Saturday, 21 March 2020

ತಪಸ್ಸು ಕಾಲದ ನಾಲ್ಕನೆಯ ಬುಧವಾರ


ಮಾರ್ಚ್ 25, 2020 ಬುಧವಾರ                               [ಬಿಳಿ]
ಮಂಗಳವಾರ್ತೆಯ ಹಬ್ಬ
ಮೊದಲ ವಾಚನ: ಯೆಶಾಯ 7.10-14; 8.10
ಕೀರ್ತನೆ 40:7, 8-9, 10, 11. ಶ್ಲೋಕ.1
ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ
ಎರಡನೇ ವಾಚನ: ಹಿಬ್ರಿ 10: 4-10
ಶುಭಸಂದೇಶ: ಲೂಕ 1.26-38
------------------- 
ಮೊದಲ ವಾಚನ: ಯೆಶಾಯ 7.10-14; 8.10
10 : ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ:
11 : “ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು” ಎಂದರು.
12 : ಅದಕ್ಕೆ ಆಹಾಜನು “ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ” ಎಂದನು.
13 : ಆಗ ಯೆಶಾಯನು: “ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ?
14 : ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು.
ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ; ಕೈಗೂಡದು ನೀವು ಮಾಡಿದ ಪ್ರತಿಜ್ಞೆ; ಕಾರಣ, ದೇವನಿರುವನು ನಮ್ಮೊಡನೆ.
 ---------------------
ಕೀರ್ತನೆ 40:7, 8-9, 10, 11. ಶ್ಲೋಕ.1
ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ
7 : ನಾನೋಗೊಡುತ ಇಂತೆಂದೆ: “ಇಗೋ ನಾನೇ ಬರುತ್ತಿರುವೆ | ಗ್ರಂಥ ಸುರುಳಿಯಲಿ ನನ್ನ ಕುರಿತು ಲಿಖಿತವಾಗಿದೆಯಲ್ಲವೇ? ||
8 : ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ | ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ”||
9 : ಜೀವೋದ್ಧಾರದ ಶುಭಸಂದೇಶವನು ಸಾರಿದೆ ಮಹಾಸಭೆಗೆ || ನಾ ಸಾರಿದೆ ಅದನು ಮೌನವಿರದೆ, ಇದು ಗೊತ್ತಿದೆ ಪ್ರಭು ನಿನಗೆ
10 : ಬಚ್ಚಿಟ್ಟುಕೊಳ್ಳಲಿಲ್ಲ ನನ್ನೆದೆಯೊಳು ನಿನ್ನ ಸತ್ಸಂಬಂಧವನು | ಪ್ರಕಟಿಸಿದೆನು ಜೀವೋದ್ಧಾರವನು, ನಿನ್ನ ಪ್ರಾಮಾಣಿಕತೆಯನು | ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ ಪ್ರೀತಿ ಸತ್ಯತೆಯನು ||
11 : ಅಗಲಿಸಬೇಡ ಪ್ರಭೂ, ನಿನ್ನ ಕೃಪೆಯನು ನನ್ನಿಂದ | ನಿನ್ನ ಪ್ರೀತಿ ಸತ್ಯಕೆ ಕಾದಿರಿಸಲಿ ನನ್ನನು ಸತತ ||
 -----------------------------
ಎರಡನೇ ವಾಚನ: ಹಿಬ್ರಿ 10: 4-10
4 : ಏಕೆಂದರೆ, ಹೋತ, ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ.
5 : ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತಯೇಸು ದೇವರಿಗೆ ಇಂತೆಂದರು: “ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು ಎಂದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊಂದನು.
6 : ಸರ್ವಾಂಗ ಹೋಮಗಳೂ ಪಾಪಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನು.
7 : ಆಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನು ನೆರವೇರಿಸಲೆಂದೇ.”
8 : ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ “ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುವೂ ನಿಮಗೆ ತರಲಿಲ್ಲ ತೃಪ್ತಿಯನು,” ಎಂದು ಮೊದಲು ಹೇಳುತ್ತಾರೆ.
