Friday, 6 March 2020

ತಪಸ್ಸು ಕಾಲದ ಎರಡನೆಯ ಮಂಗಳವಾರ

ಮಾರ್ಚ್ 10, 2020 ಮಂಗಳವಾರ [ನೇರಳೆ]
ಮೊದಲ ವಾಚನ: ಯೆಶಾಯ 1.10, 16-20.
ಕೀರ್ತನೆ 50: 8-9, 16-17, 21-23. ಶ್ಲೋಕ.23
ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು
ಶುಭಸಂದೇಶ: ಮತ್ತಾಯ 23.1-12
-----------------
10 : ಸೊದೋಮಿನ ಅಧಿಪತಿಗಳಂತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ.
16 : ತೊಳೆದು ಕೊಳ್ಳಿರಿ, ನಿಮ್ಮನ್ನೆ ಶುದ್ಧಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದಂತಿರುವ ನಿಮ್ಮ ದುಷ್ಕ್ರತ್ಯಗಳು ನೀಗಿ ಹೋಗಲಿ.
17 : ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿಂಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ.
18 : ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಬನ್ನಿರಿ, ಈಗ ವಾದಿಸೋಣ. ನಿಮ್ಮ ಪಾಪಗಳು ಕಡುಗೆಂಪಾಗಿದ್ದರೂ ಹಿಮದಂತೆ ಬಿಳುಪಾಗುವುವು. ರಕ್ತಗೆಂಪಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವುವು.
19 : ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ.
20 : ಇದಕ್ಕೊಪ್ಪದೆ ಪ್ರತಿಭಟಿಸಿದ್ದೇ ಆದರೆ, ಸಾವಿಗೆ ತುತ್ತಾಗುವಿರಿ. ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ.”
------------------------
ಕೀರ್ತನೆ 50: 8-9, 16-17, 21-23. ಶ್ಲೋಕ.23
ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು
8 : ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ / ನಿನ್ನ ಮುಂದಿವೆ ಸತತ ನಿನ್ನ ದಹನ ಬಲಿಗಳೆಲ್ಲ //
9 : ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ / ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ //
16 : ದುರ್ಜನರಿಗೆ ದೇವ ಹೇಳುವನು ಇಂತೆಂದು / “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು?/ ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?”//
17 : ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ / ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ //
21 : ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ?/ ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ?// ನಿಮ್ಮ ದುಷ್ಟತನವನು ಕಣ್ಮುಂದೆಯಿಡುವೆನು/ ನೀವು ಅಪರಾಧಿಗಳೆಂದು ಸ್ಥಾಪಿಸದೆ ಬಿಡೆನು //
22 : ದೇವನ ನೆನೆಯದವರೇ, ನೀಡಿರಿ ಗಮನವನು / ಇಲ್ಲವಾದರೆ ಛಿನ್ನಛಿನ್ನವಾಗಿಸಿಬಿಟ್ಟೇನು / ನನ್ನ ಕೈಯಿಂದ ತಪ್ಪಿಸುವವರಾರು ನಿಮ್ಮನು?//
23 : ಧನ್ಯವಾದದ ಬಲಿಯನರ್ಪಿಸುವವನೇ ನನಗೆ ಸನ್ಮಾನಿತನು ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು //
-------------------------
ಶುಭಸಂದೇಶ: ಮತ್ತಾಯ 23.1-12
1 : ಬಳಿಕ ಜನಸಮೂಹವನ್ನೂ ತಮ್ಮ ಶಿಷ್ಯರನ್ನೂ ಉದ್ದೇಶಿಸಿ ಯೇಸುಸ್ವಾಮಿ ಇಂತೆಂದರು:
2 : “ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ.
3 : ಆದುದರಿಂದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗೂ ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದಂತೆ ನಡೆಯುವುದಿಲ್ಲ.
4 : ಭಾರವಾದ ಹಾಗೂ ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರುಬೆರಳಿನಿಂದಲೂ ಮುಟ್ಟಲೊಲ್ಲರು.
5 : ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆಂದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲಂಗಿಯ ಗೊಂಡೆಗಳನ್ನು ಉದ್ದುದ್ದಮಾಡಿಕೊಳ್ಳುತ್ತಾರೆ.
6 : ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅವರು ಅಪೇಕ್ಷಿಸುತ್ತಾರೆ.
7 : ಅದು ಮಾತ್ರವಲ್ಲ, ‘ಗುರುವೇ’ ಎಂದು ಕರೆಸಿಕೊಳ್ಳಲು ಇಚ್ಛಿಸುತ್ತಾರೆ.
8 : ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು.
9 : ಇಹದಲ್ಲಿ ನೀವು ಯಾರನ್ನೂ ‘ಪಿತನೇ’ ಎಂದು ಸಂಬೋಧಿಸಬೇಡಿ. ಏಕೆಂದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ.
10 : ಒಡೆಯ ಎಂದೂ ಕರೆಯಿಸಿಕೊಳ್ಳಬೇಡಿ; ಏಕೆಂದರೆ ನಿಮಗಿರುವ ಒಡೆಯ ಒಬ್ಬನೇ, ‘ಆತನೇ ಕ್ರಿಸ್ತ.’ ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು.
11 : ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನನ್ನೂ ದೇವರು ಕೆಳಗಿಳಿಸುವರು.
12 : ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.
--------------------
ಚಿಂತನೆ
ಧರ್ಮೋಪದೇಶಕಾಂಡ 6: 4-6, 8 ತಿಳಿಸುತ್ತದೆ, ಇಸ್ರಯೇಲ್ ‌ಜನಾಂಗವೇ ಕೇಳು: ನಿನ್ನ ದೇವರಾದ ಸರ್ವೇಶ್ವರಸ್ವಾಮಿ ಒಬ್ಬರೇ ದೇವರು, ನಿನ್ನ ಪೂರ್ಣಹೃದಯದಿಂದ ನಿನ್ನ ದೇವರಾದ ಸರ್ವೇಶ್ವರನನ್ನು ಪ್ರೀತಿಸು... ಈ ಮಾತುಗಳು ನಿಮ್ಮ ಹೃದಯದಲ್ಲಿ ನಾಟಿರಲಿ...... ಜ್ಞಾಪಕಾರ್ಥವಾಗಿ ಅವುಗಳನ್ನು ನಿನ್ನ ಕೈಗೆ ಕಟ್ಟಿಕೊ, ಜ್ಞಾಪಕ ಪಟ್ಟಿಯಂತೆ ಹಣೆಗೆ ತೊಟ್ಟುಕೊ.
ಈ ಆಜ್ಞೆಗೆ ವಿಧೇಯರಾಗಿ, ಯೆಹೂದ್ಯರು ಸಣ್ಣ ಸುರುಳಿಗಳನ್ನು ಹೊಂದಿದ್ದ ಟೆಫಿಲಿನ್ ಎಂಬ ಸಣ್ಣ ಚರ್ಮದ ಪಟ್ಟಿಗಳನ್ನು ತಮ್ಮ   ಎಡಕೈಗೆ ಮತ್ತು ಹಣೆಯ ಮೇಲೆ ಕಟ್ಟುತ್ತಿದ್ದರು.
ಆಜ್ಞೆಗಳಿಗೆ ಬದಲಾಗಿ ಅವರ ಧಾರ್ಮಿಕ ಧರ್ಮನಿಷ್ಠೆಯ ಬಗ್ಗೆ ಇತರರ ಗಮನವನ್ನು ಸೆಳೆಯಲು ಚರ್ಮದ ಪಟ್ಟಿಗಳನ್ನು ದೊಡ್ಡದಾಗಿ ಕಟ್ಟಿಕೊಂಡು ಪ್ರದರ್ಶಿಸುತ್ತಿದ್ದ ಫರಿಸಾಯರನ್ನು ಯೇಸು ಖಂಡಿಸುತ್ತಾರೆ.

ಮಂಥನ
ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಎಷ್ಟು ತೋರಿಕೆಯಿದೆ?
ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ (ಮತ್ತಾಯ 6:1)
----------------------
© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment