Saturday, 8 February 2020

ಸಾಧಾರಣ ಕಾಲದ ಐದನೆಯ ಮಂಗಳವಾರ

ಫೆಬ್ರವರಿ 11, 2020 / ಮಂಗಳವಾರ
ಪವಿತ್ರ ವಾಚನ:  1 ಅರಸುಗಳು 8: 22-23, 27- 30
ಕೀರ್ತನೆ: 84:3, 4, 5, 10, 11
ಶುಭಸಂದೇಶ: ಮಾರ್ಕ7: 1-13
ಲೂರ್ದು ಮಾತೆಯ ಮಹೋತ್ಸವ
--------------------
ಪವಿತ್ರ ವಾಚನ:  1 ಅರಸುಗಳು 8: 22-23, 27- 30
22 : ಬಳಿಕ ಸೊಲೊಮೋನನು ಇಸ್ರಯೇಲರೆಲ್ಲರ ಎದುರಿನಲ್ಲಿ ಸರ್ವೇಶ್ವರನ ಬಲಿಪೀಠದ ಮುಂದೆ ನಿಂತು, ಆಕಾಶದ ಕಡೆಗೆ ಕೈಗಳನ್ನೆತ್ತಿ, ಹೀಗೆ ಪ್ರಾರ್ಥಿಸಿದನು:
23 : “ಇಸ್ರಯೇಲ್ ದೇವರಾದ ಸರ್ವೇಶ್ವರಾ, ಭೂಲೋಕದಲ್ಲೂ ಪರಲೋಕದಲ್ಲೂ ನಿಮಗೆ ಸಮಾನರಾದ ದೇವರಿಲ್ಲ; ಪೂರ್ಣಮನಸ್ಸಿನಿಂದ ನಿಮಗೆ ಪ್ರಾಮಾಣಿಕರಾಗಿ ನಡೆದುಕೊಳ್ಳುವಂಥ ಭಕ್ತರ ಬಗ್ಗೆ ನಿಮ್ಮ ಒಡಂಬಡಿಕೆಯನ್ನೂ ಕೃಪೆಯನ್ನೂ ನೆರವೇರಿಸುವವರು ನೀವು.
27 : “ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವರೋ? ಆಕಾಶವೂ, ಉನ್ನತೋನ್ನತ ಆದ ಆಕಾಶವೂ, ನಿಮ್ಮ ವಾಸಕ್ಕೆ ಸಾಲದು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ತಾನೆ ಸಾಕಾದೀತು?
28 : ಆದರೂ ನನ್ನ ದೇವರೇ, ಸರ್ವೇಶ್ವರಾ, ನಿಮ್ಮ ದಾಸನ ಪ್ರಾರ್ಥನೆಗೂ ವಿಜ್ಞಾಪನೆಗೂ ಕಿವಿಗೊಡಿ; ಈ ದಿನ ನಿಮ್ಮನ್ನು ಪ್ರಾರ್ಥಿಸುತ್ತಿರುವ ನಿಮ್ಮ ದಾಸನ ಮೊರೆಯನ್ನು ಆಲಿಸಿರಿ.
29 : ಈ ಸ್ಥಳವನ್ನು ಕುರಿತು ‘ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವುದು’ ಎಂದು ಹೇಳಿದವರೇ, ನಿಮ್ಮ ಕಟಾಕ್ಷವು ಹಗಲಿರುಳೂ ಈ ಮಂದಿರದ ಮೇಲಿರಲಿ; ಇಲ್ಲಿ ನಿಮ್ಮ ದಾಸನು ನಿಮ್ಮನ್ನು ಪ್ರಾರ್ಥಿಸುವಾಗಲೆಲ್ಲಾ ಅವನಿಗೆ ಸದುತ್ತರವನ್ನು ದಯಪಾಲಿಸಿರಿ.
30 : ನಿಮ್ಮ ದಾಸನಾದ ನಾನಾಗಲಿ, ನಿಮ್ಮ ಪ್ರಜೆಗಳಾದ ಇಸ್ರಯೇಲರಾಗಲಿ, ಈ ಸ್ಥಳದ ಕಡೆಗೆ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸಿದರೆ ನಿಮ್ಮ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸಿರಿ.
