ಮಾರ್ಚ್ 9, 2020 ಸೋಮವಾರ [ನೇರಳೆ]
ರೋಮಿನ ಸಂತ ಫ್ರಾನ್ಸೆಸ್ [ಧಾರ್ಮಿಕ ಸಭೆ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ದಾನಿಯೇಲ 9.4-10
ಕೀರ್ತನೆ 79:8-9, 11, 13. ಶ್ಲೋಕ.3, 102:10
ಪ್ರಭೂ, ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನು ದಂಡಿಸದಿರಿ
ಶುಭಸಂದೇಶ: ಲೂಕ 6.36-38
ರೋಮಿನ ಸಂತ ಫ್ರಾನ್ಸೆಸ್ [ಧಾರ್ಮಿಕ ಸಭೆ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ದಾನಿಯೇಲ 9.4-10
ಕೀರ್ತನೆ 79:8-9, 11, 13. ಶ್ಲೋಕ.3, 102:10
ಪ್ರಭೂ, ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನು ದಂಡಿಸದಿರಿ
ಶುಭಸಂದೇಶ: ಲೂಕ 6.36-38
-------------------------
ಮೊದಲ ವಾಚನ: ದಾನಿಯೇಲ 9.4-10
4 : ಪಾಪವನ್ನು ಅರಿಕೆಮಾಡಿ ನನ್ನ ದೇವರಾದ ಸರ್ವೇಶ್ವರನಿಗೆ ಹೀಗೆಂದು ಬಿನ್ನವಿಸಿದೆ: “ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ವಾಗ್ದಾನಗಳನ್ನು ಪ್ರೀತಿಯಿಂದ ನೆರವೇರಿಸುತ್ತೀರಿ.
5 : “ನಾವು ಪಾಪಾಪರಾಧಗಳನ್ನು ಮಾಡಿ, ಕೆಟ್ಟವರಾಗಿ ನಡೆದಿದ್ದೇವೆ; ನಿಮಗೆ ವಿರುದ್ಧ ತಿರುಗಿಬಿದ್ದು, ನಿಮ್ಮ ಆಜ್ಞಾವಿಧಿಗಳನ್ನು ತೊರೆದು ಬಿಟ್ಟಿದ್ದೇವೆ.
6 : ಅರಸರಿಗೆ, ಒಡೆಯರಿಗೆ, ಹಿರಿಯರಿಗೆ ಹಾಗು ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲ.
7 : ಸರ್ವೇಶ್ವರಾ, ನೀವು ಸತ್ಯಸ್ವರೂಪಿ. ನಾವೋ ಲಜ್ಜೆಗೆಟ್ಟವರು. ಹೌದು, ಯೆಹೂದ್ಯರು ಹಾಗು ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆ. ದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಎಲ್ಲ ಇಸ್ರಯೇಲರು ನಾಚಿಕೆಗೆ ಈಡಾಗಿದ್ದಾರೆ.
8 : ಸ್ವಾಮೀ, ನಿಮಗೆ ವಿರುದ್ಧ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಒಡೆಯರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆ.
9 : ನಮ್ಮ ದೇವರಾದ ಸರ್ವೇಶ್ವರ, ನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆ. ಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವು.
10 : ನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಲಿಲ್ಲ. ಅವರ ದಾಸರಾದ ಪ್ರವಾದಿಗಳ ಮುಖಾಂತರ ನಮಗೆ ಗೊತ್ತುಮಾಡಿದ ಸನ್ಮಾರ್ಗದಲ್ಲಿ ನಾವು ನಡೆಯಲಿಲ್ಲ.
-----------------------
ಕೀರ್ತನೆ 79:8-9, 11, 13. ಶ್ಲೋಕ.3, 102:10
ಪ್ರಭೂ, ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನು ದಂಡಿಸದಿರಿ
ಪ್ರಭೂ, ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನು ದಂಡಿಸದಿರಿ
8 : ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ ಮೇಲೆ / ಉರಿಸಂಕಟದಲ್ಲಿರುವೆವು, ತೋರೆಮಗೆ ಕರುಣೆಯನೀಗಲೆ //
9 : ದೇವಾ, ಮುಕ್ತಿದಾತ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ / ಪಾಪಗಳನು ಅಳಿಸಿ ನಮ್ಮನುದ್ಧರಿಸು ನಿನ್ನ ನಾಮದ ಪ್ರಯುಕ್ತ //
10 : “ಅವರ ದೇವರೆಲ್ಲಿ?” ಎಂದು ಮ್ಲೇಚ್ಫರು ಆಡಿಕೊಳ್ಳುವುದೇಕೆ?/ ಆಗಲಿ ಪ್ರತೀಕಾರ ನಿನ್ನ ಸೇವಕರ ರಕ್ತ ಸುರಿಸಿದವರಿಗೆ / ಆಗರ್ಥವಾಗುವುದವರಿಗೆ; ಕಾಣಲಿ ಅದು ನಮ್ಮ ಕಣ್ಗಳಿಗೆ //
11 : ಸೆರೆಹೋಗಿರುವವರ ನರಳಾಟಕೆ ಕಿವಿಗೊಡು ನೀನು / ನಿನ್ನ ಶಕ್ತಿ ಕಾದಿಡಲಿ ಸಾವಿಗೀಡಾಗಿರುವ ಅವರನು //
12 : ಪ್ರಭು, ನಿನ್ನನು ನಿಂದಿಸಿದ ಅನ್ಯಜನರ ಮೇಲೆ / ಎರಗಲಿ ಏಳ್ಮಡಿ ದಂಡನೆ ಅವರೆದೆಯ ಮೇಲೆ //
13 : ಆಗ ಸಲ್ಲಿಸುವೆವು ಸದಾಕಾಲ ಕೃತಜ್ಞತೆಯನು ನಿನಗೆ / ಸ್ಮರಿಸುವೆವು ನಿನ್ನ ಮಹಿಮೆಯನು ತಲತಲಾಂತರದವರೆಗೆ / ಹೇ ದೇವಾ, ನಾವು ನಿನ್ನ ಪ್ರಜೆ, ನೀ ಪಾಲಿಸುವ ಮಂದೆ //
--------------------------
ಶುಭಸಂದೇಶ: ಲೂಕ 6.36-38
36 : ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. ನೀವು ಕೊಟ್ಟ ಅಳತೆಯಲ್ಲೇ ನಿಮಗೆ ಅಳೆಯಲಾಗುವುದು (ಮತ್ತಾ. 7.1-5)
37 : “ನೀವು ಇತರರ ಬಗ್ಗೆ ತೀರ್ಪುಕೊಡಬೇಡಿ, ಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲ; ಪರರನ್ನು ದಂಡನೆಗೆ ಗುರಿಮಾಡಬೇಡಿ, ದೇವರು ನಿಮ್ಮನ್ನೂ ದಂಡನೆಗೆ ಗುರಿಮಾಡುವುದಿಲ್ಲ.
38 : ಪರರನ್ನು ಕ್ಷಮಿಸಿರಿ, ದೇವರು ನಿಮ್ಮನ್ನೂ ಕ್ಷಮಿಸುವರು; ಪರರಿಗೆ ಕೊಡಿ, ದೇವರು ನಿಮಗೂ ಕೊಡುವರು; ಅಳತೆಯಲ್ಲಿ ತುಂಬಿ, ಕುಲುಕಿ, ಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರು. ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು,” ಎಂದರು.
-----------------------
ಚಿಂತನೆ
ಚಿಂತನೆ
ದೇವರು ಮಾತ್ರ ನಮ್ಮನ್ನು ದಂಡಿಸಲು, ಖಂಡಿಸಲು ಯೋಗ್ಯ. ನಮ್ಮ ಮಾತುಗಳು ಮತ್ತು ಕಾರ್ಯಗಳ ಹಿಂದಿರುವ ಉದ್ದೇಶವನ್ನು ತಿಳಿಯಲು ದೇವರಿಂದ ಮಾತ್ರ ಸಾಧ್ಯ. ಆದ್ದರಿಂದ ಯೇಸುವಿನ ಹಿಂಬಾಲಕರು ದಯಾವಂತರು ಹಾಗೂ ಕ್ಷಮಿಸುವಂತರಾಗಿರಬೇಕು.
ಈ ಮೂರು ಕಾರಣಗಳಿಗೆ ಪರರ ವಿರುದ್ದ ತೀರ್ಪಿಡಬಾರದು.
1) ದೇವರು ಮಾತ್ರ ನಿಷ್ಪಕ್ಷಪಾತಿ: ನಾವು ತೀರ್ಪಿಡುವಾಗ ನಮ್ಮ ಹತ್ತಿರದವರ ಪರವಾದಿಸುವ ಸಾಧ್ಯತೆ ಹೆಚ್ಚಿರುತ್ತೆ.
2) ತಪ್ಪು ಮಾಡಿದ ವ್ಯಕ್ತಿಯ ಬಗ್ಗೆ ಅಥವಾ ಘಟನೆಯ ಬಗ್ಗೆ ನಮ್ಮಲ್ಲಿ ಸಂಪೂರ್ಣ ಮಾಹಿತಿ ಇಲ್ಲದಿರುವುದರಿಂದ.
3) ನಾವು ಕೂಡ ತಪ್ಪನ್ನು ಮಾಡಿರುವುದರಿಂದ ನಾವು ಯಾರು ಪರಿಪೂರ್ಣರಲ್ಲದಿರುವುದರಿಂದ ಪರರಿಗೆ ತೀರ್ಪಿಡುವ ಮುನ್ನ ನಮಗೆ ನೈತಿಕತೆ ಇದೇಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ.
----------------------
ನೀವು ಇತರರ ಬಗ್ಗೆ ತೀರ್ಪುಕೊಡ ಬೇಡಿ.
ಪ್ರಸಿದ್ಧ ಫ್ರೆಂಚ್ ಲೇಖಕ ಬಾಲ್ವಾಕ್, ತಮ್ಮ ಬಿಡುವಿನ ವೇಳೆಯಲ್ಲಿ, ಇತರರ ಕೈಬರಹವನ್ನು ವಿಶ್ಲೇಷಿಸಿ, ಅವರ ವ್ಯಕ್ತಿತ್ವವನ್ನು ನಿರ್ಧರಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಅವರು ಆ ಕಲೆಯಲ್ಲಿ ಒಬ್ಬ ಮಹಾತಜ್ಞನೆಂದು ತೋರ್ಪಡಿಸಲು ಇಷ್ಟಪಡುತ್ತಿದ್ದರು.
ಒಮ್ಮೆ ವಯಸ್ಸಾದ ಮಹಿಳೆಯೊಬ್ಬಳು ಅವರಿಗೆ ಚಿಕ್ಕ ಹುಡುಗನ ಹೋಮ್ವರ್ಕ್ ನೋಟ್ ಬುಕ್ ಅನ್ನು ಕೊಟ್ಟು, ಆ ಮಗುವಿನ ಸಾಮರ್ಥ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಲು ಬಾಲ್ವಕ್‌ನಲ್ಲಿ ಕೇಳಿದಳು. ಬಾಲ್ವಾಕ್ ಆ ಸುಂದರವಲ್ಲದ ಲಿಪಿಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ, ನೀವು ಆ ಹುಡುಗನ ತಾಯಿಯೇ ಎಂದು ಕೇಳಿದರು
ಇಲ್ಲ
ಬಹುಶಃ ನೀವು ಅವರ ಸಂಬಂಧಿಕರೇ?
ಇಲ್ಲವೇ ಇಲ್ಲ
ಹಾಗಾದರೇ ನಾನು ನಿಮಗೆ ಮುಕ್ತವಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ, ಈ ಯುವಕ ಪ್ರಾಯಶಃ ಅತೀ ದೊಡ್ಡ ಮೂರ್ಖನಾಗಿರಬೇಕು ಹಾಗೂ ಅವನು ಯಾವುದಕ್ಕೂ ಪ್ರಯೋಜನವಿಲ್ಲದ ವ್ಯಕ್ತಿ.
ಆದರೆ, ಸರ್
ಆ ಮಹಿಳೆ ನಗುತ್ತಾ ಹೇಳುತ್ತಾಳೆ
ಆ ನೋಟ್ಬುಕ್ ನಿಮ್ಮದೇ !!!
ನಾವು ಇತರರ ಬಗ್ಗೆ ತೀರ್ಪು ನೀಡುವಲ್ಲಿ ಅತೀ ನಿಸ್ಸೀಮರು. ಈ ಜಗತ್ತಿನಲ್ಲಿ ಯಾವುದೇ ತೀರ್ಪಿಲ್ಲದೆ, ಬೇಷರತ್ತಾಗಿ ಪ್ರೀತಿಸುವ ವ್ಯಕ್ತಿಗಳ ಅವಶ್ಯಕತೆಯಿದೆ ಮತ್ತು ನಾವು ಆ ವ್ಯಕ್ತಿಗಳಲ್ಲಿ ಒಬ್ಬರಾಗಬೇಕೆಂದು ದೇವರು ಬಯಸುತ್ತಾರೆ. ಇಂದಿನ ಸುವಾರ್ತೆ ನಮ್ಮ ಸ್ವರ್ಗೀಯ ತಂದೆಯಂತೆ ಕರುಣಾವಂತರಾಗಲು ಆಹ್ವಾನಿಸುತ್ತದೆ.
ಮಂಥನ
ನಾವು ಇತರರಿಗಿಂತ
ಉತ್ತಮರೆಂದು ಭಾವಿಸುತ್ತೇವೆಯೇ?
ನೀವು ಜನರನ್ನು
ನಿರ್ಣಯಿಸುವುದರಲ್ಲೇ ಮಗ್ನರಾದರೆ, ಅವರನ್ನು ಪ್ರೀತಿಸಲು ನಿಮಗೆ ಸಮಯವಿರುವುದಿಲ್ಲ - ಕೋಲ್ಕತ್ತದ ಸಂತ ಮದರ್ ತೆರೇಸಾ
--------------------------------------
ನೈಜ ಪಶ್ಚಾತ್ತಾಪ ಕ್ಷಮೆಗೆ ದಾರಿ ಮಾಡುತ್ತದೆ. ನಮ್ಮ ದೇವರು ಕರುಣಾಮಯಿ ಹಾಗೂ ದಯಾವಂತರು. ಅವರ ಕ್ಷಮೆ ಅಪಾರ. ಅವರ ಕ್ಷಮೆಗೆ ಎಲ್ಲೆಯೇ ಇಲ್ಲ. ಅವರು ಕ್ಷಮೆಯನ್ನು ತುಂಬಿ ಅಳೆದು ತುಳುಕುವಂತೆ ನೀಡುತ್ತಾರೆ. ನಾವು ಅಂತಹ ಕ್ಷಮೆಗೆ ಅರ್ಹರಾಗಬೇಕಾದರೆ ಇತರರನ್ನು ಉದಾರವಾಗಿ ಕ್ಷಮಿಸಬೇಕು. ಹಾಗೆಯೇ ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಉದಾರವಾಗಿರಬೇಕು ಎನ್ನುತ್ತಾರೆ ಪ್ರಭು ಯೇಸು.
----------------------

No comments:
Post a Comment