ಏಪ್ರಿಲ್ 11,
2020 ಶನಿವಾರ [ಬಿಳಿ]
ಪವಿತ್ರ ಶನಿವಾರ
ಮೊದಲನೇ ವಾಚನ: ಆದಿ 1:1-2:2 (ಸಂಕ್ಷಿಪ್ತ) ಆದಿ 1:1, 26-31.
ಎರಡನೇ ವಾಚನ ಆದಿಕಾಂಡ
22:1-2, 9-13, 15-18
ಮೂರನೇ ವಾಚನ: ವಿಮೋ 14:15-15:1
ನಾಲ್ಕನೇ ವಾಚನ: ಯೆಶಾಯ 54:5-14
ಐದನೇ ವಾಚನ: ಯೆಶಾಯ 55:1-11
ಆರನೇ ವಾಚನ: ಬಾರೂಕ 3:9-15, 32-4:4
ಏಳನೇ ವಾಚನ: ಯೆಜೆಕಿಯೇಲ
36:16-28
ಮೊದಲ ವಾಚನ: ರೋಮನರಿಗೆ 6:3-11
ಕೀರ್ತನೆ 104:1-2, 5-6, 10, 12-14, 24, 35 ಶ್ಲೋಕ.30
ನೀ ಉಸಿರನ್ನೂದಲು ಹೊಸದಾಗುವುವು
ಪುನಶ್ಚೇತನಗೊಳ್ಳುವುದು ಜಗವೆಲ್ಲವು
ಮೊದಲ ವಾಚನ: ರೋಮನರಿಗೆ 6:3-11
3 : ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ?
4 : ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸ ಜೀವವನ್ನು ಹೊಂದಿ ಬಾಳುತ್ತೇವೆ.
5 : ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನ ಆದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ.
6 : ನಮಗೆ ತಿಳಿದಿರುವಂತೆ ಪಾಪಾಧೀನವಾದ ನಮ್ಮ ಸ್ವಭಾವವು ನಾಶವಾಗುವಂತೆಯೂ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿರದಂತೆಯೂ ಯೇಸುಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವನ್ನು ಶಿಲುಬೆಗೆ ಜಡಿಯಲಾಗಿದೆ.
7 : ಹೀಗೆ ಸತ್ತವನು ಪಾಪಬಂಧದಿಂದ ಬಿಡುಗಡೆ ಹೊಂದಿದವನು.
8 : ಕ್ರಿಸ್ತ ಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ.
9 : ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ.
10 : ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ.
11 : ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.
ಕೀರ್ತನೆ
104:1-2, 5-6, 10, 12-14, 24, 35 ಶ್ಲೋಕ.30
ನೀ ಉಸಿರನ್ನೂದಲು ಹೊಸದಾಗುವುವು
ಪುನಶ್ಚೇತನಗೊಳ್ಳುವುದು ಜಗವೆಲ್ಲವು
1 : ಭಜಿಸು ನನ್ನ ಮನವೇ, ಭಜಿಸು, ಪ್ರಭುವನು / ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು / ಮಹಿಮೆ ಪ್ರತಾಪಗಳಿಂದ ಭೂಷಿತನು //
2 : ತೊಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ / ಹರಡಿಸಿರುವೆ ಆಗಸವನು ಗುಡಾರದಂತೆ //
5 : ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ / ಅದೆಂದಿಗೂ ಕದಲದಂತೆ ಮಾಡಿರುವೆ //
