Tuesday, 19 May 2020

ಜೂನ್ 15 - ಸಾಧಾರಣಕಾಲದ ಹನ್ನೊಂದನೆಯ ವಾರ - ಸೋಮವಾರ

ಜೂನ್ 15, 2020 ಸೋಮವಾರ                               [ಹಸಿರು]
ಮೊದಲ ವಾಚನ: 1 ಅರಸರು 21: 1-16
ಕೀರ್ತನೆ 5:1-2, 4-5, 6. ಶ್ಲೋಕ.1
ಕಿವಿಗೊಡು ಪ್ರಭೂ, ಎನ್ನ ನುಡಿಗೆ
ಶುಭಸಂದೇಶ: ಮತ್ತಾಯ 5:38-42

ಮೊದಲ ವಾಚನ: 1 ಅರಸರು 21: 1-16
1 : ಅನಂತರ ಸಂಭವಿಸಿದ ಘಟನೆಗಳು ಇವು: ಜೆಸ್ರೀಲಿನಲ್ಲಿ, ಸಮಾರಿಯದ ಅರಸ ಅಹಾಬನ ಅರಮನೆಯ ಹತ್ತಿರ ಜೆಸ್ರೀಲಿನವನಾದ ನಾಬೋತನೆಂಬ ವ್ಯಕ್ತಿಗೆ ಒಂದು ದ್ರಾಕ್ಷಿತೋಟವಿತ್ತು.
2 : ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು; ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುತ್ತೇನೆ; ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ; ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ,” ಎಂದು ಹೇಳಿದನು.
3 : ಅದಕ್ಕೆ ನಾಬೋತನು, “ಪಿತ್ರಾರ್ಜಿತ ಸೊತ್ತನ್ನು ನಿಮಗೆ ಮಾರದಂತೆ ಸರ್ವೇಶ್ವರ ನನ್ನನ್ನು ತಡೆಯಲಿ!” ಎಂದು ಉತ್ತರಕೊಟ್ಟನು.
4 : ಪಿತ್ರಾರ್ಜಿತ ಸೊತ್ತನ್ನು ನಿನಗೆ ಕೊಡುವುದಿಲ್ಲವೆಂದು ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟುಗೊಂಡನು; ಗಂಟುಮೋರೆ ಮಾಡಿಕೊಂಡು ಮನೆಗೆ ಹೋಗಿ, ಊಟ ಮಾಡಲೊಲ್ಲದೆ ಮಂಚದ ಮೇಲೆ ಮಲಗಿ, ಗೋಡೆಯ ಕಡೆಗೆ ಮುಖ ತಿರುಗಿಸಿ ಕೊಂಡನು.
5 : ಆಗ ಅವನ ಹೆಂಡತಿ ಈಜೆಬೆಲಳು ಅವನ ಬಳಿಗೆ ಬಂದು, “ನೀವೇಕೆ ಊಟ ಮಾಡುವುದಿಲ್ಲ? ನಿಮಗೆ ಯಾವ ಚಿಂತೆ?,” ಎಂದು ಕೇಳಿದಳು.
6 : ಅವನು, “ನಾನು ಜೆಸ್ರೀಲಿ ನವನಾದ ನಾಬೋತನಿಗೆ, ‘ನಿನ್ನ ದ್ರಾಕ್ಷಿತೋಟವನ್ನು ನನಗೆ ಮಾರಿಬಿಡು; ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷೀ ತೋಟವನ್ನು ಕೊಡುತ್ತೇನೆ ಎಂದು ಹೇಳಿದೆ; ಆದರೆ ಅವನು ಕೊಡುವುದಿಲ್ಲ ಎಂದುಬಿಟ್ಟ”, ಎಂದು ಉತ್ತರಕೊಟ್ಟನು.
7 : ಆಗ ಅವನ ಹೆಂಡತಿ ಈಜೆಬೆಲಳು, “ಇಸ್ರಯೇಲರ ಅರಸರಾದ ನೀವು ಹೀಗೆ ವರ್ತಿಸುವುದೇ! ಎದ್ದು ಊಟಮಾಡಿ, ಸಂತೋಷದಿಂದಿರಿ; ನಾನು ನಿಮಗೆ ಜೆಸ್ರೀಲಿನವನಾದ ನಾಬೋತನ ದ್ರಾಕ್ಷೀತೋಟವನ್ನು ಕೊಡುತ್ತೇನೆ,” ಎಂದು ನುಡಿದಳು.
8 : ಅಂತೆಯೇ ಅಹಾಬನ ಹೆಸರಿನಲ್ಲಿ ಒಂದು ಪತ್ರವನ್ನು ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನಪುರುಷರಿಗೂ ಹಿರಿಯರಿಗೂ ಕಳುಹಿಸಿದಳು.
9 : ಅದರಲ್ಲಿ, “ಎಲ್ಲರೂ ಉಪವಾಸ ಮಾಡಬೇಕೆಂದು ಪ್ರಕಟಿಸಿರಿ; ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿರಿ;
10 : ಅವನು ದೇವರನ್ನೂ ಅರಸನನ್ನೂ ಶಪಿಸಿದವನು ಎಂಬುದಾಗಿ ಇಬ್ಬರು ದುಷ್ಟ ಮನುಷ್ಯರಿಂದ ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಿಸಿರಿ; ಅವನನ್ನು ಹೊರಗೆ ಒಯ್ದು, ಕಲ್ಲೆಸೆದು ಕೊಲ್ಲಿರಿ,” ಎಂದು ಬರೆದಿದ್ದಳು.
11 : ಅವನ ಊರಿನ ಹಿರಿಯರೂ ಪ್ರಧಾನ ಪುರುಷರೂ ಈಜೆಬೆಲಳು ಕಳುಹಿಸಿದ್ದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು;
12 : ಉಪವಾಸವನ್ನು ಪ್ರಕಟಿಸಿದರು; ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು;
13 : ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತರು. ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆಂಬುದಾಗಿ ಜನರ ಎದುರಿನಲ್ಲೆ ಅವನಿಗೆ ವಿರುದ್ಧ ಸಾಕ್ಷಿ ಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು.
14 : ನಾಬೋತನು ಕಲ್ಲೆಸೆತದಿಂದ ಸತ್ತ ಸಮಾಚಾರವನ್ನು ಹಿರಿಯರು ಈಜೆಬೆಲಳಿಗೆ ಮುಟ್ಟಿಸಿದರು.
15 : ಆಕೆ ಇದನ್ನು ಕೇಳಿ ಅಹಾಬನಿಗೆ, “ನೀವು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳಿ. ಅವನು ಜೀವದಿಂದಿಲ್ಲ, ಸತ್ತನು,” ಎಂದು ಹೇಳಿದಳು.
16 : ಜೆಸ್ರೀಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ, ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋದನು.

ಕೀರ್ತನೆ 5:1-2, 4-5, 6. ಶ್ಲೋಕ.1
ಕಿವಿಗೊಡು ಪ್ರಭೂ, ಎನ್ನ ನುಡಿಗೆ
2 : ಎನ್ನರಸನೇ, ದೇವನೇ / ಮಾಡುವೆ ನಿನಗೆ ಪ್ರಾರ್ಥನೆ / ನೀ ಆಲಿಸೆನ್ನ ಯಾಚನೆ //
3 : ಉದಯಕಾಲದಲ್ಲಿ ಪ್ರಭು, ನಿನಗೆ ಕೇಳಿಬರುವುದು ನನ್ನ ಸ್ವರ / ಉದಯಾರಾಧನೆ ಮಾಡಿ ಎದುರು ನೋಡುತ್ತಿರುವೆ ನಾ ಸದುತ್ತರ //
5 : ನಿಲ್ಲಲಾರರು ನಿನ್ನ ಮುಂದೆ ಗರ್ವಿಗಳು / ನಿನಗೆ ವೈರಿಗಳಾಗುವರು ಅಧರ್ಮಿಗಳು /
6 : ಹುಸಿನುಡಿವವರನು ಪ್ರಭು, ನೀ ನಾಶಮಾಡುವೆ / ಹಿಂಸಕರನು, ವಂಚಕರನು ನೀ ಹೇಸಿಬಿಡುವೆ //
7 : ನಿನ್ನ ಮಂದಿರಕೆ ಬರುವೆ ನಿನ್ನಪಾರ ಪ್ರೀತಿಯ ನಿಮಿತ್ತ / ಭಕುತಿಯಿಂದ ಅಡ್ಡ ಬೀಳುವೆ ನಿನ್ನ ಪವಿತ್ರಾಲಯದತ್ತ //

ಶುಭಸಂದೇಶ: ಮತ್ತಾಯ 5:38-42
38 : "ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಬದಲಾಗಿ ಹಲ್ಲು" ಎಂಬುದನ್ನು ನೀವು ಕೇಳಿದ್ದೀರಿ.
39 : ಆದರೆ ನನ್ನ ಬೋಧೆ ಇದು: ನಿನಗೆ ಅಪಕಾರ ಮಾಡಿದವನಿಗೆ ಪ್ರತೀಕಾರ ಮಾಡಬೇಡ. ನಿನ್ನ ಬಲಗೆನ್ನೆಗೆ ಒಬ್ಬನು ಹೊಡೆದರೆ ಇನ್ನೊಂದು ಕೆನ್ನೆಯನ್ನೂ ಒಡ್ಡು.
40 : ನಿನ್ನೊಡನೆ ವ್ಯಾಜ್ಯಮಾಡಿ ನಿನ್ನ ಒಳ ಅಂಗಿಯನ್ನು ಕಿತ್ತುಕೊಳ್ಳುವವನಿಗೆ ಹೊರ ಅಂಗಿಯನ್ನೂ ಕೊಟ್ಟುಬಿಡು.
41 : ಯಾರಾದರೂ ಒಂದು ಕಿಲೊವಿೂಟರ್ ದೂರ ಬಾ ಎಂದು ನಿನ್ನನ್ನು ಒತ್ತಾಯಪಡಿಸಿದರೆ ಅವನೊಡನೆ ಎರಡು ಕಿಲೊವಿೂಟರ್ ಹೋಗು;
42 : ಬೇಡಿಕೊಳ್ಳುವವನಿಗೆ ಕೊಡು. ಸಾಲ ಕೇಳಬಂದವನಿಂದ ಮುಖ ತಿರುಗಿಸಿಕೊಳ್ಳಬೇಡ."
--------------------------
ನಮ್ಮ ಸೇವಾಕಾರ್ಯವು, ಒಳ್ಳೆಯತನ ಇತರರ ಅವಹೇಳನಕ್ಕೆ ಗುರಿಯಾಗಿ ನಲುಗಿ ಹೋಗದಂತೆ ಕಾಪಾಡಿಕೊಳ್ಳಬೇಕು. ತನ್ನ ಮೇಲೆ ಎಸೆದ ಕಲ್ಲುಗಳ ಅಡಿಯಲ್ಲಿ ನಲುಗಿ ಹೋಗಿ ಸಾಯುತ್ತಾನೆ ಅಂಜುಗುಳಿ. ಆದರೆ ಅತ್ಮವಿಶ್ವಾಸ ಇರುವ ನಾವು ನಮ್ಮ ಮೇಲೆ ಬಿದ್ದ ಕಲ್ಲುಗಳಿಂದ ಕೋಟೆ ಕಟ್ಟಿಕೊಂಡು ಶಿಖರದ ಮೇಲೆ ನಿಲ್ಲಬೇಕು. ಈ ರಹಸ್ಯವನ್ನು ತಿಳಿದ ಅನೇಕರು ಸಮಸ್ಯೆಗಳಿದ್ದರೂ, ಅಂಗವೈಕಲ್ಯ ಹೊಂದಿದ್ದರು ಎಲ್ಲರಿಗಿಂತ ಅದ್ಭುತಗಳನ್ನು ಸಾಧಿಸಿ ತೋರಿಸಿಲ್ಲವೇ.

No comments:

Post a Comment