ಶುಕ್ರವಾರ/ ಸಾಧಾರಣಾ ಕಾಲದ ಮೊದಲನೆಯ ವಾರ
ಸ್ಮರಣೆ : ಸಂತ ಅಂತೋನಿ ಅಬ್ಬೋಟ್ (ಮಠಾಧಿಪತಿ)
ಮೊದಲನೆಯ ವಾಚನ: : 1 ಸಮುವೇಲ 8:4-7, 10-22
ಕೀರ್ತನೆ: 89:16-17, 18-19
ಶುಭಸಂದೇಶ - ಮಾರ್ಕ 2: 1-12
-------------------
ಮೊದಲನೆಯ ವಾಚನ: : 1 ಸಮುವೇಲ 8:4-7, 10-22
4 : ಆದುದರಿಂದ ಇಸ್ರಯೇಲರ ಹಿರಿಯರೆಲ್ಲರೂ ಕೂಡಿ ರಾಮಾದಲ್ಲಿದ್ದ ಸಮುವೇಲನ ಬಳಿಗೆ ಬಂದು,
5 : “ತಾವಂತೂ ಮುದುಕರಾದಿರಿ; ನಿಮ್ಮ ಮಕ್ಕಳು ನಿಮ್ಮ ಮಾರ್ಗದಲ್ಲಿ ನಡೆಯುವುದಿಲ್ಲ. ಆದುದರಿಂದ ಬೇರೆ ಎಲ್ಲ ಜನಾಂಗಗಳಿಗಿರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸಿ; ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ,” ಎಂದರು.
6 : ‘ನ್ಯಾಯಸ್ಥಾಪನೆಗಾಗಿ ನಮಗೊಬ್ಬ ಅರಸನನ್ನು ನೇಮಿಸಿಕೊಡಿ’ ಎಂಬ ಮಾತಿಗೆ ಸಮುವೇಲನು ದುಃಖಪಟ್ಟನು. ಸರ್ವೇಶ್ವರನನ್ನು ಪ್ರಾರ್ಥಿಸಿದನು.
7 : ಸರ್ವೇಶ್ವರ ಅವನಿಗೆ, “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳ್ವಿಕೆ ಬೇಡವೆನ್ನುತ್ತಾರೆ.
10 : ಸಮುವೇಲನು ಅರಸಬೇಕೆಂದು ಕೋರಿದ ಜನರಿಗೆ,
11 : ಸರ್ವೇಶ್ವರನ ಮಾತುಗಳನ್ನೆಲ್ಲಾ ತಿಳಿಸಿದನು. “ಅರಸನ ಅಧಿಕಾರ ಎಷ್ಟೆಂದು ಕೇಳಿರಿ: ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು; ಅವರು ಅವನ ರಥಗಳ ಮುಂದೆ ಓಡಬೇಕಾಗುವುದು.
12 : ಕೆಲವರನ್ನು ಸಹ ಸ್ರಾಧಿಪತಿಗಳನ್ನಾಗಿಯೂ ಕೆಲವರನ್ನು ಪಂಚಾ ಶದಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಾಯುಧ, ರಥಸಾಮಗ್ರಿಗಳನ್ನು ಮಾಡುವವರೂ ಆಗಬೇಕು.
13 : ಇದಲ್ಲದೆ ಅವನು ನಿಮ್ಮ ಹೆಣ್ಣು ಮಕ್ಕಳನ್ನು ಪರಿಮಳ ದ್ರವ್ಯಮಾಡುವುದಕ್ಕೂ, ಅಡಿಗೆಮಾಡುವುದಕ್ಕೂ, ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.
14 : ನಿಮ್ಮ ಉತ್ತಮವಾದ ಹೊಲಗಳನ್ನೂ ದ್ರಾಕ್ಷಿ ತೋಟಗಳನ್ನೂ ಎಣ್ಣೆ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು.