6 : ಅದಕ್ಕೆ ಹೊದಿಸಿರುವೆ ಸಾಗರವೆಂಬ ವಸ್ತ್ರವನು / ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು //
10 : ಬುಗ್ಗೆಗಳು ಚಿಮ್ಮಿ ಓಡಮಾಡುವೆ ತಗ್ಗುಗಳಲಿ / ನದಿಗಳ ಹರಿಯಮಾಡುವೆ ಗುಡ್ಡಗಳ ನಡುವೆಯಲಿ //
12 : ಅವುಗಳ ಅರುಗಲ್ಲೇ ಇವೆ ಹಕ್ಕಿಗಳ ಗೂಡುಗಳು / ಕೇಳುತಿವೆ ಕೊಂಬೆಗಳಿಂದಾ ಪಕ್ಷಿಗಳ ಕಲರವಗಳು //
13 : ಮಲೆಗಳ ಮೇಲೆ ಮಳೆಗರೆಯುವೆ ಗಗನದಿಂದ / ತೃಪ್ತಿಗೊಂಡಿದೆ ಪೃಥ್ವಿಯು ನಿನ್ನ ಕೃಪೆ ಗಳಿಂದ //
14 : ಮೊಳೆಸುವೆ ಹುಲ್ಲನ್ನು ದನಕರುಗಳಿಗೋಸ್ಕರ | ಬೆಳೆಸುವೆ ಪೈರನು ನರಮಾನವರಿಗೋಸ್ಕರ ||
24 : ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ / ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ //
35 : ದಹಿಸಿಹೋಗಲಿ ಧರೆಯಿಂದ ದುಷ್ಟರು / ನಿರ್ಮೂಲವಾಗಲಿ ಸಕಲ ದುರುಳರು / ಪ್ರಭುವನು ನನ್ನ ಮನ ಸ್ತುತಿಸಲಿ / ಪ್ರಭುವಿಗೆ ಸ್ತುತಿಸ್ತೋತ್ರವಾಗಲಿ //
ಶುಭಸಂದೇಶ ಮತ್ತಾಯ 28:1-10
1 : ‘ಸಬ್ಬತ್’ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ದಲದ ಮರಿಯಳು ಮತ್ತು ಆ ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು.
2 : ಇದ್ದಕ್ಕಿದ್ದಂತೆ ಭೂಮಿ ಗಡಗಡನೆ ನಡುಗಿತು. ಆಗ ದೇವದೂತನು ಸ್ವರ್ಗದಿಂದ ಇಳಿದುಬಂದನು. ಸಮಾಧಿಯ ಕಲ್ಲನ್ನು ಹಿಂದಕ್ಕೆ ಉರುಳಿಸಿ ಅದರ ಮೇಲೆ ಕುಳಿತುಕೊಂಡನು.
3 : ಆತನ ರೂಪ ಮಿಂಚಿನಂತೆ ಹೊಳೆಯುತ್ತಿತ್ತು; ಉಡುಪು ಹಿಮದಂತೆ ಬೆಳ್ಳಗಿತ್ತು.
4 : ಕಾವಲಿನವರು ಆತನನ್ನು ಕಂಡು ಭಯದಿಂದ ನಡುಗುತ್ತಾ ಸತ್ತಂತಾದರು.
5 : ಆಗ ದೂತನು ಆ ಮಹಿಳೆಯರಿಗೆ, “ಹೆದರಬೇಡಿ, ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆ. ಅವರು ಇಲ್ಲಿಲ್ಲ;
6 : ಅವರೇ ಹೇಳಿದಂತೆ ಪುನರುತ್ಥಾನ ಹೊಂದಿದ್ದಾರೆ. ಬನ್ನಿ, ಅವರನ್ನಿಟ್ಟಿದ್ದ ಸ್ಥಳವನ್ನು ನೋಡಿ.
7 : ಈಗ ಬೇಗನೆ ಹೋಗಿ, ಅವರ ಶಿಷ್ಯರಿಗೆ, ‘ಸತ್ತಿದ್ದವರು ಪುನರುತ್ಥಾನ ಹೊಂದಿದ್ದಾರೆ; ಅವರು ನಿಮಗಿಂತ ಮುಂಚಿತವಾಗಿ ಗಲಿಲೇಯಕ್ಕೆ ಹೋಗುವರು; ಅಲ್ಲೇ ಅವರನ್ನು ಕಾಣುವಿರಿ,’ ಎಂದು ತಿಳಿಸಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ,” ಎಂದನು. ಮಹಿಳೆಯರಿಗೆ ಮೊದಲ ದರ್ಶನ (ಮಾರ್ಕ 16.9-11; ಲೂಕ 24.10-11; ಯೊವಾ. 20.14-18)
8 : ಅದರಂತೆಯೇ ಆ ಮಹಿಳೆಯರು ಭಯಮಿಶ್ರಿತ ಆನಂದದಿಂದ ಸಮಾಧಿಯನ್ನು ಬಿಟ್ಟು ಕೂಡಲೇ ಹೊರಟರು. ಶಿಷ್ಯರಿಗೆ ಈ ಸಮಾಚಾರವನ್ನು ಮುಟ್ಟಿಸಲು ಧಾವಿಸಿದರು.
9 : ತಟ್ಟನೆ, ಯೇಸುವೇ ಅವರನ್ನು ಎದುರುಗೊಂಡು, “ನಿಮಗೆ ಶುಭವಾಗಲಿ!” ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು, ಅವರ ಪಾದಕ್ಕೆರಗಿ ಪೂಜಿಸಿದರು.
10 : ಆಗ ಯೇಸು ಅವರಿಗೆ, “ಭಯಪಡಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ತಿಳಿಸಿರಿ,” ಎಂದು ಹೇಳಿದರು.
------------
ಚಿಂತನೆ
ಹುಟ್ಟು ಸಾವು ಮಾನವನಿಗೆ ಸಹಜ. ಸಾವಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ. ಈ ಲೋಕದ ಯಾತ್ರೆ ಮುಗಿಸಿದ ನಂತರ ನಾವು ನಮ್ಮ ಈ ಲೌಕಿಕಪ್ರಪಂಚಕ್ಕೆ ವಿದಾಯ ಹೇಳಲೇಬೇಕಾಗುತ್ತದೆ. ಸಮಾಧಿಗೈದ ಶರೀರ ಮಣ್ಣಲ್ಲಿ ಮಣ್ಣಾಗುತ್ತದೆ, ಸುಟ್ಟರೆ ಬೂದಿಯಾಗುತ್ತದೆ. ಹಾಗಾದರೆ ಮರಣ ಎಂದರೆ ಏನು? ಮರಣಾನಂತರ ಏನಾಗುತ್ತದೆ? ಎಲ್ಲಿಗೆ ಹೋಗುತ್ತೇವೆ? ಹೇಗಿರುತ್ತೇವೆ? ಬಹುಶಃ ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ಬಾರಿ ಕಾಡುವ ಪ್ರಶ್ನೆಗಳಿವು.
ಸಾವಿನ ಹೊಸ್ತಿಲಲ್ಲಿದ್ದ ರೋಗಿಯೊಬ್ಬ ವೈದ್ಯರತ್ತ ದೀನದೃಷ್ಟಿಯಿಂದ ನೋಡುತ್ತಾ ಕೇಳಿದ, 'ವೈದ್ಯರೇ ಸಾವು ಹತ್ತಿರ ಬರುತ್ತಿದೆ ಎಂದು ತಿಳಿದಿದೆ, ಬಹಳ ಹೆದರಿಕೆಯಾಗುತ್ತಿದೆ. ಮುಂದಿನ ಲೋಕವೊಂದಿದ್ದರೆ, ಅಲ್ಲಿಗೆ ಹೋಗುವುದು ಖಾತ್ರಿ ಎಂದಾದರೆ ಅಲ್ಲಿ ಏನಿದೆ, ಹೇಗಿದೆ ಎಂದು ತಿಳಿದಿಲ್ಲವಲ್ಲ, ಹಾಗಾಗಿ ಹೆದರಿಕೆ. ಆದರೆ ನೀವು ಸಾವನ್ನು ಸನಿಹದಿಂದ ಕಂಡವರು. ನಿಮಗೆ ಖಂಡಿತ ಮುಂದಿನ ಬದುಕಿನ ಬಗ್ಗೆ ತಿಳಿದಿರಬೇಕಲ್ಲವೇ? ವೈದ್ಯರು ತಲೆಯಾಡಿಸಿ, ಇಲ್ಲಪ್ಪ ನನಗೂ ಗೊತ್ತಿಲ್ಲ ಎಂದರು.
ಅಷ್ಟರಲ್ಲಿ ಮುಚ್ಚಿದ ಕೋಣೆಯ ಬಾಗಿಲಿನ ಮೇಲೆ ಕರೆಯುವ ಸದ್ದಾಯಿತು ವೈದ್ಯರು ಮುಂದೆ ಬಂದು ಬಾಗಿಲಿನ ಹಿಡಿಯ ಮೇಲೆ ಕೈಯಿಟ್ಟರು ರೋಗಿಯತ್ತ ತಿರುಗಿ, ಅಯ್ಯಾ ಬಾಗಿಲಿನ ಹಿಂದಿರುವುದು ಏನೆಂದು ತಿಳೀದಿಯೇನು? ಎಂದರು. ಉತ್ತರ ಇಲ್ಲ ಎಂದು ಬಂತು. ವೈದ್ಯರು ಮೆಲ್ಲನೆ ಬಾಗಿಲು ತೆರೆದರು ಅವರ ಸಾಕು ನಾಯಿ ಜಿಗಿಯುತ್ತಾ ಒಳಗೆ ಬಂತು ವೈದ್ಯರ ಸುತ್ತ ಬಾಲ ಅಲ್ಲಾಡಿಸಿ ಕುಣಿಯಿತು.
ವೈದ್ಯರು ಅದರ ತಲೆ ಸವರುತ್ತಾ, ಅಯ್ಯಾ ಇದು ಬಾಗಿಲು ತೆರೆಯಲು ವಿನಂತಿಸುತ್ತಿರುವಾಗ ಆ ನಾಯಿಗೆ ಒಳಗೇನಿದೆ ಎಂದು ತಿಳಿದಿರಲಿಲ್ಲ. ಆದರೆ ನನ್ನ ವಾಸನೆ ಹಿಡಿದು ಒಡೆಯ ಒಳಗಿದ್ದಾನೆ ಎಂಬ ನಂಬಿಕೆಯಿಂದ ಒಳ ಬರಲು ಬಯಸಿತು, ಪ್ರಯತ್ನಿಸಿತು. ಸಾವಿನಾಚೆಯ ಜಗತ್ತಿನಲ್ಲಿ ಏನಿದೆ ಎಂದು ನನಗೆ ತಿಳಿದಿರುವುದು ಒಂದೇ ಅಲ್ಲಿ ನನ್ನ ಸ್ವಾಮಿ,ಯಜಮಾನ, ಸೃಷ್ಟಿಕರ್ತ ಇದ್ದಾನೆ. ಮತ್ತೆ ಏನಿದ್ದರೂ ಇಲ್ಲದಿದ್ದರೂ ಅದು ನಗಣ್ಯ. ಎಲ್ಲೆಡೆಯೂ ಅವನಿದ್ದಾನೆ. ನನ್ನಿಂದ ನಿಮ್ಮ ರೋಗಕ್ಕೆ ಪರಿಹಾರ ಸಿಗುವ ನಂಬಿಕೆಯಿಂದ ನೀವು ಬಂದಿರಿ. ಬದುಕಿಗೊಂದು ಆಯಾಮ ಸಿಗುವ ನಂಬಿಕೆಯಿಂದಲೇ ಬದುಕು ಸಾಗಿತು. ಇನ್ನು ಅದರ ಅನಂತರವೂ ಇಲ್ಲಿಯವರೆಗೆ ನಡೆಸಿದವ, ಅಲ್ಲಿಯೂ ಇದ್ದು ನಡೆಸುತ್ತಾನೆ ಎಂದು ನಂಬಿದರೆ ಸೈ ಎಂದರು.
ಪ್ರಭು ಕ್ರಿಸ್ತ ಮೃತರ ದೇವರಲ್ಲ್ಲ, ಜೀವಂತರ ದೇವರು. ನಿತ್ಯಜೀವದ ಮೂಲವಾದ ಕ್ರಿಸ್ತನನ್ನು ಆ ಗೋರಿ ಬಂಧಿಸಲಾಗಲಿಲ್ಲ. ಕ್ರಿಸ್ತ ಅಸತ್ಯ, ಅನ್ಯಾಯ, ಮೋಸ, ವಂಚನೆಯನ್ನು ಸೋಲಿಸಿ ವಿಜಯಶಾಲಿಯಾಗಿದ್ದಾರೆ. ಹಾಗಾಗಿ ಪಾಸ್ಖಜಾಗರಣೆ ಭರವಸೆಯ ಹೊಸ ಬೆಳಕಿನ ಸಂಕೇತವಾಗಿದೆ. ಮೊದಲ ಅದಾಮ ಜೀವ ಪಡೆದ ವ್ಯಕ್ತಿ, ಎರಡನೆಯ ಅದಾಮ ಅಂದರೆ ಕ್ರಿಸ್ತ ಜೀವಕೊಡುವ ವ್ಯಕ್ತಿ.
ಮೊದಲ ಆದಾಮನಿಂದ ನಶ್ವರ ದೇಹ ಪಡೆದರೆ ಎರಡನೇ ಆದಾಮನಿಂದ ಪಡೆಯುವುದು ಅಳಿಯಲಾಗದ ಆಧ್ಯಾತ್ಮಿಕ ಶರೀರ. ವಿಶ್ವಾಸದ ಪಯಣದಲ್ಲಿ ಎದುರಾಗುವ ಕಷ್ಟ,ಸೋಲು, ನಿರಾಸೆ, ಜಿಗುಪ್ಸೆಯನ್ನು ಬದಿಗೊತ್ತಿ ವಿಶ್ವಾಸದಿಂದ ಬಾಳಲು ಈ ಪಾಸ್ಖ ಜಾಗರಣೆ ಕ್ರಿಸ್ತನ ಪುನರುತ್ಥಾನ ಪ್ರೇರಣೆ ನೀಡಲಿ. ದೈವಶಕ್ತಿ ದೈವ ಮಹಿಮೆಯ ಮುಂದೆ ಮಾತಿನ ದರ್ಪ, ಅಹಂಕಾರ ಏನೇನೂ ಇಲ. ಕ್ರಿಸ್ತನ ಸಾವು ನಮ್ಮ ಪಾಪದ ಪರಿಹಾರಕ್ಕಾಗಿ ನೀಡಿದ ಶ್ರೇಷ್ಠ ಸಂಭಾವನೆ. ಕ್ರಿಸ್ತನ ಪುನರುತ್ಥಾನದಿಂದ ನಮ್ಮೆಲ್ಲರ ಪುನರುತ್ಥಾನ ಖಚಿತ ಎಂಬ ದೃಢಸಂಕಲ್ಪ ನಮ್ಮಲ್ಲಿ ಮೂಡುವಂತಾಗಲಿ. ಪಾಸ್ಖ ಹಬ್ಬವು ಹತಾಶೆ, ನಿರಾಶೆಯಿಂದ ಬದುಕುವವರಿಗೆ ಭರವಸೆಯ ಹೊಂಗಿರಣ. ಇಂದಿನ ಸಮಾಜದಲ್ಲಿ ಇಲ್ಲಿಯೇ ಮತ್ತು ಈಗಲೇ ಎಂಬ ಫಾಸ್ಟ್ ಪುಡ್ ಸಂಸ್ಕೃತಿ ಎಲ್ಲರಲ್ಲೂ ಮೂಡುತ್ತಿದೆ. ಆಧುನಿಕ ಮಾನವ ಅದೆಷ್ಟು ವೇಗಿಯೆಂದರೆ ತಾಳ್ಮೆ ಎಂಬ ಪದ ನಿಘಂಟಿನಿಂದ ಕಾಣೆಯಾಗುತ್ತಿರುವಂತೆ ಕಾಣುತ್ತದೆ. ಆದ್ದರಿಂದ ಮುಂದೆ ಬರಲಿರುವ ಮಹಿಮೆಗಾಗಿ ಭರವಸೆಯಿಂದ ಕಾಯಲು, ಕಷ್ಟ ಸಹಿಸಲು ಆತ ಸಿದ್ಧನಿಲ್ಲ. ಪವಿತ್ರ ಶುಕ್ರವಾರವಿಲ್ಲದೆ ಪಾಸ್ಖ ಹಬ್ಬವಿಲ್ಲ' ಎಂಬುದನ್ನುಮರೆತಿರುವಂತಿದೆ. ಇಂದಿನ ಕಾಲದಲ್ಲಿ ನಾವು ಅನುಭವಿಸುತ್ತಿರುವ ಕಷ್ಟ ಸಂಕಟಗಳು ಮುಂದೆ ನಮಗೆ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಹೋಲಿಸುವುದಕ್ಕೂ ಬಾರವುಗಳೆಂದು ನಾನು ಎಣಿಸುತ್ತೇನೆ (ರೋಮ ೮:೧೮) ಕ್ರಿಸ್ತನ ಪುನರುತ್ಥಾನ ಭಾವನೆಯ, ಚೈತನ್ಯದ ಹೊಂಗಿರಣವಾಗಲಿ ಎಂದು ಪ್ರಾರ್ಥಿಸೋಣ.
----------------


No comments:
Post a Comment