------------------
ಕೀರ್ತನೆ: 84:3, 4, 5, 10, 11
ಹೇ ಪ್ರಭು,  ನಿವಾಸಗಳೆನಿತೋ ಸುಂದರ
3 : ಸ್ವಾಮಿ ದೇವ, ಎನ್ನರಸ, ಸ್ವರ್ಗಸೇನಾಧೀ ಶ್ವರ / ದೊರಕಿದೆ ಗುಬ್ಬಿಗೆ ಗೂಡು ನಿನ್ನ ವೇದಿಕೆಯ ಹತ್ತಿರ / ಪಾರಿವಾಳಕ್ಕು ಅಲ್ಲೇ ಇದೆ ಮರಿಯಿಡಲು ಆಗರ //
4 : ನಿನ್ನ ಮಂದಿರದಲಿ ವಾಸಿಸುವವರು ಧನ್ಯರು / ನಿರಂತರವು ನಿನ್ನ ಗುಣಗಾನ ಮಾಡುವರವರು //
5 : ನಿನ್ನಿಂದ ಶಕ್ತಿಪಡೆಯುವವರು ಧನ್ಯರು / ಸಿಯೋನ್ ಶಿಖರಕ್ಕವರು ಪ್ರಿಯ ಯಾತ್ರಿಕರು //
6 : ದಾಟುವಾಗ ಬಾಕಾ ಕಣಿವೆಯನು / ಚಿಲುಮೆಗಳನಾಗಿ ಮಾಡುವರದನು // ಮುಂಗಾರು ಮಳೆಯು ಸುರಿಯಲು / ತುಂಬಿ ತುಳುಕುವುದಾ ಸರಸಿಗಳು //
7 : ಸಾಗುಸಾಗುತ್ತಾ ಬೆಳೆವುದಾ ಯಾತ್ರಿಕರ ಚೇತನ / ಪಡೆವರು ಸಿಯೋನ್ ಗಿರಿಯೊಳು ದೇವಾಧಿದೇವನ ದರ್ಶನ //
8 : ಸ್ವರ್ಗಸೇನಾಧೀಶ್ವರ, ಸ್ವಾಮಿದೇವ ಕಿವಿಗೊಡು ನನ್ನ ಮೊರೆಗೆ / ಯಕೋಬ ಕುಲದೇವಾ, ನನ್ನ ಪ್ರಾರ್ಥನೆ ಬೀಳಲಿ ನಿನ್ನ ಕಿವಿಗೆ //
9 : ನಿನ್ನ ಮಂದಿರದಲಿ ಕಳೆದ ದಿನವೊಂದು / ತಿಳಿವೆನು ಸಾವಿರ ದಿನಕೂ ಮೇಲೆಂದು //
10 : ದುರುಳರ ಬಿಡಾರದಲಿ ನಾ ವಾಸಮಾಡುವುದರ ಬದಲು / ನಿನ್ನಾಲಯದ ದ್ವಾರಪಾಲಕನಾಗಿರುವುದೆ ಮೇಲು //
11 : ದೇವನೆಮಗೆ ಬೆಳಕು ಕೊಡುವ ಸೂರ್ಯನು / ಕಾದಿಟ್ಟು ರಕ್ಷಿಸುವ ಗುರಾಣಿಯು / ಸನ್ಮಾರ್ಗಿಗೆ ಈವನು ಸಕಲ ವರಗಳನು //
12 : ಪ್ರಭುವೇ, ಸ್ವರ್ಗಸೇನಾಧೀಶ್ವರನೇ / ನಿನ್ನಲಿ ನಂಬಿಕೆ ಇಡುವವನೇ ಧನ್ಯನು /
---------------------
ಶುಭಸಂದೇಶ: ಮಾರ್ಕ7: 1-13
1 : ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುಸ್ವಾಮಿಯ ಬಳಿಗೆ ಬಂದು ಸೇರಿದರು.
2 : ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಅವರು ನೋಡಿದರು.
3 : ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿಬದ್ಧವಾಗಿ ತೊಳೆಯದೆ ಊಟ ಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ.
4 : ಪೇಟೆ ಬೀದಿಗಳಿಗೆ ಹೋಗಿ ಬಂದರೆ ಸ್ನಾನಮಾಡಿಯೇ ಊಟಮಾಡುವುದು; ತಂಬಿಗೆ, ಚೆಂಬು, ತಪ್ಪಲೆಗಳನ್ನು ಸೂತ್ರಬದ್ಧವಾಗಿ ತೊಳೆಯುವುದು; ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದುವು.
5 : ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ, “ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ಧವಾದ ಕೈಗಳಿಂದಲೇ ಅವರು ಊಟ ಮಾಡುತ್ತಿದ್ದಾರಲ್ಲಾ?” ಎಂದು ಯೇಸುವನ್ನು ಕೇಳಿದರು.
