ಮಾರ್ಚ್ 28, 2020 ಶನಿವಾರ [ನೇರಳೆ]
--------------
ಮೊದಲ
ವಾಚನ: ಯೆರೆಮಿಯ 11:18-20
ಕೀರ್ತನೆ
7:2-3, 9-10, 11-12 ಶ್ಲೋಕ.1
ನಿನ್ನಾಶ್ರಯವನರಸಿ
ಹೇ ಸ್ವಾಮಿ ದೇವಾ, , ನಾ ಬಂದಿಹೆನು
ಶುಭಸಂದೇಶ:
ಯೊವಾನ್ನ 7:40-53
ಮೊದಲ ವಾಚನ: ಯೆರೆಮಿಯ
11.18-20
18
: ಸರ್ವೇಶ್ವರಸ್ವಾಮಿ ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ್ದ ಕುತಂತ್ರವು ನನಗೆ ಗೊತ್ತಾಯಿತು.
ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು.
19
: ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. “ಮರವನ್ನು ಫಲಸಹಿತ ನಾಶಪಡಿಸೋಣ, ಜೀವ ಲೋಕದಿಂದ
ಇವನನ್ನು ನಿರ್ಮೂಲ ಮಾಡೋಣ. ಅವನ ಹೆಸರೇ ಇಲ್ಲದಂತಾಗಲಿ,” ಎಂದು ಅವರು ಕುಯುಕ್ತಿ ಕಲ್ಪಿಸಿದ್ದರು.
ಆದರೆ ನನಗೆ ಅದು ತಿಳಿದಿರಲಿಲ್ಲ.
20
: ಆಗ ನಾನು, “ಸೇನಾಧೀಶ್ವರರಾದ ಸರ್ವೇಶ್ವರಾ, ನೀವು ಹೃನ್ಮನಗಳನ್ನು ಪರೀಕ್ಷಿಸಿ ನ್ಯಾಯವಾದ ತೀರ್ಪನ್ನು
ನೀಡುವವರು. ನೀವು ಅವರಿಗೆ ಮಾಡುವ ಪ್ರತೀಕಾರವನ್ನು ನಾನು ಕಾಣುವೆನು. ನನ್ನ ವ್ಯಾಜ್ಯವನ್ನು ನಿಮ್ಮ
ಕೈಗೊಪ್ಪಿಸಿದ್ದೇನೆ,” ಎಂದೆನು.
ಕೀರ್ತನೆ 7:2-3,
9-10, 11-12 ಶ್ಲೋಕ.1
ನಿನ್ನಾಶ್ರಯವನರಸಿ ಹೇ
ಸ್ವಾಮಿ ದೇವಾ, ನಾ ಬಂದಿಹೆನು
2
: ಇಲ್ಲದಿರೆ ಶತ್ರು ತಿಳಿದಾನು ನನಗೆ ರಕ್ಷಕನಿಲ್ಲವೆಂದು / ಝಲ್ಲನೆ ಸೀಳಿಬಿಟ್ಟಾನು ಸಿಂಹದಂತೆ ಮೇಲೆಬಿದ್ದು
//
3
: ಸ್ವಾಮಿ ದೇವಾ, ನಾನೀಪರಿ ನಡೆದಿರೆ : ಅಕ್ರಮಕ್ಕೆ ಕೈ ಹಾಕಿರೆ /
9
: ಮಾನವರ ಹೃನ್ಮನವನರಿತಿಹ ಸತ್ಯ ಸ್ವರೂಪಿ ದೇವಾ, / ದುರುಳರ ಕೆಡುಕನಳಿಸಯ್ಯಾ, ಸತ್ಯವಂತರನು ನೀ ಉಳಿಸಯ್ಯಾ
/
10
: ನನಗೆ ರಕ್ಷೆನೀಡುವ ಗುರಾಣಿ, ದೇವನೇ / ನೇರಮನಸ್ಸರಿಗೆ ಸಂರಕ್ಷಣೆ ಆತನೆ //
11
: ನ್ಯಾಯಕ್ಕನುಸಾರ ತೀರ್ಪನಿಡುವಂಥವನು ದೇವನು / ದುರುಳರ ಮೇಲೆ ದಿನಬಿಡದೆ ಕೋಪವುಳ್ಳವನು ಆತನು
//
12
: ತೀಡುವನು ಕತ್ತಿಯನು, ಹೂಡುವನು ಬಾಣವನು / ಪಡೆಯದಿರೆ ದುರುಳನು ಮನ ಪರಿವರ್ತನೆಯನು //
ಶುಭಸಂದೇಶ: ಯೊವಾನ್ನ
7:40-53
40
: ಇದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು, “ಬರಬೇಕಾಗಿದ್ದ ಪ್ರವಾದಿ ಈತನೇ ಸರಿ,” ಎಂದರು.
41
: ಇನ್ನೂ ಕೆಲವರು, “ಈತನೇ ಲೋಕೋದ್ದಾರಕ,” ಎಂದರು. ಮತ್ತೆ ಕೆಲವರು, “ಲೋಕೋದ್ಧಾರಕ ಗಲಿಲೇಯದಿಂದ ಬರುವುದುಂಟೇ?
42
: ‘ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ’ ಎಂದು ಪವಿತ್ರ ಗ್ರಂಥವೇ
ಹೇಳಿದೆಯಲ್ಲವೆ?” ಎಂದು ವಾದಿಸಿದರು.
43
: ಹೀಗೆ ಯೇಸುವನ್ನು ಕುರಿತು ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು.
44
: ಕೆಲವರಿಗಂತೂ ಯೇಸುವನ್ನು ಹಿಡಿದು ಬಂಧಿಸಬೇಕೆನಿಸಿತು. ಆದರೆ ಯಾರೂ ಅವರ ಮೇಲೆ ಕೈಹಾಕಲಿಲ್ಲ. ವಿಶ್ವಾಸವಿಹೀನ
ಮುಖಂಡರು
45
: ಕಾವಲಾಳುಗಳು ಹಿಂದಿರುಗಿದಾಗ, ಮುಖ್ಯಯಾಜಕರು ಮತ್ತು ಫರಿಸಾಯರು, “ಅವನನ್ನೇಕೆ ನೀವು ಹಿಡಿದು ತರಲಿಲ್ಲ?”
ಎಂದು ಕೇಳಿದರು.
46
: ಅವರು, “ಆತನು ಮಾತನಾಡುವಂತೆ ಯಾರೂ ಎಂದೂ ಮಾತನಾಡಿದ್ದಿಲ್ಲ,” ಎಂದು ಉತ್ತರಿಸಿದರು.
47
: ಅದಕ್ಕೆ ಫರಿಸಾಯರು, “ಏನು, ನೀವು ಕೂಡ ಅವನಿಗೆ ಮರುಳಾಗಿಬಿಟ್ಟಿರೋ?
48
: ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನಂಬಿದ್ದುಂಟೆ?
49
: ಧರ್ಮಶಾಸ್ತ್ರದ ಗಂಧವೂ ಇಲ್ಲದ ಜನಜಂಗುಳಿ ಶಾಪಗ್ರಸ್ತವಾಗಿದೆ,” ಎಂದರು.
50
: ಅಲ್ಲಿದ್ದ ಫರಿಸಾಯರಲ್ಲಿ ನಿಕೊದೇಮನು ಒಬ್ಬನು. ಹಿಂದೆ ಯೇಸುವನ್ನು ಕಾಣಲು ಬಂದಿದ್ದವನು ಈತನೇ.
51
: ಈತನು ಅವರಿಗೆ, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ, ಆತನು ಮಾಡಿರುವುದನ್ನು ಕಂಡುಕೊಳ್ಳದೆ,
ಆತನನ್ನು ದೋಷಿಯೆಂದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?” ಎಂದು ಕೇಳಿದನು.
52
: ಅದಕ್ಕೆ ಅವರು, “ನೀನೂ ಗಲಿಲೇಯದವನೋ? ಪವಿತ್ರಗ್ರಂಥವನ್ನು ಓದಿ ನೋಡು; ಗಲಿಲೇಯದಿಂದ ಯಾವ ಪ್ರವಾದಿಯೂ
ತಲೆಯೆತ್ತುವುದಿಲ್ಲ, ಎಂಬುದು ನಿನಗೇ ಗೊತ್ತಾಗುತ್ತದೆ,” ಎಂದು ಮರುತ್ತರ ಕೊಟ್ಟರು.
53
: ಬಳಿಕ ಎಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದರು.
ಇಂದಿನ ಶುಭಸಂದೇಶದಲ್ಲಿ
ನಿಕೋದೇಮನು ಯೇಸುವಿನ ಪರ ವಾದಿಸುತ್ತಾನೆ. ನಿಕೋದೆಮ ಎಂದರೆ ಗ್ರೀಕ್ ಭಾಷೆಯಲ್ಲಿ `ಜನರ ಗೆಲುವು’ victory
of the people ಎಂದರ್ಥ. ನಿಕೋದೆಮ ಒಬ್ಬ ಶ್ರೀಮಂತ ಫರಿಸಾಯ, ಹೆಸರಾಂತ ಬೋಧಕ ಮತ್ತು
ಧಾರ್ಮಿಕ ಸಮಾಲೋಚನಾ ಸಭೆಯ ಸದಸ್ಯ, ಇತರ ಫರಿಸಾಯರು ಯೇಸುವನ್ನು ಖಂಡಿಸುವಾಗ ಆತ ಧೈರ್ಯದಿಂದ ಯೇಸುವಿನ
ಪರ ನಿಲ್ಲುತ್ತಾನೆ.
ಪರರ ತಪ್ಪುಗಳನ್ನು ಕಂಡು
ಹಿಡಿಯುವುದು ಸುಲಭ. ತನ್ನ ತಪ್ಪನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ನಿಂದನೆ ಮಾಡುವುದು ಕೆಟ್ಟ ಅಭ್ಯಾಸ.
ನಿಂದನೆ ಅಥವಾ ಧೂಷಣೆ ಸಕಾರಾತ್ಮಕವಾಗಿರಬೇಕು. ಪರರ ಮನ ನೋಯಿಸುವಷ್ಟು ಕ್ರೂರವಾಗಿರಬಾರದು. ಯೇಸು ಫÀರಿಸಾಯರ,
ಧರ್ಮ ಶಾಸ್ತ್ರಿಗಳ ತಪ್ಪುಗಳನ್ನು ಎತ್ತಿಹಿಡಿದಾಗ ಅವನ್ನು ಸಮರ್ಥಿಸುವ ಸಲುವಾಗಿ ಯೇಸುವನ್ನು ಅಪರಾಧಿಯನ್ನಾಗಿಸುತ್ತಾರೆ.
---------------
ಇಂದಿನ ವಾಚನಾವಿಧಿಯಲ್ಲಿ ಯೇಸುಸ್ವಾಮಿಯ ಬಗ್ಗೆ 'ಆತ ಅಧಿಕಾರವಾಣಿಯಿಂದ ಮಾತಾಡುತ್ತಾನೆ.
ಆತ ಮಾತನಾಡುವಂತೆ ಯಾರೂ ಮಾತನಾಡಲಾರರು. ಬರಬೇಕಾಗಿದ್ದ ಪ್ರವಾದಿ ಈತನೇ? ಲೋಕೋದ್ದಾರಕನು ಈತನೇ
ಆಗಿರಬಹುದೇ..' ಎಂಬಿತ್ಯಾದಿಅಭಿಪ್ರಾಯಗಳು
ತಲೆದೋರುವುದನ್ನು ನಾವು ಕಾಣುತ್ತೇವೆ... ಏಕೆಂದರೆ ಅವರು ಕ್ರಿಸ್ತರನ್ನು
ಅರಿಯಲುವಿಫಲವಾಗಿದ್ದರು. ಅದೇ ರೀತಿಯಲ್ಲಿ ಇಂದಿಗೂ, ಕ್ರೈಸ್ತರಾಗಿರುವ ನಮಗೆ ಕಷ್ಟಕೋಟಲೆಗಳು ಬಂದಾಗ, ರೋಗ-ರುಜಿನಗಳಿಗೆ ನಾವು
ಒಳಪಟ್ಟಾಗ ಅಥವಾ ಕೊರತೆಗಳನ್ನು ಅನುಭವಿಸುವಾಗ ನಮ್ಮಲ್ಲೂ ದೇವರ ಬಗ್ಗೆ ಭಿನ್ನಾಭಿಪ್ರಾಯಗಳು
ಉದ್ಭವವಾಗುತ್ತವೆ. ಕ್ರಿಸ್ತರನ್ನು ಅರಿಯದೇ ಹೋದಾಗ ಅವರ ಪ್ರೀತಿಯನ್ನು ಸವಿಯದೇ ಹೋದಾಗ ಇಂತಹ
ಭಿನ್ನಾಭಿಪ್ರಾಯಗಳು ಬರುವುವು. ಅದೇ ರೀತಿ ನಮ್ಮನೆರೆಹೊರೆಯವರನ್ನು ಅರಿಯದೇ ಹೋದಾಗ
ಭಿನ್ನಾಭಿಪ್ರಾಯಗಳು ಬರುತ್ತವೆ. ಅಂತಹ ಕ್ಷಣಗಳು ನಮ್ಮಲ್ಲಿ ಮನೆಮಾಡಿದಾಗ ನಾವು ಮಾಡುವುದೇನು? ದೇವರಲ್ಲಿನ ನಮ್ಮ
ವಿಶ್ವಾಸವನ್ನು ನಾವು ಕಳೆದುಕೊಳ್ಳುತ್ತೇವಾ ಅಥವಾ ಅವರೊಂದಿಗಿನ ನಮ್ಮ ಸಂಬಂಧವನ್ನು
ನವೀಕರಿಸಿಕೊಂಡು, ದೃಢಪಡಿಸಿಕೊಂಡು
ಬಾಳುತ್ತೇವಾ?
------------------------
© 'ದನಿ' ಮಾಧ್ಯಮ ಮನೆ

No comments:
Post a Comment