ಮಾರ್ಚ್ 7, 2020 ಶನಿವಾರ [ನೇರಳೆ]
ಸಂತ ಪೆರ್ಪೆತುವಾ ಮತ್ತು ಸಂತ ಫೆಲಿಸಿಟಿ [ರಕ್ತಸಾಕ್ಷಿಗಳು] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಧರ್ಮೋ 26.16-19
ಕೀರ್ತನೆ 119:1-2, 4-5, 7-9. ಶ್ಲೋಕ.1
ಪ್ರಭುವಿನ ಶಾಸ್ತ್ರಾನುಸಾರ ನಡೆವವರು ಧನ್ಯರು
ಶುಭಸಂದೇಶ: ಮತ್ತಾಯ 5.43-48
-----------------
ಮೊದಲವಾಚನ: ಧರ್ಮೋ 26: 16-19
16 ಮೋಶೆ ಜನರಿಗೆ ಹೀಗೆಂದನು “ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕೆಂದು ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದುದರಿಂದ ನೀವು ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು. 17 ನಮಗೆ ಸರ್ವೇಶ್ವರನೇ ದೇವರಾಗಿರುವರೆಂದು ಹಾಗೂ ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ಞಾವಿಧಿ ನಿರ್ಣಯಗಳನ್ನು ಕೈಕೊಂಡು ಅವರ ಮಾತಿಗೆ ಲಕ್ಷ್ಯಕೊಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ. 18 ಸರ್ವೇಶ್ವರಸ್ವಾಮಿ ಆದರೋ ನಿಮ್ಮ ವಿಷಯದಲ್ಲಿ, ‘ಇವರು ನನ್ನ ಆಜ್ಞೆಗಳನ್ನೆಲ್ಲ ಅನುಸರಿಸುವವರಾದರೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯಜನರಾಗಿರುವರು. 19 ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟು ಮಾಡುವೆನು ಹಾಗೂ ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರಾಗಲು ಒಡಂಬಟ್ಟಿದ್ದಾರೆ,’ ಎನ್ನುವರು.”
ಕೀರ್ತನೆ 119: 1-2, 4-5, 7-8
ಪ್ರಭುವಿನ ಶಾಸ್ತ್ರಾನುಸಾರ ನಡೆವವರು ಧನ್ಯರು
1:“ಆಲೆಫ್”(ಹಿಬ್ರು ಅಕ್ಷರ ಕ್ರಮಾನುಸಾರ ವಿರಚಿತ ಕೀರ್ತನೆ) ದೈವಾಜ್ಞೆಯಲ್ಲಿ ಅಭಿಮಾನ ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು ದೋಷರಹಿತ ಮಾರ್ಗದಲಿ ನಡೆವವರು ಧನ್ಯರು
2: ಆತನ ಕಟ್ಟಳೆಗಳನ್ನು ಕೈಗೊಳ್ಳುವವರು ಧನ್ಯರು ಮನಃಪೂರ್ವಕವಾಗಿ ಆತನನು ಅರಸುವವರು ಧನ್ಯರು
4: ನಿನ್ನ ನೇಮಗಳನು ಪ್ರಭೂ, ನೀನೆ ವ್ಯಕ್ತಪಡಿಸಿರುವೆಯಯ್ಯಾ ಜಾಗರೂಕತೆಯಿಂದ ಪಾಲಿಸಬೇಕೆಂದು ನೀ ವಿಧಿಸಿರುವೆಯಯ್ಯಾ
5: ನಿನ್ನ ನಿಬಂಧನೆಗಳ ಪಾಲನೆಯಲಿ ಸ್ಥಿರತೆ ಇದ್ದರೆ ಒಳಿತು ನನ್ನ ಮನದಲಿ
7: ನೀತಿಯುತ ನಿನ್ನ ವಿಧಿಗಳನು ಕಲಿಯುವೆನಯ್ಯಾ ಯಥಾರ್ಥ ಹೃದಯದಿಂದ ನಿನ್ನ ಸ್ತುತಿಪೆನಯ್ಯಾ
8: ನಿನ್ನ ನಿಬಂಧನೆಗಳನು ಅನುಸರಿಸುವೆನಯ್ಯಾ ನನ್ನನೆಂದಿಗೂ, ಪ್ರಭು, ಕೈಬಿಡದಿರಯ್ಯಾ
ಶುಭಸಂದೇಶ: ಮತ್ತಾಯ 5: 43-48
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: 43 "ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು" ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. 44 ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. 45 ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. 46 ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ? 47 ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? 48 ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ. "
--------------
ಚಿಂತನೆ: ಪ್ರಭುಕ್ರಿಸ್ತನ ಅತ್ಯುನ್ನತ ಬೋಧನೆ ನಿನ್ನ ಶತ್ರುಗಳನ್ನು ಪ್ರೀತಿಸು. ಇದು ಅವರ ಜೀವನದಲ್ಲಿ ಬರೀ ಬೋಧನೆಯಾಗಿರಲಿಲ್ಲ, ಅದು ಅವರ ಜೀವನದ ನಿತ್ಯಸತ್ಯವಾಗಿತ್ತು. ಅವರನ್ನು ಯೆಹೂದ್ಯ ಮುಖಂಡರು, ಮುಖ್ಯಯಾಜಕರು ವಿರೋಧಿಸುತ್ತಿದ್ದರು. ಆದರೆ ಅವರೆಂದೂ ಅವರನ್ನು ದ್ವೇಷಿಸಲಿಲ್ಲ. ಬದಲಿಗೆ ಅವರು ಬೋಧನೆಯನ್ನು ಪಾಲಿಸುವಂತೆ ಆದೇಶಿಸಿ ಶತ್ರುಗಳನ್ನು ಮಿತ್ರರಂತೆ ಪ್ರೀತಿಸುವಂತೆ ಬೋಧಿಸಿದರು. ಅವರು ಬೋಧಿಸಿದಂತೆ ಅವರ ಶತ್ರುಗಳನ್ನು ಶಿಲುಬೆಯ ಮೇಲಿಂದ ಕ್ಷಮಿಸಿದರು, ಅವರಿಗಾಗಿ ಪ್ರಾರ್ಥಿಸಿದರು. ನಾವು ಸಹ ಅವರನ್ನು ಅನುಕರಿಸುವಂತೆ ಇಂದಿನ ಶುಭಸಂದೇಶದಲ್ಲಿ ಕರೆ ನೀಡುತ್ತಿದ್ದಾರೆ.
-----------------
ಮಹಿಳೆಯೊಬ್ಬಳು ಅಬ್ರಾಹಾಂ ಲಿಂಕನ್ ಒಬ್ಬ ಶತ್ರು ಸೈನಿಕನೊಡನೆ ಮಾತನಾಡುವುದನ್ನು ಕಂಡು ಪ್ರಶ್ನಿಸುತ್ತಾಳೆ. ಅದಕ್ಕೆ ಅವರು ಪ್ರತ್ಯುತ್ತರವಾಗಿ "ಶತ್ರುಗಳನ್ನು ದಮನ ಮಾಡುವ ಅತ್ಯುತ್ತಮ ಅಸ್ತ್ರ ಅವರನ್ನು ಮೊದಲು ಸ್ನೇಹಿತರನ್ನಾಗಿಸಿಕೊಳ್ಳುವುದು" ವಾವ್! ನಿಜಕ್ಕೂ ಮನಮುಟ್ಟುವ ಉತ್ತರ. ಮಾನವರಾದಂತಹ ನಮ್ಮ ಜೀವನದಲ್ಲಿ ಸೇಡಿಗೆ ಸೇಡು, ಮೇಲಕ್ಕೇರುವವರನ್ನು ಕಂಡು ಕೆಳಗಿಳಿಸುವ ಯತ್ನ, ಹೊಟ್ಟೆಕಿಚ್ಚು, ಅಸೂಯೆ, ಕೋಪ ಇಂತಹ ನಡತೆ ಸರ್ವೆಸಾಮಾನ್ಯ. ನಮಗೆ ಯಾರಾದರೂ ಎನಾದರೂ ನಿಂದಿಸಿದರೆ ಸಾಕು ಅವರಿಗೆ ಮೊದಲು ಕಪಾಳಮೋಕ್ಷ ತೋರಿಸುತ್ತೇವೆ. ಆದರೆ ಇಂದಿನ ಶುಭಸಂದೇಶದಲ್ಲಿ ಕ್ರಿಸ್ತ, ನಿಮ್ಮ ಒಳ್ಳೆಯತನದಿಂದ ಕೆಟ್ಟದ್ದನ್ನು ಸೋಲಿಸಿರಿ, ಶತ್ರುಗಳ್ಳನ್ನು ಪ್ರೀತಿಯಿಂದ ಕಾಣಿರಿ ಎಂದು ತಿಳಿಸುತ್ತಾರೆ. ಇಸ್ರಾಯೆಲ್ ಜನರು ಪದೇಪದೇ ದೇವರಿಂದ ದೂರ ಹೋದರೂ ದೇವರು ಅವರನ್ನು ’ಹೋಗಲಿ’ ಎಂದು ಬಿಡದೆ ಅವರನ್ನು ಕ್ಷಮಿಸಿ ತನ್ನ ಸ್ವಂತ ಜನರೆಂದು ಒಪ್ಪಿಕೊಂಡು ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಾರೆ. ಇದು ದೇವರ ಗುಣ. ಇದು ದೇವಜನರ ಗುಣ ಕೂಡ ಆಗಬೇಕು.
* ನಿಮ್ಮ ಧರ್ಮಕೇಂದ್ರದ ಗುರುಗಳಿಗೆ ಕರೆಮಾಡಿ ಅವರ ಕೆಲಸಕ್ಕೆ ಜೀವತುಂಬಿಸಿ.
--------------------
`ನಿನ್ನ ಶತ್ರುಗಳನ್ನು ಪ್ರೀತಿಸು’ ಎಂದು ಯೇಸು ನುಡಿಯುವ ಮಾತು ಒಂದು ದೊಡ್ಡ ಸವಾಲು. ಯೇಸುವಿನ ಹಿಂಬಾಲಕರಾಗಿರುವುದರಿಂದ ಈ ಸವಾಲನ್ನು ಸ್ವೀಕರಿಸುವುದು ಅನಿವಾರ್ಯವಾಗಿದೆ. ನಿಮ್ಮ ಶತ್ರುಗಳನ್ನು ಪ್ರೀತಿಸು, ನಿಮ್ಮನ್ನು ಕಾಡಿಸುವವರಿಗಾಗಿ ಪ್ರಾರ್ಥಿಸು ಎನ್ನುವ ಯೇಸುವಿನ ಮಾತು ಸುಲಭದ ಮಾತಲ್ಲ. ನಮ್ಮ ಮೇಲೆ ಸಂಚು ಮಾಡುವವರಿಗೆ, ಕಷ್ಟ ಕೊಡುವವರಿಗೆ, ಮಾನನಷ್ಟ ಮಾಡುವವರಿಗೆ, ಹಿಂಸಿಸುವವರಿಗೆ ಪ್ರೀತಿ ಕೊಡುವುದು ಕಷ್ಟ. ಆದರೆ ಕ್ರೈಸ್ತ ಧರ್ಮದ ಶ್ರೇಷ್ಠತೆ ಅಡಗಿರುವುದೇ ಅಲ್ಲಿ. ಯೇಸು ಕೇವಲ ಬೋಧಿಸಲಿಲ್ಲ ಅದನ್ನು ತಮ್ಮ ಜೀವನದಲ್ಲಿ ಪಾಲಿಸಿದರು. ತಮ್ಮನ್ನು ಶಿಲುಬೆಗೇರಿಸಿದವರನ್ನು ಕ್ಷಮಿಸಿದರು. ಹಾಗಾಗಿ ಯೇಸು ಬಯಸುವುದು ಪ್ರೀತಿಸುವ ಮತ್ತು ಕ್ಷಮಿಸುವ ಸರಳ ಹೃದಯಗಳನ್ನು ಉದಾರತನದಿಂದ ನಾವು ಪರರನ್ನು ಕ್ಷಮಿಸಿದ್ದೆ ಆದರೆ ನಮ್ಮೆಲ್ಲ ಅರ್ಧ ಖಾಯಿಲೆಗಳು ಮಾಯವಾಗಿ ಮನಃಶಾಂತಿಯಿಂದ ಬದುಕಬಹುದು.
-----------------
© 'ದನಿ' ಮಾಧ್ಯಮ ಮನೆ

No comments:
Post a Comment