ಜುಲೈ 13, 2020 ಸೋಮವಾರ [ಹಸಿರು]
ಸಂತ ಹೆನ್ರಿ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆಶಾಯ 1.10-17
ಕೀರ್ತನೆ 50:8-9, 16-17, 21, 23. ಶ್ಲೋಕ.23
ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು
ಶುಭಸಂದೇಶ: ಮತ್ತಾಯ 10.34 - 11.1
ಯೆಶಾಯ 1.10-17
10 : ಸೊದೋಮಿನ ಅಧಿಪತಿಗಳಂತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ.
11 : ಸ್ವಾಮಿ ಇಂತೆನ್ನುತ್ತಾರೆ: “ನೀವು ಅರ್ಪಿಸುವ ಅಸಂಖ್ಯಾತ ಬಲಿದಾನಗಳಿಂದ ನನಗೇನು ಪ್ರಯೋಜನ? ಟಗರುಗಳು, ಸರ್ವಾಂಗಹೋಮ, ಪುಷ್ಪಪಶುಗಳ ಕೊಬ್ಬು ಇವೆಲ್ಲ ನನಗೆ ಬೇಸರ. ಹೋತ ಹೋರಿಗಳ, ಕುರಿಮರಿಗಳ ರಕ್ತ ನನಗೆ ತಾತ್ಸಾರ.
12 : ನನ್ನ ಸನ್ನಿಧಾನಕ್ಕೆ ಬರುವಾಗ ಇದನ್ನೆಲ್ಲ ತರಬೇಕೆಂದು ನಿಮಗೆ ಹೇಳಿದವರಾರು?
13 : ನಿಮ್ಮ ನೈವೇದ್ಯಗಳನ್ನು ಇನ್ನು ತರಬೇಡಿ, ಅವು ವ್ಯರ್ಥ. ನಿಮ್ಮ ಧೂಪಾರತಿ ನನಗೆ ಅಸಹ್ಯ. ನೀವು ಆಚರಿಸುವ ಹಬ್ಬ ಹುಣ್ಣಿಮೆ, ಸಬ್ಬತ್ ವಿಶ್ರಾಂತಿ, ನಿಮ್ಮ ಸಭೆಕೂಟಗಳು ನನಗೆ ಬೇಡ. ಅಧರ್ಮದಿಂದ ಕೂಡಿದ ಇಂಥ ಸಮಾರಂಭಗಳು ನನಗೆ ಇಷ್ಟವಿಲ್ಲ.
14 : ನಿಮ್ಮ ಹಬ್ಬ ಹುಣ್ಣಿಮೆಗಳು, ಉತ್ಸವ ದಿನಗಳು ನನ್ನ ಮನಕ್ಕೆ ವಿರುದ್ಧ, ಹೊರಲಾಗದ ಭಾರ, ಸಹಿಸಲಾಗದ ಬೇಸರ.
15 : ನೀವು ಕೈಯೆತ್ತಿ ಬೇಡುವಾಗ ನಾನು ಕಣ್ಣು ಮುಚ್ಚಿಕೊಳ್ಳುವೆನು. ನೀವು ಎಷ್ಟೇ ಪ್ರಾರ್ಥನೆಗಳನ್ನು ಮಾಡಿದರೂ ನಾನು ಕಿವಿಗೊಡೆನು, ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾಗಿವೆ.
16 : ತೊಳೆದು ಕೊಳ್ಳಿರಿ, ನಿಮ್ಮನ್ನೆ ಶುದ್ಧಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದಂತಿರುವ ನಿಮ್ಮ ದುಷ್ಕ್ರತ್ಯಗಳು ನೀಗಿ ಹೋಗಲಿ.
17 : ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿಂಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ.
