Tuesday, 19 May 2020

ಜೂನ್ 8, 2020 - ಸಾಧಾರಣ ಕಾಲದ ಹತ್ತನೆಯ ವಾರ - ಸೋಮವಾರ

                                [ಹಸಿರು]
ಪುನೀತ ಮರಿಯ ತೆರೇಸ [ಸಂನ್ಯಾಸಿನಿ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: 1 ಅರಸರು 17.1-6
ಕೀರ್ತನೆ         121:1-2, 3-4, 5-6, 7-8 ಶ್ಲೋಕ. 2
ನನಗೆ ಒತ್ತಾಸೆ ಪ್ರಭುವಿನಿಂದ
ಶುಭಸಂದೇಶ: ಮತ್ತಾಯ 5.1-12

ಮೊದಲ ವಾಚನ: 1 ಅರಸರು 17.1-6
1 : ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯನಾದ ಎಲೀಯ ಎಂಬವನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಾಣೆ, ನಾನು ಸೂಚಿಸಿದ ಹೊರತು, ಇಂದಿನಿಂದ ಕೆಲವು ವರ್ಷಗಳವರೆಗೆ ಮಳೆಯಾಗಲಿ, ಮಂಜಾಗಲಿ ಬೀಳುವುದಿಲ್ಲ,” ಎಂದನು.
2 : ಸರ್ವೇಶ್ವರಸ್ವಾಮಿ ಎಲೀಯನಿಗೆ, “ನೀನು ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗು;
3 : ಜೋರ್ಡನ್ ನದಿಯ ಆಚೆಯಿರುವ ಕೆರೀತ್ ಹಳ್ಳದಲ್ಲಿ ಅಡಗಿಕೋ.
4 : ಹಳ್ಳದ ನೀರು ನಿನಗೆ ಪಾನವಾಗಿರುವುದು; ನಿನಗೆ ಆಹಾರ ತಂದು ಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ,” ಎಂದು ಹೇಳಿದರು.
5 : ಸರ್ವೇಶ್ವರನ ಅಪ್ಪಣೆಯಂತೆ ಜೋರ್ಡನಿನ ಪೂರ್ವಕ್ಕಿರುವ ಕೆರೀತ್ಹಳ್ಳದಲ್ಲಿ ಅವನು ವಾಸಿಸಿದನು.
6 : ಕಾಗೆಗಳು ಅವನಿಗೆ ಬೆಳಿಗ್ಗೆ ಹಾಗು ಸಂಜೆ ರೊಟ್ಟಿ, ಮಾಂಸ, ಇವುಗಳನ್ನು ತಿನ್ನಲು ತಂದುಕೊಡುತ್ತಿದ್ದವು. ಹಳ್ಳದ ನೀರು ಅವನಿಗೆ ಪಾನವಾಗಿತ್ತು.

ಕೀರ್ತನೆ         121:1-2, 3-4, 5-6, 7-8 ಶ್ಲೋಕ. 2
ನನಗೆ ಒತ್ತಾಸೆ ಪ್ರಭುವಿನಿಂದ
1 : ಕಣ್ಣೆತ್ತಿ ನಾ ನೋಡುವೆ ಪರ್ವತದತ್ತ / ಕೇಳುವೆ: “ನನಗೆ ಒತ್ತಾಸೆ ಎತ್ತಣಿಂದ?”
2 : ನನಗೆ ಒತ್ತಾಸೆ ಪ್ರಭುವಿನಿಂದ / ಭೂಮ್ಯಾಕಾಶ ಸೃಜಿಸಿದವನಿಂದ
3 : ನಿನ್ನ ಕಾಲೆಡವದಂತೆ ನೋಡುವನಾತ / ತೂಕಡಿಸಲಾರನು ನಿನ್ನ ಕಾಯುವಾತ
4 : ಇಗೋ, ಇಸ್ರಯೇಲನು ಕಾಯುವಾತನು / ನಿದ್ರಿಸಲಾರನು, ತೂಕಡಿಸಲಾರನು
5 : ನಿನ್ನನು ಕಾಯುತಿಹನು ಪ್ರಭುವೇ / ಬಲಗಡೆ ನೆರಳಂತಿಹನು ವಿಭುವೇ
6 : ನಿನ್ನ ಬಾಧಿಸನು ಸೂರ್ಯನು ಹಗಲೊಳು / ನಿನ್ನ ಪೀಡಿಸನು ಚಂದ್ರನು ಇರುಳೊಳು
7 : ಪ್ರಭು ಕಾಯುವನು ನಿನ್ನ ಪ್ರಾಣವನು / ಸಕಲ ಕೇಡಿನಿಂದ ಕಾಪಾಡುವನು
8 : ಪ್ರಭು ಕಾಯುವನು ನಿನ್ನ ಆಗುಹೋಗುಗಳನು / ಇಂದಿಗೂ ಎಂದೆಂದಿಗೂ ನಿನ್ನ ಕಾಯುವನು //
ಶುಭಸಂದೇಶ: ಮತ್ತಾಯ 5.1-12
1 : ಜನರ ದೊಡ್ಡ ಗುಂಪನ್ನು ಕಂಡು ಯೇಸುಸ್ವಾಮಿ ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ ನೆರೆದರು.
2 : ಆಗ ಯೇಸು ಇಂತೆಂದು ಪ್ರಬೋಧಿಸಿದರು :
3 : "ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು.
4 : ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು.
5 : ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು.
6 : ನ್ಯಾಯನೀತಿಗಾಗಿ ಹಸಿದು ಹಾತೊರೆಯು ವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು.
7 : ದಯಾವಂತರು ಭಾಗ್ಯವಂತರು; ದೇವರ ದಯೆ ಅವರಿಗೆ ದೊರಕುವುದು.
8 : ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು.
9 : ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು.
10 : ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು."
11 : "ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು, ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು.
12 : ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ಸಿಗುವ ಪ್ರತಿಫಲ ಹಿರಿದು. ನಿಮಗಿಂತ ಮೊದಲಿದ್ದ ಪ್ರವಾದಿಗಳನ್ನೂ ಜನರು ಹೀಗೆಯೇ ಚಿತ್ರಹಿಂಸೆಗೆ ಒಳಪಡಿಸಿದರು."
------------
ಜನರ ದೊಡ್ಡ ಗುಂಪನ್ನು ಕಂಡು ಕ್ರಿಸ್ತರಿಗೆ ಮಮತೆಯಾಯಿತು. ಅವರ ಸ್ಥಿತಿಗತಿಗಳ ಬಗ್ಗೆ ಅರಿವಿದ್ದ ಕ್ರಿಸ್ತ ಅವರನ್ನು ಕಂಡು ಮಮತಾಮಯಿಯಾಗುತ್ತಾರೆ. ಅವರೆಲ್ಲರನ್ನು ಭಾಗ್ಯವಂತರಾಗುವಂತೆ ಕರೆನೀಡುತ್ತಾರೆ. `ಭಾಗ್ಯವಂತರುಎಂದರೆ ಅದು ಆಧ್ಯಾತ್ಮಿಕ ಆನಂದ, ಸಂತೃಪ್ತಿ ಹಾಗೂ ಬಯಕೆಯಾಗಿದೆ. ಭಾಗ್ಯವಂತರಾಗುವುದೆಂದರೆ ಶ್ರೀಮಂತರು, ಧನಿಕರು, ಉನ್ನತ ಸ್ಥಾನಗಳಿಸುವಿಕೆಯೆಂದರೆ ತಪ್ಪಾಗುತ್ತದೆ. ಭಾಗ್ಯವಂತರೆಂದರೆ ತಾವು ನಂಬಿದವುಗಳಿಗಾಗಿ ಜೀವಿಸುವುದು, ವಿಶ್ವಾಸ ಕಾಪಾಡಿಕೊಳ್ಳುವುದು, ಶುದ್ದ ಹೃದಯರೂ ಶುದ್ದ ಹಸ್ತವುಳ್ಳವರಾಗಿ ಬಾಳುವುದಾಗಿದೆ, ತೊಂದರೆ ಕಷ್ಟ ಬಂದರೂ ದಾರಿತಪ್ಪಬಾರದು.

No comments:

Post a Comment