Saturday, 8 February 2020

ಸಾಧಾರಣ ಕಾಲದ ಐದನೆಯ ಸೋಮವಾರ

ಫೆಬ್ರವರಿ 10/ ಸೋಮವಾರ
ಪವಿತ್ರ ವಾಚನ: 1 ಅರಸುಗಳು 8:1-7, 9-13
ಕೀರ್ತನೆ : 132:6-7, 8-10
ಶುಭಸಂದೇಶ: ಮಾರ್ಕ 6:53-56
ಸಂತ ಸ್ಕೋಲಾಸ್ತಿಕ (ಕನ್ಯೆ)
---------------------
 ಪವಿತ್ರ ವಾಚನ: 1 ಅರಸುಗಳು 8:1-7, 9-13
1 : ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ದಾವೀದನಗರವಾದ ಸಿಯೋನಿನಿಂದ ದೇವಾಲಯಕ್ಕೆ ತರುವುದಕ್ಕಾಗಿ, ಇಸ್ರಯೇಲರ ಹಿರಿಯರು, ಕುಲಗಳ ನಾಯಕರು, ಇವರೇ ಮೊದಲಾದ ಎಲ್ಲ ಇಸ್ರಯೇಲ್ ಪ್ರಮುಖ ವ್ಯಕ್ತಿಗಳು ಜೆರುಸಲೇಮಿಗೆ, ತನ್ನ ಆಸ್ಥಾನಕ್ಕೆ, ಬರಬೇಕೆಂದು ಅರಸ ಸೊಲೊಮೋನನು ಆಜ್ಞಾಪಿಸಿದನು.
2 : ಅಂತೆಯೇ ಆ ಇಸ್ರಯೇಲರೆಲ್ಲರು ಏಳನೆಯ ತಿಂಗಳಾದ ಆಶ್ವಯುಜ ಮಾಸದಲ್ಲಿ ಜಾತ್ರೆಯಾಗಿ ಅರಸ ಸೊಲೊಮೋನನ ಬಳಿಗೆ ಕೂಡಿಬಂದರು.
3 : ಇಸ್ರಯೇಲರ ಹಿರಿಯರೆಲ್ಲರು ಹೀಗೆ ಕೂಡಿ ಬಂದಿರಲು ಯಾಜಕರು ಸರ್ವೇಶ್ವರನ ಮಂಜೂಷವನ್ನು ಹೊತ್ತುಕೊಂಡರು.
4 : ಉಳಿದ ಯಾಜಕರೂ ಲೇವಿಯರೂ ದೇವದರ್ಶನದ ಗುಡಾರ ಹಾಗು ಅದರಲ್ಲಿದ್ದ ಪವಿತ್ರ ವಸ್ತುಗಳನ್ನು ಹೊತ್ತರು.
5 : ಅರಸ ಸೊಲೊಮೋನನು ಹಾಗು ಅಲ್ಲಿ ಕೂಡಿ ಬಂದಿದ್ದ ಎಲ್ಲ ಇಸ್ರಯೇಲರೂ ಮಂಜೂಷದ ಮುಂದೆ ಅಸಂಖ್ಯವಾದ ಕುರಿದನಗಳನ್ನು ಬಲಿದಾನ ಮಾಡಿದರು.
6 : ಯಾಜಕರು ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಮಹಾಪರಿಶುದ್ಧ ಸ್ಥಳವೆನಿಸುವ ಗರ್ಭಗುಡಿಯಲ್ಲಿ, ಕೆರೂಬಿಗಳ ರೆಕ್ಕೆಗಳ ಕೆಳಗೆ, ಅದಕ್ಕೆ ನೇಮಕವಾದ ಸ್ಥಳದಲ್ಲಿಟ್ಟರು.
7 : ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದವುಗಳಾಗಿದ್ದುದರಿಂದ ಮಂಜೂಷವು ಹಾಗು ಅದರ ಕೋಲುಗಳು ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು.
8 : ಆ ಕೋಲುಗಳು ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗುಡಿಯ ಎದುರಿನಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು. ಆದರೆ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲಿಯೇ ಇರುತ್ತವೆ.
9 : ಮಂಜೂಷದಲ್ಲಿ ಎರಡು ಶಿಲಾಶಾಸನಗಳನ್ನು ಬಿಟ್ಟರೆ, ಬೇರೇನೂ ಇರಲಿಲ್ಲ. ಸರ್ವೇಶ್ವರ ಈಜಿಪ್ಟಿನಿಂದ ಬಂದ ಇಸ್ರಯೇಲರೊಡನೆ ಹೋರೇಬ್ ಬೆಟ್ಟದ ಬಳಿ ಒಡಂಬಡಿಕೆ ಮಾಡಿಕೊಂಡಮೇಲೆ, ಮೋಶೆ ಆ ಶಾಸನಗಳನ್ನು ಅದರಲ್ಲಿ ಇಟ್ಟಿದ್ದನು.
10 : ಯಾಜಕರು ಆ ಪರಿಶುದ್ಧ ಸ್ಥಳದಿಂದ ಹೊರಗೆ ಬಂದಕೂಡಲೆ ಮೇಘವು ಸರ್ವೇಶ್ವರನ ಆಲಯವನ್ನು ತುಂಬಿಕೊಂಡಿತು.
11 : ಸರ್ವೇಶ್ವರನ ತೇಜಸ್ವಿನಿಂದ ವ್ಯಾಪ್ತವಾಗಿದ್ದ ಆ ಮೇಘವು ಆಲಯವನ್ನು ಆವರಿಸಿಕೊಂಡಿದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾಗಲಿಲ್ಲ.
12 : ಆಗ ಸೊಲೊಮೋನನು ಹೀಗೆಂದು ಪ್ರಾರ್ಥಿಸಿದನು:
13 : “ಹೇ ಸರ್ವೇಶ್ವರ, ರವಿಯನು ಆಗಸದಲ್ಲಿ ಸ್ಥಿರವಿರಿಸಿದ ನೀವು ಆರಿಸಿಕೊಂಡಿರಿ, ಕರಿಮೋಡದಲಿ ವಾಸಿಸಲು ನಾ ನಿರ್ಮಿಸಿರುವ ಈ ಭವ್ಯ ಮಂದಿರ ನಿಮಗಾಗಲಿ ಶಾಶ್ವತವಾದ ನಿವಾಸ.”
--------------------
ಕೀರ್ತನೆ : 132:6-7, 8-10
ನಿನ್ನಾ ವಾಸಸ್ಥಾನವನು ಬಂದು ಸೇರು ಬೇಗನೆ
6 : ಮಂಜೂಷವನು ಕುರಿತು ಕೇಳಿದೆವು ಎಫ್ರಾತಾದಲಿ / ನಮಗದು ಕಾಣಬಂದಿತು ಆ ಯಹಾರ್ ಮೈದಾನದಲಿ
7 : ಹೋಗೋಣ ಬನ್ನಿರಿ ಆತನ ಮಂದಿರಕೆ / ಅಡ್ಡಬೀಳೋಣ ಆತನ ಪಾದಪೀಠಕೆ
8 : ಆಗಮಿಸು ಪ್ರಭು, ನಿನ್ನ ತೇಜೋ ಮಂಜೂಷದೊಡನೆ / ನಿನ್ನಾ ವಾಸಸ್ಥಾನವನು ಬಂದು ಸೇರು ಬೇಗನೆ
9 : ನೀತಿಭೂಷಿತರಾಗಲಿ ನಿನ್ನ ಯಾಜಕರು / ಆನಂದ ಘೋಷಮಾಡಲಿ ನಿನ್ನ ಭಕ್ತಜನರು
10 : ನಿನ್ನ ದಾಸ ದಾವೀದನ ಪ್ರಯುಕ್ತ / ತಳ್ಳಲ್ಪಡದಿರಲಿ ನಿನ್ನಾ ಅಭಿಷಿಕ್ತ
-------------------
ಶುಭಸಂದೇಶ: ಮಾರ್ಕ 6:53-56
53 : ಅವರೆಲ್ಲರು ಸರೋವರವನ್ನು ದಾಟಿ ಗೆನಸರೇತ್ ಊರಿನ ದಡ ಸೇರಿದರು.
54 : ಅವರು ದೋಣಿಯನ್ನು ಕಟ್ಟಿ, ಅದರಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುಸ್ವಾಮಿಯ ಗುರುತು ಹಚ್ಚಿದರು. ಒಡನೆ ಸುತ್ತಮುತ್ತಲೆಲ್ಲಾ ಓಡಾಡಿ, ರೋಗಿಗಳನ್ನು ಹಾಸಿಗೆಗಳ ಸಹಿತ ಹೊತ್ತುಕೊಂಡು, ಯೇಸು ಎಲ್ಲೆಲ್ಲಿ ಇದ್ದಾರೆಂದು ಕೇಳಿದರೋ ಅಲ್ಲೆಲ್ಲಾ ಹೋಗತೊಡಗಿದರು.
