Sunday, 17 May 2020

ಜೂನ್ 30, 2020 - ಸಾಧಾರಣ ಕಾಲದ 13ನೇ ಭಾನುವಾರ - ಮಂಗಳವಾರ

[ಕೆಂಪು]
ಪವಿತ್ರ ರೋಮನ್ ಧರ್ಮಸಭೆಯ ಪ್ರಥಮ ರಕ್ತಸಾಕ್ಷಿಗಳ ಸ್ಮರಣೆ 
(ಐಚ್ಛಿಕ ಸ್ಮರಣೆ)
ಮೊದಲ ವಾಚನ: ಅಮೋಸ3:1-8, 4:11-12
ಕೀರ್ತನೆ: 5:4-6,6-7,8
ಪ್ರಭೂ, ಸತ್ಯಪಥದಲ್ಲಿ ನಡೆಸೆನ್ನನು
ಶುಭಸಂದೇಶ: ಮತ್ತಾಯ: 8:23-27

ಮೊದಲ ವಾಚನ: ಅಮೋಸ : 3:1-8, 4:11-12 
1 : ಇಸ್ರಯೇಲಿನ ಜನರೇ, ಕಿವಿಗೊಡಿ. ಈಜಿಪ್ಟ್ ದೇಶದಿಂದ ನಿಮ್ಮನ್ನು ಬಿಡುಗಡೆ ಮಾಡಿ ಕರೆತಂದ ಸರ್ವೇಶ್ವರ ನಿಮ್ಮ ವಿರುದ್ಧವಾಗಿ ನುಡಿಯುವ ಮಾತುಗಳನ್ನು ಆಲಿಸಿರಿ:
2 : “ಜಗದ ಜನಾಂಗಗಳಲ್ಲಿ ನನಗೆ ಆಪ್ತರಾದವರೆಂದರೆ ನೀವು. ಆದಕಾರಣ ನೀವು ಮಾಡಿರುವ ಎಲ್ಲಾ ಪಾಪಗಳಿಗೆ ತಕ್ಕ ಪ್ರಾಯಶ್ಚಿತ್ತವನ್ನು ಸವಿಯುವಂತೆ ಮಾಡುವೆನು.”
3 : ಗೊತ್ತುಗುರಿಯಿಲ್ಲದೆ ಯಾರಾದರಿಬ್ಬರು ಜೊತೆಯಾಗಿ ಪ್ರಯಾಣ ಮಾಡುವುದುಂಟೆ?
4 : ಬೇಟೆ ಕಂಡಾಗಲ್ಲದೆ ಸಿಂಹವು ಕಾಡಿನಲ್ಲಿ ಗರ್ಜಿಸುವುದುಂಟೆ? ಏನನ್ನೂ ಹಿಡಿಯದೆ ಯುವಸಿಂಹವು ಗುಹೆಯಲ್ಲೆ ಗುರುಗುಟ್ಟುವುದುಂಟೆ?
5 : ಕಾಳಿಲ್ಲದೆ ಪಕ್ಷಿ ಬಲೆಗೆ ಬೀಳುವುದುಂಟೆ? ಏನೂ ಸಿಕ್ಕಿಕೊಳ್ಳದೆ ಬೋನು ಮೇಲಕ್ಕೆ ಏರುವುದುಂಟೆ?
6 : ರಣಕಹಳೆ ಮೊಳಗಲು ಜನರು ಬೆದರದೆ ಇರುವುದುಂಟೆ? ಸರ್ವೇಶ್ವರನಿಂದಲ್ಲದೆ ಪಟ್ಟಣಕ್ಕೆ ಕೇಡು ತಟ್ಟುವುದುಂಟೆ?
7 : ತನ್ನ ಪರಿಚಾರಕರಾದ ಪ್ರವಾದಿಗಳಿಗೆ ತನ್ನ ಯೋಜನೆಯನ್ನು ತಿಳಿಸದೆ ಸ್ವಾಮಿ ಸರ್ವೇಶ್ವರ ಏನೂ ಮಾಡುವುದಿಲ್ಲ.
8 : ಸಿಂಹದ ಗರ್ಜನೆಯನ್ನು ಕೇಳಿ ಹೆದರದಿರುವವರು ಯಾರು? ಸ್ವಾಮಿ ಸರ್ವೇಶ್ವರನ ನುಡಿಯನ್ನು ಕೇಳಿ ಪ್ರವಾದನೆ ಮಾಡದಿರುವವರು ಯಾರು?”
11 : “ಒಮ್ಮೆ ಸೊದೋಮ್ ಮತ್ತು ಗೊಮೋರಾ ಪಟ್ಟಣಗಳನ್ನು ಕೆಡವಿದಂತೆ ನಾನು ನಿಮ್ಮ ಪಟ್ಟಣ ಪಾಳೆಯಗಳನ್ನು ಕೆಡವಿದೆನು, ಉರಿಯುವ ಬೆಂಕಿಯಿಂದ ಎಳೆದ ಕೊಳ್ಳಿಯಂತೆ ನೀವು ಇದ್ದಿರಿ. ಆದರೂ ನೀವು ನನ್ನ ಬಳಿಗೆ ಹಿಂತಿರುಗಲಿಲ್ಲ,” ಎನ್ನುತ್ತಾರೆ ಸರ್ವೇಶ್ವರ.
12 : ಆದುದರಿಂದ ಇಸ್ರಯೇಲಿನ ಜನರೇ, ನಿಮ್ಮನ್ನು ದಂಡಿಸಿಯೇ ತೀರುವೆನು. ಓ ಇಸ್ರಯೇಲರೇ, ನ್ಯಾಯತೀರ್ಪನ್ನು ಕೊಡಲು ಬರಲಿರುವ ನಿಮ್ಮ ದೇವರನ್ನು ಎದುರುಗೊಳ್ಳಲು ಸಿದ್ಧಮಾಡಿಕೊಳ್ಳಿ:
13 : ಬೆಟ್ಟಗುಡ್ಡಗಳನ್ನು ರೂಪಿಸಿದಾತ ದೇವನೇ ಗಾಳಿಬಿರುಗಾಳಿಯನು ಸೃಜಿಸಿದಾತ ಆತನೇ ತನ್ನಾಲೋಚನೆಯನ್ನು ನರರಿಗರುಹಿಸಿದವ ದೇವನೇ ಹಗಲನ್ನು ಇರುಳನ್ನಾಗಿಸುವವನು ಆತನೇ ಪೊಡವಿಯ ಉನ್ನತ ಸ್ಥಾನದಲ್ಲಿ ನಡೆದಾಡುವವನಾತನೇ ಆತನ ನಾಮಧೇಯ - ಸೇನಾಧೀಶ್ವರ ದೇವರಾದ ಸರ್ವೇಶ್ವರನೇ.

ಕೀರ್ತನೆ: 5:4-6,6-7,8
ಪ್ರಭೂ, ಸತ್ಯಪಥದಲ್ಲಿ ನಡೆಸೆನ್ನನು
4 : ದುಷ್ಟತನಕೆ ದೇವ, ನಿನಗಿಲ್ಲ ಒಲವು / ಕೆಟ್ಟತನಕೆ ನಿನ್ನ ಬಳಿಯಿಲ್ಲ ನಿಲುವು //
5 : ನಿಲ್ಲಲಾರರು ನಿನ್ನ ಮುಂದೆ ಗರ್ವಿಗಳು / ನಿನಗೆ ವೈರಿಗಳಾಗುವರು ಅಧರ್ಮಿಗಳು /
6 : ಹುಸಿನುಡಿವವರನು ಪ್ರಭು, ನೀ ನಾಶಮಾಡುವೆ / ಹಿಂಸಕರನು, ವಂಚಕರನು ನೀ ಹೇಸಿಬಿಡುವೆ //
7 : ನಿನ್ನ ಮಂದಿರಕೆ ಬರುವೆ ನಿನ್ನಪಾರ ಪ್ರೀತಿಯ ನಿಮಿತ್ತ / ಭಕುತಿಯಿಂದ ಅಡ್ಡ ಬೀಳುವೆ ನಿನ್ನ ಪವಿತ್ರಾಲಯದತ್ತ //
8 : ಶತ್ರುಗಳು ಮುತ್ತಿಹರು, ಸತ್ಯ ಪಥದಲಿ ನಡೆಸೆನ್ನನು / ನೇರಮಾಡೆನಗೆ ದೇವಾ, ನಿನ್ನ ಸಿರಿಮಾರ್ಗವನು //
9 : ಅವರ ಬಾಯಲಿ ಹುಸಿನುಡಿ, ಹೃದಯವಾದರೊ ವಿನಾಶದ ಶರಧಿ / ಅವರ ಜಿಹ್ವೆಯಲಿ ಮುಖಸ್ತುತಿ, ಕಂಠವಾದರೋ ತೆರೆದ ಸಮಾಧಿ //
10 : ಅವರಪರಾಧಿಗಳೆಂದು ಹೇ ದೇವಾ, ನಿರ್ಣಯಿಸಿಬಿಡು / ಅವರ ಮೋಸದ ಪಾಶದಲೇ ಅವರನು ಸಿಕ್ಕಿಸಿಬಿಡು / ಅವರನೇಕ ಪಾಪಗಳಿಗಾಗಿ ಅವರನು ದಬ್ಬಿಬಿಡು / ಅವರು ನಿನ್ನ ವಿರುದ್ಧ ದಂಗೆಯೆದ್ದವರು, ನೋಡು //
11 : ದೊರಕುವುದು ದೇವಾ, ನಿನ್ನಾಶೀರ್ವಾದ ಸಜ್ಜನರಿಗೆ / ಕವಚವಾದಂತಿಹುದು ನಿನ್ನ ಕರುಣೆ ಅಂಥವರಿಗೆ //
12 : ಎಂದೇ ಹರ್ಷಾನಂದಗೊಳ್ವರು ನಿನ್ನನಾಶ್ರಯಿಸಿದವರೆಲ್ಲರು / ನೀ ರಕ್ಷಿಸೆ, ಉಲ್ಲಾಸಗೊಳ್ಳುವರು ನಿನ್ನ ನಾಮಪ್ರಿಯರೆಲ್ಲರು //

ಶುಭಸಂದೇಶ: ಮತ್ತಾಯ: 8:23-27
23 : ಆಮೇಲೆ ಯೇಸುಸ್ವಾಮಿ ದೋಣಿಯನ್ನು ಹತ್ತಿದರು. ಶಿಷ್ಯರೂ ಹತ್ತಿ ಅವರ ಸಂಗಡ ಹೋದರು.
24 : ಇದ್ದಕ್ಕಿಂತ ಹಾಗೆ ಸರೋವರದಲ್ಲಿ ರಭಸವಾದ ಬಿರುಗಾಳಿ ಎದ್ದಿತು. ದೋಣಿ ಅಲೆಗಳಿಂದ ಮುಳುಗಿ ಹೋಗುವುದರಲ್ಲಿತ್ತು. ಯೇಸುವಾದರೋ ನಿದ್ರಾವಶರಾಗಿದ್ದರು.
25 : ಶಿಷ್ಯರು ಹತ್ತಿರಕ್ಕೆ ಬಂದು ಅವರನ್ನು ಎಬ್ಬಿಸಿ, "ಸ್ವಾವಿೂ, ಕಾಪಾಡಿ. ನಾವು ನೀರುಪಾಲಾಗುತ್ತಿದ್ದೇವೆ," ಎಂದರು.
26 : ಅದಕ್ಕೆ ಯೇಸು, "ಅಲ್ಪ ವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ?" ಎಂದರು. ಅನಂತರ ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು.
27 : ಆಗ ವಾತಾವರಣ ಪ್ರಶಾಂತವಾಯಿತು. ಶಿಷ್ಯರು ನಿಬ್ಬೆರಗಾದರು. "ಗಾಳಿಯೂ ಸರೋವರವೂ ಇವರು ಹೇಳಿದ್ದಂತೆ ಕೇಳಬೇಕಾದರೆ ಇವರೆಂತಹ ವ್ಯಕ್ತಿಯಾಗಿರಬೇಕು!" ಎಂದುಕೊಂಡರು.
-------------------
ಯೇಸು ಹಾಗೂ ಶಿಷ್ಯರು ದೋಣಿಯಲ್ಲಿರುವಾಗ, ಬಿರುಗಾಳಿಯ ಹೊಡೆತಕ್ಕೆ ಶಿಷ್ಯರು ಭಯಭ್ರಾಂತರಾಗುತ್ತಾರೆ. ಯೇಸು ಕೇಳುತ್ತಾರೆ ``ನಿಮಗೇಕೆ ಇಷ್ಟು ಭಯ’’? ಅಲ್ಲವೇ? ನಮಗೇಕೆ ಇಷ್ಟು ಭಯ, ಭೀತಿ? ಅಪನಂಬಿಕೆ, ಅವಿಶ್ವಾಸ ಹಾಗೂ ಅಸ್ಥಿರತೆಯೇ ಭಯಕ್ಕೆ ಕಾರಣ. ತಾಯಿ ತಂದೆ ಜೊತೆಯಿರುವಾಗ ಮಗುವಿಗೆ ಭಯವಿಲ್ಲ ಅದು ನಿರಾಳ. ದೇವರು ನಮ್ಮೊಂದಿಗಿರುವಾಗ ನಾವು ಅಂಜಬೇಕಾಗಿಲ್ಲ. ನಾವು ದೇವರೊಂದಿಗೆ ಸದಾ ಇರುವಂತೆ ಬಾಳಬೇಕು, ಅವರಿಂದ ದೂರಾದಾಗ, ಪಾಪಗಳನ್ನು ಕಟ್ಟಿಕೊಂಡಾಗ ಮಾತ್ರ ಈ ಭೀತಿ.
-----------------

No comments:

Post a Comment