Sunday, 2 February 2020

ಸಾಧಾರಣ ಕಾಲದ ಐದನೆಯ ಭಾನುವಾರ

09 ಫೆಬ್ರವರಿ  2020
ಭಾನುವಾರ/ಹಸಿರು/ಸಾಧಾರಣ ಕಾಲದ ಐದನೆಯ ಭಾನುವಾರ
1ನೇ  ವಾಚನ  -   ಯೆಶಾಯ 58:7-10
ಕೀರ್ತನೆ  -   112:4-5,6-7,8-9 
ಎರಡನೆಯ ವಾಚನ ; ೧ ಕೊರಿ2:1-5     
ಶುಭಸಂದೇಶ  -  ಮತ್ತಾಯ 5:13-16
----------------------
1ನೇ  ವಾಚನ  -   ಯೆಶಾಯ 58:7-10
7 : ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆಹೊದಿಸುವುದು, ನಿನ್ನ ರಕ್ತ ಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸವ್ರತ?
8 : “ಇದನ್ನು ಆಚರಿಸುವಾಗ ನೀವು ಉದಯ ಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು.
9 : ಆಗ ನೀವು ಪ್ರಾರ್ಥಿಸಿದರೆ, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ ‘ಇಗೋ ಆಲಿಸುತ್ತಿದ್ದೇನೆ’ ಎನ್ನುವರು. ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿಂದ ತೊಲಗಿಸಿದರೆ
10 : ಹಾಗೂ ಹಸಿದವರಿಗೆ ಜೀವನಾಂಶವನ್ನೂ ಬಡವರಿಗೆ ಅಗತ್ಯವಾದುದನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅಂಧಕಾರ ನೀಗಿ ಮಧ್ಯಾಹ್ನವಾಗುವುದು.
-------------------
ಕೀರ್ತನೆ  -   112:4-5,6-7,8-9 
4 : ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು / ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು //
5 : ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತ / ನ್ಯಾಯದಿಂದ ವ್ಯವಹರಿಸುವಂಥಾ ಮನುಜನು ಭಾಗ್ಯವಂತ //
6 : ಅಚಲನಾಗಿರುವನು ನೀತಿವಂತನು / ಮರೆಯಲಾರರು ಎಂದಿಗೂ ಆತನನು //
7 : ಅಶುಭವಾರ್ತೆಯ ಭಯಭೀತಿ ಯಾವುದೂ ಅವನಿಗಿಲ್ಲ / ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ //
8 : ದೃಢವಿದೆ ಅವನ ಮನ, ಎದೆಗುಂದನವನು / ಕಾಣುವನು ದುರುಳರಿಗಾಗುವ ದಂಡನೆಯನು //
9 : ಉದಾರತೆಯಿಂದ ಕೊಡುವನು ಬಡವರಿಗೆ / ಫಲಿಸುವುದು ಅವನಾ ನೀತಿ ಸದಾಕಾಲಕೆ / ಮಹಿಮೆತರುವ ಕೋಡುಮೂಡುವುದು ಅವನಿಗೆ //
---------------------
ಎರಡನೆಯ ವಾಚನ ; ೧ ಕೊರಿಂ2:1-5 
1 : ಸಹೋದರರೇ, ದೇವರ ಸತ್ಯಾರ್ಥವನ್ನು ಸಾರಲು ನಿಮ್ಮಲ್ಲಿಗೆ ನಾನು ಬಂದಾಗ ವಾಕ್ಚಾತುರ್ಯವನ್ನಾಗಲಿ, ಜ್ಞಾನಾಡಂಬರವನ್ನಾಗಲಿ ಪ್ರದರ್ಶಿಸುತ್ತಾ ಬರಲಿಲ್ಲ.
2 : ನಾನು ನಿಮ್ಮೊಡನೆ ಇದ್ದಾಗ, ಯೇಸುಕ್ರಿಸ್ತರನ್ನು, ಅದೂ ಶಿಲುಬೆಗೇರಿಸಲಾದ ಯೇಸುವನ್ನು ಹೊರತು ಬೇರೆ ಯಾವುದನ್ನೂ ಅರಿಯಲು ಆಶಿಸಲಿಲ್ಲ.
3 : ಈ ಕಾರಣ, ನಾನು ನಿಮ್ಮ ನಡುವೆ ದುರ್ಬಲನೂ ಭಯಭೀತನೂ ಆಗಿದ್ದೆ.
4 : ನನ್ನ ಬೋಧನೆ ಹಾಗೂ ಮಾತುಕತೆ ಕೇವಲ ಬುದ್ಧಿವಂತಿಕೆಯಿಂದಾಗಲಿ ಮಾತಿನ ಚಮತ್ಕಾರದಿಂದಾಗಲಿ ಕೂಡಿರಲಿಲ್ಲ; ಅದಕ್ಕೆ ಬದಲಾಗಿ ದೇವರ ಆತ್ಮವನ್ನು, ಅವರ ಶಕ್ತಿಯನ್ನು ಸಮರ್ಥಿಸುತ್ತಿದ್ದವು.

5 : ಅಂತೆಯೇ ನಿಮ್ಮ ವಿಶ್ವಾಸವು ಮನುಷ್ಯ ಜ್ಞಾನವನ್ನು ಆಧರಿಸದೆ, ದೇವರ ಶಕ್ತಿಯನ್ನು ಆಧರಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು.
-----------------
ಶುಭಸಂದೇಶ  -  ಮತ್ತಾಯ 5:13-16
13 : "ಈ ಧರೆಗೆ ನೀವೇ ಉಪ್ಪು; ಉಪ್ಪೇ ಸಪ್ಪೆಯಾಗಿಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ. ದಾರಿಗರು ಅದನ್ನು ತುಳಿದುಬಿಡುತ್ತಾರಷ್ಟೆ."
14 : "ಜಗತ್ತಿಗೆ ನೀವೇ ಜ್ಯೋತಿ. ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿಡಲಾಗದು.
15 : ಅಂತೆಯೇ ಯಾರೂ ದೀಪವನ್ನು ಹಚ್ಚಿ ಬಟ್ಟಲ ಕೆಳಗೆ ಬಚ್ಚಿಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೆ ಬೆಳಕನ್ನು ಕೊಡುತ್ತದೆ.
16 : ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ."
---------------------

ಮುನ್ನುಡಿ
 ಮಾನವನ ಜೀವನ ಅರ್ಥಗರ್ಭಿತವಾದದ್ದು. ಧರೆಗೆ ಬೆಳಕಿನಂತೆ ಪ್ರಜ್ವಲಿಸಲು, ಉಪ್ಪಿನಂತೆ ಇತರರ ಜೀವನಕ್ಕೆ ಸ್ವಾದವನ್ನೀಯಲು ಕರೆಯನ್ನು ಹೊಂದಿದ್ದಾಗಿದೆ ಇಂದಿನ ಆರಾಧನಾ ವಿಧಿಯ ವಾಚನಗಳು. ಸ್ವಾರ್ಥವನ್ನು ತೊರೆದು, ಜೀವನದಲ್ಲಿ ನಿಜವಾದ ಅರ್ಥವನ್ನು ಸೇವೆಯ ಮೂಲಕ ಕಂಡುಕೊಳ್ಳುವಂತೆ, ಧರೆಗೆ ಬೆಳಕಾಗಿ, ಜಗತ್ತಿಗೆ ಉಪ್ಪಾಗಿ ಜೀವಿಸಲು, ಅಹಂಕಾರವನ್ನು ತ್ಯಜಿಸಿ ಪ್ರಭುವಿನಲ್ಲಿ ವಿಶ್ವಾಸವಿಟ್ಟು, ನಮ್ಮ ದುರ್ಬಲತೆಗಳನ್ನು ಪ್ರಭುವಿಗೆ ಸಮರ್ಪಿಸಿ ದೇವರಿಗೆ ಸಾಕ್ಷಿ ನೀಡುವ ಯೋಗ್ಯ ಜೀವನ  ನಡೆಸಲು ಇಂದಿನ ವಾಚನಗಳು ಕರೆನೀಡುತ್ತವೆ. ಪ್ರಭುವಿನ ಸಾಕ್ಷಿಗಳಾಗಿ ಅವರಿಗೆ ಮೆಚ್ಚುಗೆಯಾಗುವ ಜೀವನವನ್ನು ನಡೆಸಲು ಬೇಕಾದ ಕೃಪಾವರಕ್ಕಾಗಿ ಇಂದಿನ ಬಲಿಪೂಜೆಯಲ್ಲಿ ಪ್ರಾರ್ಥಿಸೋಣ.
ವಾಚನ 1:ಯೆಶಾಯ 58:7-10
ಉಪವಾಸ ವ್ರತವು ಒಂದು ಉತ್ತಮ ಭಕ್ತಿಯ ಆಚರಣೆಯಾಗಿದೆ. ಆದರೆ ದೇವರು ಬಯಸುವ ಉಪವಾಸ ವ್ರತವು ಭಕ್ತಿಯ ಆಚರಣೆಗೂ ಮೀರಿರುವಂತದ್ದು. ನಮ್ಮ ಉಪವಾಸವ್ರತವು ವ್ಯಾಜ್ಯ, ಕಲಹ, ಗುದ್ದಾಟ ಹಾಗೂ ಸ್ವಾರ್ಥದಿಂದ ಕೂಡಿರಬಾರದು. ಬದಲಿಗೆ ಹಸಿದವರಿಗೆ ಅನ್ನ, ನೆಲೆಯಿಲ್ಲದವರಿಗೆ ನೆಲೆ, ಬೆತ್ತಲೆಯಾದವರಿಗೆ ಬಟ್ಟೆಹೊದಿಸುವುದು, ಹೀಗೆ ದೇವರಿಗೆ ಮೆಚ್ಚುಗೆಯಾಗುವ ಹಲವಾರು ಕಾರ್ಯಗಳಿಂದ ತುಂಬಿರಬೇಕು. ಇದು ನಿಜವಾದ ಉಪವಾಸವ್ರತವಾಗಿರುತ್ತದೆ. ಆಗ ಮಾತ್ರ ನಾವು ಉದಯಕಾಲದ ಸೂರ್ಯನಂತೆ ಪ್ರಜ್ವಲಿಸುತ್ತೇವೆ ಎಂಬ ಸಂದೇಶವನ್ನು ಪ್ರವಾದಿ ಯೆಶಾಯನ ಗ್ರಂಥದಿಂದ ಆಲಿಸೋಣ.
ವಾಚನ 2: 1 ಕೊರಿಂಥ 2:1-5
ಯೇಸುವಿನ ವಾಕ್ಯವನ್ನು ಬೋಧನೆ ಮಾಡುವಾಗ ವಾಕ್ಚಾತುರ್ಯವನ್ನಾಗಲಿ, ಜ್ಞಾನಾಡಂಬರವನ್ನಾಗಲಿ ಪ್ರದರ್ಶಿಸುತ್ತಾ ಬರದು. ನಾವು ದುರ್ಬಲರು ಭಯಭೀತರು ದೇವರ ಜ್ಞಾನದಿಂದ, ಆತ್ಮರ ಶಕ್ತಿಯಿಂದ ಸತ್ಯಾರ್ಥ ಸಂದೇಶವನ್ನು ಸಾರುತ್ತಿದ್ದೇವೆ. ಪೌಲನು ಕೊರಿಂಥರಿಗೆ ದೇವರ ಮೇಲೆ ವಿಶ್ವಾಸವಿಟ್ಟು, ದೇವರಶಕ್ತಿಯನ್ನು ಆಧರಿಸಲು ಕರೆನೀಡುವ ಸಂದೇಶವನ್ನು ಆಲಿಸೋಣ
ಶುಭಸಂದೇಶ: ಮತ್ತಾಯ5:13-16
ಪ್ರಬೋಧನೆ
ನಾನು ನಿಮ್ಮ ಕ್ರಿಸ್ತನನ್ನು ಇಷ್ಟಪಡುತ್ತೇನೆ, ನಿಮ್ಮ ಕ್ರೈಸ್ತರನ್ನಲ್ಲ. ನಿಮ್ಮ ಕ್ರೈಸ್ತರು... ಕ್ರಿಸ್ತನಂತಲ್ಲಎಂಬುದಾಗಿ ಮಹಾತ್ಮ ಗಾಂಧಿಯವರು ತಮ್ಮ ಕ್ರೈಸ್ತ ಧರ್ಮದ ಸ್ನೇಹಿತನೊಬ್ಬನಿಗೆ ಹೇಳಿದ್ದರಂತೆ.” ಹಾಗಾದರೆ ಕ್ರಿಸ್ತನಿಗೂ ಕ್ರೈಸ್ತರಿಗೂ ಇರುವ ವ್ಯತ್ಯಾಸವೇನು? ಯೇಸು ಕ್ರಿಸ್ತರು ತಮ್ಮ ತಂದೆಯ ಚಿತ್ತಕ್ಕೆ ಮಣಿದು, ವಿಧೇಯರಾಗಿ ಲೋಕಕ್ಕೆ ಬಂದು, ಜೀವಿಸಿ ನಮ್ಮೆಲ್ಲರ ಪಾಪಕ್ಕಾಗಿ ತಮ್ಮ ಪ್ರಾಣವನ್ನೇ ಧಾರೆಯೆರೆದರು. ಕ್ರೈಸ್ತರಾದ ನಾವು ಸಹ ದೇವರ ಚಿತ್ತಕ್ಕೆ ಮಣಿದು, ವಿಧೇಯರಾಗಿ ಜೀವಿಸಿದರೆ ಮಾತ್ರ ಕ್ರಿಸ್ತನಿಗೂ ಹಾಗೂ ಕ್ರಿಸ್ತರ ಹಿಂಬಾಲಕರಾದ ಕ್ರೈಸ್ತರಿಗೂ ಹೊಂದಾಣಿಕೆ ಇರುತ್ತದೆ. ಕಳೆದ ವಾರದ ಶುಭಸಂದೇಶದಲ್ಲಿ ಯೇಸು ಬಡವರು, ದುಃಖಿಗಳು, ವಿನಯಶೀಲರು, ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು, ದಯಾವಂತರು, ನಿರ್ಮಲ ಹೃದಯಿಗಳು, ಶಾಂತಿಗಾಗಿ ಶ್ರವಿಸುವವರು, ನ್ಯಾಯ ನೀತಿಗಾಗಿ ಹಿಂಸೆ ತಾಳುವವರುಸ್ವರ್ಗಸಾಮ್ರಾಜ್ಯ ಅವರದು ಎಂಬುದಾಗಿ ಹೇಳುತ್ತಾರೆ
ಇಂದಿನ ಶುಭಸಂದೇಶದಲ್ಲಿ ಯೇಸುವಿನ ಹಿಂಬಾಲಕರಾದ ನಮಗೆ ಧರೆಗೆ ಉಪ್ಪು, ಜಗತ್ತಿಗೆ ಜ್ಯೋತಿಯಾಗಲು ಕರೆನೀಡುತ್ತಿದ್ದಾರೆ. ಇಲ್ಲಿ ಯೇಸುವು ನೀವು ಉಪ್ಪಿನಂತೆ ಇರಿ ಹಾಗೂ ಜ್ಯೋತಿಯಂತೆ ಇರಿ ಎಂಬುದಾಗಿ ಹೇಳುತ್ತಿಲ್ಲ ಬದಲಿಗೆ ನೀವೇ ಉಪ್ಪು, ನೀವೇ ಜ್ಯೋತಿ ಎನ್ನುತ್ತಾರೆ. ಇದರ ನಿಜವಾದ ಅರ್ಥವೇನು ಎಂಬುದನ್ನು ಅರಿಯಲು ಪ್ರಯತ್ನಿಸೋಣ
ಉಪ್ಪಿಗೆ ಎರಡು ಪ್ರಮುಖ ಕಾರ್ಯಗಳಿವೆ: ಮೊದಲನೆಯದಾಗಿ ಉಪ್ಪು ಆಹಾರಕ್ಕೆ ರುಚಿ ಕೊಡುತ್ತದೆ, ಎರಡನೆಯದಾಗಿ ಆಹಾರ ಪದಾರ್ಥಗಳನ್ನು ಕೆಡದಂತೆ ಸಂರಕ್ಷಿಸುತ್ತದೆ
ಉಪ್ಪು ಆಹಾರಕ್ಕೆ ರುಚಿ ಕೊಡುತ್ತದೆ- ಉಪ್ಪಿನ ರುಚಿ ನಮ್ಮ ಅರಿವಿಗೆ ಬರುವುದು ಅದರ ಅಂಶ ಕಡಿಮೆ ಇದ್ದಾಗ ಅಥವಾ ಹೆಚ್ಚಾದಾಗ, ಅದು ಮತ್ತೊಂದು ವಸ್ತುವಿನೊಂದಿಗೆ ಸುಲಭವಾಗಿ ಕರಗಿಬಿಡುವಂತದ್ದು. ಉಪ್ಪು ಎಂದೂ ತನ್ನ ರುಚಿಯನ್ನು ಕಳೆದುಕೊಳ್ಳುವುದೇ ಇಲ್ಲ. ಹಾಗೆಯೇ ನೀವೇ ಧರೆಗೆ ಉಪ್ಪು ಎನ್ನುವಾಗ ಕ್ರಿಸ್ತನ ಪ್ರೀತಿಯ ಹಿಂಬಾಲಕರಾದ ನಾವು ಅವರ ಪ್ರೀತಿಯಲ್ಲಿ ಕರಗಿ, ತಮ್ಮ ಸ್ವಂತ ಜೀವನವನ್ನೇ ರುಚಿಗೊಳಿಸಿ. ಪರರ ಸೇವೆಯಲ್ಲಿ ಸುಲಭವಾಗಿ ಬೆರೆತು, ಪರರ ಜೀವನವನ್ನು ರುಚಿಗೊಳಿಸಬೇಕು. ಕ್ರಿಸ್ತನ ಶಿಷ್ಯರಾಗಿರುವ ನಾವು ನಿರರ್ಥಕವಾಗಬಾರದು, ಅವರ ಸಂದೇಶ ನಿಷ್ಪ್ರಯೋಜಕವಾಗಬಾರದು
ಉಪ್ಪು ಆಹಾರ ಪದಾರ್ಥಗಳನ್ನುಸಂರಕ್ಷಿಸುತ್ತದೆ- ಅದು ಕೊಳೆಯದಂತೆ ನೋಡಿಕೊಳ್ಳುತ್ತದೆ. ಅದೇ ರೀತಿ, ಕ್ರಿಸ್ತನ ಹಿಂಬಾಲಕರಾದ ನಾವು ಪಾಪದ ಜೀವನದಿಂದ ದೂರವಿರಬೇಕು. ನಮ್ಮ ಸುತ್ತಲಿನ ಜನರು ಸಹ ಪಾಪದ ಜೀವನ ತೊರೆದು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗುವಂತೆ ಅವರನ್ನು ರಕ್ಷಿಸಬೇಕು
ಜಗತ್ತಿಗೆ ನೀವೇ ಜ್ಯೋತಿ: ಜ್ಯೋತಿಯು ಪರರಿಗೆ ಬೆಳಕನ್ನು ಕೊಡುವ ಸದ್ಗುಣದ ಸಂಕೇತವಾಗಿದೆ ಮತ್ತು ದೇವರೇ ಸದ್ಗುಣದ ಜ್ಯೋತಿಯಾಗಿದ್ದಾರೆ. ಕೀರ್ತನೆಗಳು 119:105ರಲ್ಲಿ ನಿನ್ನ ವಾಕ್ಯ ನನಗೆ ದಾರಿದೀಪ, ನನ್ನ ಕಾಲಿನ ನಡೆಗೆ ಕೈದೀಪಮತ್ತು ಕೀರ್ತನೆಗಳು 27:1 ರಲ್ಲಿನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ, ನಾನಾರಿಗೂ ಅಳುಕೆನು, ನನ್ನ ಬಾಳಿಗಾಧಾರ ಪ್ರಭುವೆ, ನಾನಾರಿಗೂ ಅಂಜೆನುಎಂದು ದೇವರು ಸದ್ಗುಣದ ಜ್ಯೋತಿಯಾಗಿದ್ದಾರೆ ಎಂಬುದಾಗಿ ಕೀರ್ತನೆಕಾರ ನುಡಿದಿದ್ದಾರೆ. 1 ಯೊವಾನ್ನನು 1: 5-7ರಲ್ಲಿ ಆಲಿಸುವುದೇಂದರೆ, ದೇವರೇ ಬೆಳಕು, ಅವರಲ್ಲಿ ಕತ್ತಲು ಎಂಬುದೇ ಇಲ್ಲ. ದೇವರೇ ಬೆಳಕಾಗಿರುವುದರಿಂದ ನಾವೂ ಬೆಳಕಿನಲ್ಲಿ ನಡೆದಾಗ ನಮ್ಮಲ್ಲಿ ಪರಸ್ಪರ ಪ್ರೀತಿ, ಅನ್ಯೋನ್ಯತೆ ಇರುತ್ತದೆ. ಆಗ ದೇವರ ಪುತ್ರನಾದ ಯೇಸುವಿನ ರಕ್ತವು ನಮ್ಮನ್ನು ಎಲ್ಲ ಪಾಪದಿಂದಲೂ ಶುದ್ಧಗೊಳಿಸುತ್ತದೆ
ಇಂದಿನ ಶುಭ ಸಂದೇಶದಲ್ಲಿ ಜಗತ್ತಿಗೆ ನೀವೇ ಜ್ಯೋತಿ ಎನ್ನುವಾಗ, ಒಬ್ಬ ಕ್ರೈಸ್ತನು ಅಂಧಕಾರದಲ್ಲಿ ಇರುವ ಜನರಿಗೆ ದೀಪ ಹೊಂದಿರುವ ವ್ಯಕ್ತಿಯಾಗಿ ಅಲ್ಲ; ಅವನೇ ಬೆಳಕಾಗಿ ಮಾರ್ಗವನ್ನು ತೋರಿಸಬೇಕು; ಅವನ ಹೆಜ್ಜೆಗಳು ಅವನ ಸುತ್ತಲಿನ ಎಲ್ಲರಿಗೂ ಬೆಳಕಾಗಬೇಕು ಎಂದು ಹೇಳುತ್ತಿದ್ದಾರೆ
ಜ್ಯೋತಿಯ ಪರಿಣಾಮಗಳು
ಮೊದಲನೆಯದಾಗಿ ಜ್ಯೋತಿ ಕತ್ತಲೆಯಲ್ಲಿರುವ ಅಸಹಾಯಕರಿಗೆ ದಾರಿಯನ್ನು ತೋರಿಸುತ್ತದೆ
ಎರಡನೆಯದಾಗಿ ಜ್ಯೋತಿಯು ದೇವರು ಸೃಷ್ಠಿಸಿರುವ ಎಲ್ಲಾ ಸೌಂದರ್ಯವನ್ನು ನೋಡಲು ಮತ್ತು ಅವುಗಳ ನಿಜವಾದ ಮೌಲ್ಯವನ್ನು ಪಡೆಯಲು ಸಹಾಯ ಮಾಡುತ್ತದೆ
ಮೂರನೆದಾಗಿ ಜ್ಯೋತಿಯು ಪ್ರಕೃತಿ ಬೆಳೆಯುವಂತೆ ಮಾಡುತ್ತದೆ. ಉದಾರಣೆಗೆ ಒಂದು ಗಿಡ ಉತ್ತಮವಾಗಿ ಬೆಳೆಯಬೇಕಾದರೆ ಬೆಳಕು ಅತ್ಯಾವಶ್ಯಕ
ನಾವು ಬೆಳಕಿನ ಮಕ್ಕಳಾಗಿ, ಪರರಿಗೆ ಬೆಳಕಾಗಲು, ನಿಜವಾದ ಮೌಲ್ಯವನ್ನು ಕಾಣಲು ಮತ್ತು ಉತ್ತಮವಾಗಿ ಬೆಳೆಯಲು ಇಂದಿನ ಮೊದಲನೇ ವಾಚನ ಯೆಶಾಯ 58:7,10 ರಲ್ಲಿ ದಾರಿ ತೋರಿಸುತ್ತದೆ,“ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆಹೊದಿಸುವುದು ಮತ್ತು ಹಸಿದವರಿಗೆ ಜೀವನಾಂಶವನ್ನೂ ಬಡವರಿಗೆ ಅಗತ್ಯವಾದುದನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು,”ಎಂಬುದಾಗಿ ಕೇಳುತ್ತೇವೆ.

ಅದೇ ರೀತಿ ಎರಡನೇ ವಾಚನದಲ್ಲಿ ಸಂತ ಪೌಲರು, ಕೊರಿಂಥಿಯರ ಐಕ್ಯತೆ ಮತ್ತು ಅವರ ವಿಶ್ವಾಸವು ಮನುಷ್ಯಜ್ಞಾನವನ್ನು ಆಧರಿಸದೆ, ದೇವರ ಶಕ್ತಿಯನ್ನು ಆಧರಿಸಬೇಕು ಎಂದು ಉದ್ದೇಶಿಸುತ್ತ ದೇವರ ಮೇಲಿನ ವಿಶ್ವಾಸಧೃಡಗೊಳಿಸಲು ಕರೆ ನೀಡುತ್ತಾರೆ. ಆಹಾರಕ್ಕೆ ಹೇಗೆ ಉಪ್ಪು ಮುಖ್ಯವೂ, ಹಾಗೆಯೇ ನಮ್ಮ ಕ್ರೈಸ್ತಿಯ ಜೀವನಕ್ಕೆ ವಿಶ್ವಾಸ ಬಹಳ ಮುಖ್ಯವಾಗಿದೆ. ವಿಶ್ವಾಸವೆಂಬ ಬುನಾದಿಯ ಮೇಲೆ ನಮ್ಮ ಜೀವನವನ್ನು ಕಟ್ಟಲು ಹಾಗೂ ಧರಗೆ ಉಪ್ಪಾಗಿ, ಜಗತ್ತಿಗೆ ಜ್ಯೋತಿಯಾಗಿ ಯೇಸುವಿನ ಹಿಂಬಾಲಕರಾಗಲು ಬೇಕಾದ ವರಕ್ಕಾಗಿ ದೇವರಲ್ಲಿ ಪ್ರತ್ಯೇಕವಾಗಿ ಪ್ರಾರ್ಥಿಸೋಣ.

No comments:

Post a Comment