55 : ಯೇಸು ಹಳ್ಳಿಗಳಿಗಾಗಲಿ ಪಟ್ಟಣಪಾಳೆಯಗಳಿಗಾಗಲಿ ಹೋದಾಗಲೆಲ್ಲಾ ಜನರು ರೋಗಿಗಳನ್ನು ಅಲ್ಲಿಯ ಸಂತೆಬೀದಿ ಚೌಕಗಳಿಗೆ ಕರೆ ತರುತ್ತಿದ್ದರು.
56 : ಅವರ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಯೇಸುವನ್ನು ಬೇಡಿಕೊಳ್ಳುತ್ತಿದ್ದರು. ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದುತ್ತಿದ್ದರು.
----------------
ಚಿಂತನೆ:
ಪ್ರಭುಕ್ರಿಸ್ತರ ಇರುವಿಕೆಯನ್ನು ನಮ್ಮ ಜೀವನದಲ್ಲಿ ನಾವು ಹೇಗೆ ಅನುಭವಿಸುತ್ತೇವೆ? ಇಂದಿನ ಶುಭಸಂದೇಶದಲ್ಲಿ ಯೇಸುಕ್ರಿಸ್ತರು ದೋಣಿಯಿಂದ ಇಳಿದಾಗ ಜನರು ಅವರನ್ನು ಗುರುತಿಸಿದರು ಎಂದು ನಾವು ಓದುತ್ತೇವೆ. ಜನರು ಯೇಸುವಿನಲ್ಲಿ ಏನನ್ನು ಗುರುತಿಸಿದರು? ದೇವಪುತ್ರ? ಲೋಕರಕ್ಷಕ? ಪ್ರವಾದಿ? ಗುಣಪಡಿಸುವವ? ಜನರು ಯೇಸುವಿನಲ್ಲಿ ಒಂದು ಅಗೋಚರವಾದ ಆದರೂ ಅನುಭವಿಸಬಹುದಾದ ದೇವರ ಶಕ್ತಿಯನ್ನು ಕಂಡರು. ಆ ಶಕ್ತಿ ಜನರಿಗೆ ರೋಗರುಜಿನಗಳಿಂದ ಮುಕ್ತಿಯನ್ನು, ಸ್ವಾಸ್ಥ್ಯವನ್ನು ನೀಡಿತು. `ಅವರ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಯೇಸುವನ್ನು ಬೇಡಿಕೊಳ್ಳುತ್ತಿದ್ದರು.’ ಹೀಗೆ ಆಳವಾದ ವಿಶ್ವಾಸ ಹಾಗೂ ದೃಢವಾದ ನಂಬಿಕೆ ಜನರ ಜೀವಾಳವಾಯಿತು.
ಮೊದಲನೆಯ ವಾಚನದಲ್ಲಿ ಸೊಲೊಮೋನನು ದೇವರಿಗೆ ಮಂದಿರವನ್ನು ಸ್ಥಾಪಿಸಿ ಅವರ ಇರುವಿಕೆಯನ್ನು ಅನುಭವಿಸಲು ಪ್ರಯತ್ನಿಸಿದನು. ತನ್ನ ವಿಶ್ವಾಸದಲ್ಲಿ ಬೆಳೆಯಲು ಮುಂದಾದನು.
ನಮ್ಮ ವಿಶ್ವಾಸ ಎಷ್ಟು ಆಳವಾಗಿದೆ? ಪ್ರಭುಕ್ರಿಸ್ತರ ಇರುವಿಕೆ ನಮಗೆ ಪ್ರೇರಣೆಯಾಗುತ್ತದೆಯೇ? ಇಂದಿನ ಈ ಪ್ರಸ್ತುತ ಪ್ರಪಂಚದಲ್ಲಿ ನಮ್ಮ ವಿಶ್ವಾಸವು ದೇವರ ವಾಕ್ಯವನ್ನು ಕೇಳಲು ಹಾಗೂ ಅದರಂತೆ ನಡೆಯಲು ಕರೆ ನೀಡುತ್ತದೆ. ಪೂಜೆ, ಜಪ-ತಪ, ಪ್ರಾಯಶ್ಚಿತ್ತ ಇವುಗಳ ಜೊತೆಗೆ ಪ್ರೀತಿ, ಕರುಣೆ, ದಯೆಯ ಪ್ರತಿಬಿಂಬಗಳು ನಾವಾಗಬೇಕು.
ಇಂದು ನಾವು ಹತ್ತು ಹಲವು ವಿಷಯಗಳಲ್ಲಿ ತಲ್ಲೀನರಾಗಿದ್ದೇವೆ. ನಮಗೆ ಪ್ರಭುವಿನ ಉಡುಪಿನ ಅಂಚನ್ನು ಮುಟ್ಟುವಷ್ಟೂ ಸಮಯವಿಲ್ಲ. ನಾವು Busy ಪ್ರಪಂಚದಲ್ಲಿ ಇದ್ದೇವೆ. ಪೂಜೆ ಸಂಸ್ಕಾರಾಚರಣೆ ಒಂದು ಪದ್ಧತಿಯಾಗಿ ಹೋಗಿದೆ. ಪ್ರಭುವಿಗೆ ಸಮಯ ಕೊಡಲು ನಮಗೆ ಆಗುತ್ತಿಲ್ಲ. ಹೀಗಾದರೆ ನಮ್ಮ ವಿಶ್ವಾಸದ ಗತಿ? ಚಿಂತಿಸೋಣ. ಸರಿಯಾದುದನ್ನು, ನೈಜವಾದುದನ್ನು ಮಾತ್ರ ಆರಿಸೋಣ, ಪ್ರಭವನ್ನು ಅರಸೋಣ.
-----------------
ಇಂದಿನ ಸಂತರು

ಸಂತ ಸ್ಕೊಲಾಸ್ಟಿಕ

ಇಟಲಿಯಲ್ಲಿ ಶ್ರೀಮಂತ ತಂದೆ ತಾಯಿಗಳ ಮಗಳಾಗಿ ಜನಿಸಿದ ಈ ಸಂತರು ’ತಮ್ಮ ಚಿಕ್ಕ ವಯಸ್ಸಿನಲ್ಲೇ ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡರು’ ಎಂದು ಸಂತ ಗ್ರೆಗೋರಿ ದ ಗ್ರೇಟ್ ನುಡಿಯುತ್ತಾರೆ. ಮೌಂಟ್ ಕಸಿನೋ ಎಂಬ ಸ್ಥಳದಲ್ಲಿ ಇನ್ನೂ ಕೆಲವು ದೈವಕರೆ ಪಡೆದ ಮಹಿಳೆಯರೊಂದಿಗೆ ತಮ್ಮ ಸನ್ಯಾಸಿ ಜೀವನವನ್ನು ಆರಂಭಿಸುತ್ತಾರೆ. ನಾಲ್ಕು ಗೋಡೆಗಳ ಮಧ್ಯೆ ಬದುಕುತ್ತಾ, ಪ್ರಾರ್ಥನೆಯಲ್ಲಿ ನಿರತರಾಗುತ್ತಾ, ದೈವವಾಕ್ಯವನ್ನು ಧ್ಯಾನಿಸುತ್ತ, ಪ್ರಭುಯೇಸುವನ್ನು ಹೆಚ್ಚೆಚ್ಚು ಪ್ರೀತಿಸಲು ಪ್ರಯತ್ನಿಸುತ್ತಾರೆ. ನಿಸ್ವಾರ್ಥ ಬದುಕಿನ ಮೂಲಕ ಪ್ರಭುಯೇಸುವಿನ ತ್ಯಾಗವನ್ನು ಅನುಕರಿಸುವುದರಲ್ಲಿ ನಿರತರಾಗುತ್ತಾರೆ. ದೈವಾನುಗ್ರಹಭರಿತರಾದ ಅವರ ಪ್ರಾರ್ಥನೆಗಳ ಮುಖಾಂತರ ಹಲವು ವ್ಯಕ್ತಿಗಳು ತಮ್ಮ ರೋಗರುಜಿನಗಳಿಂದ ಸೌಖ್ಯ ಪಡೆದ ದಾಖಲೆಗಳಿವೆ. ಕೆಲವು ಧಾರ್ಮಿಕ ಸಂಸ್ಥೆಗಳ ಪಾಲಕಿಯಾಗಿರುವ ಈ ಸಂತರ ಮಧ್ಯಸ್ಥಿಕೆಯನ್ನು ಬಿರುಗಾಳಿ ಹಾಗೂ ಮತ್ತಿತರ ಪ್ರಾಕೃತಿಕ ವಿಕೋಪಗಳ ಸಂಧರ್ಭಗಳಲ್ಲಿ ಕೋರುವ ಪ್ರತೀತಿ ಕಥೋಲಿಕ ಧರ್ಮಸಭೆಯಲ್ಲಿದೆ. 
ಚಿತ್ರಗೂಗಲ್‌ ಕೃಪೆ
© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ
--------------

No comments:

Post a Comment