9 : ಅನಂತರ, “ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ,” ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ.
10 : ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನೀತರಾಗಿದ್ದೇವೆ.
 -------------------------------
ಶುಭಸಂದೇಶ: ಲೂಕ 1.26-38
26 : ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು.
27 : ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ.
28 : ದೇವದೂತನು ಆಕೆಯ ಬಳಿಗೆ ಬಂದು “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!” ಎಂದನು.
29 : ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ‘ಇದೆಂಥ ಶುಭಾಶಯ’ ಎಂದು ಅವಳು ಯೋಚಿಸತೊಡಗಿದಳು.
30 : ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ;
31 : ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ‘ಯೇಸು’ ಎಂಬ ಹೆಸರಿಡಬೇಕು;
32 : ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು.
33 : ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು.
34 : ಅದಕ್ಕೆ ಮರಿಯಳು, “ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ?” ಎಂದು ವಿಚಾರಿಸಿದಳು.
35 : ದೂತನು ಪ್ರತ್ಯುತ್ತರವಾಗಿ, “ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು ‘ದೇವರ ಪುತ್ರ’ ಎನಿಸಿಕೊಳ್ಳುವನು.
36 : ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ.
37 : ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ,” ಎಂದನು.
38 : ಆಗ ಮರಿಯಳು, “ಇಗೋ, ನಾನು ದೇವರ ಸೇವಕಿ, ನೀವು ಹೇಳಿದಂತೆ ನನಗಾಗಲಿ,” ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.
----------------------
ಚಿಂತನೆ
ಗಬ್ರಿಯೇಲ್ ದೂತನು ಮರಿಯಳಿಗೆ ಮಂಗಳವಾರ್ತೆಯನ್ನು ತರುತ್ತಾನೆ. ಇದು ಮರಿಯಳಿಗೆ ಅನಿರೀಕ್ಷಿತ. ಅಪ್ರಾಪ್ತ ಹುಡುಗಿ ಧೈರ್ಯದಿಂದ ತನ್ನ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಲು ಸಿದ್ಧಳಾಗುತ್ತಾಳೆ. ಇಲ್ಲಿ ಮಾತೆ ಮರಿಯಳ ವಿಶ್ವಾಸ ಮತ್ತು ಆತ್ಮ ವಿಶ್ವಾಸವನ್ನು ಪ್ರಶಂಸಿಸಬೇಕಿದೆ. ತಂದೆ ತಾಯಿಗಳ ಒಪ್ಪಿಗೆಯನ್ನು ಪಡೆಯದೆ ಗಬ್ರಿಯೇಲ್ ದೂತ ತಂದ ಸಂದೇಶವನ್ನು ಸ್ವೀಕರಿಸುತ್ತಾಳೆ.
ಮಂಗಳ ವಾರ್ತೆಯ ಸಂದೇಶವನ್ನು ಮಾತೆ ಮರಿಯಳ `ದೈವಕರೆ’ ಎನ್ನಬಹುದು. ದೇವರು ನೀಡಿದ ಕರೆಯನ್ನು ವಿಶ್ವಾಸದಿಂದ ಸ್ವೀಕರಿಸಿ ದೇವರ ಚಿತ್ತಕ್ಕೆ ತಲೆಬಾಗುತ್ತಾಳೆ. ಆದರೆ ಅದು ಸುಲಭದ ಕಾರ್ಯವಾಗಿರಲಿಲ್ಲ. ಮದುವೆಗೆ ಮುನ್ನ ಒಬ್ಬ ಮಹಿಳೆ ಗರ್ಭವತಿಯಾದರೆ ಯೆಹೂದ್ಯರ ಪದ್ಧತಿಯಂತೆ ಕಲ್ಲಿನಿಂದ ಹೊಡೆದು ಸಾಯಿಸುತ್ತಿದ್ದರು. ಮರಿಯಳು ಯಾವುದನ್ನು ಲೆಕ್ಕಿಸದೆ ದೇವರಿಗೆ ತಲೆಬಾಗುತ್ತಾಳೆ ಆಕೆಯಲ್ಲಿದ್ದ ಧೈರ್ಯ, ಆತ್ಮವಿಶ್ವಾಸ ನಮ್ಮಲ್ಲೂ ಮೂಡಬೇಕಿದೆ.
-----------------

© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment