ಏಪ್ರಿಲ್ 13,
2020 ಸೋಮವಾರ [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:14, 22-33
ಕೀರ್ತನೆ 16:1-2, 5, 7-11 ಶ್ಲೋಕ.1
ನೀಡು ದೇವಾ ರಕ್ಷಣೆಯನು, ನಾ ನಿನಗೆ ಶರಣಾಗತನು
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಮತ್ತಾಯ 28.8-15
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು
2:14, 22-33
14 : ಪೇತ್ರನ ಪ್ರಬೋಧನೆ ಆಗ ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನ ಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಈ ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ.
22 : “ಇಸ್ರಯೇಲ್ ಬಾಂಧವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸುಸ್ವಾಮಿ ದೈವನಿಯಮಿತ ವ್ಯಕ್ತಿ ಎಂಬುದನ್ನು ದೇವರೇ ಅವರ ಮುಖಾಂತರ ನಡೆಸಿದ ಅದ್ಭುತ ಕಾರ್ಯಗಳಿಂದ, ಮಹತ್ಕಾರ್ಯಗಳಿಂದ ಹಾಗೂ ಸೂಚಕಕಾರ್ಯಗಳಿಂದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ.
23 : ದೇವರು ತಮ್ಮ ಸ್ಥಿರಸಂಕಲ್ಪದಲ್ಲಿ ಹಾಗೂ ಭವಿಷ್ಯತ್ ಜ್ಞಾನದಲ್ಲಿ ಯೇಸು ನಿಮ್ಮ ವಶವಾಗಬೇಕೆಂದು ಈ ಮೊದಲೇ ನಿರ್ಧರಿಸಿದ್ದರು. ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ, ಕೊಲ್ಲಿಸಿದಿರಿ.
24 : ಆದರೆ ದೇವರು ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ ಎಬ್ಬಿಸಿದರು. ಕಾರಣ - ಅವರನ್ನು ಬಂಧಿಸಿಡುವುದು ಮೃತ್ಯುವಿಗೆ ಅಸಾಧ್ಯವಾಗಿತ್ತು.
25 : ಅವರನ್ನು ಕುರಿತು ದಾವೀದನು ಹೀಗೆಂದಿದ್ದಾನೆ: ‘ಪ್ರಭು ಇಹನು ಎನ್ನ ಕಣ್ಮುಂದೆ ಸತತ ನಾ ಹೆದರದಂತೆ ಆತನಿಹನು ಎನ್ನ ಹತ್ತಿರ.
26 : ಇದಕಾರಣ ಹರ್ಷಿಸಿತು ಎನ್ನ ಹೃದಯ ತುಳುಕಿತು ಸಂತಸ ಎನ್ನ ನಾಲಗೆಯಿಂದ. ನಂಬಿ ನಿರೀಕ್ಷೆಯಿಂದಿರುವುದು ಎನ್ನ ಮತ್ರ್ಯದೇಹ.
27 : ಏಕೆನೆ, ದೂಡಲಾರೆ ಪಾತಾಳಕ್ಕೆ ನೀನೆನ್ನ ಜೀವಾತ್ಮವನು, ಕೊಳೆಯಬಿಡಲಾರೆ ನೀನೊಲಿದಾತನನು.
28 : ಅಮರ ಜೀವಮಾರ್ಗವನೆನಗೆ ತೋರ್ಪಡಿಸಿದೆ ನಿನ್ನ ಶ್ರೀ ಸಾನ್ನಿಧ್ಯ ಸಂತಸದಿಂದೆನ್ನ ಭರಿತನಾಗಿಸುವೆ.’
29 : “ಪ್ರಿಯ ಸಹೋದರರೇ, ಪಿತಾಮಹ ದಾವೀದರಸನ ವಿಷಯದಲ್ಲಿ ನಾನು ನಿಮಗೆ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ಆತನು ಮೃತನಾದನು; ಆತನನ್ನು ಸಮಾಧಿಮಾಡಲಾಯಿತು. ನಿಮಗೆಲ್ಲರಿಗೆ ತಿಳಿದಿರುವಂತೆ ಆತನ ಸಮಾಧಿ ನಮ್ಮ ಮಧ್ಯೆ ಇಂದಿನವರೆಗೂ ಇದೆ.
30 : ಆತನೊಬ್ಬ ಪ್ರವಾದಿಯೂ ಆಗಿದ್ದ. ತನ್ನ ಸಂತತಿಯಲ್ಲೇ ಒಬ್ಬನನ್ನು ಅರಸನನ್ನಾಗಿ ಮಾಡುವುದಾಗಿ ದೇವರು ಮಾಡಿದ್ದ ವಾಗ್ದಾನವನ್ನು ಆತನು ಮರೆತಿರಲಿಲ್ಲ.
31 : ಹೀಗಿರುವಲ್ಲಿ ಕ್ರಿಸ್ತಯೇಸುವಿನ ಪುನರುತ್ಥಾನವನ್ನು ಮುಂಚಿತವಾಗಿ ಅರಿತು ಅದರ ವಿಷಯವಾಗಿ ಹೀಗೆಂದು ಪ್ರವಾದನೆ ಮಾಡಿದ: ‘ಆತನನನ್ನು ಪಾತಾಳಕ್ಕೆ ದೂಡಲಿಲ್ಲ; ದೇಹ ಕೊಳೆತುಹೋಗಲು ಬಿಡಲಿಲ್ಲ.’
32 : ಈ ಯೇಸುವನ್ನೇ ದೇವರು ಪುನರುತ್ಥಾನಗೊಳಿಸಿದ್ದಾರೆ; ಈ ಘಟನೆಗೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ.
ಕೀರ್ತನೆ 16:1-2, 5, 7-11 ಶ್ಲೋಕ.1
1 : ನೀಡು ದೇವಾ ರಕ್ಷಣೆಯನು / ನಾ ನಿನಗೆ ಶರಣಾಗತನು //
2 : “ನೀನೇ ನನ್ನೊಡೆಯ”ನೆಂದು ನಾ ನುಡಿದೆ / ನಿನ್ನ ಹೊರತು ನನಗಿಲ್ಲ ಒಳಿತು” ಎಂದೆ /
5 : ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ / ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ //
7 : ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ / ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ //
8 : ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ / ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ? //
9 : ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ / ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ //
10 : ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ / ಬಿಟ್ಟುಕೊಡುವುದಿಲ್ಲ ನಿನ್ನ ಈ ಭಕ್ತನನು ಪಾತಾಳಕೆ //
11 : ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು / ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು / ನಿನ್ನ ಬಲಗೈ ನೀಡುವುದು ನಿತ್ಯ ಭಾಗ್ಯವನು //
ಶುಭಸಂದೇಶ: ಮತ್ತಾಯ 28:8-15
8 : ಅದರಂತೆಯೇ ಆ ಮಹಿಳೆಯರು ಭಯಮಿಶ್ರಿತ ಆನಂದದಿಂದ ಸಮಾಧಿಯನ್ನು ಬಿಟ್ಟು ಕೂಡಲೇ ಹೊರಟರು. ಶಿಷ್ಯರಿಗೆ ಈ ಸಮಾಚಾರವನ್ನು ಮುಟ್ಟಿಸಲು ಧಾವಿಸಿದರು.
9 : ತಟ್ಟನೆ, ಯೇಸುವೇ ಅವರನ್ನು ಎದುರುಗೊಂಡು, “ನಿಮಗೆ ಶುಭವಾಗಲಿ!” ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು, ಅವರ ಪಾದಕ್ಕೆರಗಿ ಪೂಜಿಸಿದರು.
10 : ಆಗ ಯೇಸು ಅವರಿಗೆ, “ಭಯಪಡಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ತಿಳಿಸಿರಿ,” ಎಂದು ಹೇಳಿದರು.
11 : ಇತ್ತ ಆ ಮಹಿಳೆಯರು ಹೋಗುತ್ತಿದ್ದಂತೆ, ಅತ್ತ ಕಾವಲುಗಾರರಲ್ಲಿ ಕೆಲವರು ನಗರಕ್ಕೆ ಬಂದು ನಡೆದ ಸಂಗತಿಯನ್ನೆಲ್ಲಾ ಮುಖ್ಯಯಾಜಕರಿಗೆ ವರದಿ ಮಾಡಿದರು.
12 : ಇವರು ಪ್ರಮುಖರೊಂದಿಗೆ ಸಭೆಸೇರಿ ಒಂದು ಸಂಚುಹೂಡಿದರು. ಸೈನಿಕರಿಗೆ ಭಾರಿ ಲಂಚಕೊಟ್ಟು,
13 : “ಅವನ ಶಿಷ್ಯರು ರಾತ್ರಿ ವೇಳೆಯಲ್ಲಿ ಬಂದು, ನಾವು ನಿದ್ರೆಮಾಡುತ್ತಿದ್ದಾಗ ಅವನನ್ನು ಕದ್ದುಕೊಂಡು ಹೋದರೆಂದು ಜನರಿಗೆ ಹೇಳಿರಿ;
14 : ಈ ಸುದ್ಧಿ ರಾಜ್ಯಪಾಲನ ಕಿವಿಗೆ ಬಿದ್ದರೆ, ನಾವು ಅವರನ್ನು ಸಮಾಧಾನ ಪಡಿಸುತ್ತೇವೆ; ನಿಮಗೇನೂ ಆಗದಂತೆ ನೋಡಿಕೊಳ್ಳುತ್ತೇವೆ,” ಎಂದು ಹೇಳಿದರು.
15 : ಸೈನಿಕರು ಲಂಚವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟಂತೆಯೇ ಮಾಡಿದರು. ಈ ಕಟ್ಟುಕತೆ ಯೆಹೂದ್ಯರಲ್ಲಿ ಹಬ್ಬಿ ಇಂದಿನವರೆಗೂ ಪ್ರಚಲಿತವಾಗಿದೆ.
---------------------
---------------------
ಸಾಮಾನ್ಯರ ದೃಷ್ಟಿಕೋನದಲ್ಲಿ ಸತ್ತಶವಗಳನ್ನು ಹೂತಿಡುವ ಸಮಾಧಿಯೆಂದರೆ ಯಾರಿಗೂ ಬೇಡವಾದಂಥಹ ನಿರ್ಜನ ಪ್ರದೇಶ. ಅಪಶಕುನ ಮತ್ತು ಅಶುಭವನ್ನು ಬಿಂಬಿಸುವ ತಾಣ. ಆದರೆ ಪ್ರಭುಯೇಸುವಿನ ದೇಹವನ್ನು ಇರಿಸಿದ್ದ ಸಮಾಧಿ ಅವರ ಶಿಷ್ಯರ ನಂಬಿಕೆ ಮತ್ತು ವಿಶ್ವಾಸದ ಬುನಾದಿಯಾಯಿತು. ಬರಿದಾದ ಸಮಾಧಿಯಿಂದಲೇ ಶುಭಸಂದೇಶದ ಪ್ರಸಾರದ ಕಾರ್ಯಾರಂಭಗೊಂಡಿದ್ದನ್ನು ನಾವು ಗಮನಿಸಬೇಕು. ಕ್ರಿಸ್ತನ ಮರಣದಿಂದ ಕತ್ತಲು ಕವಿದು ದಿಕ್ಕುತೋಚದೆ ಚದುರಿಹೋಗಿದ್ದ ಪ್ರೇಷಿತರಿಗೆ ಬೆಳಕು ಮತ್ತು ದಾರಿ ಕಾಣುವುದು ಈ ಸಮಾಧಿಯಿಂದಲೇ. ಪ್ರಭುವಿನ ಪುನರುತ್ಥಾನದ ಮಹೋತ್ಸವವನ್ನು ಆಚರಿಸುವ ನಾವು ಪುನರುತ್ಥಾನದ ಜನರು ಎಂಬ ಅಂಶವನ್ನು ಮೊದಲಿಗೆ ಒಪ್ಪಿಕೊಳ್ಳಬೇಕು. ದೈನಂದಿನ ಜೀವನ ಸನ್ನಿವೇಶಗಳಲ್ಲಿ ಎದುರಾಗುವ ಸಂಕಷ್ಟ, ಸೋಲು, ಹತಾಶೆ ಮತ್ತು ನಿರಾಶೆಗಳಿಂದ ಕಂಗೆಡದೆ ಹೊಸ ಚೈತನ್ಯ ಮತ್ತು ಹುರುಪಿನಿಂದ ಜೀವಿಸಲು ಪ್ರಭುವಿನ ಪುನರುತ್ಥಾನ ಪ್ರೇರಣೆಯಾಗುತ್ತದೆ. ಕನಸು ಮತ್ತು ನಿರೀಕ್ಷೆಗಳೇ ಇರದ ಸಂದರ್ಭದಲ್ಲಿ ನಮ್ಮಲ್ಲಿ ಹೊಸ ಕನಸನ್ನು ಚಿಗುರಿಸುವ, ನಂಬಿಕೆ ಮತ್ತು ವಿಶ್ವಾಸಗಳನ್ನು ಕಳೆದುಕೊಂಡಿರುವವರಲ್ಲಿ ಭರವಸೆಯನ್ನು ತರುವಂತಾಗಲಿ.
-------------
© 'ದನಿ' ಮಾಧ್ಯಮ ಮನೆ

No comments:
Post a Comment