15 : ನಿಮ್ಮ ಧಾನ್ಯದ್ರಾಕ್ಷಿಗಳಲ್ಲಿ ದಶಮಾಂಶವನ್ನು ತೆಗೆದುಕೊಂಡು ತನ್ನ ಅಧಿಕಾರಿಗಳಿಗೂ ಪರಿವಾರದವರಿಗೂ ಕೊಡುವನು.
16 : ನಿಮ್ಮ ದಾಸ ದಾಸಿಯರನ್ನು ಹಾಗು ಉತ್ತಮವಾದ ಎತ್ತುಕತ್ತೆಗಳನ್ನು ತನಗಾಗಿ ದುಡಿಸಿಕೊಳ್ಳುವನು.
17 : ಕುರಿ ಹಿಂಡುಗಳಲ್ಲೂ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು; ನೀವೂ ಅವನಿಗೆ ಗುಲಾಮರಾಗಿರಬೇಕು.
18 : ಆಗ, ನೀವು ಆರಿಸಿಕೊಂಡ ಅರಸನ ನಿಮಿತ್ತ, ಆ ದಿನದಲ್ಲಿ ಬೇಸÀತ್ತು ಸರ್ವೇಶ್ವರನಿಗೆ ಮೊರೆಯಿಡುವಿರಿ; ಆಗ ಅವರು ನಿಮ್ಮನ್ನು ಲಕ್ಷಿಸುವುದಿಲ್ಲ,” ಎಂದನು.
19 : ಹೀಗೆ ಸಮುವೇಲನು ಎಷ್ಟು ಹೇಳಿದರೂ ಜನರು ಕೇಳದೆ ಹೋದರು. “ಅದಿರಲಿ; ನಮಗೆ ಅರಸನನ್ನು ಕೊಡು; ನಾವು ಇತರ ಜನಾಂಗಗಳಂತೆ ಆಗಬೇಕು.
20 : ನಮ್ಮ ನ್ಯಾಯಗಳನ್ನು ತೀರಿಸಿ, ನಮಗೆ ಮುಂದಾಗಿ ಹೊರಟು, ನಮ್ಮ ಪರವಾಗಿ ಯುದ್ಧಮಾಡುವ ಒಬ್ಬ ಅರಸನು ಬೇಕು,” ಎಂದು ಹೇಳಿದರು.
21 : ಸಮುವೇಲನು ಜನರ ಈ ಎಲ್ಲ ಮಾತುಗಳನ್ನು ಸರ್ವೇಶ್ವರನಿಗೆ ತಿಳಿಸಿದನು.
22 : ಸರ್ವೇಶ್ವರ ಅವನಿಗೆ, “ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು,” ಎಂದರು. ಆಗ ಸಮುವೇಲನು ಇಸ್ರಯೇಲರಿಗೆ, “ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ,” ಎಂದು ಅಪ್ಪಣೆ ಕೊಟ್ಟನು.
-------------------
ಕೀರ್ತನೆ: 89:16-17, 18-19
ಪ್ರಭೂ, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು
16 : ಆನಂದಿಸುವರವರು ಸದಾ ನಿನ್ನ ನಾಮದಲಿ / ಪ್ರವರ್ಧಿಸುವರವರು ನಿನ್ನ ನ್ಯಾಯನೀತಿಯಲಿ //
17 : ಅವರ ಶಕ್ತಿಸಾಮಥ್ರ್ಯದ ಪ್ರತಿಭೆ ನಿನ್ನದೆ / ನಿನ್ನ ದಯೆಯಿಂದ ನಮಗೆ ಕೋಡುಮೂಡಿದೆ //
18 : ಗುರಾಣಿಯಂತಿಹ ನಮ್ಮ ರಾಜನು ಪ್ರಭುವಿನವನೇ / ಇಸ್ರಯೇಲಿನ ಪರಮಪಾವನ ಸ್ವಾಮಿಗೆ ಸೇರಿದವನೇ //
19 : ಹಿಂದೊಮ್ಮೆ ನೀ ದರ್ಶನವಿತ್ತು ಇಂತೆಂದೆ ನಿನ್ನ ಭಕ್ತರಿಗೆ: / “ರಕ್ಷಾಬಲವನು ಅನುಗ್ರಹಿಸಿರುವೆ ಶೂರವೀರನೋರ್ವನಿಗೆ / ಪ್ರಜೆಗಳಲೊರ್ವ ಯುವಕನನು ಏರಿಸಿರುವೆ ಉನ್ನತಸ್ಥಾನಕೆ //
-------------------------
ಶುಭಸಂದೇಶ - ಮಾರ್ಕ 2: 1-12
1 : ಕೆಲವು ದಿನಗಳು ಕಳೆದ ಬಳಿಕ ಯೇಸುಸ್ವಾಮಿ ಮತ್ತೊಮ್ಮೆ ಕಫೆರ್ನವುಮಿಗೆ ಬಂದರು. ಅವರು ಮನೆಯಲ್ಲಿದ್ದಾರೆಂಬ ಸುದ್ದಿ ಹಬ್ಬಿತು....
2 : ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಇದರಿಂದಾಗಿ ಮನೆಯೊಳಗೆ ಮಾತ್ರವಲ್ಲ, ಹೊರಗಡೆಯೂ ಸ್ಥಳ ಸಾಲದೆ ಹೋಯಿತು. ಯೇಸು ಅಲ್ಲಿ ಸೇರಿದ್ದ ಜನಸ್ತೋಮಕ್ಕೆ ದೇವರ ವಾಕ್ಯವನ್ನು ಬೋಧಿಸತೊಡಗಿದರು.
3 : ಆಗ ಒಬ್ಬ ಪಾಶ್ರ್ವವಾಯು ರೋಗಿಯನ್ನು ನಾಲ್ವರಿಂದ ಹೊರಿಸಿಕೊಂಡು ಕೆಲವರು ಅಲ್ಲಿಗೆ ಬಂದರು.
4 : ಜನಸಂದಣಿಯ ನಿಮಿತ್ತ ಅವನನ್ನು ಯೇಸುವಿನ ಸಮೀಪಕ್ಕೆ ಸಾಗಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಅವರು ಯೇಸು ಇದ್ದ ಮನೆಯ ಮೇಲ್ಛಾವಣಿಯನ್ನು ತೆರೆದು, ದೊಡ್ಡ ಕಿಂಡಿಯೊಂದನ್ನು ಮಾಡಿ, ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು.
5 : ಯೇಸು ಅವರ ವಿಶ್ವಾಸವನ್ನು ಮೆಚ್ಚಿ ಆ ಪಾಶ್ರ್ವವಾಯು ರೋಗಿಗೆ, “ಮಗು, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು.
6 : ಆಗ, ಅಲ್ಲೇ ಕುಳಿತಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, “ಇವನೇಕೆ ಹೀಗೆ ಮಾತನಾಡುತ್ತಾನೆ? ಇದು ದೇವದೂಷಣೆ!
7 : ದೇವರೊಬ್ಬರ ಹೊರತು ಪಾಪಗಳನ್ನು ಕ್ಷಮಿಸಲು ಬೇರೆ ಯಾರಿಂದ ಸಾಧ್ಯ?” ಎಂದು ತಮ್ಮ ಮನಸ್ಸಿನಲ್ಲೇ ಆಲೋಚಿಸಿಕೊಳ್ಳುತ್ತಿದ್ದರು.
8 : ಅವರು ಹೀಗೆ ಯೋಚಿಸುತ್ತಿರುವುದನ್ನು ಯೇಸು ತಕ್ಷಣ ಗ್ರಹಿಸಿಕೊಂಡು ಅವರಿಗೆ, “ನೀವು ನಿಮ್ಮ ಮನಸ್ಸಿನಲ್ಲಿ ಹೀಗೆ ಆಲೋಚಿಸುತ್ತಿರುವುದು ಏಕೆ?
9 : ಈ ಪಾಶ್ರ್ವವಾಯು ರೋಗಿಗೆ, ‘ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,’ ಎಂದು ಹೇಳುವುದು ಸುಲಭವೋ ಅಥವಾ ‘ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎನ್ನುವುದು ಸುಲಭವೋ?
10 : ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರವುಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು,” ಎಂದು ಹೇಳಿ, ಆ ಪಾಶ್ರ್ವವಾಯು ರೋಗಿಯನ್ನು ನೋಡಿ,
11 : “ನಾನು ನಿನಗೆ ಆಜ್ಞಾಪಿಸುತ್ತೇನೆ; ಏಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು,” ಎಂದರು.
12 : ಎಲ್ಲರೂ ನೋಡುತ್ತಿದ್ದ ಹಾಗೆ ಅವನು ಎದ್ದುನಿಂತನು; ತನ್ನ ಹಾಸಿಗೆಯನ್ನು ತಾನೇ ಎತ್ತಿಕೊಂಡು ಹೊರಟುಹೋದನು. ನೆರೆದಿದ್ದ ಎಲ್ಲರೂ ಆಶ್ಚರ್ಯಚಕಿತರಾಗಿ, “ಇಂಥ ಕಾರ್ಯವನ್ನು ನಾವು ನೋಡಿದ್ದೇ ಇಲ್ಲ!”, ಎಂದು ದೇವರನ್ನು ಕೊಂಡಾಡಿದರು.
------------------------------
ಚಿಂತನೆ
ಪಾಪಕ್ಷಮೆಯ ಅಧಿಕಾರವುಳ್ಳ ಯೇಸು
ಇಂದಿನ ಶುಭಸಂದೇಶದಲ್ಲಿ ಗಮನಿಸಬೇಕಾದ ಅಂಶವೆಂದರೆ, ಮಾರ್ಕನು ಮೊಟ್ಟಮೊದಲ ಬಾರಿಗೆ ಧರ್ಮಶಾಸ್ತ್ರಿಗಳನ್ನು, ಫರಿಸಾಯರನ್ನು ಪರಿಚಯಿಸುತ್ತಿದ್ದಾನೆ. ಇವರು ಯೇಸುವಿನ ಕಾರ್ಯ ಮತ್ತು ಮಾತುಗಳನ್ನು ತೀವ್ರವಾಗಿ ಗಮನಿಸಿ ತಪ್ಪು ಕಂಡು ಹಿಡಿಯುವುದರಲ್ಲಿ ಮಗ್ನರಾಗಿರುತ್ತಾರೆ. ಕೆಲವರು ಪಾರ್ಶ್ವವಾಯು ರೋಗಿಯನ್ನು ಕ್ರಿಸ್ತನ ಬಳಿ ಕರೆತಂದಾಗ ಯೇಸು, ಅವರ ವಿಶ್ವಾಸವನ್ನು ಮೆಚ್ಚಿ ಆ ರೋಗಿಯನ್ನು ಗುಣಪಡಿಸುತ್ತಾರೆ. ``ಮಗೂ, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ''. ಎಂಬ ಕ್ರಿಸ್ತನ ವಾಕ್ಯವು ಧರ್ಮಶಾಸ್ತ್ರಿಗಳಿಗೆ ಮತ್ತು ಫರಿಸಾಯರಿಗೆ ದೇವದೂಷಣೆಯಂತೆ ಕಂಡುಬರುತ್ತದೆ. ಕ್ರಿಸ್ತ ಆತನನ್ನು ಗುಣಪಡಿಸುವ ಮೊದಲು ಪಾಪಕ್ಷಮೆ ನೀಡಿದ್ದು ಏತಕ್ಕೆ? ಕ್ರಿಸ್ತನ ಕಾಲದಲ್ಲಿ ಬಡತನ ಮತ್ತು ಅನಾರೋಗ್ಯಗಳನ್ನು ಪಾಪದ ಫಲ ಎಂದು ನಂಬುತ್ತಿದ್ದರು. ಹಾಗಾಗಿ ಯೇಸುಕ್ರಿಸ್ತರು ಮೊದಲು ಆತನ ಮಾನಸಿಕ ಕಾಯಿಲೆ ಗುಣಪಡಿಸಿ ಅನಂತರ ದೈಹಿಕ ಕಾಯಿಲೆಯನ್ನು ಗುಣಪಡಿಸುತ್ತಾರೆ. ಆತನ ಪಾಪಗಳನ್ನು ಕ್ಷಮಿಸುವುದರ ಮೂಲಕ ನರಪುತ್ರನಿಗೆ ಪಾಪಗಳನ್ನು ಕ್ಷಮಿಸುವ ಅಧಿಕಾರ ಇದೆ ಎಂಬುದನ್ನು ಬಹಿರಂಗ ಪಡಿಸುತ್ತಾರೆ.
