ಸೆಪ್ಟೆಂಬರ್ 1, 2020 ಮಂಗಳವಾರ [ಹಸಿರು]
ಮೊದಲ ವಾಚನ: 1 ಕೊರಿಂಥಿಯರಿಗೆ 2.10-16
ಕೀರ್ತನೆ 145: 8-14. ಶ್ಲೋಕ.18
ಪ್ರಭುವಿನ ಮಾರ್ಗ ಧರ್ಮಸಮ್ಮತ
ಶುಭಸಂದೇಶ: ಲೂಕ 4.31-37
1 ಕೊರಿಂಥಿಯರಿಗೆ 2.10-16
10 : ನಮಗಾದರೋ ದೇವರು ಪವಿತ್ರಾತ್ಮ ಅವರ ಮುಖಾಂತರ ಇವುಗಳನ್ನು ಪ್ರಕಟಿಸಿದ್ದಾರೆ. ಸಕಲವನ್ನು ಹಾಗೂ ದೇವರ ಅಂತರಾಳವನ್ನು ಅವಲೋಕಿಸುವವರು ಈ ಪವಿತ್ರಾತ್ಮರೇ.
11 : ಮಾನವನ ಆಲೋಚನೆಗಳನ್ನು ಅವನ ಅಂತರಾತ್ಮವಲ್ಲದೆ ಮತ್ತಾರು ಬಲ್ಲರು? ಅಂತೆಯೇ, ದೇವರ ಆಲೋಚನೆಗಳನ್ನು ಪವಿತ್ರಾತ್ಮರಲ್ಲದೆ, ಬೇರೆ ಯಾರೂ ಅರಿಯಲಾರರು.
12 : ನಾವಾದರೋ ಪ್ರಾಪಂಚಿಕ ಆತ್ಮವನ್ನು ಹೊಂದಿದವರಲ್ಲ. ದೇವರು ನಮಗೆ ದಯಪಾಲಿಸಿರುವ ವರಪ್ರಸಾದಗಳನ್ನು ಅರಿತುಕೊಳ್ಳುವಂತೆ ಮಾಡುವ ಪಾರಮಾರ್ಥಿಕ ಆತ್ಮವನ್ನು ಪಡೆದಿದ್ದೇವೆ.
13 : ನಾವು ಇವುಗಳನ್ನು ಮಾನವ ಜ್ಞಾನ ಪ್ರೇರೇಪಿಸಿದ ಮಾತುಗಳಿಂದ ಹೇಳುವುದಿಲ್ಲ. ದೇವರ ಆತ್ಮದಿಂದ ಪ್ರೇರಿತವಾದ ಮಾತುಗಳಿಂದ ಹೇಳುತ್ತೇವೆ. ಹೀಗೆ ಆಧ್ಯಾತ್ಮಿಕ ಸತ್ಯಗಳನ್ನು, ಆಧ್ಯಾತ್ಮಿಕ ವ್ಯಕ್ತಿಗಳಿಗೆ ವಿವರಿಸುತ್ತೇವೆ.
14 : ಭೌತಿಕ ಮನುಷ್ಯನು ದೇವರ ಆತ್ಮದ ವರಗಳನ್ನು ನಿರಾಕರಿಸುತ್ತಾನೆ. ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ. ಅವುಗಳನ್ನು ಗ್ರಹಿಸಲು ಅವನಿಂದಾಗದು. ಏಕೆಂದರೆ, ಆಧ್ಯಾತ್ಮಿಕ ವಿವೇಚನೆಯಿಂದ ಮಾತ್ರ ಅವುಗಳನ್ನು ಅರಿಯಲು ಸಾಧ್ಯ.
15 : ದೇವರ ಆತ್ಮವನ್ನು ಹೊಂದಿದವನು ಎಲ್ಲವನ್ನೂ ವಿಚಾರಣೆಮಾಡಿ ತಿಳಿದುಕೊಳ್ಳುತ್ತಾನೆ. ಅವನನ್ನು ಯಾರೂ ವಿಚಾರಣೆಗೆ ಗುರಿಮಾಡಲಾಗದು.
16 : “ಪ್ರಭುವಿನ ಮನಸ್ಸನ್ನರಿತವರಾರು? ಪ್ರಭುವಿಗೆ ಉಪದೇಶಿಸುವವರಾರು?” ಎಂದು ಲಿಖಿತವಾಗಿದೆ. ನಾವಾದರೋ, ಕ್ರಿಸ್ತಯೇಸುವಿನ ಮನೋಭಾವನೆಯುಳ್ಳವರು.
