Saturday, 8 February 2020

ಸಾಧಾರಣ ಕಾಲದ ಐದನೆಯ ಬುಧವಾರ

ಫೆಬ್ರವರಿ 12, 2020 / ಬುಧವಾರ
ಪವಿತ್ರ ವಾಚನ:  1 ಅರಸುಗಳು 10:1-10
ಕೀರ್ತನೆ: 37:5-6, 30-31, 39-40
ಶುಭಸಂದೇಶ: ಮಾರ್ಕ7:14-23
-----
1 ಅರಸುಗಳು 10:1-10
1 : ಸರ್ವೇಶ್ವರನ ನಾಮಮಹತ್ತಿನಿಂದ ಸೊಲೊಮೋನನ ಕೀರ್ತಿ ಹರಡಿತು. ಇದನ್ನು ಕೇಳಿದ ಶೆಬದ ರಾಣಿ ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕೆ ಬಂದಳು.
2 : ಆಕೆ ಸುಗಂಧ ದ್ರವ್ಯ, ಅಪರಿಮಿತವಾದ ಬಂಗಾರ, ರತ್ನ, ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು ಮಹಾ ಪರಿವಾರದೊಡನೆ ಜೆರುಸಲೇಮಿಗೆ ಬಂದಳು. ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು.
3 : ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಟ್ಟನು; ಅರಸನಿಗೆ ಬಿಡಿಸಲು ಕ್ಷಿಷ್ಟವಾದ ಒಗಟು ಒಂದೂ ಇರಲಿಲ್ಲ.
4 : ಶೆಬದ ರಾಣಿ ಸೊಲೊಮೋನನ ಹಲವಿಧವಾದ ಜ್ಞಾನೋಕ್ತಿಗಳನ್ನು ಕೇಳಿದಳು;
5 : ಅವನು ಕಟ್ಟಿಸಿದ ಅರಮನೆ, ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನು ಮತ್ತು ಸರ್ವೇಶ್ವರನ ಆಲಯದಲ್ಲಿ ಅವನು ಸಮರ್ಪಿಸುತ್ತಿದ್ದ ದಹನಬಲಿಗಳನ್ನು ನೋಡಿದಳು. ಇವುಗಳಿಂದ ಆಶ್ಚರ್ಯಚಕಿತಳಾಗಿ,
6 : “ನಾನು ನನ್ನ ದೇಶದಲ್ಲಿ ನಿಮ್ಮ ಜ್ಞಾನವನ್ನೂ ಸಾಧನೆಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ.
7 : ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವುದಕ್ಕೆ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಲಿಲ್ಲ; ಈಗ ನೋಡಿದರೆ ನಿಮ್ಮ ಜ್ಞಾನ ವೈಭವಗಳು, ನಾನು ಕೇಳಿದ್ದಕ್ಕಿಂತ ಮಿಗಿಲಾಗಿವೆ. ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ವರದಿ ಮಾಡಿರಲಿಲ್ಲ.
8 : ನಿಮ್ಮ ಪ್ರಜೆಗಳು ಭಾಗ್ಯವಂತರು! ಸದಾ ನಿಮ್ಮ ಸನ್ನಿಧಿಯಲ್ಲಿದ್ದು ನಿಮ್ಮ ಜ್ಞಾನ ವಾಕ್ಯಗಳನ್ನು ಕೇಳುವ ನಿಮ್ಮ ಸೇವಕರು ಧನ್ಯರು!
9 : ನಿಮ್ಮನ್ನು ಮೆಚ್ಚಿ ಇಸ್ರಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿಮ್ಮ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ಅವರು ಇಸ್ರಯೇಲರನ್ನು ಸದಾ ಪ್ರೀತಿಸುವವರಾಗಿರುವುದರಿಂದ ಆ ಜನರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕಾಗಿ ನಿಮ್ಮನ್ನು ಅರಸನನ್ನಾಗಿ ನೇಮಿಸಿದ್ದಾರೆ,” ಎಂದು ಹೇಳಿದಳು.
10 : ಆಕೆ ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂಗೂ ಹೆಚ್ಚು ಬಂಗಾರವನ್ನು, ಅಪರಿಮಿತ ಸುಗಂಧದ್ರವ್ಯವನ್ನು ಹಾಗು ರತ್ನಗಳನ್ನು ಕೊಟ್ಟಳು. ಶೆಬದ ರಾಣಿ ಅರಸ ಸೊಲೊಮೋನನಿಗೆ ಕೊಟ್ಟಷ್ಟು ಸುಗಂಧದ್ರವ್ಯವನ್ನು ಬೇರೆ ಯಾರೂ ಈ ನಾಡಿಗೆ ಕೊಟ್ಟಿರಲಿಲ್ಲ.
------
ಕೀರ್ತನೆ: 37:5-6, 30-31, 39-40
5 : ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು / ಭರವಸೆಯಿಂದಿರು, ಆತನದನು ಸಾಗಿಸುವನು //
6 : ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ / ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ //
30 : ಸಜ್ಜನರ ಬಾಯಿ ಆಡುವುದು ಸುಜ್ಞಾನವನು / ಅವನ ನಾಲಿಗೆ ನುಡಿವುದು ನ್ಯಾಯನೀತಿಯನು //
31 : ಅವನ ಎದೆಯಲ್ಲಿದೆ ದೇವರ ನಿಯಮ / ನೆಲೆತಪ್ಪದು ಅವನ ನಡತೆಯ ಕ್ರಮ //
39 : ಸಜ್ಜನರ ಜೀವೋದ್ಧಾರ ಪ್ರಭುವಿನಿಂದ / ಆಪತ್ಕಾಲದಲಿ ಆಶ್ರಯ ಆತನಿಂದ //
40 : ತನ್ನಾಶ್ರಿತರನು ಪ್ರಭು ಕೈ ನೀಡಿ ಕಾಪಾಡುವನು / ದುಷ್ಟರ ವಶದಿಂದವರನು ತಪ್ಪಿಸಿ ಉದ್ಧರಿಸುವನು //
--------------
ಶುಭಸಂದೇಶ: ಮಾರ್ಕ7:14-23
14 : ಅನಂತರ ಯೇಸುಸ್ವಾಮಿ ಜನರ ಗುಂಪನ್ನು ತಮ್ಮ ಬಳಿಗೆ ಕರೆದು,
15 : “ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ: ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿಗೊಳಿಸುವುದಿಲ್ಲ.
16 : ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. (ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ)” ಎಂದರು.
17 : ಯೇಸು ಜನರ ಗುಂಪನ್ನು ಬಿಟ್ಟು ಮನೆ ಸೇರಿದ ಬಳಿಕ ಶಿಷ್ಯರು, ಅವರ ಬಳಿಗೆ ಬಂದು ಆ ಸಾಮತಿಯ ಅರ್ಥವೇನೆಂದು ಕೇಳಿದರು.
18 : ಅದಕ್ಕೆ ಅವರು, “ನೀವು ಕೂಡ ಮಂದಮತಿಗಳೋ? ನಿಮಗೂ ಇದು ಅರ್ಥವಾಗದೋ?
19 : ಹೊರಗಿನಿಂದ ಮನುಷ್ಯನ ಒಳಕ್ಕೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. (ಹೀಗೆ ಆಹಾರ ಪದಾರ್ಥಗಳು ಯಾವುವೂ ಅಶುದ್ಧವಲ್ಲವೆಂದು ಯೇಸು ಸೂಚಿಸಿದರು.)
20 : ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮುವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ.
21 : ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ,
22 : ಕೆಡುಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತವೆ.
23 : ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ಧ ಮಾಡುತ್ತವೆ,” ಎಂದರು.
--------------
ಚಿಂತನೆ
ಸೊಲೊಮೋನನ ಬುದ್ಧಿಮತ್ತೆಯ ಹಾಗೂ ಸಂಪತ್ತಿನ ಕುರಿತು ದೇಶವಿದೇಶಗಳಲ್ಲಿ ನೂರಾರು ದಂತಕತೆಗಳು ಹುಟ್ಟಿಕೊಂಡಿದ್ದವು. ಅವನ ಕೀರ್ತಿಯನ್ನು ಕೇಳಿ ಶೆಬದ ರಾಣಿಯು ಅಪಾರ ಚಿನ್ನ ಮತ್ತು ಸುಗಂಧದ್ರವ್ಯಗಳ ಉಡುಗೊರೆ ತಂದು ಸರ್ವೇಶ್ವರ ದೇವರು ಯೆಹೂದ್ಯರ ಮೇಲೆ ತೋರುತ್ತಿರುವ ಪ್ರೀತಿ ವಾತ್ಸಲ್ಯ ಕಾಳಜಿಗಳನ್ನು ಕಂಡು ವಿಸ್ಮಿತಳಾಗುತ್ತಾಳೆ. ಶೆಬದ ರಾಣಿಯ ಭೇಟಿಯು ಯೆಹೂದ್ಯರಿಗೆ ಸಾರ್ವಕಾಲಿಕ ಸ್ಮರಣೆಯಾಗುತ್ತದೆ, ಯೇಸುಸ್ವಾಮಿಯೂ ಆ ಭೇಟಿಯನ್ನು ಉಲ್ಲೇಖಿಸುತ್ತಾರೆ. ಯೇಸು ಹೇಳುವ ಪ್ರಕಾರ ಎಲ್ಲ ಮನುಜರಿಗೂ ದೇವರು ಜ್ಞಾನವನ್ನು ಕೊಟ್ಟಿರುತ್ತಾರೆ. ಅದನ್ನು ನಾವು ವಿವೇಕಯುತವಾಗಿ ಬಳಸಬೇಕು. ಅಂತರಂಗದಲ್ಲಿ ಕೆಟ್ಟ ಆಲೋಚನೆಗಳಿದ್ದರೆ ಅದರಿಂದ ಕೆಟ್ಟ ವಿಚಾರಗಳು ಹೊರಹೊಮ್ಮುತ್ತವೆ. ಮನುಷ್ಯನು ಯÁವ ಪದಾರ್ಥವನ್ನು ತಿನ್ನುತ್ತಾನೆ ಎಂಬುದರಿಂದ ಅವನನ್ನು ಅಳೆಯಬಾರದು, ಅವನು ಹೊರಹಾಕುವ ವಿಚಾರಗಳೇ ಅವನು ಏನೆಂದು ತಿಳಿಸುತ್ತವೆ. 
ಆದ್ದರಿಂದ ನಮ್ಮ ಬಾಹ್ಯ ಸಂಪ್ರದಾಯದ ಆಚರಣೆಗಿಂತಲೂ ಅಂತರಂಗದ ಶುದ್ಧೀಕರಣ ಅತ್ಯವಶ್ಯವೆಂದು ಯೇಸು ಹೇಳುತ್ತಾರೆ.  ಮಾರ್ಕನು ವಾಕ್ಯ 21 ರಲ್ಲಿ ಅಂತರಂಗದಿಂದ ಹೊರಹೊಮ್ಮುವ ಸುಮಾರು 12 ದುರಾಲೋಚನೆಗಳನ್ನು ಪಟ್ಟಿ ಮಾಡುತ್ತಾನೆ. ಮಾನವನ ಹೃದಯಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳತನ, ಕೊಲೆ, ವ್ಯಭಿಚಾರ, ಲೋಭ, ಕೆಡುಕುತನ, ಮೋಸ, ಭಂಡತನ, ಅಸೂಯೆ, ಅಹಂಕಾರ, ಮೂರ್ಖತನ ಮೊದಲಾದುವು ಹೊರಬರುತ್ತದೆ. ನಾವು ಸಹ ಅನೇಕ ಸಂಪ್ರದಾಯಗಳಿಗೆ ಬದ್ಧರಾಗಿ ಕೆಲವೊಂದು ಸಲ ನಿಜವಾದ ದೇವರಿಂದ ದೂರವಿರುತ್ತೇವೆ. ಅಂತಹ ಸಂದರ್ಭದಲ್ಲಿ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳವುದು ಉಚಿತ. ನಾವು ಗಮನದಲ್ಲಿಡಬೇಕಾದ ಒಂದು ಅಂಶವೆಂದರೆ ಯಾವುದೇ ಕೆಟ್ಟದು ನಮ್ಮ ಅಂತರಂಗದಿಂದ ಮಾತ್ರ ಹೊರಬರಲು ಸಾಧ್ಯ. ಆದ್ದರಿಂದ ಅಂತರಂಗದ ಶುದ್ಧಿಗಾಗಿ ಪಯತ್ನಿಸೋಣ.
----------------
ಯೆಹೂದ್ಯ ಮುಖಂಡರ ಶೋಷಣೆ
ಶುಭಸಂದೇಶಕಾರ ಮಾರ್ಕನು ತನ್ನ 7ನೇ ಅಧ್ಯಾಯದಲ್ಲಿ ಯೆಹೂದ್ಯರ ಆರ್ಥಹೀನ ಸಂಪ್ರದಾಯ, ಆಚಾರ-ವಿಚಾರಗಳನ್ನು ತೀವ್ರವಾಗಿ ಖಂಡಿಸುತ್ತಾನೆ. ಯೇಸುವಿನ ಪ್ರತಿಯೊಂದು ಪವಾಡವು ಮತ್ತು ಬೋಧನೆಯು ದೇವರ ಪ್ರೀತಿಯನ್ನೂ ದಯೆಯನ್ನೂ ವ್ಯಕ್ತಪಡಿಸುತ್ತವೆ. ಆದರೆ ಯೆಹೂದ್ಯ ಮುಖಂಡರು ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಜನಸಾಮಾನ್ಯರನ್ನು ಶೋಷಿಸುತ್ತಿದ್ದರು. ಯೆಹೂದ್ಯರ ಪ್ರಕಾರ ಒಬ್ಬ ವ್ಯಕ್ತಿ ಹಲವು ಕಾರಣಗಳಿಗೆ ಅಶುದ್ಧವಾಗುತ್ತಿದ್ದ ಕುಷ್ಠರೋಗಿಯನ್ನಾಗಲಿ ಅಥವಾ ಅವನ ಬಟ್ಟೆಯನ್ನಾಗಲಿ ಸ್ಪರ್ಶಿಸಿದರೆ (ಸಂಖ್ಯಾ 13:4), ಅಶುದ್ಧ ಪ್ರಾಣಿ ಪಕ್ಷಿಗಳ ಸೇವನೆ (ಯಾಜಕ 11) ಹಾಗೂ ದೇಹದ ಗುಪ್ತಾಂಗಗಳಿಗೆ ಸಂಬಂಧಿಸಿದ ಎಲ್ಲಾ ಕ್ರಿಯೆಗಳು ಅಶುದ್ಧ್ದವೆಂದು ಭಾವಿಸಿದ್ದರು. ಈ ರೀತಿಯ ನಿಯಮಗಳಿಗೆ ಯೇಸು ಹೊಸ ಅರ್ಥ ನೀಡುತ್ತಾರೆ. ಬಾಹ್ಯ ಶುದ್ಧತೆಗಿಂತ ಆಂತರಿಕ ಶುದ್ಧತೆಗೆ ನಾವು ಶ್ರಮಿಸಬೇಕೆಂದು ತಿಳಿಸುತ್ತಾರೆ.
---------------
© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment