Sunday, 17 May 2020

ಜೂನ್ 24, 2020 - ಸಾಧಾರಣ ಕಾಲದ ಹನ್ನೆರಡನೆಯ ವಾರ- ಬುಧವಾರ ಸ್ನಾನಿಕ ಯೊವಾನ್ನರ ಜಯಂತಿ, ಮಹೋತ್ಸವ

 [ಬಿಳಿ]
ಸ್ನಾನಿಕ ಯೊವಾನ್ನರ ಜಯಂತಿ, ಮಹೋತ್ಸವ
ಹಬ್ಬದ ಪೂಜೆ
ಮೊದಲ ವಾಚನ: ಯೆಶಾಯ 49.1-6
ಕೀರ್ತನೆ 139. 1-3, 13-15 ಶ್ಲೋಕ.14
ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ.
ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ.
ಎರಡನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13.22-26


ಮೊದಲ ವಾಚನ: ಯೆಶಾಯ 49.1-6
1 : ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ.
2 : ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ.
3 : ಆತನೆನಗೆ ಇಂತೆಂದ: “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.”
4 : ಇಂತೆಂದುಕೊಂಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ದೇವರಿಂದಲೇ.
5 : ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮಥ್ರ್ಯ ಇರುವುದು ದೇವರಲಿ.
6 : ಮತ್ತೆ ಆತ ಇಂತೆಂದನು ನನಗೆ: “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”

ಕೀರ್ತನೆ 139. 1-3, 13-15 ಶ್ಲೋಕ.14
ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ.
ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ.
1 : ಪ್ರಭು, ಪರಿಶೋಧಿಸಿರುವೆ ನೀ ನನ್ನನು / ಅರಿತುಕೊಂಡಿರುವೆ ಅಂತರಂಗವನು
2 : ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ / ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ
3 : ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ / ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ
13 : ನನ್ನ ಅಂತರಂಗವನು ಉಂಟುಮಾಡಿದಾತ ನೀನು / ತಾಯಗರ್ಭದಲೆ ನನ್ನ ರೂಪಿಸಿದಾತ ನೀನು
14 : ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ / ನಿನ್ನ ಕೃತ್ಯಗಳು ಅದ್ಭುತಕರ ಹಾಗೂ ವಿಚಿತ್ರ / ನನ್ನ ಬಗ್ಗೆ ನಿನಗಿರುವ ಪೂರ್ಣ ಅರಿವು ಸಮರ್ಥ
15 : ನನ್ನ ಅಸ್ಥಿಪಂಜರವನು ರೂಪಿಸುವಾಗ / ತಾಯಗರ್ಭದೊಳು ಅಚ್ಚರದಿ ರಚಿಸುವಾಗ / ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ / ಮರೆಯಾಗಿರಲಿಲ್ಲ ನಾನು ನಿನಗಾಗ

ಎರಡನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13.22-2
22 : ಅನಂತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, “ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು.
23 : ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ.
24 : ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದನು.
25 : ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, ‘ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.
26 : “ನನ್ನ ಸಹೋದರರೇ, ಅಬ್ರಹಾಮನ ಸಂತತಿಯವರೇ ಮತ್ತು ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ.

ಶುಭಸಂದೇಶ: ಲೂಕ 1.57-66, 80
57 : ದಿನ ತುಂಬಿದಾಗ ಎಲಿಜಬೇತಳು ಗಂಡು ಮಗುವಿಗೆ ಜನ್ಮವಿತ್ತಳು.
58 : ಸರ್ವೇಶ್ವರ ಆಕೆಗೆ ವಿಶೇಷ ಕೃಪೆ ತೋರಿದ್ದಾರೆಂದು ಅರಿತುಕೊಂಡ ನೆರೆಹೊರೆಯವರೂ ಬಂಧುಬಳಗದವರೂ ಬಂದು ಆಕೆಯೊಡನೆ ಸೇರಿ ಸಂತೋಷಪಟ್ಟರು.
59 : ಎಂಟನೆಯ ದಿನ ಮಗುವಿನ ಸುನ್ನತಿಗಾಗಿ ಅವರು ಬಂದು ಅದಕ್ಕೆ, ತಂದೆಯ ಹೆಸರನ್ನು ಅನುಸರಿಸಿ, ಜಕರೀಯನೆಂದು ನಾಮಕರಣ ಮಾಡುವುದರಲ್ಲಿ ಇದ್ದರು.
60 : ಆದರೆ ಮಗುವಿನ ತಾಯಿ, “ಇಲ್ಲ, ಅದು ಕೂಡದು, ಅವನಿಗೆಯೊವಾನ್ನಎಂಬ ಹೆಸರಿಡಬೇಕು,” ಎಂದಳು.
61 : ಅದಕ್ಕೆ ಅವರು, “ನಿನ್ನ ಬಂಧುಬಳಗದವರಲ್ಲಿ ಯಾರಿಗೂ ಹೆಸರು ಇಲ್ಲವಲ್ಲಾ,” ಎಂದು ಹೇಳಿ,
62 : “ಮಗುವಿಗೆ ಏನು ಹೆಸರಿಡಬೇಕೆನ್ನುತ್ತೀರಿ?” ಎಂದು ಮಗುವಿನ ತಂದೆಗೆ ಸನ್ನೆಮಾಡಿ ಕೇಳಿದರು.
63 : ಆಗ ಜಕರೀಯನು ಬರೆಯುವ ಒಂದು ಹಲಗೆಯನ್ನು ತರಿಸಿಕೊಂಡು, ‘ಇವನ ಹೆಸರು ಯೊವಾನ್ನಎಂದು ಬರೆದನು. ಎಲ್ಲರೂ ಬೆರಗಾದರು.
64 : ತಕ್ಷಣವೇ ಅವನಿಗೆ ಬಾಯಿ ಬಂದಿತು; ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು.
65 : ನೆರೆಹೊರೆಯವರೆಲ್ಲರೂ ತಲ್ಲಣಗೊಂಡರು. ಸಮಾಚಾರ ಜುದೇಯದ ಗುಡ್ಡಗಾಡು ಪ್ರಾಂತ್ಯದಲ್ಲೆಲ್ಲಾ ಹರಡಿತು.
66 : ಕೇಳಿದವರೆಲ್ಲರೂ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ‘ ಮಗು ಮುಂದೆ ಎಂಥವನಾಗುವನೋ!’ ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಅಭಯ ಹಸ್ತವು ಮಗುವಿನ ಮೇಲಿತ್ತು. ಜಕರೀಯನ ಪ್ರವಾದನೆ
80 : ಬಾಲಕನು ಬೆಳೆದಂತೆ ಆತ್ಮಶಕ್ತಿಯುತನಾದನು. ಇಸ್ರಯೇಲ್ ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನಲ್ಲೇ ವಾಸಿಸುತ್ತಿದ್ದನು
---------------------------------

ಗಾಳಿ ಬೀಸಿದ ಕಡೆ ತೂರಿಕೊಳ್ಳುವ ಪ್ರವೃತ್ತಿ ವಿನಾಶಕಾರಿ. ನೀರು ಹರಿಯುವ ಹಾದಿಯತ್ತ ಈಜುವ ದೋರಣೆ ಮಾನವ ಮೌಲ್ಯಕ್ಕೆ ತದ್ವಿರುದ್ದ. ಸತ್ಯಕ್ಕೆ ಸಾಕ್ಷಿ ನೀಡುವವನು ಸಂದರ್ಭ-ಸನ್ನಿವೇಶಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವುದಿಲ್ಲ. ಕಹಿಯನ್ನು ಸಹಿ ಅನ್ನುವುದಿಲ್ಲ, ಸತ್ಯ ಸದಾ ಸ್ಥಿರವಾಗಿರುತ್ತದೆ ಎಂಬುದಕ್ಕೆ ಸ್ನಾನಿಕ ಯೋವಾನ್ನ ಸಾಕ್ಷಿ.
-------------
ಸಂತ ಸ್ನಾನಿಕ ಯೊವಾನ್ನರ ಜಯಂತಿ ಸತ್ಯ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ. ಈ ಮೇಲೆ ತಿಳಿಸಿದ ವಾಸ್ತವಕತೆಗೆ ಉತ್ತಮ ಉದಾಹರಣೆ ಸ್ನಾನಿಕ ಯೋವಾನ್ನ. ರಕ್ಷಣಾ ಚರಿತ್ರೆಯಲ್ಲಿ ಇವರ ಪಾತ್ರ ಶ್ರೇಷ್ಠವಾದ್ದು
ಸ್ನಾನಿಕ ಯೊವಾನ್ನರು ಸಂತಾನರಹಿತ ಜಕರೀಯ ಕುಟುಂಬದಲ್ಲಿ ದೇವರ ವರದಾನವಾಗಿ ಹುಟ್ಟಿದರು. ಇವರ ಜನನ ಎಲ್ಲರಿಗೂ ಸಂತೋಷವನ್ನು ತಂದಿತು. ಜನರು ಪ್ರಭುವನ್ನು ಸ್ವೀಕರಿಸುವಂತೆ ಸಿದ್ದ ಮಾಡಿದರು. ಬೆಂಗಾಡಿನಲ್ಲಿ ಸ್ವರವಾದರು ಆ ಸ್ವರವು ಶಕ್ತಿಯುತವಾಗಿಯೂ ಅನೇಕರಿಗೆ ಭರವಸೆಯೂ ಆಗಿತ್ತು.
ವಿಶ್ವಾಸಕ್ಕಾಗಿ ಮತ್ತು ಸತ್ಯಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದರು. ಸತ್ಯವನ್ನು ನುಡಿಯಲು ಮತ್ತು ಸತ್ಯದಿಂದ ಜೀವಿಸಲು ನಾವು ದೇವರ ವಿಶೇಷ ಕೃಪಾವರಗಳಿಗಾಗಿ ಪ್ರಾರ್ಥಿಸಬೇಕು. ದೇವರ ಸಾಮ್ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ದೇವರು ಒಂದು ವಿಶೇಷ ನಿಯೋಗವನ್ನು ನೀಡಿದ್ದಾರೆ. ಇದನ್ನು ಕಾರ್ಯಗತಗೊಳಿಸುವ ಕರ್ತವ್ಯವನ್ನು ಹೊಂದಿದ್ದೇವೆ.
ದೀಕ್ಷಾಸ್ನಾನ ಪಡೆದ ನಾವು ನಮ್ಮ ಕರ್ತವ್ಯಗಳನ್ನು ಅರಿಯೋಣ. ದೇವರಿಂದ ಕೃಪಾವರಗಳನ್ನು ಬೇಡೋಣ. ಸತ್ಯವಂತರಾಗಿ ಶುಭಸಂದೇಶಕ್ಕೆ ಸಾಕ್ಷಿಗಳಾಗಿ ಬದುಕೋಣ.
--------------------

No comments:

Post a Comment