ಕೀರ್ತನೆ 50:8-9, 16-17, 21, 23. ಶ್ಲೋಕ.23
ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು
8 : ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತಿಲ್ಲ / ನಿನ್ನ ಮುಂದಿವೆ ಸತತ ನಿನ್ನ ದಹನ ಬಲಿಗಳೆಲ್ಲ //
9 : ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ / ನಾ ಬಯಸುವುದು ನಿನ್ನ ಮಂದೆಯ ಹೋತಗಳನಲ್ಲ //
16 : ದುರ್ಜನರಿಗೆ ದೇವ ಹೇಳುವನು ಇಂತೆಂದು / “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು?/ ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?”//
17 : ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ / ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ //
21 : ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ?/ ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ?// ನಿಮ್ಮ ದುಷ್ಟತನವನು ಕಣ್ಮುಂದೆಯಿಡುವೆನು/ ನೀವು ಅಪರಾಧಿಗಳೆಂದು ಸ್ಥಾಪಿಸದೆ ಬಿಡೆನು //
22 : ದೇವನ ನೆನೆಯದವರೇ, ನೀಡಿರಿ ಗಮನವನು / ಇಲ್ಲವಾದರೆ ಛಿನ್ನಛಿನ್ನವಾಗಿಸಿಬಿಟ್ಟೇನು / ನನ್ನ ಕೈಯಿಂದ ತಪ್ಪಿಸುವವರಾರು ನಿಮ್ಮನು?//
23 : ಧನ್ಯವಾದದ ಬಲಿಯನರ್ಪಿಸುವವನೇ ನನಗೆ ಸನ್ಮಾನಿತನು ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು //
ಶುಭಸಂದೇಶ: ಮತ್ತಾಯ 10.34 - 11.1
34 : "ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿ; ಸಮಾಧಾನವನ್ನಲ್ಲ, ಛೇದಿಸುವ ಖಡ್ಗವನ್ನು ತರಲು ಬಂದೆನು.
35 : ತಂದೆಗೆ ವಿರುದ್ಧ ಮಗನಿಗೂ, ತಾಯಿಗೆ ವಿರುದ್ದ ಮಗಳಿಗೂ, ಅತ್ತೆಗೆ ವಿರುದ್ದ ಸೊಸೆಗೂ ಭೇದ ಹುಟ್ಟಿಸಲು ಬಂದೆನು;
36 : ಒಡಹುಟ್ಟಿದವರೇ ಒಬ್ಬನ ಕಡುವೈರಿಗಳಾಗುವರು.
37 : "ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅತವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ.
38 : ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ.
39 : ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ. ಸತ್ಕಾರಕ್ಕೆ ತಕ್ಕ ಸಂಭಾವನೆ (ಮಾರ್ಕ 9:41)
40 : "ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ; ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ.
41 : ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಸತ್ಪುರುಷನಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ.
42 : ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ." ಯೇಸು ಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶವನ್ನು ಕೊಟ್ಟಾದ ಮೇಲೆ ಅಲ್ಲಿಂದ ಹೊರಟು ಉಪದೇಶ ಮಾಡುವುದಕ್ಕೂ ಬೋಧಿಸುವುದಕ್ಕೂ ಹತ್ತಿರದ ಊರುಗಳಿಗೆ ಹೋದರು.
ಕ್ರಿಸ್ತರ ರೀತಿ ನೀತಿ ಪ್ರಪಂಚಕ್ಕೆ, ವಿರುದ್ದವಾಗಿರುವಂತೆ ತೋರುತ್ತಿದೆ. ಅವರು ನುಡಿದ `ವಿರೋಧಾಭಾಸ’ (ಠಿಚಿಡಿಚಿಜox) ಇಂದಿನ ಶುಭಸಂದೇಶದಲ್ಲಿದೆ.
- ಶಿಲುಬೆ ಹೊತ್ತುಕೊ - ಸುಖವನ್ನರಸದಿರು
- ನಿನ್ನವರನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ದೇವರನ್ನು ಪ್ರೀತಿಸು.
- ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು – ಕಳೆದುಕೊಳ್ಳುತ್ತಾನೆ. ಕಳೆದುಕೊಂಡರೆ, ಪಡೆದುಕೊಳ್ಳುತ್ತಾನೆ.
ವಿರೋಧಾಭಾಸಗಳೆನಿಸಿದರೂ, ಇದೇ ದೈವ ಸಾಮ್ರಾಜ್ಯದ ನಿಯಮ. ತನಗಾಗಿ ಬಾಳುವುದಕ್ಕಿಂತ, ಸ್ವಹಿತಕ್ಕಿಂತ ಪರಹಿತ ಶ್ರೇಷ್ಠವಲ್ಲವೇ.
No comments:
Post a Comment