Saturday, 8 February 2020

ಸಾಧಾರಣ ಕಾಲದ ಐದನೆಯ ಶುಕ್ರವಾರ

14 ಫೆಬ್ರವರಿ  2020
ಸಾಧಾರಣ ಕಾಲದ ಐದನೆಯ ಶುಕ್ರವಾರ
1ನೇ  ವಾಚನ  -   1 ಅರಸುಗಳು 11:29-32; 12:19
ಕೀರ್ತನೆ  -  81:10-11,12-13,14-15 
ಶುಭಸಂದೇಶ  -  ಮಾರ್ಕ 7:31-37
-----------------------------
29 : ಒಂದು ದಿವಸ ಯಾರೊಬ್ಬಾಮನು ಜೆರುಸಲೇಮಿನಿಂದ ಎಲ್ಲಿಗೋ ಹೋಗುತ್ತಿರುವಾಗ ಅಡವಿಯಲ್ಲಿ ಶಿಲೋವಿನವನಾದ ಅಹೀಯನೆಂಬ ಪ್ರವಾದಿ ಅವನಿಗೆ ಎದುರಾದನು. ಇವನು ಹೊಸ ಬಟ್ಟೆಯನ್ನು ಹೊದ್ದುಕೊಂಡಿದ್ದನು. ಅಲ್ಲಿ ಇವರಿಬ್ಬರ ಹೊರತಾಗಿ ಬೇರೆ ಯಾರೂ ಇರಲಿಲ್ಲ.
30 : ಆಗ ಅಹೀಯನು, ತಾನು ಹೊದ್ದುಕೊಂಡಿದ್ದ ಹೊಸ ಬಟ್ಟೆಯನ್ನು ತೆಗೆದುಕೊಂಡು, ಅದನ್ನು ಹರಿದು ಹನ್ನೆರಡು ತುಂಡುಮಾಡಿ,
31 : ಯಾರೊಬ್ಬಾಮನಿಗೆ, “ನೀನು ಇವುಗಳಲ್ಲಿ ಹತ್ತು ತುಂಡುಗಳನ್ನು ತೆಗೆದುಕೋ. ಇಸ್ರಯೇಲ್ ದೇವರಾದ ಸರ್ವೇಶ್ವರ ರಾಜ್ಯವನ್ನು ಸೊಲೊಮೋನನಿಂದ ಕಿತ್ತುಕೊಂಡು
32 : ತನ್ನ ದಾಸ ದಾವೀದನ ನಿಮಿತ್ತ ಹಾಗು ತಾವು ಇಸ್ರಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಜೆರುಸಲೇಮ್ ಪಟ್ಟಣದ ನಿಮಿತ್ತ ಅವನಿಗೆ ಒಂದೇ ಒಂದು ಕುಲವನ್ನು ಉಳಿಸಿ, ಬೇರೆ ಹತ್ತು ಕುಲಗಳನ್ನು ನಿನಗೆ ಕೊಡುತ್ತೇನೆಂದು ಹೇಳಿದ್ದಾರೆ.
19 : ಇಸ್ರಯೇಲರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.
------------------
10 : “ಈಜಿಪ್ಟಿನಿಂದ ನಿಮ್ಮನು ಕರೆತಂದ ಸ್ವಾಮಿ ದೇವನು ನಾನು / ತೆರೆಯಿರಿ ನಿಮ್ಮ ಬಾಯನು, ತುಂಬಿಸಿ ತೃಪ್ತಿಪಡಿಸುವೆ ನಾನದನು //
11 : “ಆದರೆ ಕೇಳಲಿಲ್ಲಾ ಜನತೆ ನನ್ನ ಮಾತುಗಳನು / ತೋರಲಿಲ್ಲ ಇಸ್ರಯೇಲರು ನನಗೆ ವಿಧೇಯತೆಯನು, //
12 : “ಎಂತಲೇ ಕೈಬಿಟ್ಟೆ ಅವರನು ಹಟಮಾರಿಗಳೆಂದು / ತಮಗಿಷ್ಟಬಂದಂತೆಯೆ ನಡೆದುಕೊಳ್ಳಲಿಯೆಂದು, //
13 : “ಒಳಿತಾಗಿರುತ್ತಿತ್ತು ನನ್ನ ಜನರು ನನಗೆ ಕಿವಿಗೊಟ್ಟಿದ್ದರೆ / ಮೇಲಾಗಿರುತ್ತಿತ್ತು ಇಸ್ರಯೇಲರು ನನ್ನ ಹಾದಿ ಹಿಡಿದಿದ್ದರೆ, //
14 : “ಅಡಗಿಸುತ್ತಿದ್ದೆ ಅವರ ಶತ್ರುಗಳನು ಸುಲಭವಾಗಿ / ಸದೆಬಡಿಯುತ್ತಿದ್ದೆ ಅವರ ವೈರಿಗಳನು ಸರಿಯಾಗಿ, //
15 : “ಮುದುರಿಕೊಳ್ಳುತ್ತಿದ್ದರಾ ಎದುರಾಳಿಗಳು ಅವರ ಮುಂದೆ / ಅಳಿಯದೆ ಉಳಿದುಕೊಳ್ಳುತ್ತಿತ್ತು ಅವರಿಗಾದ ದಂಡನೆ ಮುಗಿವಿಲ್ಲದೆ,//
16 : “ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ ಗೋದಿಯನು / ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ ಜೇನುತುಪ್ಪವನು” //
--------------------
31 : ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಸಿದೋನಿನ ಮಾರ್ಗವಾಗಿ ದೆಕಪೊಲಿ ಪ್ರದೇಶವನ್ನು ಹಾದು ಗಲಿಲೇಯ ಸರೋವರದ ತೀರಕ್ಕೆ ಹಿಂದಿರುಗಿದರು.
32 : ಮಾತನಾಡಲಾಗದ ಒಬ್ಬ ಕಿವುಡನನ್ನು ಜನರು ಅವರ ಬಳಿಗೆ ಕರೆತಂದರು. ಅವನ ಮೇಲೆ ಕೈಗಳನ್ನಿಡಬೇಕೆಂದು ಬೇಡಿಕೊಂಡರು.
33 : ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದೊಯ್ದು, ತಮ್ಮ ಬೆರಳುಗಳನ್ನು ಅವನ ಕಿವಿಯೊಳಗೆ ಇಟ್ಟರು.
34 : ತಮ್ಮ ಉಗುಳಿನಿಂದ ಅವನ ನಾಲಗೆಯನ್ನು ಮುಟ್ಟಿದರು. ಬಳಿಕ ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೀರ್ಘವಾಗಿ ಉಸಿರೆಳೆದು, ‘ಎಪ್ಫಥಾ’ ಎಂದರೆ ‘ತೆರೆಯಲಿ’ ಎಂದರು.
35 : ತಕ್ಷಣವೇ ಅವನ ಕಿವಿಗಳು ತೆರೆದವು; ನಾಲಗೆಯ ಬಿಗಿ ಸಡಿಲಗೊಂಡಿತು; ಅವನು ಸರಾಗವಾಗಿ ಮಾತನಾಡತೊಡಗಿದನು.
36 : ಇದನ್ನು ಯಾರಿಗೂ ಹೇಳಕೂಡದೆಂದು ಯೇಸು ಜನರಿಗೆ ಕಟ್ಟಪ್ಪಣೆ ಮಾಡಿದರು. ಆದರೆ ಎಷ್ಟು ಹೇಳಿದರೂ ಕೇಳದೆ ಅವರು ಮತ್ತಷ್ಟು ಆಸಕ್ತಿಯಿಂದ ಈ ಕಾರ್ಯವನ್ನು ಪ್ರಚಾರ ಮಾಡಿದರು.
37 : ಎಲ್ಲರೂ ಆಶ್ಚರ್ಯಭರಿತರಾಗಿ, “ಇವರು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ; ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರಲ್ಲಾ!” ಎಂದುಕೊಳ್ಳುತ್ತಿದ್ದರು.
------------------
ಚಿಂತನೆ
ಇಂದಿನ ಶುಭಸಂದೇಶ ನಮಗೆ ಕೆಲ ವಿಷಯಗಳ ಬಗ್ಗೆ ತಿಳಿಸುತ್ತದೆ.
ತೆರೆಯಲಿ - ದೇವರು ಸೃಷ್ಟಿಕಾರ್ಯದ ಸಮಯದಲ್ಲಿ ಎಲ್ಲವನ್ನು ತಮ್ಮ 'ವಾಕ್ಯ’ದ ಮೂಲಕ ಸೃಷ್ಟಿಸಿದರು. ಎಲ್ಲವೂ ಅವರ ನೋಟಕ್ಕೆ ಅದು ಚೆನ್ನಾಗಿ ಕಂಡಿತು. ಹೀಗೆ ಶೂನ್ಯತೆಯಿಂದ ಎಲ್ಲವನ್ನೂ ಸೃಷ್ಟಿಸಿದರು. ಇಲ್ಲದುದರ ತೆರೆಯನ್ನು ತೆಗೆದು ಎಲ್ಲವೂ ಇರುವ ಹಾಗೆ ಉಂಟುಮಾಡಿದರು. ಎಲ್ಲವೂ ಅವರಿಂದ ಬಂದಿದೆ ಮತ್ತು ಅವರಲ್ಲಿಗೆ ತೆರಳುತ್ತದೆ. ಎಲ್ಲದರಲ್ಲಿ ಭಗವಂತನ ಪ್ರೀತಿಯಿದೆ. ಇಂದಿನ ಶುಭಸಂದೇಶದಲ್ಲಿ ಯೇಸು ಮೂಕ ಕಿವುಡನಿಗೆ ಕೇಳಲು ಮತ್ತು ಮಾತನಾಡಲು ಇದ್ದ ತೆರೆಯನ್ನು ತೆಗೆದು ಪುನಃ ಕೇಳಲು ಮತ್ತು ಮಾತನಾಡಲು ಶಕ್ತಿಯನ್ನು ನೀಡುತ್ತಾರೆ. ’ತೆರೆಯಲಿ’ ಎಂಬ ಮಾತುಗಳಿಂದ ಅವನನ್ನು ಗುಣಪಡಿಸುತ್ತಾರೆ. ಸೃಷ್ಟಿಕಾರ್ಯದ ಸಮಯದಲ್ಲಿ ಇಲ್ಲದುದರ ತೆರೆಯನ್ನು ತೆಗೆದ ಹಾಗೆ ಮೂಕ ಕಿವುಡನ, ಕಿವುಡುತನ ಹಾಗೂ ಮೂಕತನದ ತೆರೆಯನ್ನು ತೆಗೆದು ಹೊಸ ಚೈತನ್ಯವನ್ನು ನೀಡುತ್ತಾರೆ
ಯೇಸುಕ್ರಿಸ್ತರು ದೇವರ ಪ್ರೀತಿಯನ್ನು ಪ್ರಕಟಿಸುತ್ತಾರೆ - ಮೂಕ ಕಿವುಡನಿಗೆ ದೇವರ ಸ್ತುತಿಗಾನ ಮಾಡಲು, ಅವರ ಮಹಿಮೆಗೆ ಸಾಕ್ಷಿಯಾಗಿ ಬಾಳಲು ಮಾತು ಮತ್ತು ಕೇಳುವ ಶಕ್ತಿಯನ್ನು ಯೇಸು ನೀಡುತ್ತಾರೆ. ನಮಗೆ ಇಂಥಹ ಒಂದು ಶಕ್ತಿಯಿದೆ ಅದನ್ನು ನಾವು ಎಷ್ಟು ಮಟ್ಟಿಗೆ ದೇವರ ನಾಮವನ್ನು, ಅವರ ಮಹಿಮೆಯನ್ನು ಸಾರಲು ಬಳಸುತ್ತೇವೆ? ಯೇಸುವು ನಮ್ಮನ್ನು ಮುಟ್ಟಿ ತೆರೆಯಲಿ ಎಂದು ಹೇಳಬೇಕಾದ ಸಂದರ್ಭ ಬಾರದಂತೆ ಎಚ್ಚರ ವಹಿಸೋಣ.
ಯೇಸುಕ್ರಿಸ್ತರಿಗೆ ಸಾಕ್ಷಿಗಳಾಗಿ ಬಾಳಬೇಕು- ನಮಗೆ ದೇವರು ನೀಡಿರುವ ಸರ್ವ ವರದಾನಗಳನ್ನು ಬಳಸಿ ಅವರಿಗೆ ಸಾಕ್ಷಿಗಳಾಗಿ ಬದುಕಬೇಕಾಗಿರುವ ಅನಿವಾರ್ಯತೆ ನಮ್ಮ ಪ್ರಸ್ತುತ ಕಾಲದ್ದಾಗಿದೆ. ಪ್ರೀತಿಯ ಗೋಪುರಗಳನ್ನು ಕಟ್ಟಬೇಕು ಹಾಗೂ ಕ್ರಿಸ್ತ ಈ ಲೋಕಕ್ಕೆ ಬಂದು ದೇವರ ಸಾಮ್ರಾಜ್ಯವನ್ನು ನಿರ್ಮಿಸುವ ಕಾಯಕದಲ್ಲಿ ನಮ್ಮನ್ನೇ ತೊಡಗಿಸಿಕೊಳ್ಳಬೇಕು
--------------------
ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment