Tuesday, 19 May 2020

ಜೂನ್ 29, 2020 - ಸಾಧಾರಣ ಕಾಲದ 13ನೇ ಸೋಮವಾರ - ಸಂತ ಪೇತ್ರ ಮತ್ತು ಪೌಲ, ಪ್ರೇಷಿತರು

[ಕೆಂಪು]
ಸಂತ ಪೇತ್ರ ಮತ್ತು ಪೌಲ, ಪ್ರೇಷಿತರು
ಹಬ್ಬದ ಪೂಜೆ
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:1-11
ಕೀರ್ತನೆ 34:1-8. ಶ್ಲೋಕ.4 [ಅಥವಾ] ಶ್ಲೋಕ.7
ಭಯಭೀತಿಯಿಂದೆನ್ನನ್ನು ಮುಕ್ತನಾಗಿಸಿಹನು
ಎರಡನೇ ವಾಚನ: ತಿಮೋಥಿ 4:6-8, 17-18
ಶುಭಸಂದೇಶ: ಮತ್ತಾಯ 16:13-19
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:1-11
1 : ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು.
2 : ಯೊವಾನ್ನನ ಸಹೋದರ ಯಕೋಬನನ್ನು ಖಡ್ಗದಿಂದ ಕೊಲ್ಲಿಸಿದನು.
3 : ಇದರಿಂದ ಯೆಹೂದ್ಯರಿಗೆ ಮೆಚ್ಚುಗೆಯಾಯಿತೆಂದು ತಿಳಿದು ಪೇತ್ರನನ್ನು ಬಂಧಿಸಿದನು. (ಆಗ ಹುಳಿರಹಿತ ರೊಟ್ಟಿಯ ಹಬ್ಬ ನಡೆಯುತ್ತಿತ್ತು).
4 : ಪೇತ್ರನನ್ನು ಬಂಧಿಸಿದ ಮೇಲೆ ಸೆರೆಮನೆಯಲ್ಲಿಟ್ಟು ಅವನನ್ನು ಕಾಯಲು ನಾಲ್ಕು ನಾಲ್ಕು ಸೈನಿಕರಿದ್ದ ಚತುರ್ದಳಕ್ಕೆ ವಹಿಸಿದನು. ಪಾಸ್ಕಹಬ್ಬದ ನಂತರ ಪೇತ್ರನನ್ನು ಬಹಿರಂಗ ವಿಚಾರಣೆಗೆ ಗುರಿಪಡಿಸಲು ಉದ್ದೇಶಿಸಿದ್ದನು.
5 : ಪೇತ್ರನನ್ನು ಹೀಗೆ ಸೆರೆಯಲ್ಲಿಟ್ಟಿದ್ದಾಗ, ಸಭೆಯು ಅವನಿಗಾಗಿ ಶ್ರದ್ದೆಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿತ್ತು.
6 : ಹೆರೋದನು ಪೇತ್ರನನ್ನು ಜನರ ಮುಂದೆ ತರಬೇಕೆಂದಿದ್ದ ಹಿಂದಿನ ರಾತ್ರಿ ಅದು. ಪೇತ್ರನು ಇಬ್ಬರು ಸೈನಿಕರ ನಡುವೆ ನಿದ್ರಿಸುತ್ತಿದ್ದನು. ಅವನನ್ನು ಎರಡು ಸರಪಣಿಗಳಿಂದ ಕಟ್ಟಲಾಗಿತ್ತು. ಪಹರೆಯವರು ಸೆರೆಮನೆಯ ದ್ವಾರದಲ್ಲಿ ಕಾವಲಿದ್ದರು.
7 : ಫಕ್ಕನೆ ದೇವದೂತನೊಬ್ಬನು ಕಾಣಿಸಿಕೊಂಡನು. ಆ ಕೋಣೆಯೆಲ್ಲಾ ಪ್ರಕಾಶಮಯವಾಯಿತು. ದೂತನು ಪೇತ್ರನ ಭುಜವನ್ನು ತಟ್ಟಿ, ಎಬ್ಬಿಸಿ, “ಬೇಗನೆ ಏಳು,” ಎಂದನು. ಆ ಕ್ಷಣವೇ ಪೇತ್ರನ ಕೈಗಳಿಗೆ ಕಟ್ಟಿದ್ದ ಸರಪಣಿಗಳು ಕಳಚಿಬಿದ್ದವು.
8 : ದೂತನು ಅವನಿಗೆ, “ಬಟ್ಟೆಯನ್ನು ತೊಟ್ಟುಕೋ, ಪಾದರಕ್ಷೆಯನ್ನು ಮೆಟ್ಟಿಕೋ,” ಎಂದನು. ಪೇತ್ರನು ಹಾಗೆಯೇ ಮಾಡಿದನು. ಅನಂತರ ದೂತನು, “ನಿನ್ನ ಮೇಲುಹೊದಿಕೆಯನ್ನು ಹೊದ್ದುಕೊಂಡು ನನ್ನ ಜೊತೆ ಬಾ,” ಎಂದನು.
9 : ಪೇತ್ರನು ಸೆರೆಮನೆಯ ಹೊರಕ್ಕೆ ಅವನನ್ನು ಹಿಂಬಾಲಿಸಿ ಹೋದನು. ಅಷ್ಟಾದರೂ ದೂತನು ಮಾಡುತ್ತಿರುವುದು ನಿಜವೆಂದು ಅವನಿಗೆ ಅರಿವಾಗಲಿಲ್ಲ; ತನಗೇನೋ ದರ್ಶನವಾಗುತ್ತಿದೆಯೆಂದೆ ಭಾವಿಸಿದನು.
10 : ಅವರು ಮೊದಲನೆಯ ಮತ್ತು ಎರಡನೆಯ ಕಾವಲನ್ನು ದಾಟಿದರು. ಪಟ್ಟಣದ ಕಡೆಯಿದ್ದ ಕಬ್ಬಿಣದ ದ್ವಾರದ ಬಳಿಬಂದರು. ಆ ದ್ವಾರ ತನ್ನಷ್ಟಕ್ಕೆ ತಾನೇ ತೆರೆಯಿತು. ಅವರು ಹೊರ ನಡೆದರು. ಬೀದಿಯೊಂದರಲ್ಲಿ ಹಾದು ಹೋಗುತ್ತಿರಲು ಒಮ್ಮೆಲೆ ದೂತನು ಪೇತ್ರನನ್ನು ಬಿಟ್ಟು ಅದೃಶ್ಯನಾದನು.
11 : ನಡೆದ ಸಂಗತಿ ಏನೆಂದು ಪೇತ್ರನಿಗೆ ಅರಿವಾದಾಗ ಆತನು, “ನಡೆದುದೆಲ್ಲಾ ಸಾಕ್ಷಾತ್ ಸತ್ಯವೆಂದು ಈಗ ನನಗೆ ತಿಳಿಯಿತು. ಪ್ರಭು ತಮ್ಮ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯರು ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಪಾರುಮಾಡಿದ್ದಾರೆ,” ಎಂದುಕೊಂಡನು.
ಕೀರ್ತನೆ 34:1-8. ಶ್ಲೋಕ.4 [ಅಥವಾ] ಶ್ಲೋಕ.7
ಭಯಭೀತಿಯಿಂದೆನ್ನನ್ನು ಮುಕ್ತನಾಗಿಸಿಹನು

2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ / ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
3 : ಬನ್ನಿ, ಕೊಂಡಾಡುವ ಪ್ರಭು ದೇವನನು / ಘನಪಡಿಸೋಣ ಅವನ ಶ್ರೀನಾಮವನು //
4 : ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು / ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು //
5 : ಆತನತ್ತ ತಿರುಗಿದ ಮುಖ ಅರಳುವುದು / ಲಜ್ಜೆಯಿಂದೆಂದಿಗು ಕುಂದಿಹೋಗದು //
6 : ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು / ಸರ್ವಾಪತ್ತಿನಿಂದವನು ಮುಕ್ತಗೊಂಡನು //
7 : ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು / ಕಾಯುವನು ಪ್ರಭುವಿನ ದೂತನೆ ಬಂದಿಳಿದು //
8 : ಸವಿದು ನೋಡು ಪ್ರಭುವಿನ ಮಾಧುರ್ಯವನು / ಆತನನು ಆಶ್ರಯಿಸಿಕೊಂಡವನು ಧನ್ಯನು //
9 : ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ / ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ //

ಎರಡನೇ ವಾಚನ: ತಿಮೋಥಿ 4:6-8, 17-18
6 : ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ
7 : ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ.
8 : ಇನ್ನು ನನಗೆ ಉಳಿದಿರುವುದು ಒಂದೇ: ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು.
17 : ಆದರೆ ಪ್ರಭು ನನಗೆ ಬೆಂಬಲವಾಗಿ ನಿಂತರು. ನಾನು ಶುಭಸಂದೇಶವನ್ನು ಸಂಪೂರ್ಣವಾಗಿ ಸಾರುವಂತೆಯೂ ಅನ್ಯಧರ್ಮಿಯರೆಲ್ಲರು ಅದನ್ನು ಕೇಳುವಂತೆಯೂ ಮಾಡಿದರು. ಅಲ್ಲದೆ, ಸಿಂಹದ ಬಾಯಿಂದಲೂ ನನ್ನನ್ನು ಸಂರಕ್ಷಿಸಿದರು.
18 : ಪ್ರಭು ನನ್ನನ್ನು ಸಕಲ ಕೇಡುಗಳಿಂದ ರಕ್ಷಿಸಿ, ತಮ್ಮ ಸ್ವರ್ಗಸಾಮ್ರಾಜ್ಯಕ್ಕೆ ನನ್ನನ್ನು ಸುರಕ್ಷಿತವಾಗಿ ಸೇರಿಸುವರು. ಯುಗಯುಗಾಂತರಕ್ಕೂ ಅವರಿಗೆ ಮಹಿಮೆ ಸಲ್ಲಲಿ. ಆಮೆನ್. ಶುಭಾಶಯಗಳು

ಶುಭಸಂದೇಶ: ಮತ್ತಾಯ 16:13-19
13 : ಯೇಸುಸ್ವಾಮಿ "ಫಿಲಿಪ್ಪನ ಸೆಜರೇಯ" ಎಂಬ ಪ್ರಾಂತ್ಯಕ್ಕೆ ಬಂದರು. ಅಲ್ಲಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ನರಪುತ್ರನನ್ನು ಜನರು ಯಾರೆಂದು ಹೇಳುತ್ತಾರೆ?" ಎಂದು ಕೇಳಿದರು.
14 : ಅದಕ್ಕೆ ಶಿಷ್ಯರು, "ಸ್ನಾನಿಕ ಯೊವಾನ್ನ", ಎಂದು ಕೆಲವರು ಹೇಳುತ್ತಾರೆ; ಮತ್ತೆ ಕೆಲವರು, "ಎಲೀಯನು" ಎನ್ನುತ್ತಾರೆ; "ಯೆರೆವಿೂಯನು ಅಥವಾ ಪ್ರವಾದಿಗಳಲ್ಲಿ ತಾವೂ ಒಬ್ಬರು," ಎಂಬುದು ಇನ್ನೂ ಕೆಲವರ ಅಭಿಪ್ರಾಯ, ಎಂದು ಉತ್ತರ ಕೊಟ್ಟರು.
15 : ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು.
16 : ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ದಾರಕ ತಾವೇ, ಜೀವಸ್ವರೂಪರಾದ ದೇವರ ಪುತ್ರ ತಾವೇ," ಎಂದನು.
17 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಹೀಗೆಂದರು: "ಯೋನ್ನನ ಮಗ ಸಿಮೋನನೇ, ನೀನು ಧನ್ಯ! ಈ ವಿಷಯವನ್ನು ನಿನಗೆ ಶ್ರುತ ಪಡಿಸಿದ್ದು ನರಮಾನವ ಶಕ್ತಿ ಅಲ್ಲ, ಸ್ವರ್ಗದಲ್ಲಿರುವ ನನ್ನ ಪಿತನೇ.
18 : ನಾನು ನಿನಗೆ ಹೇಳುತ್ತೇನೆ, ಕೇಳು: "ನಿನ್ನ ಹೆಸರು ಪೇತ್ರ; ಈ ಬಂಡೆಯ ಮೇಲೆ ನನ್ನ ಧರ್ಮಸಭೆಯನ್ನು ಕಟ್ಟುವೆನು. ಪಾತಾಳಲೋಕದ ಶಕ್ತಿಯು ಅದನ್ನು ಎಂದಿಗೂ ಜಯಿಸಲಾರದು.
19 : ಸ್ವರ್ಗಸಾಮ್ರಾಜ್ಯದ ಬೀಗದ ಕೈಗಳನ್ನು ನಿನಗೆ ಕೊಡುವೆನು. ಇಹದಲ್ಲಿ ನೀನು ಏನನ್ನು ಬಂಧಿಸುತ್ತೀಯೋ ಅದನ್ನು ಪರದಲ್ಲಿಯೂ ಬಂಧಿಸಲಾಗುವುದು. ಇಹದಲ್ಲಿ ನೀನು ಏನನ್ನು ಬಿಚ್ಚುತ್ತೀಯೋ ಅದನ್ನು ಪರದಲ್ಲಿಯೂ ಬಿಚ್ಚಲಾಗುವುದು."
---------------------
ಇಂದು ಪವಿತ್ರ ಧರ್ಮಸಭೆಯು ಪೇತ್ರ ಮತ್ತು ಪೌಲರ ಮಹೋತ್ಸವವನ್ನು ಆಚರಿಸಲು ಕರೆ ನೀಡುತ್ತದೆ. ನಾವುಗಳು ಪ್ರಭುವಿನ ಪ್ರಾರ್ಥನೆಯನ್ನು ಜಪಿಸುವಾಗ ಪ್ರಾರ್ಥನೆಯ ಅಂತ್ಯದಲ್ಲಿ ಕೇಡಿನಿಂದ ನಮ್ಮನ್ನು ರಕ್ಷಿಸಿರಿ ಎಂದು ಬೇಡುತ್ತೇವೆ. ಹಾಗೆಯೇ ಮಾತೆ ಮರಿಯಳನ್ನು ನಮಗಾಗಿ ಪ್ರಾರ್ಥಿಸುವಂತೆ ಬೇಡುತ್ತೇವೆ
ಕರ್ತರು ನಮ್ಮ ರಕ್ಷಣೆಯನ್ನು ಕಾವಲು ದೂತರ ಮುಖೇನ ನಮಗೆ ನೀಡುತ್ತಾರೆ ಇಂದಿನ ಮೊದಲನೆಯ ವಾಚನದಲ್ಲಿ ನಾವು ನೋಡುವುದು ರಕ್ಷಣೆಯ ಸಾರಾಂಶವನ್ನೇ. ಇತರ ಕ್ರೈಸ್ತ  ಸಭೆಯ ಸದಸ್ಯರಂತೆ ಪೇತ್ರನಿಗೆ ಸಹ ಹೆರೋದರಸನು ಹೊಡ್ಡಿದ್ದ ಹಿಂಸೆ ಕಷ್ಟಗಳಿಂದ ಪಾರಾಗಲು, ಬಂಧನದಿಂದ ಬಿಡುಗಡೆ ಮಾಡಲು ಪ್ರಭುವಿನ ಆಜ್ಞೆಯಂತೆ ದೂತರು ಮುಂದಾಗುತ್ತಾರೆ. ದೇವರಲ್ಲಿ ವಿಶ್ವಾಸ ಇಟ್ಟವನನ್ನು ದೇವರು ಎಂದಿಗೂ ಕೈಬಿಡರು. ತಾಯಿ ಕಂದನನ್ನು ಮರೆಯಬಹುದು ಆದರೆ ದೇವರು ಎಂದಿಗೂ ಜೊತೆಗಿರುತ್ತಾರೆ. ಕಾವಲು ದೂತರ ಮುಖೇನ ನಮ್ಮನ್ನು ಕಾಯುತ್ತಾರೆ. ಅವರಲ್ಲಿ ಭರವಸೆಯಿಟ್ಟು ಸದಾ ನಮ್ಮ ಜೀವನದಲ್ಲಿ ಮುಂದೆ ಸಾಗೋಣ.
------------
ಪೇತ್ರ ಮತ್ತು ಪೌಲರು ಆದಿ ಧರ್ಮಸಭೆಯ ಆಧಾರ ಸ್ಥಂಭಗಳು. ಇವರಿಬ್ಬರೂ ತಮ್ಮದೇ ಆದ ರೀತಿಯಲ್ಲಿ ಕ್ರಿಸ್ತನ ಅನುಯಾಯಿಗಳಾಗಿ ಧರ್ಮಸಭೆಯ ಸ್ಥಾಪನೆ ಹಾಗೂ ವಿಸ್ತರಣೆಯಲ್ಲಿ ದಿಗ್ಗಜರಾಗಿದ್ದಾರೆ. ನೀರೊ ಚಕ್ರವರ್ತಿಯಿಂದ ಪೇತ್ರರು ಮರಣಕ್ಕೀಡಾಗಿ (66-67 ಕ್ರಿಸ್ತ ಶಕ) ಇಂದಿನ ಬೆಸಲಿಕಾ ರೋಮಿನಲ್ಲಿ ಅಡಕ ಮಾಡಲ್ಪಟ್ಟರು. ಸಂತ ಪೌಲರು ಗಿiಚಿ siಚಿ ಎಂಬಲ್ಲಿ ರಶ್ಛೇದನ ಅನುಭವಿಸಿದರು. ಇವರಿಬ್ಬರೂ ಕ್ರಿಸ್ತರಿಂದ ಆಯ್ಕೆಯಾಗಿ, ನಾಮ ಬದಲಾವಣೆ ಹೊಂದಿ, ಹೊಸ ವ್ಯಕ್ತಿಗಳಾಗಿ ರೂಪಿತರಾದರು. ನಾವು ವಿಶ್ವಾಸಿಗಳಾಗಿ, ಕ್ರಿಸ್ತರ ಕಾರ್ಯಗಳನ್ನು ಧೈರ್ಯವಾಗಿ ಮಾಡುತ್ತಾ, ಇತರರಿಗೆ ಸಾಕ್ಷಿಗಳಾಗಿ ಬಾಳಿದರೆ ಅದೇ ಭಾಗ್ಯ.
------------------


No comments:

Post a Comment