ಕೀರ್ತನೆ 145: 8-14. ಶ್ಲೋಕ.18
ಪ್ರಭುವಿನ ಮಾರ್ಗ ಧರ್ಮಸಮ್ಮತ
8 : ಪ್ರಭು ದಯಾನಿಧಿ, ಕೃಪಾಸಾಗರನು / ಸಹನಶೀಲನು, ಪ್ರೀತಿಪೂರ್ಣನು
9 : ಪ್ರಭುವಿನ ಕರುಣೆ ಎಲ್ಲರ ಮೇಲೆ / ಆತನ ಕೃಪೆಯು ಸೃಷ್ಟಿಯ ಮೇಲೆ
10 : ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು / ಕೊಂಡಾಡುವುದು ನಿನ್ನನು ಭಕ್ತ ಸಮೂಹವು
11 : ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು / ವರ್ಣಿಸುವರವರು ನಿನ್ನ ಶಕ್ತಿ ಸಾಮಥ್ರ್ಯವನು
12 : ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು / ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು
13 : ಶಾಶ್ವತವಾದುದು ನಿನ್ನ ರಾಜ್ಯವು / ಇರುವುದೆಂದಿಗು ನಿನ್ನ ಆಳ್ವಿಕೆಯು
14 : ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು / ನಡೆಯಲಿ ಆತನು ಸದಾ ಪ್ರೀತಿಮಯನು
ಲೂಕ 4.31-37
31 : ಬಳಿಕ ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದ ಕಫೆರ್ನವುಮ್ ಎಂಬ ಊರಿಗೆ ಬಂದು ಸಬ್ಬತ್ದಿನ ಅಲ್ಲಿನ ಜನರಿಗೆ ಬೋಧಿಸುತ್ತಿದ್ದರು.
32 : ಅವರು ಅಧಿಕಾರವಾಣಿಯಿಂದ ಉಪದೇಶಿಸುತ್ತಿದ್ದುದನ್ನು ಕೇಳಿ ಜನರೆಲ್ಲರೂ ಬೆರಗಾದರು.
33 : ದುಷ್ಟದೆವ್ವ ಹಿಡಿದಿದ್ದ ಒಬ್ಬನು ಆ ಪ್ರಾರ್ಥನಾ ಮಂದಿರದಲ್ಲಿ ಇದ್ದನು.
34 : ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು; ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಗಟ್ಟಿಯಾಗಿ ಕಿರುಚಿದನು.
35 : ಆದರೆ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ದೆವ್ವಕ್ಕೆ ಆಜ್ಞಾಪಿಸಿದರು. ಆ ದೆವ್ವ ಎಲ್ಲರ ಎದುರಿಗೇ ಅವನನ್ನು ಕೆಡವಿ, ಯಾವ ಕೆಡುಕನ್ನೂ ಮಾಡದೆ ಅವನನ್ನು ಬಿಟ್ಟುಹೋಯಿತು.
36 : ಜನರೆಲ್ಲರೂ ಆಶ್ಚರ್ಯಚಕಿತರಾದರು. “ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆ ಮಾಡುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವಲ್ಲಾ!” ಎಂದು ತಮ್ಮ ತಮ್ಮೊಳಗೇ ಮಾತನಾಡಿಕೊಂಡರು.
37 : ಯೇಸುವಿನ ಸಮಾಚಾರ ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿ ಹರಡಿತು.
ಎಲ್ಲಿ ದೇವರು ಇರುತ್ತಾರೋ ಅಲ್ಲಿ ದೆವ್ವಗಳಿಗೆ ಹಾಗೂ ಸೈತಾನನಿಗೆ ಸ್ಥಳವಿಲ್ಲ. ಇಂದಿನ ಶುಭಸಂದೇಶದಲ್ಲಿ ಯೇಸು ದೆವ್ವ ಹಿಡಿದ್ದಿದ್ದ ವ್ಯಕ್ತಿಯೊಬ್ಬನನ್ನು ಬಿಡಿಸುತ್ತಾರೆ. ``ನಜರೇತಿನ ಯೇಸುವೇ ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು ದೇವರಿಂದ ಬಂದ ಪರಮ ಪೂಜ್ಯರು ನೀವು ಎಂದು ಗಟ್ಟಿಯಾಗಿ ಕೂಗಿದನು. ಆತನ ಮಾತು 100% ಸತ್ಯ. ಆದಾಮ ಮತ್ತು ಏವಳರ ಪಾಪದಿಂದ ದುಷ್ಟಶಕ್ತಿ ನಮ್ಮ ಮೇಲೆ ಅಧಿಕಾರವನ್ನು ಚಲಾಯಿಸುವಂತಾಯಿತು. ಯೇಸು ಪ್ರಭುವಿನ ವಿಧೇಯತೆಯಿಂದ ಎಲ್ಲರೂ ಜೀವೋದ್ದಾರ ಹೊಂದುವಂತಾಯಿತು. ಸೈತಾನನಿಗೆ ಸೋಲಾಯಿತು. ಯೇಸು ಸೈತಾನನ್ನು ಓಡಿಸಿ ದೇವರ ಸಾಮ್ರಾಜ್ಯವನ್ನು ಸ್ಥಾಪಿಸಿದರು.
ನಾವು ಸಹ ಅನೇಕ ಬಾರಿ ಪಾಪಗಳಿಂದ ಸೈತಾನನ ಗುಲಾಮರಾಗಿದ್ದೆವೆ. ಪಾಪಗಳನ್ನು ತೊರೆದು `ದೇವರಿಂದ ಬಂದ ಪರಮ ಪೂಜ್ಯರಾದ ಯೇಸು’ವನ್ನು ವಿಶ್ವಾಸಿಸೋಣ.
No comments:
Post a Comment