Sunday, 26 January 2020

ಸಾಧಾರಣ ಕಾಲದ ಮೂರನೆಯ ಸೋಮವಾರ

27 ಜನವರಿ 2020
ಸೋಮವಾರ/ಹಸಿರು/ಸಾಧಾರಣ ಕಾಲದ ಮೂರನೆಯ ಸೋಮವಾರ  
1ನೇ  ವಾಚನ  -  2 ಸಾಮುವೇಲ 5: 1-7, 10   
ಕೀರ್ತನೆ  -  89:20,21-22,25-26         
ಶುಭಸಂದೇಶ  -  ಮಾರ್ಕ: 3:22-30
----------------------
1ನೇ  ವಾಚನ  -  2 ಸಾಮುವೇಲ 5: 1-7, 10  
1 : ಅನಂತರ ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. “ನಾವು ನಿಮ್ಮ ರಕ್ತಸಂಬಂಧಿಗಳು;
2 : ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, ‘ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ,’ ಎಂದು ವಾಗ್ದಾನಮಾಡಿದ್ದಾರೆ,” ಎಂದರು
3 : ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು.
4 : ದಾವೀದನು ಮೂವತ್ತು ವರ್ಷದವನಾಗಿದ್ದಾಗ ಅರಸನಾಗಿ ನಾಲ್ವತ್ತು ವರ್ಷ ಆಳಿದನು.
5 : ಅವನು ಹೆಬ್ರೋನಿನಲ್ಲಿದ್ದುಕೊಂಡು ಯೆಹೂದ ಕುಲ ಒಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು; ಜೆರುಸಲೇಮಿನಲ್ಲಿದ್ದುಕೊಂಡು ಯೆಹೂದ್ಯರನ್ನು ಹಾಗು ಇಸ್ರಯೇಲರನ್ನು ಆಳಿದ್ದು ಮೂವತ್ತ ಮೂರು ವರ್ಷ.
6 : ದಾವೀದನು ತನ್ನ ಜನರನ್ನು ಕರೆದುಕೊಂಡು ಜೆರುಸಲೇಮಿನ ಮೇಲೆ ದಾಳಿ ಮಾಡಲು ಹೊರಟನು. ನಾಡಿನ ಮೂಲನಿವಾಸಿಗಳಾದ ಯೆಬೂಸಿಯರು ಅಲ್ಲಿದ್ದರು. ಅವರು ದಾವೀದನು ಒಳಿಗೆ ಬರಲಾರನೆಂದು ನೆನೆಸಿ ಅವನಿಗೆ, “ನೀನು ಒಳಗೆ ಬರಕೂಡದು; ಬಂದರೆ ಕುರುಡರು, ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು,” ಎಂದು ಹೇಳಿದರು.
7 : ಆದರೂ ಅವನು, ಈಗ ‘ದಾವೀದ ನಗರ’ ಎನಿಸಿಕೊಳ್ಳುವ ಸಿಯೋನ್ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು.
10 : ಸೇನಾಧೀಶ್ವರ ಹಾಗು ಸರ್ವೇಶ್ವರರಾದ ದೇವರು ಅವನೊಂದಿಗೆ ಇದ್ದರು. ಆದ್ದರಿಂದ ಅವನು ಅಭಿವೃದ್ದಿ ಹೊಂದುತ್ತಾ ಬಂದನು.
----------------------
ಕೀರ್ತನೆ  -  89:20,21-22,25-26 
20 : “ನನ್ನ ದಾಸ ದಾವೀದನನು ಗುರುತಿಸಿರುವೆ / ಪವಿತ್ರ ತೈಲದಿಂದವನನು ಅಭಿಷೇಕಿಸಿರುವೆ //
21 : ನನ್ನ ಕೈಯ ಆಸರೆ ಅವನಿಗಿದೆ ಸತತ / ನನ್ನ ಭುಜಬಲವು ಅವನಿಗೆ ಶಕ್ತಿಯುತ //
22 : ಸಿಗನು ಶತ್ರುವಿನ ಕುತಂತ್ರಕೆ / ಕುಗ್ಗನು ಕೆಡುಕರಾ ದರ್ಪಕೆ //
25 : ತೊರೆನದಿಗಳಿಂದ ಸಾಗರದವರೆಗೆ / ಅಧಿಕಾರ ನೀಡುವೆ ಅವನ ಕೈಗೆ //
26 : ‘ನನಗೆ ಪಿತ, ದೈವ, ದುರ್ಗ, ಉದ್ಧಾರಕ, ನೀನು’| ಇಂತೆಂದೇ ನನ್ನನು ಸಂಬೋಧಿಸುವನವನು ||
----------------------
ಶುಭಸಂದೇಶ  -  ಮಾರ್ಕ: 3:22-30 
22 : ಇದಲ್ಲದೆ, ಜೆರುಸಲೇಮಿನಿಂದ ಬಂದಿದ್ದ ಧರ್ಮಶಾಸ್ತ್ರಿಗಳು, “ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ; ದೆವ್ವಗಳ ಒಡೆಯನ ಶಕ್ತಿಯಿಂದಲೇ ಇವನು ದೆವ್ವಬಿಡಿಸುತ್ತಾನೆ,” ಎನ್ನುತ್ತಿದ್ದರು.
23 : ಆಗ ಯೇಸು ಅವರನ್ನು ತಮ್ಮ ಹತ್ತಿರಕ್ಕೆ ಕರೆದು ಸಾಮತಿಗಳ ಮೂಲಕ ಮಾತನಾಡತೊಡಗಿದರು: “ಸೈತಾನನು ಸೈತಾನನನ್ನು ಹೊರದೂಡುವುದು ಹೇಗೆ ತಾನೇ ಸಾಧ್ಯ?
24 : ಒಂದು ರಾಜ್ಯದ ಪ್ರಜೆಗಳು ತಮ್ಮತಮ್ಮೊಳಗೆ ಕಚ್ಚಾಡುವುದಾದರೆ ಆ ರಾಜ್ಯ ಉಳಿಯದು.
25 : ಒಂದು ಕುಟುಂಬದ ಸದಸ್ಯರು ತಮ್ಮ ತಮ್ಮೊಳಗೆ ಕಚ್ಚಾಡುವುದಾದರೆ ಆ ಕುಟುಂಬ ಬಾಳದು.
26 : ಅದರಂತೆಯೇ ಸೈತಾನನ ಪಕ್ಷದವರು ಪರಸ್ಪರ ವಿರೋಧಿಗಳಾದರೆ ಅವನ ರಾಜ್ಯ ಉಳಿಯದು; ಅದು ಅಳಿದು ಹೋಗುವುದು.
27 : ಒಬ್ಬನು ಬಲಿಷ್ಠನ ಮನೆಯನ್ನು ನುಗ್ಗಿ ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆಮಾಡಲಾಗದು. ಮೊದಲು ಅವನನ್ನು ಕಟ್ಟಬೇಕು. ಬಳಿಕ ಅವನ ಮನೆಯನ್ನು ಕೊಳ್ಳೆಹೊಡಯಬೇಕು.
28 : ನಿಶ್ಚಯವಾಗಿ ನಿಮಗೆ ಹೇಳುತ್ತೇನೆ; ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೂ ಆಡುವ ಎಲ್ಲಾ ದೇವದೂಷಣೆಗಳಿಗೂ ಕ್ಷಮೆ ದೊರಕಬಹುದು.
29 : ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಮಾತ್ರ ಕ್ಷಮೆ ದೊರಕದು. ಅಂಥವನ ಪಾಪ ಶಾಶ್ವತವಾದುದು,” ಎಂದರು.
30 : (ದೆವ್ವ ಹಿಡಿದಿದೆ ಎಂದು ತಮ್ಮನ್ನು ಕೆಲವರು ನಿಂದಿಸುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು).
----------------------
ಚಿಂತನೆ
ಕ್ರಿಸ್ತಾಗ್ನಿಯು ನಮ್ಮಲ್ಲಿ ನವಚೈತನ್ಯವನ್ನು ಮೂಡಿಸುವುದೆಂಬ ವಿಶ್ವಾಸ ನಮ್ಮದಾಗಬೇಕು
ದೇವರು ದಾವೀದರಸನನ್ನು ಆರಿಸಿಕೊಂಡು ತನ್ನ ಪ್ರಜೆ ಇಸ್ರಾಯೇಲರನ್ನು ಕುರಿಗಾಹಿಯಂತೆ ಮುನ್ನಡೆಸಲು ಸಶಕ್ತರನ್ನಾಗಿಸುತ್ತಾರೆ. ದೇವರ ಅಪರಿಮಿತ ಪ್ರೀತಿಯು ದೀಪದಾರಿಯಾಗಿ ದಾವೀದರಸನನ್ನು ಮುನ್ನಡೆಸುತ್ತಾ ಆತನು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವಂತೆ ಆಶೀರ್ವದಿಸುತ್ತಾರೆ. ಬದುಕಿನ ಪಯಣದಲ್ಲಿ ಬರುವ ನೂರಾರು ಅಡತಡೆಗಳನ್ನು ಎದುರಿಸಿ ಮುನ್ನಡೆಯಲು ನಾವು ನಿಶ್ಶಕ್ತರಾದಾಗ, ದೇವರು ನಮ್ಮನ್ನು ಅನಾಥರನ್ನಾಗಿಸದೆ ಸದಾ ನಮ್ಮೊಂದಿಗಿರುವರೆಂಬ ಅರಿವು ನಮ್ಮಲ್ಲಿ ಮೂಡಿದಾಗ ಮರುಭೂಮಿಯಲ್ಲೂ ಮರಳುಗಾಡಿನಲ್ಲಿನ ಫಲವತ್ತಾದ ಪ್ರದೇಶದಂತೆ ಓಯಸಿಸ್ ಪುಟಿಯುತ್ತದೆ. ಕೆಲವೊಮ್ಮೆ ಗಾಢಾಂಧಕಾರದ ಈ ಪಯಣದಲ್ಲಿ ನಿರಾಸೆ, ನೋವು, ಅನ್ಯಾಯ, ಅನೀತಿ, ಅಶಾಂತಿ, ಕಷ್ಟ ಕೋಟಲೆಗಳು ಬೆಹೆಲ್ಜಬೂಲನಂತೆ ಆವರಿಸಿದಾಗ ಭರವಸೆಯ ಕ್ರಿಸ್ತಾಗ್ನಿಯು ನಮ್ಮಲ್ಲಿ ನವಚೈತನ್ಯವನ್ನು ಮೂಡಿಸುವುದೆಂಬ ವಿಶ್ವಾಸ ನಮ್ಮದಾಗಬೇಕು. ಆಗ ಮಾತ್ರ ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮರಣದಿಂದ ಕ್ರಿಸ್ತನ ಅಮರತ್ವದೆಡೆಗೆ ನಾವು ಸಾಗಬಹುದು. ಈ ವಿಶ್ವಾಸದ ತಳಹದಿ ಹಾಗೂ ಮೂಲ ಪವಿತ್ರಾತ್ಮರು. “ವಿಶ್ವದ-ಶ್ವಾಸ”ವಾಗಿರುವ ಪವಿತ್ರಾತ್ಮರನ್ನು ದೂಷಿಸುವುದೆಂದರೆ ನಮ್ಮ ಕ್ರೈಸ್ತ ಜೀವದ ಶ್ವಾಸವನ್ನು ನಿಲ್ಲಿಸಿ, ಬೆಲೆಲ್ಜಬೂಲನ ವಿಷಾನಿಲವನ್ನು ಸೇವಿಸಿ ಮರಣದೆಡೆಗೆ ಸಾಗಿದಂತೆ.

No comments:

Post a Comment