---------------------------------
ಕ್ರಿಸ್ತನಂತೆ ರೋಗಿಗಳನ್ನು ಮತ್ತು ದುರ್ದೈವಿಗಳನ್ನು ನೋಡುವ ಕೃಪೆಯನ್ನು ಕೇಳೋಣ.
ಚಿಂತನೆ: ಯೇಸುವಿನ ಕಾಲಘಟ್ಟದಲ್ಲಿ ಅನಾರೋಗ್ಯ ಮತ್ತು ಅಂಗವೈಕಲ್ಯದಂತಹ ದುರದೃಷ್ಟ ಕರ್ಮದ ಫಲ ಅಥವಾ ಪಾಪಕ್ಕೆ ಶಿಕ್ಷೆಯೆಂದು ಪರಿಗಣಿಸಲಾಗಿತ್ತು. ಇಂದಿನ ಶುಭಸಂದೇಶದಲ್ಲಿ ಪರಿಚಯವಾಗುವ ಪಾರ್ಶ್ವವಾಯುವಿನ ರೋಗಕ್ಕೆ ಆತನ ಹೆತ್ತವರು ಅಥವಾ ಸ್ವ-ಪಾಪವೇ ಕಾರಣವೆಂದು ಧರ್ಮಶಾಸ್ತ್ರಿಗಳಲ್ಲಿ ಕೆಲವರು ಆಲೋಚಿಸುತ್ತಾರೆ. ಇತರರ ದೌರ್ಬಲ್ಯದ ಬಗ್ಗೆ ನಿಮ್ಮ ಮನೋಭಾವ ಏನು? ನಿರುದ್ಯೋಗಿ, ವಲಸೆಗಾರರು, ಬಡವರು, ಕ್ಯಾನ್ಸರ್ರೋಗಗಳಿಗೆ
ಬಲಿಯಾದವರ ಬಗ್ಗೆ ನಿಮ್ಮ ನಿಲುವೇನು? ಯಾರನ್ನು ನೀವು ಆರೋಪಿಸುತ್ತೀರಾ? ಪ್ರಭುಯೇಸು ಪಾಪ ಮತ್ತು ದೌರ್ಭಾಗ್ಯದ ನಡುವಿನ ಸಂಬಂಧವನ್ನು ಮುರಿಯುತ್ತಾರೆ. ಇವೆರಡನ್ನು ಪ್ರತ್ಯೇಕಿಸಿ, ಮೊದಲು: ಮಗು, ನಿನ್ನ ಪಾಪಗಳು ಕ್ಷಮಿಸಲಾಗಿವೆ ಎಂದು. ಕೊನೆಯದಾಗಿ: ಏಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎನ್ನುತ್ತಾರೆ. ದೇವರು ಜಗತ್ತನ್ನು ಸೃಷ್ಟಿಸಿದಾಗಲೂ ಮೊದಲಿಗೆ ಕತ್ತಲೆಯನ್ನೂ ಬೆಳಕನ್ನೂ ಬೇರೆಬೇರೆ ಮಾಡಿ ಬೆಳಕಿಗೆ ಹಗಲೆಂದೂ ಕತ್ತಲೆಗೆ ಇರುಳೆಂದೂ ಹೆಸರಿಟ್ಟರು. ಕ್ರಿಸ್ತನಂತೆ ರೋಗಿಗಳನ್ನು ಮತ್ತು ದುರ್ದೈವಿಗಳನ್ನು ನೋಡುವ ಕೃಪೆಯನ್ನು ಕೇಳೋಣ.
----------------
ಇಂದಿನ ಸಂತರು
ಮಠಾಧಿಪತಿ ಸಂತ ಅಂತೋನಿ(ಕ್ರಿಸ್ತಶಕ 251-356)
ಇದು ತೋಟಿಯಾಗಿ ಕಾರ್ಯನಿರ್ವಹಿಸುತ್ತಾ ಮತ್ತು ಚಾಪೆ ಹೆಣೆಯುತ್ತಾ ತನ್ನ ಬದುಕು ಸವೆಸಿ, ಮೊದಲು ಏಕಾಂಗಿಯಾಗಿ ಏಕಾಂತದಲ್ಲಿ ವಾಸಿಸುತ್ತಾ ನಂತರ ಕ್ರೈಸ್ತ ಸನ್ಯಾಸಿ ಮಠವೊಂದನ್ನು (ಮೊನ್ಯಾಸ್ಟರಿ) ಕಟ್ಟಿ, ದೇವರ ಮಾರ್ಗದರ್ಶನಕ್ಕಾಗಿ ಹೊತ್ತಿಗೆಗಳ ಮರೆ ಹೊಗದೇ ನೈಸರ್ಗಿಕ ಪರಿಸರದ ಜಗತ್ತನ್ನೇ ನೋಡುತ್ತಿದ್ದ ಮಠಾಧಿಪತಿ ಸಂತ ಅಂತೋನಿ ಅವರ ನೇರ, ಸ್ಪಷ್ಟ ನುಡಿ.
ನೂರೈವತ್ತು ವರ್ಷಗಳ ಕಾಲ ಬದುಕಿದ್ದ ಮಠಾಧಿಪತಿ ಸಂತ ಅಂತೋನಿ ಅವರನ್ನು, ಅವರು ಬದುಕಿದ್ದ ದೇಶದ ಹಿನ್ನೆಲೆಯಲ್ಲಿ ಈಜಿಪ್ತಿನ ಸಂತ ಅಂತೋನಿ ಎಂದು ಕರೆಯಲಾಗುತ್ತದೆ. ಮಹಾಶಯ ಸಂತ ಅಂತೋನಿ, ಮರುಭೂಮಿಯ ಸಂತ ಅಂತೋನಿ, ಥೀಬ್ಸಿನ ಸಂತ ಅಂತೋನಿ, ತಂದೆ ಸಂತ ಅಂತೋನಿ, ಸಕಲ ಸನ್ಯಾಸಿಗಳ ತಂದೆ ಸಂತ ಅಂತೋನಿ ಎಂದೂ ಅವರನ್ನು ಕರೆಯಲಾಗುತ್ತದೆ.
‘ಹೋಗು, ನಿನ್ನಲ್ಲಿರುವ ಸಂಪತ್ತನ್ನು ಮಾರಿ, ಬಡಬಗ್ಗರಲ್ಲಿ ಹಂಚು, ಸ್ವರ್ಗದಲ್ಲಿನ ಖಜಾನೆ ನಿನ್ನದಾಗುವುದು’ ಎಂಬ ಪ್ರಭು ಯೇಸುಕ್ರಿಸ್ತರ ನುಡಿಗಳಿಂದ ಪ್ರಭಾವಿತರಾಗಿ ಇವರು ತಮ್ಮ ಹತ್ತೊಂಬತ್ತನೇ ವಯಸ್ಸಿನಲ್ಲೇ ತಮ್ಮ ತಂದೆತಾಯಿಗಳಿಂದ ಮತ್ತು ವಂಶಪಾರಂಪರೆಯಿಂದ ಬಂದ ಆಸ್ತಿಪಾಸ್ತಿಗಳನ್ನು ಮಾರಿ ಬಡವರಿಗೆ ಹಂಚಿಬಿಡುತ್ತಾರೆ. ಯೇಸುಸ್ವಾಮಿಯ ಧ್ಯಾನದ ದಿನಗಳನ್ನು ಅನುಕರಿಸತ್ತಾ, ನಾರುಡುಗೆ ತೊಟ್ಟು ಮರುಭೂಮಿಯಲ್ಲಿ ಏಕಾಂಗಿಯಾಗಿ ಸನ್ಯಾಸಿ ಜೀವನ ಆರಂಭಿಸುತ್ತಾರೆ. ಸ್ವಲ್ಪ ಬ್ರೆಡ್ ಮತ್ತೊಂದಿಷ್ಟು ಉಪ್ಪು ಮತ್ತು ನೀರನ್ನಷ್ಟೇ ಅವರು ಸೇವಿಸುತ್ತಿದ್ದುದು. ಇವರು ಮಲಗುತ್ತಿದ್ದುದು ನೆಲದ ಮೇಲೆ. ಈಜಿಪ್ತಿನ ಮರುಭೂಮಿಯ ಕಡಿದಾದ ಬೆಟ್ಟದ ತುದಿಯಲ್ಲಿನ ಗುಹೆಗಳು ಅವರ ನಿವಾಸವಾಗಿದ್ದರೆ, ಅವರ ಆಪ್ತರೊಬ್ಬರು ಆರುತಿಂಗಳಿಗೊಮ್ಮೆ ನೀರು, ಧಾನ್ಯ ತಲುಪಿಸುತ್ತಿದ್ದರು. ತಮ್ಮ 55 ಹರೆಯದಲ್ಲಿ ಏಕಾಂತವಾಸವನ್ನು ತೊರೆದು ಸನ್ಯಾಸಿಮಠವನ್ನು (ಮೊನ್ಯಾಸ್ಟರಿ) ಇವರು ಸ್ಥಾಪಿಸುತ್ತಾರೆ. ಅದುವೇ ಕ್ರೈಸ್ತ ಧರ್ಮದವರ ಮೊದಲ ಸನ್ಯಾಸಿ ಮಠ ಎಂದು ಗುರುತಿಸಲಾಗುತ್ತದೆ. ಅವರು ಪ್ರಥಮ ವನವಾಸಿ ಸಂತ ವನಚಿನ್ನಪ್ಪರ ಅಂತಿಮಗಳಿಗೆಯಲ್ಲಿ ಅವರನ್ನು ಕಂಡು ಸೇವೆ ಸಲ್ಲಿಸಿದ್ದರು, ಅವರು ತೀರಿಕೊಂಡ ಬಳಿಕ ಅವರ ಉತ್ತರಕ್ರಿಯೆಗಳನ್ನು ನಡೆಸಿಕೊಟ್ಟರೆಂದೂ ಹೇಳಲಾಗುತ್ತದೆ.
ಸುಮಾರು ಕ್ರಿಸ್ತಶಕ1100ರಲ್ಲಿ ಅವರ ಆದರ್ಶದ ಆಶಯದಲ್ಲಿ ಆರಂಭವಾದ ಸನ್ಯಾಸಿ ಮಠಗಳ ಸನ್ಯಾಸಿಗಳು ಕಪ್ಪು ಒರಟು ಬಟ್ಟೆ ತೊಟ್ಟು, ನೀಲಿ ಬಣ್ಣದ ಶಿಲುಬೆ ಹಾಕಿಕೊಂಡು ಗಂಟೆ ಬಾರಿಸಿಕೊಂಡು ಹೋಗಿ ದಾನ ಪಡೆಯುತ್ತಿದ್ದರು. ತಮ್ಮ ಆದರ್ಶದ ಸಂತ ಅಂತೋನಿ ಅವರಂತೆಯೇ ಈ ಸನ್ಯಾಸಿಗಳು ಪ್ರಾಣಿ ಪಕ್ಷಿಗಳ ಮೇಲೆ ದಯೆತೋರುತ್ತಿದ್ದರು.
ಸಾಕು ಪ್ರಾಣಿಗಳ, ದನಕರುಗಳ, ಕಟುಕರ, ಕಟ್ಟಿಗೆ (ಸೌದೆ) ಒಡೆಯುವವರ, ರೊಟ್ಟಿ (ಬ್ರೆಡ್) ಮಾಡುವವರ, ಕಾಳುಕಡಿ ಮಾರುವ ದಿನಸಿ ಅಂಗಡಗಳವರ, ಸಮಾಧಿ ತೋಡುವವರ, ಬುಟ್ಟಿ ಹೆಣೆಯುವವರೂ ಸೇರಿದಂತೆ ಹಲವಾರು ಬಗೆಯ ಕಾಯಕ ಪ್ರಿಯ ಉದ್ಯೋಗಿಗಳ ಪಾಲಕ ಸಂತರಾಗಿರುವ ಇವರ ಸ್ಮರಣೆಯನ್ನು ಜನವರಿ ತಿಂಗಳ 17 ರಂದು ಕಥೋಲಿಕ ಧರ್ಮಸಭೆಯು ಆಚರಿಸುತ್ತದೆ. ಬೆಂಕಿ, ಚರ್ಮರೋಗಗಳನ್ನು ದೂರವಿಡುವ ಸಂತರೆಂದು ಅವರು ಹೆಸರುವಾಸಿಯಾಗಿದ್ದಾರೆ.
ಕೆಲವು ದೇಶಗಳಲ್ಲಿ ಭಕ್ತಾದಿಗಳು ತಮ್ಮ ಸಾಕುಪ್ರಾಣಿಗಳನ್ನು ಮತ್ತು ದನಕರುಗಳನ್ನು ಅವರ ಸ್ಮರಣೆಯ ಹಬ್ಬದ ದಿನ ಚರ್ಚಿಗೆ ಕರೆದುಕೊಂಡು ಬಂದು ಅಲ್ಲಿನ ಪಾದ್ರಿಗಳಿಂದ ಆಶಿರ್ವಾದ ಪಡೆಯುತ್ತಾರೆ. ಕರ್ನಾಟಕದ ತಮಿಳುನಾಡಿನ ಗಡಿಯಂಚಿನ ಕಥೋಲಿಕ ಕ್ರೈಸ್ತ ಭಕ್ತರು ಅವರ ಸ್ಮರಣೆಯ ಹಬ್ಬದ ದಿನ ಪೊಂಗಲ್ ಹಬ್ಬವನ್ನು ಆಚರಿಸುವ ಪರಿಪಾಠವಿದೆ. ವನಚಿನ್ನಪ್ಪರ ಬೇಡುದಲೆಯಂತೆ ಊರ ಸಮೀಪದ ಬೆಟ್ಟಕ್ಕೋ, ಗೋಮಾಳಕ್ಕೋ. ಕೆರೆಯಂಚಿಗೋ ತೆರಳುವ ಭಕ್ತರು ಅಲ್ಲಿ ಒಲೆ ಹೂಡಿ ಅಡುಗೆ ಮಾಡಿಕೊಂಡು ಹಂಚಿಕೊಂಡು ತಿನ್ನುವ ಸಂಪ್ರದಾಯವಿದೆ. ಪ್ರಾಣಿಪಕ್ಷಿಗಳ ಸಂಗದಲ್ಲಿ ಅವರು ನಿಂತಿರುವ ಚಿತ್ರಪಟಗಳು, ಕುರಿ, ಮೊಲ, ಹಂದಿ, ನಾಯಿಗಳೊಂದಿಗೆ ನಿಂತಿರುವ ಅವರ ಸ್ವರೂಪಗಳು ಭಕ್ತಾದಿಗಳ ಆದರಕ್ಕೆ ಪಾತ್ರವಾಗಿವೆ.

ಚಿತ್ರ: ಗೂಗಲ್ ಕೃಪೆ
© 'ದನಿ' ಮಾಧ್ಯಮ ಮನೆ
© 'ದನಿ' ಮಾಧ್ಯಮ ಮನೆ
ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

No comments:
Post a Comment