Tuesday, 19 May 2020

ಜೂನ್ 16 - ಸಾಧಾರಣಕಾಲದ ಹನ್ನೊಂದನೆಯ ವಾರ - ಮಂಗಳವಾರ

ಜೂನ್ 16, 2020 ಮಂಗಳವಾರ                              [ಹಸಿರು]
ಮೊದಲ ವಾಚನ: 1 ಅರಸರು 21.17-29
ಕೀರ್ತನೆ 51:1-2, 3-4, 9. ಶ್ಲೋಕ.14
ಕೃಪಾಳು ದೇವಾ, ಕರುಣಿಸೆನ್ನನು, ನಿನಗೆ ದ್ರೋಹವೆಸಗಿದೆ
ಶುಭಸಂದೇಶ: ಮತ್ತಾಯ 5.43-48

ಮೊದಲ ವಾಚನ: 1 ಅರಸರು 21.17-29
17 : ಆಗ ತಿಷ್ಬೀಯನಾದ ಎಲೀಯನಿಗೆ ಸರ್ವೇಶ್ವರನ ವಾಣಿವುಂಟಾಯಿತು.
18 : “ನೀನು ಹೋಗಿ ಸಮಾರಿಯದಲ್ಲಿ ವಾಸಿಸುವ ಇಸ್ರಯೇಲ್ ಅರಸನನ್ನು ಕಾಣು; ಅವನು ಈಗ ನಾಬೋತನ ದ್ರಾಕ್ಷೀತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಅಲ್ಲಿಗೆ ಹೋಗಿದ್ದಾನೆ.
19 : ಅವನಿಗೆ, ‘ನೀನು ಕೊಲೆಮಾಡಿ, ಸೊತ್ತನ್ನು ಸಂಪಾದಿಸಿಕೊಂಡೆಯಲ್ಲವೇ? ಬಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವುವು, ಎನ್ನುತ್ತಾರೆ ಸರ್ವೇಶ್ವರಎಂದು ಹೇಳು.”
20 : ಅಹಾಬನು ಎಲೀಯನನ್ನು ನೋಡಿ, “ಎಲೈ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ?” ಎಂದು ಕೇಳಿದನು. ಅವನು, “ಹೌದು, ಕಂಡು ಹಿಡಿದೆ, ನೀನು ನಿನ್ನನ್ನು ಪಾಪಕ್ಕೆ ಮಾರಿಬಿಟ್ಟು, ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದೆ.
21 : ಸರ್ವೇಶ್ವರ ನಿನ್ನನ್ನು ಕುರಿತು, ‘ನಾನು ನಿನ್ನ ಮೈಮೇಲೆ ಕೇಡನ್ನು ಬರಮಾಡಿ, ನಿನ್ನನ್ನು ಕಸದಂತೆ ತೆಗೆದುಹಾಕುವೆನು; ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ಪರತಂತ್ರರಾಗಲಿ ಎಲ್ಲರನ್ನೂ ಇಸ್ರಯೇಲರ ಮಧ್ಯೆಯಿಂದ ಕಡಿದುಬಿಡುವೆನು.
22 : ನೀನು ಇಸ್ರಯೇಲರನ್ನು ಪಾಪಕ್ಕೆ ಪ್ರೇರಿಸಿ, ನನಗೆ ಕೋಪವನ್ನೆಬ್ಬಿಸಿದ್ದರಿಂದ ನೆಬಾಟನ ಮಗ ಯಾರೊಬ್ಬಾಮನ ಮನೆಗೂ ಅಹೀಯನ ಮಗ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದುಎನ್ನುತ್ತಾರೆ.
23 : ಇದಲ್ಲದೆ ಈಜೆಬೆಲಳನ್ನು ಕುರಿತು ಅವರು, ‘ನಾಯಿಗಳು ಜೆಸ್ರೀಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವುವು;
24 : ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವುವುಎಂದು ಹೇಳುತ್ತಾರೆ,” ಎಂದನು.
25 : ಹೆಂಡತಿ ಈಜೆಬೆಲಳಿಂದ ಪ್ರಚೋದಿತನಾಗಿ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ.
26 : ಸರ್ವೇಶ್ವರ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆ ಬಹಳ ಅಸಹ್ಯವಾಗಿತ್ತು.
27 : ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಯನ್ನು ದುಃಖದಿಂದ ಹರಿದು ಕೊಂಡನು; ಹಗಲಿರುಳು ಮೈಮೇಲೆ ಗೋಣಿ ತಟ್ಟನ್ನು ಹಾಕಿಕೊಂಡು ಉಪವಾಸ ಮಾಡುತ್ತಾ ದೀನಮನಸ್ಸಿನಿಂದ ವರ್ತಿಸಿದನು.
28 : ಆದುದರಿಂದ ಸರ್ವೇಶ್ವರ ತಿಷ್ಬೀಯನಾದ ಎಲೀಯನಿಗೆ,
29 : “ಅಹಾಬನು ನನ್ನ ಮುಂದೆ ತನ್ನನ್ನೇ ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ಹೀಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡುವುದಿಲ್ಲ. ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಬರಮಾಡುವೆನು,” ಎಂದು ಹೇಳಿದರು.

ಕೀರ್ತನೆ 51:1-2, 3-4, 9. ಶ್ಲೋಕ.14
ಕೃಪಾಳು ದೇವಾ, ಕರುಣಿಸೆನ್ನನು, ನಿನಗೆ ದ್ರೋಹವೆಸಗಿದೆ
3 : ಒಪ್ಪಿಕೊಂಡೆನಿದೋ, ನಾನೇ ಅಪರಾಧಿ / ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ //
4 : ಹೌದು ದೇವಾ, ನಿನಗೆ ದ್ರೋಹವೆಸಗಿದೆ / ನಿನ್ನ ಕಣ್ಗೆ ಕೆಟ್ಟದುದನೆ ಮಾಡಿದೆ // ನಿನ್ನ ನಿರ್ಣಯವು ನ್ಯಾಯಯುತ / ನೀ ನೀಡುವ ತೀರ್ಪು ನಿರ್ಲಿಪ್ತ //
5 : ನಾ ಜನಿಸಿದೆ ಪಾಪಪಂಕದಲೆ / ದ್ರೋಹಿ ನಾ ಮಾತೃಗರ್ಭದಿಂದಲೆ //
6 : ಅಂತರಂಗ ಶುದ್ಧಿಯನು ನೀ ಬಯಸುತಿ / ಅಂತರ್ಯ ಜ್ಞಾನವನು ಉದಯಗೊಳಿಸುತಿ //
11 : ತಳ್ಳಬೇಡೆನ್ನನು ದೇವಾ, ನಿನ್ನ ಸನ್ನಿಧಿಯಿಂದ / ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ //
16 : ಬಲಿಯರ್ಪಣೆಯಲಿ ನಿನಗೊಲವಿಲ್ಲ | ದಹನ ಬಲಿಯಿತ್ತರು ನಿನಗೆ ಬೇಕಿಲ್ಲ ||

ಶುಭಸಂದೇಶ: ಮತ್ತಾಯ 5.43-48
43 : "ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು" ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ.
44 : ನಾನು ಹೇಳುವುದನ್ನು ಗಮನಿಸಿರಿ: ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ.
45 : ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ.
46 : ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿ ಮಾಡುವವರೂ ಹಾಗೆ ಮಾಡುವುದಿಲ್ಲವೇ?
47 : ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ?
48 : ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ."
--------------------
`ನಿಮ್ಮ ಶತ್ರುಗಳನ್ನು ಪ್ರೀತಿಸಿ, ಪೀಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿಎಂಬ ಕ್ರಿಸ್ತನ ಮಾತುಗಳ ಅರ್ಥ ಹಾಗೂ ಪಾಲನೆಯೇ ವಿಶ್ವಶಾಂತಿಗೆ ಮಾದರಿ. `ಹಲ್ಲಿಗೆ ಹಲ್ಲುಎಂಬ ನ್ಯಾಯವೇ ಪೈಶಾಚಿಕವಾದದ್ದು. ಧರ್ಮ ಜೀವ ಉಳಿಸುತ್ತದೆ ಮತ್ತು ಬೆಳೆಸುತ್ತದೆ. ಕಾನೂನು ಜೀವವನ್ನು ನಿಯಂತ್ರಿಸುತ್ತದೆ ಮತ್ತು ಶಿಕ್ಷಿಸುತ್ತದೆ ಯಾವುದೇ ತಪ್ಪಿಗೆ ಶಿಕ್ಷೆಯಾಗಬೇಕು ನಿಜ, ಆದರೆ ಅಮಾನುಷವಾಗಿಯಲ್ಲಿ ಮಾನವೀಯತೆಯ ನೆಲೆಗಟ್ಟಿನಲ್ಲಿ ಶಿಕ್ಷೆಯಾಗಲಿ. ಪ್ರಭು ಇದನ್ನೆ ಮನದಟ್ಟು ಮಾಡಲು ಪ್ರಯತ್ನಿಸುತ್ತಾರೆ.
------------------

No comments:

Post a Comment