6 : ಅದಕ್ಕೆ ಯೇಸು, “ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ:
7 : ‘ಬರಿಯ ಮಾತಿನ ಮನ್ನಣೆಯನೀಯುತ, ಹೃದಯವನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೆ ದೇವವಾಕ್ಯವೆಂದು ಉಪದೇಶಿಸುತ, ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ! ಎಂದರು ದೇವರು.’
8 : “ನೀವು ದೇವರ ಆಜ್ಞೆಯನ್ನು ತೊರೆದು ಮಾನವನಿರ್ಮಿತ ಸಂಪ್ರದಾಯಗಳನ್ನು ನಿಷ್ಠೆಯಿಂದ ಪರಿಪಾಲಿಸುತ್ತಿದ್ದೀರಿ.
9 : ಸಂಪ್ರದಾಯದ ನೆವದಲ್ಲಿ ದೇವರ ಆಜ್ಞೆಗಳನ್ನು ನೀವು ಜಾಣ್ಮೆಯಿಂದ ಬದಿಗೊತ್ತಿರುವುದು ಬಲು ಚೆನ್ನಾಗಿದೆ!
10 : ‘ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು; ತಂದೆಯನ್ನಾಗಲೀ ತಾಯಿಯನ್ನಾಗಲೀ ದೂಷಿಸುವವನಿಗೆ ಮರಣದಂಡನೆ ಆಗಲೇಬೇಕು,’ ಎಂಬುದು ಮೋಶೆ ವಿಧಿಸಿದ ಆಜ್ಞೆ.
11 : ನೀವಾದರೋ, ಒಬ್ಬನು ತನ್ನ ತಂದೆಗೆ ಅಥವಾ ತಾಯಿಗೆ ‘ನನ್ನಿಂದ ನಿಮಗೆ ಸಲ್ಲತಕ್ಕದ್ದು “ಕೊರ್ಬಾನ್” (ಎಂದರೆ ದೇವರಿಗೆ ಮುಡಿಪು) ಎಂದು ಹೇಳಿಬಿಟ್ಟರೆ ಸಾಕು,
12 : ಮುಂದೆ ಅವನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನೂ ಮಾಡುವುದಕ್ಕೆ ನೀವು ಬಿಡುವುದಿಲ್ಲ.
13 : “ಹೀಗೆ ನೀವು ಬೋಧಿಸುವ ಸಂಪ್ರದಾಯಗಳಿಂದಾಗಿ ದೇವರ ವಾಕ್ಯವನ್ನೇ ನಿರರ್ಥಕಗೊಳಿಸುತ್ತೀರಿ. ಇಂಥಾ ಕೃತ್ಯಗಳು ಇನ್ನೆಷ್ಟೋ!” ಎಂದರು.
-------------------
ಚಿಂತನೆ:
ನಾವು ಯಾವುದೇ ಕಾರ್ಯಕ್ರಮಕ್ಕೆ, ಸಡಗರದ ಸಂಭ್ರಮಾಚರಣೆಗೆ ಹೋಗುವುದಾದರೆ ಸರ್ವ ಸಿದ್ಧತೆಗಳನ್ನು ಮಾಡಿಕೊಂಡು ಹೋಗುತ್ತೇವೆ. ಹೊಸ ಉಡುಪು, ಸಮಯಕ್ಕೆ ಮುಂಚಿತಾವಾಗಿ ಹೋಗುವ ತರಾತುರಿ, ಸ್ವಲ್ಪ ಮೇಕಪ್, ಹೀಗೆ ಸರ್ವಸಿದ್ಧರಾಗಿ, ಎಲ್ಲರ ಮುಂದೆ ಸಜ್ಜನರಾಗಿ ಕಾಣುವ ಹಾಗೆ ಅಲಂಕೃತರಾಗಿ ಹೋಗುತ್ತೇವೆ. ಹೋದಲ್ಲಿ ಸಭ್ಯತೆಯಿಂದ ವರ್ತಿಸುತ್ತೇವೆ. ಆದರೆ ಇಂದಿನ ಶುಭಸಂದೇಶದಲ್ಲಿ ಯೇಸು ಮತ್ತು ಅವರ ಶಿಷ್ಯರು ಕೆಲವು ಪದ್ಧತಿಗಳನ್ನು ಪಾಲಿಸದೆ ಇರುವುದು ಧರ್ಮಶಾಸ್ತ್ರಿಗಳ ಖಂಡನೆಗೆ ಒಳಗಾಗುತ್ತದೆ. 
ಧರ್ಮಶಾಸ್ತ್ರಿಗಳು ಬಾಹ್ಯ ಶುದ್ಧಿಗೆ ಒತ್ತು ಕೊಡುತ್ತಾರೆ, ಆದರೆ ಯೇಸುಕ್ರಿಸ್ತರು ಆಂತರಿಕ ಶುದ್ಧಿಗೆ ಮಹತ್ವವನ್ನು ನೀಡುತ್ತಾರೆ. ಬಾಹ್ಯ ಅಥವಾ ಹೊರಗಿನ ಶುಚಿತ್ವ ಅಗತ್ಯವಾದದ್ದು, ಆದರೆ ಆಂತರಿಕ ಶುದ್ಧಿಯು ಇನ್ನಷ್ಟು ಅಧಿಕ ಮಹತ್ವ್ನ ಪಡೆಯಬೇಕು. ದೇವರು ನಮ್ಮ ಅಂತರಂಗವನ್ನು ನೋಡುತ್ತಾರೆ. ಅಲ್ಲಿ ಯಾವುದೇ ತರಹದ ಕಲ್ಮಷವಿದ್ದರೆ ದೇವರು ಅಲ್ಲಿ ತಂಗಲು ಅದು ಒಂದು ಉತ್ತಮ ಸ್ಥಳವಾಗುವುದಿಲ್ಲ. ನಮ್ಮ ದಿನಚರಿಯಲ್ಲಿ ಅಂತರಂಗ ಶುದ್ಧಿಗೆ ನಾವು ಆದ್ಯತೆ ಕೊಡಬೇಕು. ಅಲ್ಲಿ ಕ್ರಿಸ್ತ ತಂಗಬೇಕು. ತಮ್ಮ ಕೈಕಾಲು ದೇಹ ಶುದ್ಧವಾದರೆ ದೇವರು ಮೆಚ್ಚುತ್ತಾರೆ ಎಂದು ನಂಬಿದ್ದ ಫರಿಸಾಯರಿಗೆ ಯೇಸುಕ್ರಿಸ್ತರು ಮನಸ್ಸು ಮತ್ತು ಹೃದಯವನ್ನು ಶುದ್ದಗೊಳಿಸಲು ನೀಡಿದ ಕರೆ ನಮಗೂ ಅನ್ವಯಿಸುತ್ತದೆ. 
ತಾನು ಕಟ್ಟಿಸಿದ ಭವ್ಯವಾದ ದೇವಾಲಯವು ದೇವರ ವಾಸಕ್ಕೆ ಸಾಲದು, ಆದ್ದರಿಂದ ತಾನು ಪ್ರಾರ್ಥಿಸುವಾಗಲೆಲ್ಲಾ ಸದುತ್ತರ ನೀಡುವಂತೆ ಸೊಲೊಮೋನನು ಮಾಡುವ ಬಿನ್ನಹ ಅವನ ಅಂತರಂಗದ ಅಭಿಲಾಷೆಯನ್ನು ತೋರ್ಪಡಿಸುತ್ತದೆ. ಇಂಥಹ ಮನೋಭಾವ ನಮ್ಮಲ್ಲೂ ಇರಲಿ ಎಂದು ಪ್ರಾರ್ಥಿಸೋಣ.
----------
ಶುದ್ಧಾಚಾರದ ಕಾರ್ಯ
ಬಲಿಯರ್ಪಣೆಗೆ ಮುನ್ನ ಯಾಜಕರು ತಮ್ಮ ಕೈಗಳನ್ನು ತೊಳೆಯುತ್ತಿದ್ದರು (ವಿಮೋಚನ ಕಾಂಡ 30:17) ಈ ವಾಕ್ಯವನ್ನು ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು ಇತರ ಶುದ್ಧಾಚಾರದ ಕಾರ್ಯಗಳಿಗೂ ಅನ್ವಯಿಸುತ್ತಿದ್ದರು. ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು ಬಾಹ್ಯ ಶುದ್ಧತೆಗೆ ಹೆಚ್ಚಿನ ಮಹತ್ವವನ್ನು ನೀಡಿದರು ಹೊರತು ಆಂತರಿಕ ಶುದ್ಧತೆಗಲ್ಲ. ಹಾಗಾಗಿ ಕ್ರಿಸ್ತ ಅವರನ್ನು ಸುಣ್ಣ ಬಳಿದ ಸಮಾಧಿಗಳು, ಕಪಟಿಗಳು ಎಂದು ಖಂಡಿಸಿದರು. ಧರ್ಮ ಬಯಸುವುದು ಬಾಹ್ಯ ಶುದ್ಧತೆಯನ್ನಲ್ಲ ಬದಲಾಗಿ ಅಂತರಂಗದ ಶುದ್ಧತೆಯನ್ನು ಎಂದು ಕ್ರಿಸ್ತ ಸ್ಪಷ್ಟಪಡಿಸುತ್ತಿದ್ದಾರೆ. ಬಾಹ್ಯ ಆಚರಣೆಗಳು, ಮಾನವ ನಿರ್ಮಿತ ಸಂಪ್ರದಾಯಗಳು, ನಿಜ ಧರ್ಮವಲ್ಲ ಎಂದು ಕ್ರಿಸ್ತ ಮನದಟ್ಟು ಮಾಡುತ್ತಾರೆ.ನಾವು ಹೊಸ ಮನುಷ್ಯರಾಗಿ ಮಾರ್ಪಾಡಾಗಬೇಕಿದೆ.
----------------------------
ಲೂರ್ದು ಮಾತೆಯ ಮಹೋತ್ಸವ
ಲೂರ್ದು ಮಾತೆಯ ಹಬ್ಬ
ಇಂದು ಲೂರ್ದು ಮಾತೆಯ ಹಬ್ಬ 1858ರ ಫೆಬ್ರವರಿ 11 ರಿಂದ ಜುಲೈ 16ರ ಅಂತರದಲ್ಲಿ ಮಾತೆ ಮರಿಯಳು 14 ವರ್ಷದ ಬರ್ನಡೆಟ್ ಎಂಬ ಬಾಲಕಿಗೆ 18 ಬಾರಿ ದರ್ಶನ ನೀಡುತ್ತಾರೆ. ಫ್ರಾನ್ಸ್ ದೇಶದ ಲೂರ್ದುನಗರದ ಮಸಬಿಯೆಲ್ ಎಂಬ ಗುಹೆಯೊಂದರಲ್ಲಿ ದೇವಮಾತೆಯು ಕಾಣಿಸಿಕೊಳ್ಳುತ್ತಾರೆ. ಮಾತೆ ಮರಿಯಳು ಬೆರ್ನಡೆಟ್ಟಳಿಗೆ ಮಾಡಿದ ಕೋರಿಕೆಯಂತೆ ಈ ಗುಹೆಯ ಬಂಡೆಯ ಮೇಲೆ ಒಂದು ಬ??ಲಿಕಾ ಕಟ್ಟಲಾಯಿತು. 1901ರಲ್ಲಿ ಜಪಸರ ಮಾತೆ ದೇವಾಲಯದ ನಿರ್ಮಾಣವಾಗುತ್ತೆ. 1907ರ ಫೆಬ್ರವರಿ 11ರಂದು ಲೂರ್ದುಮಾತೆ ಹಬ್ಬವನ್ನು ಆಚರಿಸುವ ಪದ್ದತಿಯನ್ನು ವಿಶ್ವಧರ್ಮಸಭೆಗೆ ಅಂದಿನ ಜಗದ್ಗುರು 10ನೇ ಭಕ್ತಿನಾಥರು ಆರಂಭಿಸಿದರು. ವಿಶ್ವದ ಬೇರೆಬೇರೆ ಸ್ಥಳಗಳಿಂದ ಪ್ರತಿವರ್ಷ ಲಕ್ಷಾಂತರ ಯಾತ್ರಿಕರು ಲೂರ್ದು ನಗರಕ್ಕೆ ಬರುತ್ತಾರೆ ಮತ್ತು ಮಾತೆ ಮರಿಯಳಲ್ಲಿ ತಮ್ಮ ಹರಕೆ, ಕೋರಿಕೆಗಳನ್ನು ಸಲ್ಲಿಸುತ್ತಾರೆ. ಲೂರ್ದು ಮಾತೆಯ ಮಧ್ಯಸ್ಥಿಕೆಯಿಂದ ಸಾವಿರಾರು ರೋಗಿಗಳು ಸೌಖ್ಯ ಪಡೆಯುತ್ತಿದ್ದಾರೆ. ಬರ್ನಡೆಟ್ಳಿಗೆ ಲೂರ್ದು ಮಾತೆ ನೀಡಿದ ಸಂದೇಶ, ಪಾಪಿಗಳಿಗಾಗಿ ಪ್ರಾರ್ಥಿಸಿ, ಜಪಸರ ಪ್ರಾರ್ಥಿಸಿ ಮತ್ತು ತಾನು ಅಮಲೋದ್ಬವ ಮಾತೆಯೆಂದು.ನಾವು ಹೊಸ ಮನುಷ್ಯರಾಗಿ ಮಾರ್ಪಾಡಾಗಬೇಕಿದೆ.
---------------

ಲೂರ್ದು ಮಾತೆಯ ಸ್ಮರಣೆ
ಕಾಲಕಾಲಕ್ಕೆ ಮಾತೆಮರಿಯಮ್ಮನವರ ದರ್ಶನ ಪಡೆಯುವ ಸೌಭಾಗ್ಯ ಕಥೋಲಿಕ ಧರ್ಮಸಭೆಗೆ ಸಿಕ್ಕಿದೆ. ಆಕೆ ಪ್ರತೀ ದರ್ಶನದಲ್ಲೂ ಒಂದೊಂದು ವಿಶೇಷ ಸಂದೇಶವನ್ನು ಜಗತ್ತಿಗೆ ಶ್ರುತಪಡಿಸಿದ್ದಾರೆ. ಈ ಸತ್ಯವನ್ನು ನಿರೂಪಿಸಲು ಸಾಕ್ಷ್ಯಾಧಾರಗಳೂ ಇವೆ. 1858ರ ಫೆಬ್ರವರಿ 11ರಿಂದ ಜುಲೈ 16ರ ಅಂತರದಲ್ಲಿ ಮಾತೆ ಮೇರಿ ಹದಿನಾಲ್ಕು ವರ್ಷದ ಮರಿಯ ಬರ್ನದೆತ್ ಎಂಬ ಹುಡುಗಿಗೆ 18 ಬಾರಿ ಕಾಣಿಸಿಕೊಂಡರು. ದಕ್ಷಿಣ ಫ್ರಾನ್ಸ್ನ ಲೂರ್ದು ನಗರದ ಮ್ಯಾಸಬೆಲ್ಲೆ ಎಂಬ ಗುಹೆಯೊಂದರಲ್ಲಿ ದೇವಮಾತೆಯ ಈ ದರ್ಶನಗಳಾದವು. ಮಾತೆ ಮೇರಿ ಸಂತ ಬರ್ನದೆತ್ತಳಿಗೆ ಮಾಡಿದ ಕೋರಿಕೆಂತೆ ಈ ಗುಹೆಯ ಬಂಡೆಯ ಮೇಲೆ ಒಂದು ಬೆಸಿಲಿಕಾ ಕಟ್ಟಲಾಯಿತು. ಅನೇಕರು ಲೂರ್ದು ಮಾತೆಯ ಮಧ್ಯಸ್ಥಿಕೆಯಿಂದ ರೋಗಗಳಿಂದ ಗುಣಮುಖರಾಗಿದ್ದಾರೆ. ಅದಕ್ಕೆ ಕಾರಣ ದೇವಮಾತೆ ಅಲ್ಲಿ ಒಮ್ಮೆ ದರ್ಶನ ನೀಡಿದರು ಎಂಬ ಕಾರಣಕ್ಕಲ್ಲ ಬದಲಾಗಿ ಇಂದಿಗೂ ಅಲ್ಲಿ ನೆಲೆಸಿದ್ದಾರೆ ಎಂಬ ಕಾರಣಕ್ಕೆ. ಅಲ್ಲಿ ಬಂದು ವಿಶ್ವಾಸದಿಂದ ಪ್ರಾರ್ಥಿಸಿದ ಸಾಕಷ್ಟು ಭಕ್ತಾದಿಗಳು ಅದ್ಭುತಗಳನ್ನು ಕಂಡಿದ್ದಾರೆ. ಸೌಖ್ಯವನ್ನು ಪಡೆದಿದ್ದಾರೆ. ನೆಮ್ಮದಿಯನ್ನು ಕಂಡುಕೊಂಡಿದ್ದಾರೆ. ಕಾನಾ ಊರಿನ ವಿವಾಹದ ಸಂದರ್ಭದಲ್ಲಿ ದ್ರಾಕ್ಷಾರಸದ ಕೊರತೆಯನ್ನು ನೀಗಿಸಿದ ಮಾತೆ ನಮ್ಮ ಕಷ್ಟ-ನೋವುಗಳನ್ನು ದೂರವಾಗಿಸಲಿ. 
ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment