Tuesday, 19 May 2020

ಜೂನ್ 2, 2020 - ಸಾಧಾರಣ ಕಾಲದ ಒಂಭತ್ತನೆಯ ವಾರ - ಮಂಗಳವಾರ

                    [ಹಸಿರು]
ಸಂತ ಮಾರ್ಸೆಲಿನುಸ್ ಮತ್ತು ಸಂತ ಪೀಟರ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: 2 ಪೇತ್ರ 3.12-15, 17-18
ಕೀರ್ತನೆ 90: 2, 3-4, 10, 14, 16. ಶ್ಲೋಕ.1
ಪ್ರಭೂ, ತಲತಲಾಂತರಕ್ಕೆ ಶ್ರೀನಿವಾಸ ನೀನೆಮಗೆ
ಶುಭಸಂದೇಶ: ಮಾರ್ಕ 12.13-17

ಮೊದಲ ವಾಚನ: 2 ಪೇತ್ರ 3.12-15, 17-18

12 : ದೇವರ ದಿನವನ್ನು ಎದುರು ನೋಡುತ್ತಾ ಅದು ಬೇಗನೆ ಬರಲೆಂದು ಹಾರೈಸಬೇಕು. ದಿನ, ಆಕಾಶಮಂಡಲವು ಅಗ್ನಿಯಿಂದ ಉರಿದು ಹೋಗುವುದು; ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಶಾಖದಿಂದ ಕರಗಿಹೋಗುವುವು.
13 : ನಾವಾದರೋ, ದೇವರ ವಾಗ್ದಾನದ ಪ್ರಕಾರ ನೀತಿಯ ನೆಲೆಯಾಗಿರುವ ನೂತನ ಆಕಾಶಮಂಡಲವೂ ನೂತನ ಭೂಮಂಡಲವೂ ಬರುವುದನ್ನು ಎದುರು ನೋಡುತ್ತಿರುವೆವು.
14 : ಪ್ರಿಯರೇ, ಇವುಗಳನ್ನು ಎದುರುನೋಡುವವರಾಗಿರುವ ನೀವು ದೇವರ ದೃಷ್ಟಿಯಲ್ಲಿ ನಿರ್ಮಲರೂ ನಿರ್ದೋಷಿಗಳೂ ಆಗಿದ್ದು ಶಾಂತಿ ಸಮಾಧಾನದಿಂದಿರಲು ಪ್ರಯತ್ನಿಸಿರಿ.
15 : ನಮ್ಮ ಪ್ರಭುವಿನ ದೀರ್ಘಶಾಂತಿ ಹಾಗೂ ಸಹನೆ ನಮ್ಮ ಜೀವೋದ್ಧಾರಕ್ಕಾಗಿಯೇ ಎಂದು ತಿಳಿದುಕೊಳ್ಳಿ. ನಮ್ಮ ಪ್ರಿಯ ಸಹೋದರನಾದ ಪೌಲನೂ ಸಹ ತನಗೆ ದೇವರಿತ್ತ ಜ್ಞಾನದ ಪ್ರಕಾರ ಹೀಗೆಯೇ ನಿಮಗೆ ಬರೆದಿದ್ದಾನೆ.
17 : ಆದಕಾರಣ ಪ್ರಿಯರೇ, ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಂಡಿರುವ ನೀವು ಎಚ್ಚರಿಕೆಯಿಂದಿರಿ. ದುರ್ಜನರ ದುರ್ಬೋಧನೆಗೆ ಮರುಳಾಗದಿರಿ. ನಿಮ್ಮ ಸ್ಥಿರ ವಿಶ್ವಾಸವನ್ನು ಬಿಟ್ಟು ಭ್ರಷ್ಟರಾಗದಿರಿ.
18 : ನಮ್ಮ ಪ್ರಭು ಮತ್ತು ಉದ್ಧಾರಕರಾದ ಯೇಸುಕ್ರಿಸ್ತರ ಅನುಗ್ರಹದಲ್ಲೂ ಅವರನ್ನು ಕುರಿತ ಜ್ಞಾನದಲ್ಲೂ ನೀವು ಅಭಿವೃದ್ಧಿಹೊಂದಿರಿ. ಅವರಿಗೆ ಈಗಲೂ ಯುಗ ಯುಗಾಂತರಕ್ಕೂ ಮಹಿಮೆಯುಂಟಾಗಲಿ ! ಆಮೆನ್.

ಕೀರ್ತನೆ 90: 2, 3-4, 10, 14, 16. ಶ್ಲೋಕ.1
ಪ್ರಭೂ, ತಲತಲಾಂತರಕ್ಕೆ ಶ್ರೀನಿವಾಸ ನೀನೆಮಗೆ
2 : ಬೆಟ್ಟಗಳು ಹುಟ್ಟುವುದಕೆ ಮುಂಚಿನಿಂದ | ಭೂದೇಶಗಳು ಆಗುವುದಕೆ ಮೊದಲಿಂದ | ನೀನೆಮಗೆ ದೇವರು ಯುಗಯುಗಗಳಿಂದ ||
3 : ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ / ‘ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿಎನ್ನುತಿಹೆ //
4 : ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ / ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ //
10 : ನಮ್ಮ ಆಯುಷ್ಕಾಲ ಎಪ್ಪತ್ತು ವರುಷ / ಹೆಚ್ಚಾಗಿದ್ದರೆ ಬಲ, ಎಂಬತ್ತು ವರುಷ //
14 : ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ / ಹರ್ಷಿಸಿ ಆನಂದಿಸುವೆವು ಆಗ ದಿನವಾದ್ಯಂತ //
16 : ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಕ್ತರಿಗೆ / ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ //

ಶುಭಸಂದೇಶ: ಮಾರ್ಕ 12.13-17
13 : ಆಮೇಲೆ ಅವರು ಯೇಸುಸ್ವಾಮಿಯನ್ನು ಮಾತಿನಲ್ಲೇ ಸಿಕ್ಕಿಸುವ ಉದ್ದೇಶದಿಂದ ಕೆಲವು ಫರಿಸಾಯರನ್ನೂ ಹೆರೋದನ ಪಕ್ಷದ ಕೆಲವರನ್ನೂ ಅವರ ಬಳಿಗೆ ಕಳುಹಿಸಿದರು.
14 : ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸ್ಥಾನಮಾನಕ್ಕೆ ಮಣಿಯದವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು ಎಂದು ನಾವು ಬಲ್ಲೆವು. ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ, ಅಲ್ಲವೋ? ನಾವದನ್ನು ಕೊಡಬೇಕೋ, ಬೇಡವೋ?” ಎಂದು ಕೇಳಿದರು.
15 : ಅವರ ಕಪಟತನವನ್ನು ಯೇಸು ಗ್ರಹಿಸಿ, “ನೀವು ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತನ್ನಿ, ಅದನ್ನು ನೋಡೋಣ,” ಎಂದರು.
16 : ಅವರೊಂದು ನಾಣ್ಯವನ್ನು ತಂದರು. “ಇದರ ಮೇಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಯೇಸು ಕೇಳಿದರು. ಅದಕ್ಕೆ ಅವರುಅವು ರೋಮ್ ಚಕ್ರವರ್ತಿಯವು,” ಎಂದರು.
17 : ಆಗ ಯೇಸು, “ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದರು. ಇದನ್ನು ಕೇಳಿದ್ದೇ ಜನರು ಯೇಸುವಿನ ಬಗ್ಗೆ ಅತ್ಯಾಶ್ಚರ್ಯಪಟ್ಟರು
------------

ಹೊಗಳಿಕೆ ಸಾಮಾನ್ಯವಾಗಿ ಯಾರಿಗೆ ಇಷ್ಟ ಇಲ್ಲ ಹೇಳಿ. ನಮಗೆ ಯಾರಾದರೂ ಹೊಗಳಿದರೆ, ನಮ್ಮ ಕೆಲಸವನ್ನು ಗುರುತಿಸಿ ಪ್ರಶಂಸಿಸಿದರೆ ನಮಗೆ ಆನಂದವಾಗುತ್ತದೆ. ಅದೇ ರೀತಿ ಯಾರಾದರೂ ನಮ್ಮನ್ನು ಟೀಕಿಸಿದರೆ ಮಗೆ ಬೇಸರವಾಗುತ್ತದೆ. ಟೀಕೆ-ಟಿಪ್ಪಣಿ, ಹೊಗಳಿಕೆ-ತೆಗಳಿಕೆ ಇವು ಜೀವನದ ಅವಿಭಾಜ್ಯ ಅಂಗಗಳು, ಹೊಗಳಿಕೆ ಹಿಗ್ಗದೆ, ತೆಗಳಿಕೆ ಕುಗ್ಗದೆ  ಜೀವಿಸುವುದು ಕಷ್ಟಸಾಧ್ಯ.

ಕಿಸ್ತರು ಇಂದು ಇಂಥದೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಆದರೆ ಅವರ ವ್ಯಕ್ತಿತ್ವ, ಭಾವನೆ ಮತ್ತು ಮನಸ್ಸು ಮಾತ್ರ ಒಂದೇ ಅದು ಸದಾ ಸಮತೋಲನದಲ್ಲಿರುತ್ತದೆ ಎಂದು ಇಂದಿನ ಶುಭಸಂದೇಶದಲ್ಲಿ ಕಾಣಬಹುದು. ಕೆಲ ಫರಿಸಾಯರು ಮತ್ತು ಹೆರೋದನ ಪಕ್ಷದವರೂ ಬಂದು ಯೇಸು ಸ್ವಾಮಿಯನ್ನು ಹೊಗಳಿ ಅಟ್ಟಕ್ಕೆ ಏರಿಸಿ ಒಂದು ಪ್ರಶ್ನೆಯನ್ನು ಕೇಳಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂದು ಬಯಸುತ್ತಾರೆ. ಆದರೆ ಯೇಸು ಸ್ವಾಮಿ ತಮ್ಮ ನೈಪುಣ್ಯವನ್ನು ಪ್ರದರ್ಶಿಸಿ ಅವರ ಬಾಯಿ ಮುಚ್ಚುವ ಹಾಗೆ ಉತ್ತರಿಸುತ್ತಾರೆ. 'ಚಕ್ರವರ್ತಿ ಸಲ್ಲತಕ್ಕದ್ದು ಚಕ್ರವರ್ತಿ, ದೇವರಿಗೆ ಸಲ್ಲತಕ್ಕದ್ದು ದೇವರಿಗೂ ಸಲ್ಲಿಸಿ' ಎಂದು ನುಡಿಯುತ್ತಾರೆ. ಯೇಸು ಸ್ವಾಮಿ ಎರಡರ ಮಧ್ಯೆ ಸಿಲುಕದೇ ಅದನ್ನು ನಿಭಾಯಿಸುವ ಪಾಠವನ್ನು ಮತ್ತು ಕೌಶಲ್ಯವನ್ನು ಕಲಿಸುತ್ತಾರೆ.
ಆತ್ಮಾವಲೋಕನ:
1. ನೀವು ಬೇರೆಯವರ ಹೊಗಳಿಕೆ ತೆಗಳಿಕೆ ಕುಗ್ಗಿದ್ದೇವೆಯೇ?
2. ಬೇರೆಯವರು ಒಳ್ಳೆಯ ಕೆಲಸವನ್ನು ಮಾಡಿದರೆ ನಾವು ಅವರಿಗೆ ಪ್ರಶಂಸಿಸಿದ್ದೇವೆಯೇ?
3. ನಮ್ಮ ಮುಂದೆ ಚಕ್ರವರ್ತಿ ಮತ್ತು ದೇವರು ಎಂಬ ಆಯ್ಕೆಯಿದ್ದಾರೆ, ನಾವು ಯಾರನ್ನು ಆಯ್ಕೆ ಮಾಡುತ್ತೇವೆ?

No comments:

Post a Comment