ಸೆಪ್ಟೆಂಬರ್ 2, 2020 ಬುಧವಾರ [ಹಸಿರು]
ಧನ್ಯ ಆಂದ್ರೆ ಗ್ರಸೆಟ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: 1 ಕೊರಿಂಥಿಯರಿಗೆದವರಿಗೆ 3.1-9
ಕೀರ್ತನೆ 33:12-15, 20-21. ಶ್ಲೋಕ.12
ಸಜ್ಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ
ಶುಭಸಂದೇಶ: ಲೂಕ 4.38-44
1 ಕೊರಿಂಥಿಯರಿಗೆದವರಿಗೆ 3.1-9
1 : ಪ್ರಿಯ ಸಹೋದರರೇ, ದೇವರ ಆತ್ಮವನ್ನು ಪಡೆದವರೊಡನೆ ಮಾತನಾಡಿದಂತೆ ನಿಮ್ಮೊಡನೆ ನಾವು ಮಾತನಾಡಲಿಲ್ಲ. ಲೌಕಿಕರು ನೀವು; ಕ್ರಿಸ್ತಯೇಸುವಿನಲ್ಲಿ ಹಸುಗೂಸುಗಳು ನೀವು ಎಂದು ಭಾವಿಸಿ ನಿಮ್ಮೊಡನೆ ಮಾತನಾಡಬೇಕಾಯಿತು.
2 : ನಾನು ನಿಮಗೆ ಹಾಲೂಡಿಸಿದೆನು; ಗಟ್ಟಿ ಆಹಾರವನ್ನು ಕೊಡಲಿಲ್ಲ. ಏಕೆಂದರೆ, ಅದನ್ನು ಜೀರ್ಣಿಸಿಕೊಳ್ಳಲು ನಿಮಗೆ ಶಕ್ತಿ ಇರಲಿಲ್ಲ. ಇಂದಿಗೂ ನೀವು ಶಕ್ತರಲ್ಲ.
3 : ನೀವು ಇನ್ನೂ ಲೌಕಿಕರಂತೆ ಬಾಳುತ್ತಿದ್ದೀರಿ. ನಿಮ್ಮ ನಡುವೆ ದ್ವೇಷ-ಅಸೂಯೆ, ವಾದ-ವಿವಾದಗಳು ಪ್ರಬಲವಾಗಿದ್ದು ನೀವಿನ್ನೂ ಪ್ರಾಣಿಗಳಂತೆ ವರ್ತಿಸುತ್ತಿದ್ದೀರಲ್ಲವೆ?
4 : ಒಬ್ಬನು, ನಾನು ಪೌಲನ ಕಡೆಯವನು; ಇನ್ನೊಬ್ಬನು, ನಾನು ಅಪೊಲೋಸನ ಕಡೆಯವನು, ಎಂದು ನಿಮ್ಮೊಳಗೆ ಕಿತ್ತಾಡುವ ನೀವು ಕೇವಲ ನರಪ್ರಾಣಿಗಳಲ್ಲದೆ ಮತ್ತೇನು?
5 : ಅಪೊಲೋಸನು ಯಾರು? ಪೌಲನು ಯಾರು? ನಿಮ್ಮನ್ನು ವಿಶ್ವಾಸಕ್ಕೆ ಕರೆತಂದ ದಾಸರು ನಾವಲ್ಲವೇ? ನಮ್ಮಲ್ಲಿ ಪ್ರತಿಯೊಬ್ಬನು ಪ್ರಭು ನಿಯಮಿಸುವ ಕಾರ್ಯವನ್ನು ನಿರ್ವಹಿಸುತ್ತವೆ.
6 : ನಾನು ಸಸಿಯನ್ನು ನೆಟ್ಟೆನು; ಅಪೊಲೋಸನು ನೀರೆರೆದನು; ಆದರೆ ಅದನ್ನು ಬೆಳೆಸಿದವರು ದೇವರು.
7 : ಆದ್ದರಿಂದ ನೆಡುವವನಾಗಲಿ, ನೀರೆರೆಯುವವನಾಗಲಿ ಪ್ರಮುಖನಲ್ಲ; ಬೆಳವಣಿಗೆ ನೀಡುವ ದೇವರೇ ದೊಡ್ಡವರು.
8 : ನೆಡುವವನೂ ನೀರೆರೆಯುವವನೂ ಇಬ್ಬರೂ ಅಗತ್ಯವಾಗಿ ಬೇಕಾದವರೇ ಅವನವನ ದುಡಿಮೆಗೆ ತಕ್ಕ ಹಾಗೆ ಪ್ರತಿಯೊಬ್ಬನೂ ಸಂಭಾವನೆ ಪಡೆಯುತ್ತಾನೆ.
9 : ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿ ಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ.
ಕೀರ್ತನೆ 33:12-15, 20-21. ಶ್ಲೋಕ.12
ಸಜ್ಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ
12 : ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ / ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ //
13 : ವೀಕ್ಷಿಸುತಿಹನು ಪ್ರಭು ಸಮಸ್ತವನು ಪರದಿಂದ / ಲಕ್ಷಿಸುತಿಹನು ಮನುಜರನು ಸಿಂಹಾಸನದಿಂದ //
14 : ಸ್ಥಾವರ ಸಿಂಹಾಸನದಿಂದ ನೋಡುತಿಹನು / ಸರ್ವ ಭೂನಿವಾಸಿಗಳನು ಪರಿಶೀಲಿಸು ತಿಹನು //
15 : ಅವರೆಲ್ಲರ ಹೃದಯಗಳನು ನಿರ್ಮಿಸಿದಾತನವನು / ಅವರವರ ಕೃತ್ಯಗಳನು ಪರೀಕ್ಷಿಸುತಿಹನು //
20 : ಕಾದಿದೆ ಎನ್ನ ಮನ ಪ್ರಭುವಿಗಾಗಿ / ಆತನಿಹನು ಎನಗೆ ಗುರಾಣಿಯಾಗಿ //
21 : ನೆಮ್ಮದಿಯಿಂದಿದೆ ಎನ್ನ ಮನ ಆತನಲಿ / ನಂಬಿರುವೆವು ಆತನ ಶ್ರೀ ನಾಮದಲಿ //
ಲೂಕ 4.38-44
38 : ಪ್ರಾರ್ಥನಾಮಂದಿರದಿಂದ ಹೊರಟ ಯೇಸುಸ್ವಾಮಿ ಸಿಮೋನನ ಮನೆಗೆ ಬಂದರು. ಆ ಸಿಮೋನನ ಅತ್ತೆ ವಿಷಮ ಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು.
39 : ಯೇಸು ಆಕೆಯ ಬಳಿ ನಿಂತು, ಬಾಗಿ, ಜ್ವರಕ್ಕೆ ಬಿಟ್ಟು ಹೋಗೆಂದು ಆಜ್ಞಾಪಿಸಿದರು; ಅದು ಬಿಟ್ಟು ಹೋಯಿತು. ಆ ಕ್ಷಣವೇ ಆಕೆ ಎದ್ದು ಅವರೆಲ್ಲರನ್ನು ಸತ್ಕರಿಸಿದಳು. ರೋಗಿಗಳಿಗೆ ಆರೋಗ್ಯದಾನ (ಮತ್ತಾ. 8.16-17; ಮಾರ್ಕ 1.32-34)
40 : ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಯಲ್ಲಿ ವಿಧವಿಧವಾದ ಕಾಯಿಲೆಯಿಂದ ನರಳುತ್ತಿದ್ದವರನ್ನೆಲ್ಲಾ ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬನ ಮೇಲೆ ತಮ್ಮ ಕೈಯಿಟ್ಟು ಗುಣಪಡಿಸಿದರು.
41 : ಅನೇಕರ ಮೈಮೇಲಿದ್ದ ದೆವ್ವಗಳು ಸಹ, “ನೀನು ದೇವರ ಪುತ್ರ”, ಎಂದು ಬೊಬ್ಬೆಹಾಕುತ್ತಾ ಬಿಟ್ಟುಹೋದುವು. ಇವರೇ ‘ಕ್ರಿಸ್ತ’ ಎಂದು ಅವುಗಳು ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ. ಜುದೇಯ ಪ್ರಾಂತ್ಯದಲ್ಲಿ ಬೋಧನೆ (ಮಾರ್ಕ 1.35-39)
42 : ಬೆಳಗಾಗುತ್ತಲೇ, ಯೇಸುಸ್ವಾಮಿ ಅಲ್ಲಿಂದ ಹೊರಟು ನಿರ್ಜನ ಸ್ಥಳಕ್ಕೆ ಹೋದರು. ಜನಸಮೂಹವು ಅವರನ್ನು ಹುಡುಕಿಕೊಂಡು ಅಲ್ಲಿಗೂ ಬಂದಿತು; ತಮ್ಮನ್ನು ಬಿಟ್ಟು ಹೋಗಬಾರದೆಂದು ಜನರು ತಡೆಗಟ್ಟಲು ಯತ್ನಿಸಿದರು.
43 : ಅವರಿಗೆ ಯೇಸು, “ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ,” ಎಂದರು.
44 : ಬಳಿಕ ಜುದೇಯ ಪ್ರಾಂತ್ಯದ ಪ್ರಾರ್ಥನಾಮಂದಿರಗಳಲ್ಲಿ ಯೇಸು ಬೋಧಿಸುತ್ತಿದ್ದರು.
ಪ್ರಭು ಕ್ರಿಸ್ತರು ಬಂದದ್ದುಎಲ್ಲರನ್ನು ಉದ್ದರಿಸಿ ಕಾಪಾಡಲು. ಇಂದಿನ ಶುಭಸಂದೇಶದಲ್ಲಿ ಯೇಸು ಸಿಮೋನನ ಅತ್ತೆಯ ವಿಷಮ ಶೀತ ಜ್ವರವನ್ನು ಗುಣಪಡಿಸಿದ ಮೇಲೆ ಅನೇಕ ರೋಗಿಗಳನ್ನು ಗುಣ ಪಡಿಸುತ್ತಾರೆ. ದೆವ್ವಗಳನ್ನು ಬಿಡಿಸುತ್ತಾರೆ. ಇದು ದೇವರ ಸಾಮ್ರಾಜ್ಯದ ಲಕ್ಷಣಗಳನ್ನು ತಿಳಿಯ ಪಡಿಸುತ್ತದೆ.
ಯೇಸು ಇರುವಾಗ ಯಾವುದೇ ಕೊರತೆಗಳಿರುವುದಿಲ್ಲ, ಸಮಸ್ಯಗಳಿರುವುದಿಲ್ಲ. ಯೇಸು ಪ್ರಭು ನುಡಿಯುತ್ತಾರೆ. ದೇವರ ಸಾಮ್ರಾಜ್ಯದ ಶುಭ ಸಂದೇಶವನ್ನು ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ಪ್ರಭು ಯೇಸುವಿನ ಹಿಂಬಾಲಕರಾದ ನಾವೆಲ್ಲರೂ ಯೇಸುವಿನ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ನಮ್ಮ ನೆರೆ-ಹೊರೆಯವರಿಗೆ. ನಮ್ಮ ಅಕ್ಕ-ಪಕ್ಕದ ಜನರಿಗೆ ಯೇಸುವಿನ ಸಾಮ್ರಾಜ್ಯದ ಶುಭಸಂದೇಶವನ್ನು ನಮ್ಮ ಕಾರ್ಯಗಳು ನಮ್ಮ ನಡತೆ, ನಮ್ಮ ಮಾತುಗಳ ಮೂಲಕ ಸಾರಬೇಕಾಗಿದೆ. ಪ್ರತಿಯೊಬ್ಬ ಕ್ರೈಸ್ತನು ಮತ್ತೊಬ್ಬ ಕ್ರಿಸ್ತನಾಗಿ ಬಾಳಬೇಕು. ದೇವರ ಸಾಮ್ರಾಜ್ಯಕ್ಕಾಗಿ ಶ್ರಮಿಸಬೇಕು
No comments:
Post a Comment