆಗಳಾದ್ಯಂತ ‘ಸಹೋದರತ್ವದ ಕೂಟ’ಗಳನ್ನು ಏರ್ಪಡಿಸಿದ್ದು ಒಂದು ವಿಶೇಷವೇ. 
ವಾಜ್‌ರವರು ಪವಾಡಪುರುಷರೂ ಹೌದು. ಒಮ್ಮೆ ಅವರನ್ನು ಕೊಲ್ಲಲೆಂದೇ ಕೆಲವರು, ಅವರನ್ನು ಬೆಟ್ಟದ ತುದಿಗೆ ಕರೆದುಕೊಂಡು ಹೋದಾಗ, ವಾಜ್‍ನವರು ಮೊಣಕಾಲೂರಿ, ತಮ್ಮ ಕೋಲನ್ನು ಅಲ್ಲಿ ನೆಟ್ಟು ಪ್ರಾರ್ಥಿಸುವಾಗ, ಮಿಂಚು ಹೊಳೆದು, ಅವರು ಮೊಣಕಾಲೂರಿದ ಸ್ಥಳಗಳಿಂದ ನೀರು ಚಿಮ್ಮಿ, ಹಂತಕರು ಗಾಬರಿಯಾಗಿ ಓಡಿಹೋಗುತ್ತಾರೆ. ಪ್ರಸ್ತುತ ಅಲ್ಲೊಂದು ದೇವಾಲಯವಿದೆ. ಮತ್ತೆ ಅವರು ಗೋವಾಗೆ ವರ್ಗಾವಣೆಯಾಗಿ ಪ್ರಬೋಧನೆ, ಜನಸೇವೆಯಲ್ಲಿ ಮುಂದುವರಿಯುತ್ತಾರೆ. ಅಲ್ಲಿ ಇತರ ಯಾಜಕರೊಂದಿಗೆ ಕೂಡು ಬಾಳ್ವೆ ನಡೆಸಿ ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತಾರೆ.ಆಗ, ಸಿಲೋನಿನಲ್ಲಿ ಎಷ್ಟೋ ವರ್ಷಗಳಿಂದ ಕ್ಯಾಥೊಲಿಕ್ ಯಾಜಕರು ಇಲ್ಲದ ಕಾರಣದಿಂದ ವಾಜ್‌ರವರ ಇಚ್ಛೆಯಂತೆ ಅವರನ್ನು ಅಲ್ಲಿಗೆ ಕಳುಹಿಸಿಕೊಡಲಾಗುತ್ತದೆ. ಅಲ್ಲಿ ಭಿಕ್ಷುಕರಂತೆ, ಕೂಲಿಗಳಂತೆ ವೇಷಧರಿಸಿ, ಇವರು ತಮ್ಮ ಸಹಾಯಕನೊಂದಿಗೆ ಊರೂರು ಅಲೆಯುತ್ತಾರೆ. ಅಂತಿಮವಾಗಿ ಅವರು, ಜಾಫ್ನಾ ತಲಪಿದಾಗ, ಅವರ ಆರೋಗ್ಯವೂ ಹದಗೆಡುತ್ತದೆ. ಒಬ್ಬ ಸ್ತ್ರೀ ಇವರಿಗೆ ಗಂಜಿ ಕುಡಿಸಿ, ಆರೈಕೆ ಮಾಡಿದ ಮೇಲೆ ಅವರು ಚೇತರಿಸಿಕೊಳ್ಳುತ್ತಾರೆ. 
ಜಾಫ್ನಾದಲ್ಲಿ ಅಡಗಿಕೊಂಡಿದ್ದ ಕ್ಯಾಥೊಲಿಕ್ಕರನ್ನು ಇವರು ಗುರುತಿಸಿ, ಅವರಿಗೆ ರಾತ್ರಿ ಭೋಜನ ಸಂಸ್ಕಾರವನ್ನು ನೀಡಲು ತೊಡಗುತ್ತಾರೆ. ಇದನ್ನು ಹೇಗೋ ತಿಳಿದ ಅಲ್ಲಿಯ ಅಧಿಕಾರಿಗಳು ಅವರಿಗೆ ಕಿರುಕುಳ ಕೊಡಲು ಮುಂದಾದಾಗ ಅವರು ಕ್ಯಾಂಡಿಗೆ ತಪ್ಪಿಸಿಕೊಂಡು ಹೋಗುತ್ತಾರೆ. ಆ ಊರಿನಲ್ಲಿ ವಾಜ್‌ರವರನ್ನು ಗೃಹಬಂಧನದಲ್ಲಿರಿಸಲಾಗುತ್ತದೆ. ಹಾಗಿದ್ದರೂ ಇವರ ಪ್ರಭಾವದಿಂದ ಅನೇಕರು ಕ್ಯಾಥೊಲಿಕ್ ಧರ್ಮವನ್ನು ಸ್ವೀಕರಿಸುವುದನ್ನು ತಪ್ಪಿಸಲಾಗುವುದಿಲ್ಲ. ಅಲ್ಲೆಲ್ಲಾ ಸಿಡುಬು ರೋಗ ಹರಡಿದ್ದಾಗಲೂ, ರೋಗಿಗಳ ಮಧ್ಯೆ ಅವರು ಧೈರ್ಯದಿಂದ ಸೇವೆಮಾಡಿ, ಅನೇಕ ಮಿಷನರಿಗಳು ಅಲ್ಲಿಗೆ ಬರಲು ಪ್ರೇರಕರಾಗುತ್ತಾರೆ. ತಮ್ಮ 59ನೇ ವಯಸ್ಸಿನಲ್ಲಿ ವಾಜ್‌ರವರು ನಿಧನರಾಗುತ್ತಾರೆ. 2015ರಲ್ಲಿ, ಪೋಪ್ ಫ್ರಾನ್ಸಿಸ್‌ರವರು ವಾಜ್‌ರವರನ್ನು ಸಂತರೆಂದು ಘೋಷಿಸುತ್ತಾರೆ. ಆ ಮೂಲಕ ಅವರು, ಏಷ್ಯಾದ ಮೊತ್ತಮೊದಲ ಸಂತರಾಗುತ್ತಾರೆ.
ಚಿತ್ರ: ಗೂಗಲ್‌ ಕೃಪೆ
© 'ದನಿ' ಮಾಧ್ಯಮ ಮನೆ

ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment