Monday, 2 March 2020

ತಪಸ್ಸು ಕಾಲದ ಎರಡನೆಯ ಭಾನುವಾರ

ಮಾರ್ಚ್ 8, 2020 ಭಾನುವಾರ [ನೇರಳೆ]
ತಪಸ್ಸು ಕಾಲದ 2ನೇ ಭಾನುವಾರ
ಮೊದಲ ವಾಚನ: ಆದಿ 12.1-4
ಕೀರ್ತನೆ 33:4-5, 18-20, 22. ಶ್ಲೋಕ.22
ನಮ್ಮ ಮೇಲಿರಲಿ ಪ್ರಭೂ, ನಿನ್ನ ಅಚಲ ಪ್ರೀತಿ
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ
ಎರಡನೇ ವಾಚನ: 2 ತಿಮೊಥಿ 1.8-10
ಶುಭಸಂದೇಶ: ಮತ್ತಾಯ 17.1-9
------------------------
ಮೊದಲ ವಾಚನ: ಆದಿ 12.1-4
1 : ಸರ್ವೇಶ್ವರಸ್ವಾಮಿ ಅಬ್ರಾಮನಿಗೆ ಹೀಗೆಂದರು - “ನೀನು ನಿನ್ನ ಸ್ವಂತ ನಾಡನ್ನೂ ಬಂಧು ಬಳಗದವರನ್ನೂ ತವರು ಮನೆಯನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೊರಟು ಹೋಗು.
2 : ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ. ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆ ಗೌರವವನ್ನು ತರುತ್ತೇನೆ. ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ.
3 : “ನಿನ್ನನ್ನು ಹರಸುವವರನು ನಾ ಹರಸುವೆ. ನಿನ್ನನ್ನು ಶಪಿಸುವವರನು ನಾ ಶಪಿಸುವೆ. ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ ದೊರಕುವುದು ನನ್ನಿಂದ ಆಶೀರ್ವಾದ.”
4 : ಸರ್ವೇಶ್ವರ ಹೀಗೆಂದು ಹೇಳಿದಮೇಲೆ ಅಬ್ರಾಮನು ಹೊರಟನು. ಲೋಟನು ಅವನ ಸಂಗಡವೆ ಹೋದನು. ಆ ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಅಬ್ರಾಮನಿಗೆ ಎಪ್ಪತ್ತೈದು ವರ್ಷಗಳಾಗಿದ್ದವು.
---------
ಕೀರ್ತನೆ 33:4-5, 18-20, 22. ಶ್ಲೋಕ.22
ನಮ್ಮ ಮೇಲಿರಲಿ ಪ್ರಭೂ, ನಿನ್ನ ಅಚಲ ಪ್ರೀತಿ
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ
4 : ಸತ್ಯವಾದುದು ಆತನ ಪವಿತ್ರ ವಾಕ್ಯ / ಸ್ತುತ್ಯವಾದುದು ಆತನ ಪುನೀತ ಕಾರ್ಯ //
5 : ಸತ್ಯಸಂಧನು, ನ್ಯಾಯಪ್ರಿಯನು ಆತನು | ಅಚಲ ಪ್ರೀತಿಯಿಂದ ಜಗವನು ತುಂಬಿಹನು ||
18 : ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು / ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು //
19 : ತಪ್ಪಿಸುವನವನು ಪ್ರಾಣವನು ಮರಣದಿಂದ / ಉಳಿಸುವನು ಜೀವವನು ಕ್ಷಾಮಡಾಮರದಿಂದ //
20 : ಕಾದಿದೆ ಎನ್ನ ಮನ ಪ್ರಭುವಿಗಾಗಿ / ಆತನಿಹನು ಎನಗೆ ಗುರಾಣಿಯಾಗಿ //
22 : ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ / ಕಾದಿಹೆವು ಇದೋ ನಿನ್ನ ನಂಬಿ ಭರವಸದಿ //
--------------
ಎರಡನೇ ವಾಚನ: 2 ತಿಮೊಥಿ 1.8-10
8 : ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು.
9 : ನಾವು ಸ್ವಂತ ಸತ್ಕಾರ್ಯಗಳಿಂದಲ್ಲ, ದೇವರ ಯೋಜನೆ ಹಾಗೂ ಅನುಗ್ರಹಗಳಿಂದಲೇ ಜೀವೋದ್ಧಾರ ವರವನ್ನು ಪಡೆದಿದ್ದೇವೆ; ದೇವರ ಪ್ರಜೆಗಳೆನಿಸಿಕೊಂಡಿದ್ದೇವೆ. ಈ ಅನುಗ್ರಹವನ್ನು ಕ್ರಿಸ್ತಯೇಸುವಿನಲ್ಲಿ ಅನಾದಿಯಿಂದಲೇ ನಮಗೆ ಕೊಡಲಾಯಿತು.
10 : ಈ ಕಾಲದಲ್ಲೂ ನಮ್ಮ ಉದ್ಧಾರಕ ಕ್ರಿಸ್ತಯೇಸುವಿನ ಪ್ರತ್ಯಕ್ಷದ ಮೂಲಕ ಅದನ್ನು ಬಹಿರಂಗಪಡಿಸಲಾಗಿದೆ. ಮೃತ್ಯುಶಕ್ತಿಯನ್ನು ವಿನಾಶಗೊಳಿಸಿ ಅಮರ ಜೀವವನ್ನು ಶುಭಸಂದೇಶದ ಮೂಲಕ ಬೆಳಕಿಗೆ ತಂದವರು ಯೇಸುವೇ.
-------------------
ಶುಭಸಂದೇಶ: ಮತ್ತಾಯ 17.1-9
1 : ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಆತನ ಸಹೋದರ ಯೊವಾನ್ನ ಇವರನ್ನು ಯೇಸುಸ್ವಾಮಿ ಪ್ರತ್ಯೇಕವಾಗಿ ತಮ್ಮೊಡನೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು.
2 : ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಸ್ವಾಮಿ ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು.
3 : ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಅವರಿಗೆ ಕಾಣಿಸಿತು.
4 : ಆಗ ಪೇತ್ರನು ಯೇಸುವಿಗೆ, "ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು! ಅಪ್ಪಣೆಯಾದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು. ತಮಗೊಂದು, ಮೋಶೆಗೊಂದು, ಎಲೀಯನಿಗೊಂದು," ಎಂದನು.
5 : ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೇಘವೊಂದು ಅವರನ್ನು ಆವರಿಸಿತು; ಆ ಮೇಘದಿಂದ ಒಂದು ವಾಣಿ, ‘ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ಈತನ ಮಾತಿಗೆ ಕಿವಿಗೊಡಿ," ಎಂದಿತು.
6 : ಶಿಷ್ಯರು ಈ ವಾಣಿಯನ್ನು ಕೇಳಿ ಭಯಭ್ರಾಂತರಾದರು; ಬೋರಲು ಬಿದ್ದರು.
7 : ಆಗ ಯೇಸು ಅವರ ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, "ಏಳಿ, ಭಯಪಡಬೇಡಿ," ಎಂದರು.
8 : ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ.
9 : ಅವರೆಲ್ಲರು ಬೆಟ್ಟದಿಂದ ಇಳಿದು ಬರುವಾಗ ಯೇಸು, "ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ," ಎಂದು ಆಜ್ಞಾಪಿಸಿದರು.
---------------------
ಚಿಂತನೆ:
ಬೈಬಲ್‍ನಲ್ಲಿ ಪರ್ವತ ಅಥವಾ ಬೆಟ್ಟಕ್ಕೆ ಒಂದು ವಿಶಿಷ್ಠ ಸ್ಥಾನವಿದೆ. ದೇವರು ತಮ್ಮ ಮಹಿಮೆಯನ್ನು ಪರ್ವತಗಳ ಮೇಲೆ ಪ್ರಕಟ ಪಡಿಸುವುದರೊಂದಿಗೆ ಅನೇಕ ಪ್ರಮುಖ ಘಟನೆಗಳು ಪರ್ವತಗಳ ಮೇಲೆ ನಡೆದಿದೆ. ಅಬ್ರಹಾಮನ ವಿಶ್ವಾಸವನ್ನು ಪರೀಕ್ಷಿಸಿದ್ದು, ಆಶೀರ್ವದಿಸಿದ್ದು ಮೋರಿಯ ಬೆಟ್ಟದಲ್ಲಿ (ಆದಿ 22:1-19), ಮೋಶೆಗೆ ದೈವ ದರ್ಶನವಾದದ್ದು ಹೋರೆಬ್ ಬೆಟ್ಟದಲ್ಲಿ (ವಿಮೋ 3), ಹತ್ತು ಆಜ್ಞೆ ನೀಡಿದ್ದು ಸಿನಾಯಿ ಬೆಟ್ಟದಲ್ಲಿ (ವಿಮೋ 34). ಎಲೀಯನು ಸುಳ್ಳು ಪ್ರವಾದಿಗಳನ್ನು ಹತ್ಯೆಮಾಡಿ ಸರ್ವೇಶ್ವರನೇ ನಿಜದೇವರು ಎಂದು ನಿರೂಪಿಸಿದ್ದು ಕಾರ್ಮೆಲ್ ಬೆಟ್ಟದಲ್ಲಿ (1 ಅರಸ 18). ಯೇಸು ಸೈತಾನನ ಶೋಧನೆ ಜಯಿಸಿದ್ದು, ಅಷ್ಟ, ಭಾಗ್ಯಗಳನ್ನು ನೀಡಿದ್ದು, ಶಿಲುಬೆ ಮೇಲೆ ಪ್ರಾಣ ಅರ್ಪಿಸಿದ್ದು ಬೆಟ್ಟದ ಮೇಲೆ ಇಂದು ಶಿಷ್ಯರ ವಿಶ್ವಾಸ ಬಲಪಡಿಸಿದ್ದು ತಾಬೋರ್ ಬೆಟ್ಟದ ಮೇಲೆ ರೂಪಾಂತರಗೊಳ್ಳುವುದರೊಂದಿಗೆ.
ವಿಶ್ವಾಸ ದೈವಿಕ ಶ್ವಾಸ, ದೀಕ್ಷಾಸ್ನಾನದಲ್ಲಿ ದೇವರು ನೀಡುವ ಕೊಡುಗೆ. ಅದನ್ನು ನಾವು ಬಳಸುತ್ತಾ, ಬೆಳೆಸುತ್ತ ಇರುವಾಗ ನಮ್ಮ ಆಧ್ಯಾತ್ಮಿಕ ಸಂಗಾತಿಯಾಗುತ್ತದೆ. ದೇವರು ನೀಡುವ ಈ ಕೊಡುಗೆಗೆ ನಾವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾ ಪ್ರಾರ್ಥನೆಯ ಮೂಲಕ ದೃಢಪಡಿಸಿಕೊಳ್ಳಬೇಕು. ಪಿತಾಮಹ ಅಬ್ರಹಾಮನಲ್ಲಿದ್ದ ಸಮತೋಲಿನ ವಿಶ್ವಾಸ ನಮ್ಮ ವಿಶ್ವಾಸವಾಗಬೇಕು. ತಾಬೋರ್ ಬೆಟ್ಟದ ಮೇಲೆ ರೂಪಾಂತರ ಹೊಂದುವುದರ ಮೂಲಕ ಯೇಸು ಚಂಚಲಗೊಂಡಿದ್ದ ಶಿಷ್ಯರ ವಿಶ್ವಾಸವನ್ನು ಗಟ್ಟಿಗೊಳಿಸುತ್ತಾರೆ. ಜೀವನವೆಂಬ ಪ್ರಯಾಣದಲ್ಲಿ ಸಾಗುತ್ತಿರುವ ನಮ್ಮ ವಿಶ್ವಾಸವು ಚಂಚಲಗೊಳ್ಳದೆ, ಏರುಪೇರಾಗದಂತೆ ದೃಡವಾಗಿಲಿ, ಸಮತೋಲನದಿಂದಿರಲಿ ಎಂದು ಪ್ರಾರ್ಥಿಸೋಣ.
------------------------------------
ಅಬ್ರಹಾಮ ದೇವರ ಪರಮ ಭಕ್ತ. ಸರ್ವೇಶ್ವರ ಸ್ವಾಮಿಯಲ್ಲಿ ಅವನಿಗೆ ಅಪಾರವಾದ ವಿಶ್ವಾಸವಿತ್ತು. ಆತನಲ್ಲಿ ಕಿಂಚಿತ್ತೂ ಅಪನಂಬಿಕೆ ಇರಲಿಲ್ಲ. ವಯೋವೃದ್ದನಾಗಿದ್ದರೂ ಅಪನಂಬಿಕೆ ಅವನ ಬಳಿ ಸುಳಿಯಲೇ ಇಲ್ಲ. ಪಭು ಯೇಸು ಹಲವು ಬಾರಿ ತಾವು ಯಾರೆಂಬುದನ್ನು ವಿವಿಧ ರೀತಿಯಲ್ಲಿ ತಮ್ಮ ಶಿಷ್ಯರಿಗೆ ತಿಳಿಸಿದ್ದರು. ಆದರೆ ಶಿಷ್ಯರು ಮಾತ್ರ ಪಭುವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದರು. ಆಗ ಮತ್ತೊಮ್ಮೆ ತಾಬೋರ್ ಬೆಟ್ಟದ ಮೇಲೆ ಆಯ್ಕೆಯಾದ ಪೇತ್ರಯಾಕೋಬ ಮತ್ತು ಯೊವಾನ್ನರ ಮುಂದೆ ಪ್ರಭು ತಮ್ಮ ನೈಜ ರೂಪವನ್ನು ಹಾಗೂ ತಾವು ಯಾರೆಂಬುದನ್ನು ಅವರ ಮುಂದೆ ಅನಾವರಣಗೊಳಿಸಿದರು. ಆದರೂ ಪೇತ್ರ ಲೌಕಿಕವಾಗಿಯೇ ಆಲೋಚಿಸಿದ. ಎಲ್ಲಿಯವರೆಗೆ ನಾವು ಲೌಕಿಕತೆಯಲ್ಲಿಯೇ ಮುಳುಗಿರುತ್ತೇವೋ ಅಲ್ಲಿಯವರೆಗೆ ನಮ್ಮ ಆಧ್ಯಾತ್ಮಿಕ ಬದುಕು ಜ್ಞಾನಬೆಳಕನ್ನು ಗಳಿಸಲು ಸಾಧ್ಯವೇ ಇಲ್ಲ. ಸಂತ ಪೌಲ ಸಹ ನಾವು ಲೌಕಿಕತೆಯ ಗೆರೆಯನ್ನು ದಾಟಿ ಸ್ವರ್ಗದೆಡೆ ಸಾಗಬೇಕು ಎನ್ನುತ್ತಾನೆ. 
------------------

© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ


No comments:

Post a Comment